ನವದೆಹಲಿ: ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಅವರು, ಟ್ವಿಟರ್ (Twitter) ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಿದ್ದಂತೆ ಹಲವಾರು ಬದಲಾವಣೆಗಳನ್ನು ಮಾಡುತ್ತಿದ್ದಾರೆ. ಮೊದಲಿಗೆ ಸಿಇಒ ಪರಾಗ್ ಅಗ್ರವಾಲ್ ಅವರನ್ನು ಮನೆಗೆ ಕಳುಹಿಸಿದ್ದರು. ಈಗ ಆಡಳಿತ ಮಂಡಳಿಯ ಎಲ್ಲ ನಿರ್ದೇಶಕರನ್ನು ವಜಾಗೊಳಿಸಿದ್ದಾರೆ. ಈಗ ಟ್ವಿಟರ್‌ಗೆ ಏಕ ಸದಸ್ಯ ಆಡಳಿತ ಮಂಡಳಿ ಮಾತ್ರ ಇರುವುದು. ಎಲಾನ್ ಮಸ್ಕ್ ಅವರೇ ಈಗ ಓನರ್, ನಿರ್ದೇಶಕ ಮತ್ತು ಸಿಇಒ ಆಗಿದ್ದಾರೆ!
ಏತನ್ಮಧ್ಯೆ, ಎಲಾನ್ ಮಸ್ಕ್ ಅವರು ಬ್ಲೂಟಿಕ್ ಹೊಂದಿರುವ ಬಳಕೆದಾರರಿಗೆ ಶುಲ್ಕವನ್ನು ವಿಧಿಸುವ ಬಗ್ಗೆ ಮಾತನಾಡಿದ್ದಾರೆ. ಬಳಕೆದಾರರಿಗೆ ಬ್ಲೂ ಟಿಕ್ ಗುರುತು ಬೇಕಿದ್ದರೆ ತಿಂಗಳಿಗೆ 20 ಡಾಲರ್ ಕೊಡಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಇದಕ್ಕೂ ಮೊದಲು ಮಾತನಾಡಿ, ಈಗಾಗಲೇ ನಿಷೇಧಕ್ಕೆ ಒಳಗಾಗಿರುವ ಯಾವುದೇ ಖಾತೆಗಳನ್ನು ತಕ್ಷಣಕ್ಕೆ ಸಕ್ರಿಯಗೊಳಿಸುವುದಿಲ್ಲ ಎಂದೂ ಹೇಳಿದ್ದರು.
ಟ್ವಿಟರ್‌ನಲ್ಲಿ ಬಳಕೆದಾರರ ಖಾತೆ ಅಧಿಕೃತ ಎಂಬುದನ್ನು ದೃಢಪಡಿಸಲು ನೀಲಿ ಬಣ್ಣದ ಟಿಕ್ ಮಾರ್ಕ್ ಅನ್ನು ನೀಡಲಾಗುತ್ತದೆ. ಟ್ವಿಟರ್‌ನಲ್ಲಿ ಬಳಕೆದಾರರ ಹೆಸರಿನ ಸಮೀಪ ಇದು ಇರುತ್ತದೆ. ಆದರೆ ಮುಂಬರುವ ದಿನಗಳಲ್ಲಿ ಈ ಟಿಕ್ ಮಾರ್ಕ್ ಬೇಕಿದ್ದರೆ ಮಾಸಿಕ 20 ಡಾಲರ್ ಶುಲ್ಕ ನೀಡಬೇಕಾಗುತ್ತದೆ ಎಂದು ಮಸ್ಕ್ ತಿಳಿಸಿದ್ದಾರೆ.
ಟ್ವಿಟರ್ ಬ್ಲೂ ಟಿಕ್ ಅನ್ನು 2021ರಲ್ಲಿ ಆರಂಭಿಸಲಾಗಿತ್ತು. ಬಳಕೆದಾರರಿಗೆ ತಮ್ಮ ಖಾತೆಯ ದೃಢೀಕರಣಕ್ಕೆ ಬ್ಲೂ ಟಿಕ್ ಮಾರ್ಕ್ ಪಡೆಯುವುದು ಕಡ್ಡಾಯವಾಗಿತ್ತು. ಪ್ರಸ್ತುತ ಬ್ಲೂ ಟಿಕ್‌ಗೆ 4.99 ಡಾಲರ್ (409 ರೂ.) ಶುಲ್ಕವಿದೆ. ಆದರೆ ಈ ಇಡೀ ದೃಢೀಕರಣ ಪ್ರಕ್ರಿಯೆ ಪುನಾರಚನೆಯಾಗಲಿದೆ ಎಂದು ಎಲಾನ್ ಮಸ್ಕ್ ತಿಳಿಸಿದ್ದಾರೆ.
ಇದನ್ನೂ ಓದಿ | Twitter | ಟ್ವಿಟರ್‌ನಲ್ಲಿ ಒಬ್ಬರು ಮಾಡಬಹುದಾದ ಕೆಲಸಕ್ಕೆ 10 ಜನರಿದ್ದಾರೆ ಎಂದ ಮಸ್ಕ್! 25% ಉದ್ಯೋಗ ಕಡಿತ ಶೀಘ್ರ?