Site icon Vistara News

ಬೆಂಗಳೂರಿನಲ್ಲಿಯೇ ವಿಮಾನ  ಉತ್ಪಾದನೆಯಾಗುವ ದಿನ ದೂರವಿಲ್ಲ: ಸಿಎಂ ಬಸವರಾಜ ಬೊಮ್ಮಾಯಿ

ಏರ್‌ ಕ್ರಾಫ್ಟ್‌

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿಯೇ ಏರ್‌ಕ್ರಾಫ್ಟ್ ಉತ್ಪಾದನೆಯಾಗುವ ದಿನಗಳು ದೂರವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ತಿಳಿಸಿದ್ದಾರೆ. ಸಫ್ರಾನ್ ಗ್ರೂಪ್ ಹಾಗೂ ಹಿಂದೂಸ್ಥಾನ್ ಏರೋನಾಟಿಕ್ ಲಿಮಿಟೆಡ್‌ ಸಹಯೋಗದಲ್ಲಿ ಏರ್‌ಕ್ರಾಫ್ಟ್ ಇಂಜಿನ್‍ಗಳ ಘಟಕವನ್ನು ಉದ್ಘಾಟಸಿ ಮಾತನಾಡಿದರು.

ನಮ್ಮ ಬದುಕನ್ನು ಸುಲಭಗೊಳಿಸಲು ತಂತ್ರಜ್ಞಾನ ಬಹು ಮುಖ್ಯ ಸಾಧನ. ಏರೋಸ್ಪೇಸ್ ತಂತ್ರಜ್ಞಾನವೂ ಕಾಲಕ್ಕೆ ತಕ್ಕಂತೆ ವಿಕಸನಗೊಳ್ಳುತ್ತಾ ಬಂದಿದೆ. ತಂತ್ರಜ್ಞಾನ, ವಿಶ್ವ ಯುದ್ಧದ ನಂತರ ಅಭಿವೃದ್ಧಿಗೊಂಡಿತು. ಏರ್‌ಕ್ರಾಫ್ಟ್‌ ಒಂದರಲ್ಲಿಯೇ ಸಾಕಷ್ಟು ತಂತ್ರಜ್ಞಾನವನ್ನು ಒಳಗೊಂಡಿರುತ್ತದೆ. ಸಫ್ರಾನ್ ಮತ್ತು ಎಚ್‌ಎಎಲ್‌ ಪೈಪ್‍ಲೈನ್‌ಗಳ ಜತೆ ಎಂಜಿನ್ ಉತ್ಪಾದನೆಯನ್ನೂ ಮಾಡಲು ಸಾಧ್ಯವಿದೆ. ಇದೊಂದು ಹೆಮ್ಮೆಯ ಘಳಿಗೆ. ಎಚ್‌ಎಎಲ್‌ ಮತ್ತು ಸಫ್ರಾನ್ 65 ವರ್ಷಗಳ ಸುದೀರ್ಘ ಅವಧಿಯ ಸಹಯೋಗ ಫಲಪ್ರದವಾಗಿದೆ ಎಂದರು.

ಇದನ್ನೂ ಓದಿ | ಸರ್ಕಾರಿ ಸೇವಾ ನಿವೃತ್ತಿ ನಂತರ ಅನಗತ್ಯ ಅಲೆದಾಟಕ್ಕೆ ಬ್ರೇಕ್;‌ ತ್ವರಿತ ಸೌಲಭ್ಯಕ್ಕೆ ಅತ್ಯಾಧುನಿಕ ತಂತ್ರಜ್ಞಾನ ಬಳಕೆ

ಏರೋಸ್ಪೇಸ್ ತಂತ್ರಜ್ಞಾನದಲ್ಲಿ ಬೆಂಗಳೂರು ಈಗಾಗಲೇ ಮುಂಚೂಣಿಯಲ್ಲಿದೆ. ಏರ್‌ಕ್ರಾಫ್ಟ್‌ ಎಂಜಿನ್‍ಗಳ ಸೌಲಭ್ಯಗಳ ಘಟಕ ಏರೋಸ್ಪೇಸ್ ತಂತ್ರಜ್ಞಾನದ ಅಭಿವೃದ್ಧಿಗೆ ಇನ್ನಷ್ಟು ಭದ್ರಬುನಾದಿಯನ್ನು ಹಾಕಲಿದೆ ಎಂದರು. ಎಚ್‌ಎಎಲ್‌  ಬೆಂಗಳೂರಿನಲ್ಲಿ ಮೊದಲಿಗೆ ಪ್ರಾರಂಭವಾದ ಸರ್ಕಾರಿ ಸ್ವಾಮ್ಯದ ಉದ್ದಿಮೆ. ಇದರೊಂದಿಗೆ ಸ್ವಾತಂತ್ರ್ಯಕ್ಕೂ ಮುನ್ನ ಹಾಗೂ ನಂತರದಲ್ಲಿ ಎನ್‌ಎಎಲ್‌, ಇಸ್ರೋ, ಎಚ್‌ಎಂಟಿ , ಬಿಇಎಂಎಲ್ ಮುಂತಾದ ಸಾರ್ವಜನಿಕ ಸ್ವಾಮ್ಯದ ಉದ್ದಿಮೆಗಳ ಸ್ಥಾಪನೆ ಬೆಂಗಳೂರಿಗೆ ತಂತ್ರಜ್ಞಾನವನ್ನು ಪರಿಚಯಿಸಿತು. ದೇಶ ಹಾಗೂ ಮಾನವನ ಬದುಕಿನ ಅಭಿವೃದ್ಧಿಯಲ್ಲಿ ತಂತ್ರಜ್ಞಾನ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದರು.

ಆತ್ಮನಿರ್ಭರ ಭಾರತದ ಕನಸು ನನಸು

ವಿಶ್ವದ ಪ್ರಮುಖ ಏರ್‌ಕ್ರಾಫ್ಟ್‌ ಸಂಸ್ಥೆಗಳು ಬೆಂಗಳೂರಿನಲ್ಲಿ ಉತ್ಪಾದನೆಯನ್ನು ಪ್ರಾರಂಭಿಸುವಂತಾಗಬೇಕು. ಏರ್‌ಕ್ರಾಫ್ಟ್‌ ಬಿಡಿ ಭಾಗಗಳು ಇಲ್ಲಿ ಉತ್ಪಾದನೆಯಾಗುವುದರಿಂದ ಏರ್‌ಕ್ರಾಫ್ಟ್‌ನ್ನು ಉತ್ಪಾದಿಸುವುದು ಕಷ್ಟಸಾಧ್ಯವೇನಲ್ಲ.  ಎಚ್‌ಎಎಲ್‌ ತನ್ನ ವ್ಯಾಪ್ತಿಯನ್ನು ದೊಡ್ಡ ಮಟ್ಟದಲ್ಲಿ ವಿಸ್ತರಿಸುತ್ತಿದೆ. ಇಂಟೆಲ್‌ನೊಂದಿಗೆ ಸೆಮಿ ಕಂಡಕ್ಟರ್‌ಗಳ ಉತ್ಪಾದನೆಗಾಗಿ ಕರ್ನಾಟಕ ಸರ್ಕಾರ ಒಪ್ಪಂದ ಮಾಡಿಕೊಂಡಿದೆ. ಸೆಮಿಕಂಡಕ್ಟರ್ ಉತ್ಪಾದನೆಗೆ ಒಪ್ಪಂದ ಮಾಡಿಕೊಂಡಿರುವ ಏಕೈಕ ರಾಜ್ಯ ಕರ್ನಾಟಕ. ಇದರ ಹಿಂದಿನ ಶಕ್ತಿ ಎಚ್‌ಎಎಲ್‌ ಆಗಿದೆ. ಸೆಮಿಕಂಡಕ್ಟರ್ ಉತ್ಪಾದನೆ ರಾಜ್ಯದಲ್ಲಿ ಬಹು ದೊಡ್ಡ ಬದಲಾವಣೆಯನ್ನು ತರಲಿದೆ.

ಜಿನೋಮ್ಯಾಟಿಕ್ಸ್‌ನಿಂದ ಏರೋಸ್ಪೇಸ್‌ವರೆಗೆ ಎಲ್ಲಾ ವಲಯದಲ್ಲಿಯೂ ಬೆಂಗಳೂರು ಮುಂಚೂಣಿಯಲ್ಲಿದೆ. ನವಕರ್ನಾಟದಿಂದ ನವ ಭಾರತ ನಿರ್ಮಾಣ ನಮ್ಮ ಗುರಿ. ದೇಶದ ಆರ್ಥಿಕ ಬೆಳವಣಿಯಲ್ಲಿ ಕರ್ನಾಟಕ ಮಹತ್ವದ ಪಾತ್ರವನ್ನು ವಹಿಸಲಿದೆ. ಪ್ರಧಾನಿ ನರೇಂದ್ರ ಮೋದಿಯವರ ಆತ್ಮನಿರ್ಭರ ಭಾರತದ ಕನಸು ಈಡೇರುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇದನ್ನೂ ಓದಿ | ಬಂಡವಾಳ ಹೂಡಿಕೆಗೆ ಕರ್ನಾಟಕ ಬೆಸ್ಟ್‌, ರಾಯಭಾರಿಗಳಿಗೆ ಬೊಮ್ಮಾಯಿ ಅಭಯ

Exit mobile version