ನವ ದೆಹಲಿ: ಸ್ಮಾರ್ಟ್‌ಫೋನ್ ಮತ್ತು ಸ್ಮಾರ್ಟ್ ಡಿವೈಸ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಸ್ಯಾಮ್ಸಂಗ್ ಕಂಪನಿಯು ಮತ್ತೊಂದು ಅತ್ಯಾಧುನಿಕ ಮೌಸ್‌ವೊಂದನ್ನು ಅಭಿೃದ್ಧಿಪಡಿಸಿದೆ. ಈ ಮೌಸ್‌ನ ವಿಶೇಷತೆ ಏನೆಂದರೆ, ಆಫೀಸ್ ಟೈಮ್ ಮುಗಿದ ಮೇಲೂ ನೀವು ಕೆಲಸ ಮಾಡುತ್ತಿದ್ದರೆ, ಈ ಮೌಸ್ (Samsung Mouse) ಸಕ್ರಿಯವಾಗಿರುವುದಿಲ್ಲ! ಅರ್ಥಾತ್, ಮೌಸ್ ಡೆಡ್ ಆಗುತ್ತದೆ. ನಿಮ್ಮ ಕೆಲಸದ ಸಮಯವು ಮುಕ್ತಾಯವಾಗಿದೆ, ಮನೆಗೆ ಹೋಗಿ ಎಂದು ಹೇಳುತ್ತದೆ!
ದಕ್ಷಿಣ ಕೊರಿಯಾದ ಟೆಕ್ ದೈತ್ಯವಾಗಿರುವ ಸ್ಯಾಮ್ಸಂಗ್ ಈ ಹೊಸ ಮೌಸ್ ಸಂಬಂಧದ ಮಾಹಿತಿಯನ್ನು ತನ್ನ ಯುಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದೆ. ಮನೆ ಮತ್ತು ಕೆಲಸ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಹೇಗೆ ಚರ್ಚೆ ಮೊದಲಿನಿಂದಲೂ ಇದೆ. ವಿಶೇಷವಾಗಿ ಕಾರ್ಪೊರೇಟ್ ಕಂಪನಿಗಳಲ್ಲಿ ಈ ಬಗ್ಗೆ ಸಾಕಷ್ಟು ತಕರಾರುಗಳಿವೆ.
ಬಹು ರಾಷ್ಟ್ರೀಯ ಕಂಪನಿಗಳಲ್ಲಿ ಈ ವರ್ಕ್‌ಲೋಡ್ ಬಗ್ಗೆ ಸಾಕಷ್ಟು ತಕರಾರುಗಳು ಕೇಳಿ ಬರುತ್ತವೆ. ಕೋವಿಡ್-19 ಸಾಂಕ್ರಾಮಿಕ ಸಂದರ್ಭದಲ್ಲಂತೂ ಅತಿಯಾದ ಕೆಲಸವನ್ನು ಕಂಪನಿಗಳು ವಹಿಸಿದವು ಎಂಬ ಆರೋಪವಿದೆ. ನೌಕರರು ಮನೆಯಿಂದಲೇ ಕೆಲಸ ಮಾಡಲು ಅವಕಾಶ ಕೊಟ್ಟರೂ, ಹೆಚ್ಚಿನ ಸಮಯದವರೆಗೆ ದುಡಿಸಿಕೊಳ್ಳುತ್ತಿದ್ದರು ಎಂಬ ಚರ್ಚೆಗಳಿವೆ.
2021ರಲ್ಲಿ ಕೈಗೊಂಡ ಸಮೀಕ್ಷೆಯೊಂದರ ಪ್ರಕಾರ, ಕೆಲಸ ಮತ್ತು ವೈಯಕ್ತಿಕ ಜೀವನ ಮಧ್ಯೆ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಆ ಕಾರಣಕ್ಕಾಗಿ ಕೆಲಸ ತೊರೆಯಲು ಯೋಚಿಸಿರುವುದಾಗಿ ಶೇ.37 ಮಹಿಳಾ ಉದ್ಯೋಗಿಗಳು ಹೇಳಿದ್ದಾರಂತೆ. ಇದೇ ರೀತಿಯಾಗಿ ಶೇ.28 ಪುರುಷ ಉದ್ಯೋಗಿಗಳು ಯೋಚಿಸುತ್ತಿದ್ದಾರಂತೆ.
ಇದೆಲ್ಲ ಏನು ಸೂಚಿಸುತ್ತದೆ ಎಂದರೆ, ಕಂಪನಿಗಳು ಹೆಚ್ಚಿನ ಸಮಯದವರೆಗೂ ಉದ್ಯೋಗಿಗಳನ್ನು ದುಡಿಸಿಕೊಳ್ಳುತ್ತವೆ. ಅದರಿಂದಾಗಿ ಅವರು ತಮ್ಮ ಕುಟುಂಬದ ಕಡೆಗೆ ಲಕ್ಷ್ಯ ಕೊಡಲು ಸಾಧ್ಯವಾಗುವುದಿಲ್ಲ. ಹಾಗಾಗಿ, ಈ ಸ್ಯಾಮ್ಸಂಗ್ ಅಭಿವೃದ್ಧಿಪಡಿಸಿರುವ ಮೌಸ್, ಇದಕ್ಕೊಂದು ರಿಮೈಂಡರ್ ರೀತಿ ವರ್ಕ್ ಆಗಬಹುದು. ಹೆಚ್ಚಿನ ಅವಧಿಗೆ ಆಫೀಸ್‌ನಲ್ಲಿದ್ದರೆ ಈ ಮೌಸ್ ವರ್ಕೇ ಆಗುವುದಿಲ್ಲ. ಆಗ ಉದ್ಯೋಗಿಗಳು ಮನೆಯತ್ತ ಹೊರಡುವ ಮನಸ್ಸು ಮಾಡಬಹುದು!
ಸ್ಯಾಮ್ಸಂಗ್ ಅಭಿವೃದ್ಧಿಪಡಿಸಿರುವ ಈ ಮೌಸ್ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬಹಿರಂಗವಾಗಲಿಲ್ಲ. ಅದು ಯಾವ ರೀತಿ ಕಾರ್ಯನಿರ್ವಹಿಸುತ್ತದೆ, ಅದರ ಲಕ್ಷಣಗಳೇನು ಇತ್ಯಾದಿ ಮಾಹಿತಿಗಳು ಇನ್ನಷ್ಟೇ ಗೊತ್ತಾಗಬೇಕಿದೆ. ಆದರೆ, ಕಟ್ಟಕಡೆಗೆ ಉಳಿಯುವ ಪ್ರಶ್ನೆ ಏನೆಂದರೆ, ಈ ಮೌಸ್ ಅನ್ನು ಬಳಸಲು ಯಾವುದಾದರೂ ಕಂಪನಿ ಅನುಮತಿ ಕೊಡಬಹುದೇ?
ಸ್ಯಾಮ್ಸಂಗ್ ಅಭಿವೃದ್ಧಿಪಡಿಸಿರುವ ಈ ಮೌಸ್ ಇನ್ನೂ ಹೆಚ್ಚಿನ ಮಾಹಿತಿ ಬಹಿರಂಗವಾಗಲಿಲ್ಲ. ಅದು ಯಾವ ರೀತಿ ಕಾರ್ಯನಿರ್ವಹಿಸುತ್ತದೆ, ಅದರ ಲಕ್ಷಣಗಳೇನು ಇತ್ಯಾದಿ ಮಾಹಿತಿಗಳು ಇನ್ನಷ್ಟೇ ಗೊತ್ತಾಗಬೇಕಿದೆ. ಆದರೆ, ಕಟ್ಟಕಡಗೆ ಉಳಿಯುವ ಪ್ರಶ್ನೆ ಏನೆಂದರೆ, ಈ ಮೌಸ್ ಅನ್ನು ಬಳಸಲು ಯಾವುದಾದರೂ ಕಂಪನಿ ಅನುಮತಿ ಕೊಡಬಹುದೇ?
ಇದನ್ನೂ ಓದಿ | Chinese Smartphones | ಭಾರತದಲ್ಲಿ ಚೀನಾ ಸ್ಮಾರ್ಟ್‌ಫೋನ್‌ಗಳ ಬ್ಯಾನ್? ಕೇಂದ್ರ ಹೇಳುವುದೇನು?