ನವ ದೆಹಲಿ: ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ ಬುಧವಾರ ಸಂಜೆಯಿಂದಲೂ ತಾಂತ್ರಿಕ ದೋಷ ಉಂಟಾಗಿದ್ದು (Twitter Outage), ಇಂದು ಮುಂಜಾನೆಯೂ ಸಮಸ್ಯೆ ಮುಂದುವರಿದಿದೆ. ಟ್ವೀಟ್ ಮಾಡಲು, ಬೇರೊಬ್ಬರ ಟ್ವಿಟರ್ ಅಕೌಂಟ್ನ್ನು ಫಾಲೋ ಮಾಡಲು ಸಾಧ್ಯವಾಗುತ್ತಿಲ್ಲ, ಡೈರೆಕ್ಟ್ ಮೆಸೇಜ್ ಕಳಿಸಲು ಆಗುತ್ತಿಲ್ಲ. ಒಟ್ಟಾರೆ ಟ್ವಿಟರ್ನಲ್ಲಿರುವ ಹಲವು ಫೀಚರ್ಗಳು ಕೆಲಸ ಮಾಡುತ್ತಿಲ್ಲ ಎಂದು ಭಾರತ ಮತ್ತು ಇತರ ದೇಶಗಳ ಹಲವು ಬಳಕೆದಾರರು ದೂರುತ್ತಿದ್ದಾರೆ. ಈ ಮಧ್ಯೆ ಟ್ವಿಟರ್ ಕಂಪನಿ ಟ್ವೀಟ್ ಮಾಡಿದ್ದು, ‘ಹಲವು ಬಳಕೆದಾರರಿಗೆ ಟ್ವಿಟರ್ ಸಮಸ್ಯೆ ಆಗಿರಬಹುದು. ನೀವು ನಿರೀಕ್ಷಿಸಿದಂತೆ ಟ್ವಿಟರ್ ಕೆಲಸ ಮಾಡದೆ ಇರಬಹುದು. ಸಮಸ್ಯೆ ಆಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಸರಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದೆ.
ಬುಧವಾರ ಹಲವು ಬಳಕೆದಾರರು ಟ್ವೀಟ್ ಮಾಡಲು ಯತ್ನಿಸಿದಾಗ ಅವರಿಗೊಂದು ಮೆಸೇಜ್ ಬಂತು ‘ನೀವು ಟ್ವೀಟ್ ಮಾಡಲು ನಿಮ್ಮ ದೈನಂದಿನ ಮಿತಿಯನ್ನು ಮೀರಿದ್ದರಿಂದ, ಮತ್ತೆ ಟ್ವೀಟ್ ಮಾಡಲು ಸಾಧ್ಯವಿಲ್ಲ’ ಎಂಬುದು ಆ ಸಂದೇಶ ಆಗಿತ್ತು. ಅದಾದ ಬಳಿಕ ಟ್ವಿಟರ್ನಲ್ಲಿ ಉಳಿದ ಆಯ್ಕೆಗಳೂ ಕೂಡ ಕೆಲಸ ಮಾಡಲಿಲ್ಲ ಎಂದು ಹಲವರು ಹೇಳಿದ್ದಾರೆ. ಯುಎಸ್ನಲ್ಲಿ 9 ಸಾವಿರ ಬಳಕೆದಾರರಿಗೆ ಟ್ವಿಟರ್ ಕೈಕೊಟ್ಟಿತ್ತು ಎಂದು Downdetector.com ವರದಿ ಮಾಡಿದೆ. ಬುಧವಾರ ಸಂಜೆ 5 ಗಂಟೆ ಹೊತ್ತಿಗೆ 9000 ಜನರಿಗೆ ಟ್ವಿಟರ್ ಸಮಸ್ಯೆಯಾಯಿತು, ಆ ಸಂಖ್ಯೆ ಸಂಜೆ 6 ಗಂಟೆ ಹೊತ್ತಿಗೆ ಸುಮಾರು 2500ಕ್ಕೆ ಇಳಿಯಿತು ಎಂದೂ ವೆಬ್ಸೈಟ್ನಲ್ಲಿ ಉಲ್ಲೇಖವಾಗಿದೆ. ಭಾರತದಲ್ಲೂ ಕೂಡ ಸಾವಿರಾರು ಟ್ವಿಟರ್ ಬಳಕೆದಾರರು ಸಮಸ್ಯೆ ಎದುರಿಸಿದ್ದಾಗಿ ವರದಿಯಾಗಿದೆ.
ಇದನ್ನೂ ಓದಿ: RCB Twitter Account: ಹ್ಯಾಕ್ ಆಗಿದ್ದ ಆರ್ಸಿಬಿ ಟ್ವಿಟರ್ ಖಾತೆ ರಿಸ್ಟೋರ್