Site icon Vistara News

Clubhouse: ಮಾತಿನ ಮನೆ ಮೌನವಾಯಿತೇಕೆ?

clubhouse

ಒಂದು ವರ್ಷದ ಹಿಂದೆ ಎಲ್ಲಿ ನೋಡಿದರೂ ಕ್ಲಬ್‌ಹೌಸ್‌ ಆ್ಯಪ್‌ನದೇ ಮಾತು. ಎಲ್ಲರೂ ಅದರಲ್ಲಿ ಮಾತನಾಡುವವರೇ. ಇದ್ದಕ್ಕಿದ್ದಂತೆ ಎಲ್ಲಿ ಹೋಯಿತು ಕ್ಲಬ್‌ಹೌಸ್?‌

ಭರ್ತಿ ಒಂದು ವರ್ಷದ ಹಿಂದೆ ಕ್ಲಬ್‌ಹೌಸ್‌ ಎಂಬ ಆ್ಯಪ್‌ ಎಲ್ಲರ ಸ್ಮಾರ್ಟ್‌ಫೋನ್‌ಗಳಲ್ಲಿ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಯಿತು. ಎಲ್ಲರೂ ಅದರಲ್ಲಿ ಮಾತನಾಡಲು, ಅವರಿವರ ಮಾತುಗಳನ್ನು ಕೇಳಿಸಿಕೊಳ್ಳಲು ಹಾತೊರೆಯತೊಡಗಿದರು. ಮುಖದ ಮೇಲಿನ ಭಾವ ತೋರಿಸುವ ಅನಿವಾರ್ಯ ಇಲ್ಲದೆ, ಬೆಡ್‌ರೂಮ್-‌ ಅಡುಗೆಮನೆಯಲ್ಲೂ ಇದ್ದುಕೊಂಡು ನೂರಾರು ಮಂದಿಗಾಗಿ ಲೈವ್ ಮಾತನಾಡಬಹುದಾದ ಈ ಆ್ಯಪ್‌ ಎಲ್ಲರ ಗಮನ ಸೆಳೆದಿದ್ದರಲ್ಲಿ ಆಶ್ಚರ್ಯವಿಲ್ಲ.

ಆದರೆ ಇದು ಕೆಲವೇ ತಿಂಗಳು. ಅಂದು ಜನಪ್ರಿಯ ಮಾತುಗಾರರಾಗಿ ಇದ್ದವರಲ್ಲಿ ಇಂದು ನೀವು ʼʼನೀವು ಈಗ ಕ್ಲಬ್‌ಹೌಸ್‌ನಲ್ಲಿ ಇದ್ದೀರಾ?ʼʼ ಎಂದು ಕೇಳಿ ನೋಡಿ. ʼʼನಾನೀಗ ಇಲ್ಲʼʼ ಎಂಬುದೇ ಹೆಚ್ಚಿನವರ ಉತ್ತರ. ಯಾಕೆ ಹೀಗಾಯಿತು? ಎಲ್ಲರೂ ಎಲ್ಲಿಗೆ ಹೋದರು?

ಯಾರೂ ಎಲ್ಲಿಗೂ ಹೋಗಿಲ್ಲ. ಕ್ಲಬ್‌ಹೌಸ್‌ ಮೇಲಿನ ಆಕರ್ಷಣೆ ಕಡಿಮೆಯಾಗಿದೆ ಎಂಬುದು ಒಂದು ಕಾರಣ; ತನ್ನ ಜನಪ್ರಿಯತೆಯನ್ನು ಮುಂದಿನ ಹಂತಕ್ಕೆ ಏರಿಸಲು ಅಗತ್ಯವಾದ ಕ್ರಮಗಳನ್ನು ಕ್ಲಬ್‌ಹೌಸ್‌ ಕೈಗೊಳ್ಳಲಿಲ್ಲ ಎಂಬುದು ಇನ್ನೊಂದು ಕಾರಣ. 2021ರ ಫೆಬ್ರವರಿ ಕ್ಲಬ್‌ಹೌಸ್‌ನ ಉತ್ಕರ್ಷದ ಕಾಲ. ಆ ತಿಂಗಳಲ್ಲಿ ಆ್ಯಪ್‌ 96 ಲಕ್ಷ ಡೌನ್‌ಲೋಡ್‌ ಕಂಡಿತ್ತು. ಆದರೆ ಏಪ್ರಿಲ್‌ ತಿಂಗಳಿಗೆ ಅದು 9.22 ಲಕ್ಷಗಳಿಗೆ ಇಳಿಯಿತು. ಇದು Sensor Tower ಎಂಬ ಆ್ಯಪ್‌ ವಿಶ್ಲೇಷಣೆ ತಾಣ ನೀಡಿದ ಮಾಹಿತಿ.

ಇದನ್ನೂ ಓದಿ: ಫೇಸ್‌ಬುಕ್‌, ಟ್ವಿಟರ್‌ ಇತ್ಯಾದಿ ಜಾಲ ತಾಣಗಳ ನಿಯಂತ್ರಣಕ್ಕೆ ಹೆಚ್ಚಿನ ಅಧಿಕಾರ ಬಯಸಿದ ಕೇಂದ್ರ

ಹಾಗಿದ್ದರೆ ಕ್ಲಬ್‌ಹೌಸ್‌ ಜನಪ್ರಿಯತೆ ಇಳಿದದ್ದೇಕೆ?

ಕ್ಲಬ್‌ಹೌಸ್‌ ಜನಿಸಿ ಮೇಲಕ್ಕೇರಿದ ಸಂದರ್ಭ ವಿಶಿಷ್ಟವಾದದ್ದು. ಆಗ ಎಲ್ಲೆಡೆ ಕೋರೊನಾ ವೈರಸ್‌ ವ್ಯಾಪಿಸಿ, ಹೆಚ್ಚಿನ ಕಡೆ ನಾನಾ ಬಗೆಯ ಲಾಕ್‌ಡೌನ್‌ಗಳು ಆವರಿಸಿದ್ದವು. ಈ ಸಂದರ್ಭದಲ್ಲಿ ಕಾಣಿಸಿಕೊಂಡ ಕ್ಲಬ್‌ಹೌಸ್-‌ ಎಲ್ಲರ ಜತೆ ಮಾತನಾಡಬಲ್ಲ ರಿಯಲ್‌ ಟೈಮ್‌ ಆ್ಯಪ್‌ ಆಗಿ ಜನಪ್ರಿಯವಾಯಿತು. ಇಂಥದೇ ಇತರ ಆಡಿಯೋ ಆ್ಯಪ್‌ಗಳು ಇದರ ಜೊತೆಗೇ ಹುಟ್ಟಿಕೊಂಡು, ತಾವೂ ಜನಪ್ರಿಯವಾಗುವತ್ತ ಹೆಜ್ಜೆ ಇಟ್ಟವು. ಫೇಸ್‌ಬುಕ್‌ ಮತ್ತು ಟ್ವಿಟ್ಟರ್‌ ಕೂಡ ಇಂಥದೇ ಆ್ಯಪ್‌ ಸೃಷ್ಟಿಸಿದವು. ಕ್ಷಿಪ್ರ ಕಾಲದಲ್ಲಿ ಇದು 110  ದಶಲಕ್ಷ ಡಾಲರ್‌ ಒಟ್ಟುಹಾಕಿತು.

ಕಾಲಕ್ರಮೇಣ ಲಾಕ್‌ಡೌನ್‌ಗಳು ಇಳಿದು, ಜನ ಪರಸ್ಪರ ಒಡನಾಡುತ್ತಿರುವಂತೆ, ಝೂಮ್‌ನಂಥ ವಿಡಿಯೋ ಮೀಟಿಂಗ್‌ ಆ್ಯಪ್‌ಗಳ ಅಗತ್ಯ ಕುಸಿದಂತೆ, ಕ್ಲಬ್‌ಹೌಸ್‌ನ ಅಗತ್ಯವೂ ಕುಸಿದಿದೆ. ಹಾಗೇ ಫೇಸ್‌ಬುಕ್‌- ಟ್ವಿಟ್ಟರ್‌ ಮುಂತಾದ ತಾಣಗಳ ಆಡಿಯೋ ಆ್ಯಪ್‌ಗಳೂ ಸಾಕಷ್ಟು ಪೈಪೋಟಿ ನೀಡಿದವು. ಇಲ್ಲಿದ್ದವರು ಇತರ ಕಡೆಗಳಿಗೂ ಹಂಚಿಹೋದರು.

ಕ್ಲಬ್‌ಹೌಸ್‌ ಸ್ವತಃ ಆ್ಯಪ್‌ ಅಭಿವೃದ್ಧಿಗೆ ಹೆಚ್ಚಿನ ಗಮನ ಕೊಡಲಿಲ್ಲ. ಬ್ಯಾಕ್‌ಚಾನೆಲ್‌ನಂಥ ಕೆಲವು ಹೊಸ ಫೀಚರ್‌ಗಳನ್ನು ಅದು ಪರಿಚಯಿಸಿತು. ಆದರೆ ಅನಿರೀಕ್ಷಿತವಾದ, ಅಚ್ಚರಿದಾಯಕ ಬೆಳವಣಿಗೆಗಳೇನೂ ಆಗಲಿಲ್ಲ.

ಮೂರನೆಯದಾಗಿ, ಜನರಿಗೂ ಬಹುಶಃ ಈ ಆ್ಯಪ್‌ಗಳಲ್ಲಿ ಆಗುವ ಸಮಯದ ಪೋಲು ಅರ್ಥವಾದಂತಿದೆ. ಅಂದರೆ, ಒಂದು ಚಾಟ್‌ರೂಮ್‌ ಆರಂಭಿಸಿದರೆ, ಕನಿಷ್ಠ ಒಂದು ಗಂಟೆಯಾದರೂ ಅಲ್ಲಿರಬೇಕು. ಅಗತ್ಯ ಮಾತುಗಳ ಜತೆ ಅನಗತ್ಯವಾದುದನ್ನೂ, ಆಕರ್ಷಕ ಮಾತುಗಳ ಜೊತೆ ಬೋರಿಂಗ್‌ ಆಗಿ ಮಾತನಾಡುವವರನ್ನೂ ಸಹಿಸಿಕೊಳ್ಳಬೇಕು. ಇದು ಕೂಡ ಜನರನ್ನು ಆ್ಯಪ್‌ನಿಂದ ದೂರ ಸರಿಸಿತು. ಕ್ಲಬ್‌ಹೌಸ್‌ ಮರಳಿ ಪುಟಿದೆದ್ದು ಬರಬಾರದು ಎಂದೇನಿಲ್ಲ. ಹೊಸ ಹೊಸ ಫೀಚರ್‌ಗಳೊಂದಿಗೆ ಅದು ಮರಳುವ, ಮತ್ತಷ್ಟು ಜನಪ್ರಿಯವಾಗುವ ಸಾಧ್ಯತೆಗಳು ಇದ್ದೇ ಇವೆ. ಆದರೆ ಇನ್ನಷ್ಟು ವೃತ್ತಿಪರವಾದ, ಆಕರ್ಷಕ ಸಂಗತಿಗಳು ಖಂಡಿತ ಅಗತ್ಯ.

ಇದನ್ನೂ ಓದಿ: ಸರ್ಕಾರಿ ಸೇವಾ ನಿವೃತ್ತಿ ನಂತರ ಅನಗತ್ಯ ಅಲೆದಾಟಕ್ಕೆ ಬ್ರೇಕ್;‌ ತ್ವರಿತ ಸೌಲಭ್ಯಕ್ಕೆ ಅತ್ಯಾಧುನಿಕ ತಂತ್ರಜ್ಞಾನ ಬಳಕೆ

Exit mobile version