ನವದೆಹಲಿ: ಎಲಾನ್ ಮಸ್ಕ್ ಒಡೆತನದ ಮೈಕ್ರೋಬ್ಲಾಗಿಂಗ್ ವೆಬ್‌ಸೈಟ್ ಟ್ವಿಟರ್(Twitter), ಭಾರತದಲ್ಲಿರುವ (India) ತನ್ನ ಮೂರು ಕಚೇರಿಗಳ ಪೈಕಿ ಎರಡು ಕಚೇರಿಗಳಿಗೆ ಬಾಗಿಲು ಹಾಕಿದೆ. ಬೆಂಗಳೂರಿನಲ್ಲಿರುವ ಕಚೇರಿ ಮಾತ್ರ ಚಾಲ್ತಿಯಲ್ಲಿದ್ದು, ನೌಕರರಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ನವದೆಹಲಿ (New Delhi) ಮತ್ತು ಮುಂಬೈನಲ್ಲಿರುವ (Mumbai) ಕಚೇರಿಗಳಿಗೆ ಬೀಗ ಜಡಿಯಲಾಗಿದೆ.
ಕಳೆದ ವರ್ಷ ಟ್ವಿಟರ್ ತನ್ನ ಭಾರತೀಯ ಕಚೇರಿಯಲ್ಲಿ ಶೇ.90ರಷ್ಟು ಅಂದರೆ ಸುಮಾರು 200ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿತ್ತು. ಜತೆಗೆ, ನವದೆಹಲಿ ಮತ್ತು ಮುಂಬೈನಲ್ಲಿರುವ ತನ್ನ ಕಚೇರಿಗಳನ್ನು ಸ್ಥಗಿತ ಮಾಡಿತ್ತು. ಹಾಗೆಯೇ, ಹೆಚ್ಚಾಗಿ ಎಂಜಿನಿಯರ್‌ಗಳೇ ಕೆಲಸ ಮಾಡುವ ಬೆಂಗಳೂರಿನಲ್ಲಿರುವ ಟ್ವಿಟರ್ ಕಚೇರಿ ಎಂದಿನಂತೆ ಕಾರ್ಯನಿರ್ವಹಿಸಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: Twitter Blue: ಭಾರತದಲ್ಲಿ ಟ್ವಿಟರ್ ಬ್ಲೂ ಸಬ್‌ಸ್ಕ್ರಿಪ್ಷನ್ ಶುರು, ತಿಂಗಳಿಗೆ 900 ರೂ.! ಏನೇನು ಲಾಭ?
ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಅವರು ಕಳೆದ ವರ್ಷ ನವೆಂಬರ್‌ನಲ್ಲಿ ಟ್ವಿಟರ್ ಕಂಪನಿಯನ್ನು ತಮ್ಮ ಸ್ವಾಧೀನಕ್ಕೆ ಪಡೆದುಕೊಂಡರು. ಅಲ್ಲದೇ, ಜಗತ್ತಿನಾದ್ಯಂತ ಟ್ವಿಟರ್ ಉದ್ಯೋಗಿಗಳ ಸಂಖ್ಯೆಯನ್ನು ಕಡಿತ ಮಾಡುವುದಾಗಿ ಘೋಷಿಸಿದ್ದರು. ಇದರ ಭಾಗವಾಗಿಯೇ ಭಾರತದಲ್ಲಿನ ಎಂಜಿನಿಯರಿಂಗ್, ಸೇಲ್ಸ್, ಮಾರ್ಕೆಟಿಂಗ್ ಮತ್ತು ಕಮ್ಯುನಿಕೇಷನ್ ತಂಡಗಳನ್ನೇ ಕೆಲಸದಿಂದ ತೆಗೆದು ಹಾಕಿದ್ದರು.