ಗಿರೀಶ್ ಲಿಂಗಣ್ಣ
ಸ್ಟೆಲ್ತ್ ವಿಂಗ್ ಫ್ಲೈಯಿಂಗ್ ಟೆಸ್ಟ್ ಬೆಡ್ ಅಥವಾ ಸ್ವಿಫ್ಟ್ ಎಂಬ ಹೆಸರಿನ ಭಾರತದ ಪ್ರಥಮ ಮಾನವ ರಹಿತ ಯುದ್ಧ ವಿಮಾನದ (ಅನ್ ಮ್ಯಾನ್ಡ್ ಕಾಂಬ್ಯಾಟ್ ಏರಿಯಲ್ ವೆಹಿಕಲ್ – ಯುಸಿಎವಿ UAV ) ಯಶಸ್ವಿ ಪ್ರಥಮ ಹಾರಾಟ ಪ್ರಯೋಗ ಇತ್ತೀಚೆಗೆ ನಮ್ಮ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ನಡೆದಿದೆ. ಇದು ಈ ಯೋಜನೆಯಲ್ಲಿ ಒಂದು ನೂತನ ಮೈಲಿಗಲ್ಲಾಗಿದೆ.
ಕರ್ನಾಟಕದ ಚಿತ್ರದುರ್ಗದಲ್ಲಿರುವ ಏರೋನಾಟಿಕಲ್ ಟೆಸ್ಟ್ ರೇಂಜ್ನಲ್ಲಿ ಈ ಯೋಜನೆಯ ಅಂಗವಾಗಿ ನಿರ್ಮಾಣಗೊಂಡ ವಿಮಾನವು ತನ್ನ ಪ್ರಥಮ ಹಾರಾಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
“ಹಾರಾಟದ ಸಂದರ್ಭದಲ್ಲಿ ವಿಮಾನವು ಸಂಪೂರ್ಣ ಸ್ವಯಂಚಾಲಿತ ವಿಧಾನದಲ್ಲಿ ಯಾವ ತೊಂದರೆಯೂ ಇಲ್ಲದೆ ಯಶಸ್ವಿ ಪ್ರಥಮ ಹಾರಾಟ ಕೈಗೊಂಡಿತು. ಈ ವಿಮಾನವು ಸ್ವಯಂಚಾಲಿತ ಟೇಕಾಫ್, ವೇ ಪಾಯಿಂಟ್ ನ್ಯಾವಿಗೇಷನ್, ಹಾಗೂ ಟಚ್ ಡೌನ್ ಸೇರಿದಂತೆ ಎಲ್ಲಾ ವಿಭಾಗಗಳಲ್ಲೂ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದೆ. ಈ ವಿಮಾನವು ಇಂತಹ ಪ್ರಮುಖ ರಕ್ಷಣಾ ತಂತ್ರಜ್ಞಾನದಲ್ಲಿ ಸ್ವಾವಲಂಬನೆಯ ಕಡೆಗಿನ ಪ್ರಮುಖ ಹೆಜ್ಜೆಯಾಗಿದ್ದು, ಭವಿಷ್ಯದ ಪ್ರಮುಖ ತಂತ್ರಜ್ಞಾನವಾದ ಮಾನವ ರಹಿತ ವಿಮಾನ ನಿರ್ಮಾಣದ ವಿಚಾರದಲ್ಲಿ ಅತ್ಯಂತ ಮಹತ್ವದ ಘಟ್ಟವಾಗಿದೆ” ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಓ) ಹೇಳಿತ್ತು.
ಕೇಂದ್ರ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರು ಈ ಯಶಸ್ವಿ ಹಾರಾಟಕ್ಕಾಗಿ ಡಿಆರ್ಡಿಓ ಸಂಸ್ಥೆಯನ್ನು ಶ್ಲಾಘಿಸಿ, ಇದು ಮಾನವ ರಹಿತ ವಿಮಾನ ನಿರ್ಮಾಣದ ಪ್ರಮುಖ ಹೆಜ್ಜೆಯಾಗಿದ್ದು, ಸೇನಾ ತಂತ್ರಜ್ಞಾನದ ವಿಚಾರದಲ್ಲಿ ‘ಆತ್ಮನಿರ್ಭರ ಭಾರತದ ನಿರ್ಮಾಣʼಕ್ಕಾಗಿ ಹೊಸ ಹಾದಿಯನ್ನು ತೋರುತ್ತದೆ ಎಂದಿದ್ದರು. ಈ ಸುದ್ದಿ ಮಾಧ್ಯಮಗಳಲ್ಲಿ ಬಂದಿದೆ.
ಚೆನ್ನೈನಲ್ಲಿ ಉಪಕರಣ ತಯಾರು
ಸ್ವಿಫ್ಟ್ ಯೋಜನೆಗೆ ಅಗತ್ಯವುಳ್ಳ ರಿಟ್ರ್ಯಾಕ್ಟೇಬಲ್ ಲ್ಯಾಂಡಿಂಗ್ ಗೇರ್ ಸೊಲ್ಯುಷನ್ನನ್ನು ಡಿಆರ್ಡಿಓ ಸಂಸ್ಥೆಯ, ಚೆನ್ನೈನಲ್ಲಿರುವ ಕಾಂಬ್ಯಾಕ್ಟ್ ವೆಹಿಕಲ್ಸ್ ರಿಸರ್ಚ್ ಆ್ಯಂಡ್ ಡೆವಲಪ್ಮೆಂಟ್ ಎಸ್ಟಾಬ್ಲಿಷ್ಮೆಂಟ್ ಒದಗಿಸಿದೆ. ಅಕ್ಟೋಬರ್ 2020ರಲ್ಲಿ ಪ್ರಕಟವಾದ ತನ್ನ ತಂತ್ರಜ್ಞಾನ ಬುಲೆಟಿನ್ ನಲ್ಲಿ ಡಿಆರ್ಡಿಓ ತಾನು ಈಗಾಗಲೇ ಈ ಯೋಜನೆಗೆ ಅಗತ್ಯವಿರುವ ಲ್ಯಾಂಡಿಂಗ್ ಗೇರ್ ನಿರ್ಮಾಣದ ಕಾರ್ಯವನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ಹಾರಾಟಕ್ಕೆ ಅಗತ್ಯವಿರುವ ಉಪಕರಣಗಳ ನಿರ್ಮಾಣದಲ್ಲಿ ತೊಡಗಿದ್ದೇವೆ ಎಂದಿತ್ತು.
“ತಂತ್ರಜ್ಞಾನ ಪ್ರದರ್ಶಕ (ಟೆಕ್ನಾಲಜಿ ಡೆಮಾನ್ಸ್ಟ್ರೇಟರ್) ಸ್ವಿಫ್ಟ್ ಯುಎವಿ ಒಂದು ಘಾತಕ್ ಯುಸಿಎವಿಯ (ಅನ್ ಮ್ಯಾನ್ಡ್ ಕಾಂಬ್ಯಾಟ್ ಏರ್ ವೆಹಿಕಲ್) ಆವೃತ್ತಿಯಾಗಿದೆ. ಈ ಸ್ವಿಫ್ಟ್ ಯುಎವಿಯ ಪ್ರಾಥಮಿಕ ಗುರಿ ಎಂದರೆ ಮಾನವ ರಹಿತ ಚಾಲನೆಯಲ್ಲಿ ಅತಿವೇಗದ ಲ್ಯಾಂಡಿಂಗ್ ಹಾಗೂ ಮಾನವ ರಹಿತ ಚಾಲನೆಯಲ್ಲಿ ಸ್ಟೆಲ್ತ್ ತಂತ್ರಜ್ಞಾನವನ್ನು ಬಳಸಿಕೊಳ್ಳುವುದು” ಎಂದು ಡಿಆರ್ಡಿಓ ಹೇಳಿದೆ.
ಈ ವಿಮಾನದ ಒಂದು ಮಾದರಿಯನ್ನು ಸ್ಟೆಲ್ತ್ ಯುಸಿಎವಿ ನಿರ್ಮಾಣದಲ್ಲಿ ಭಾಗಿಯಾಗಿರುವ ಐಐಟಿ ಕಾನ್ಪುರ ಅಪ್ಲೋಡ್ ಮಾಡಿರುವ ವೀಡಿಯೋದಲ್ಲಿ ಕಾಣಬಹುದಾಗಿದೆ. ಆ ವೀಡಿಯೋದಲ್ಲಿ ಕಂಡಿರುವ ಮಾದರಿ ಖಂಡಿತವಾಗಿಯೂ ಸ್ವಿಫ್ಟ್ ಹಾರಾಟದ ಮಾದರಿ ಅಥವಾ ಮೂಲ ಮಾದರಿ ಆಗಿರುವ ಸಾಧ್ಯತೆ ಹೆಚ್ಚಿದೆ. ನೋಡುಗರು ಅದರಲ್ಲಿ ವಿಮಾನದ ಅಂಡರ್ ಕ್ಯಾರೇಜ್ ಮತ್ತು ಲ್ಯಾಂಡಿಂಗ್ ಗೇರ್ಗಳನ್ನು ಗಮನಿಸಬಹುದಾಗಿದೆ. ಆ ವಿಮಾನವನ್ನು ಕಾನ್ಪುರ ಐಐಟಿ ಉಪನ್ಯಾಸಕರೊಬ್ಬರು ಏರೋ ಮಾಡೆಲಿಂಗ್ ಪ್ರಯೋಗಾಲಯದಲ್ಲಿ ನೀಡಿದ ಉಪನ್ಯಾಸದ ವೇಳೆ ಹಿಂಬದಿಯಲ್ಲಿ ಇಡಲಾಗಿತ್ತು.
ಘಾತಕ್ ಒಂದು ಮಾನವ ರಹಿತ ವಿಮಾನವಾಗಿ ನಿರ್ಮಾಣಗೊಂಡಿದ್ದು, ಇದನ್ನು ವಿಚಕ್ಷಣಾ ಉದ್ದೇಶದಿಂದ ಮತ್ತು ಪೂರ್ವ ನಿರ್ಧಾರಿತ ಗುರಿಯ ಮೇಲೆ ಆಯುಧಗಳ ಮೂಲಕ ನಿಖರವಾಗಿ ದಾಳಿ ಮಾಡುವ ಎರಡೂ ಉದ್ದೇಶಗಳಿಗೂ ಬಳಸಿಕೊಳ್ಳಬಹುದು.
ತಯಾರಾಗಿದ್ದು ಬೆಂಗಳೂರಿನಲ್ಲಿ
ಬೆಂಗಳೂರು ಮೂಲದ ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿ (ಎಡಿಎ) ಡಿಆರ್ಡಿಓನ ಡಿಫೆನ್ಸ್ ಎಲೆಕ್ಟ್ರಾನಿಕ್ಸ್ ಅಪ್ಲಿಕೇಶನ್ ಲ್ಯಾಬೋರೇಟರಿ ಹಾಗೂ ಇನ್ನಿತರ ಪ್ರಯೋಗಾಲಯಗಳ ಜೊತೆಗೆ ಯುಸಿಎವಿ ನಿರ್ಮಾಣದಲ್ಲಿ ತೊಡಗಿದೆ.
2009ರ ಆಸುಪಾಸಿನಲ್ಲಿ, ಈ ಯೋಜನೆಯ ಕುರಿತಾದ ಪ್ರಯೋಗಗಳು ಆರಂಭಗೊಂಡವು. ಆ ಸಂದರ್ಭದಲ್ಲಿ ಈ ಯೋಜನೆಯನ್ನು ಎಯುಆರ್ಎ (ಅಟಾನಮಸ್ ಅನ್ ಮ್ಯಾನ್ಡ್ ರಿಸರ್ಚ್ ಏರ್ ಕ್ರಾಫ್ಟ್) ಎಂದು ಕರೆಯಲಾಗುತ್ತಿತ್ತು. ಭಾರತ ಈಗ ಐದನೇ ತಲೆಮಾರಿನ ಸ್ಟೆಲ್ತ್ ಫೈಟರ್ ನಿರ್ಮಾಣಗೊಳಿಸುತ್ತಿದ್ದು, ಅದನ್ನು ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್ಕ್ರಾಫ್ಟ್ ಅಥವಾ ಎಎಂಸಿಎ ಎಂದು ಕರೆಯಲಾಗುತ್ತದೆ.
ಘಾತಕ್ ಯೋಜನೆಯನ್ನು 2016 ಮೇಯಲ್ಲಿ ಲೀಡ್ ಇನ್ ಯೋಜನೆ ಎಂಬುದಾಗಿ ಗುರುತಿಸಿದ್ದು, 2017ರ ಆರಂಭದಿಂದ ಯೋಜನೆಗೆ ಹಣಕಾಸಿನ ಪೂರೈಕೆ ನಡೆಯುತ್ತಿದೆ. ಪ್ರಸ್ತುತ ಯುಸಿಎವಿ ಒಂದು ರಹಸ್ಯ ಯೋಜನೆಯಾಗಿರುವುದರಿಂದ ಅದರ ತಾಂತ್ರಿಕ ವೈಶಿಷ್ಟ್ಯಗಳ ಕುರಿತು ಮಾಹಿತಿ ಇನ್ನೂ ಲಭ್ಯವಾಗಿಲ್ಲ. ರಾಷ್ಟ್ರೀಯ ಭದ್ರತಾ ಸಲಹೆಗಾರರು ಹಾಗೂ ಪ್ರಧಾನಮಂತ್ರಿ ಕಚೇರಿ ಈ ರಹಸ್ಯ ಯೋಜನೆಯ ಸಂಪೂರ್ಣ ನಿಯಂತ್ರಣ ಹೊಂದಿದ್ದಾರೆ.
ಬಹಿರಂಗ ಗೊಂಡಿದ್ದು ಇಷ್ಟೇ ಮಾಹಿತಿ!
ಆರಂಭದಲ್ಲಿ ಎಯುಆರ್ಎ (ಅಟಾನಮಸ್ ಅನ್ ಮ್ಯಾನ್ಡ್ ರಿಸರ್ಚ್ ಏರ್ಕ್ರಾಫ್ಟ್) ಎಂದು ಕರೆಯಲ್ಪಡುತ್ತಿದ್ದ ಈ ಯೋಜನೆ, ಭಾರತದ ಐದನೇ ತಲೆಮಾರಿನ ಸ್ಟೆಲ್ತ್ ಫೈಟರ್ ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್ಕ್ರಾಫ್ಟ್ (ಎಎಂಸಿಎ) ಯೋಜನೆಯ ಭಾಗವಾಗಿ, 2009ರಲ್ಲಿ ಚಾಲನೆ ಪಡೆಯಿತು. ಬೆಂಗಳೂರು ಮೂಲದ ಎಡಿಎ ಪ್ರಸ್ತುತ ಈ ಯೋಜನೆಯ ಕುರಿತು ಡಿಫೆನ್ಸ್ ಇಲೆಕ್ಟ್ರಾನಿಕ್ಸ್ ಅಪ್ಲಿಕೇಶನ್ ಲ್ಯಾಬೋರೇಟರಿ ಹಾಗೂ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಪ್ರಧಾನ ವಿಭಾಗಗಳ ಜೊತೆ ಕಾರ್ಯ ನಿರ್ವಹಿಸುತ್ತಾ ಬಂದಿದೆ.
ಪ್ರಯೋಗ ಹಾರಾಟದ ಕುರಿತಾಗಿ ಅಧಿಕೃತ ದಿನಾಂಕಗಳ ಲಭ್ಯತೆ ಇಲ್ಲವಾದರೂ, ಇದರ ಪ್ರಯೋಗಗಳನ್ನು ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಗೆ ಸಮೀಪದಲ್ಲಿರುವ ಏರೋನಾಟಿಕಲ್ ಟೆಸ್ಟ್ ರೇಂಜ್ ನಲ್ಲಿ ಎರಡು ತಿಂಗಳ ಹಿಂದೆಯೇ ಕೈಗೊಂಡಂತೆ ಕಾಣುತ್ತದೆ.
ಈ ಮೂಲ ಮಾದರಿಯ ಪ್ರಾಥಮಿಕ ಹಂತದ ಪರೀಕ್ಷೆಗಳು ಅಂತಿಮ ಘಾತಕ್ ಯುಎವಿ ನಿರ್ಮಾಣದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಿವೆ. ಈ ಪರೀಕ್ಷೆಗಳು ಜೂನ್ 2021ರಲ್ಲಿ ಆರಂಭಗೊಂಡಿದ್ದವು. ಡಿಆರ್ಡಿಓದ ಅಂಗವಾದ ಏರೋನಾಟಿಕಲ್ ಡೆವಲಪ್ಮೆಂಟ್ ಎಸ್ಟಾಬ್ಲಿಷ್ಮೆಂಟ್ (ಎಡಿಇ) ಈ ಮಾನವ ರಹಿತ, ಸ್ಟೆಲ್ತಿ ಘಾತಕ್ ಯುಸಿಎವಿಯನ್ನು ಪ್ರಾಥಮಿಕವಾಗಿ ಭಾರತೀಯ ವಾಯುಪಡೆಯ ಸ್ಟೆಲ್ತ್ ಬಾಂಬರ್ ಆಗಿ ತಯಾರಿಸುತ್ತಿದೆ.
ಕಾಂಬ್ಯಾಟ್ ವೆಹಿಕಲ್ಸ್ ರಿಸರ್ಚ್ ಆ್ಯಂಡ್ ಡೆವಲಪ್ಮೆಂಟ್ ಎಸ್ಟಾಬ್ಲಿಷ್ಮೆಂಟ್ (ಸಿವಿಆರ್ಡಿಇ1-ಟನ್) ಸ್ವಿಫ್ಟ್ ಯೋಜನೆಗಾಗಿ ನಿರ್ಮಿಸಿದ ವೆಯ್ಟ್ ಕ್ಲಾಸ್ ರಿಟ್ರಾಕ್ಟೇಬಲ್ ಲ್ಯಾಂಡಿಂಗ್ ಗೇರ್ ಈಗಾಗಲೇ ಡೈರೆಕ್ಟರೇಟ್ ಜನರಲ್ ಆಫ್ ಏರೋನಾಟಿಕಲ್ ಕ್ವಾಲಿಟಿ ಅಶೂರೆನ್ಸ್ ಹಾಗೂ ಸೆಂಟರ್ ಫಾರ್ ಮಿಲಿಟರಿ ಏರ್ ವರ್ದಿನೆಸ್ ಆ್ಯಂಡ್ ಸರ್ಟಿಫಿಕೇಷನ್ (ಸಿಇಎಂಐಎಲ್ಎಸಿ) (ಡಿಜಿಎಕ್ಯುಎ) ಸಂಸ್ಥೆಗಳಿಂದ ಪ್ರಮಾಣಪತ್ರವನ್ನು ಪಡೆದುಕೊಂಡಿದೆ.
ಸ್ವಿಫ್ಟ್ ಅಂದಾಜು 13 ಅಡಿಗಳ ಉದ್ದವಿದ್ದು, ಅದರ ರೆಕ್ಕೆಯನ್ನು ಸೇರಿದಾಗ ಗಾತ್ರ 16 ಅಡಿಗಳಿಗಿಂತ ಸ್ವಲ್ಪ ಹೆಚ್ಚು ವಿಶಾಲವಾಗಿದ್ದು, 2,300 ಪೌಂಡ್ ತೂಕ ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.
ಏನಿದು ಸ್ವಿಫ್ಟ್ ಯುಎವಿ?
ತಂತ್ರಜ್ಞಾನ ಪ್ರದರ್ಶಕ (ಟೆಕ್ನಾಲಜಿ ಡೆಮಾನ್ಸ್ಟ್ರೇಟರ್) ಸ್ವಿಫ್ಟ್ ಯುಎವಿ ಒಂದು ಘಾತಕ್ ಯುಸಿಎವಿಯ (ಅನ್ ಮ್ಯಾನ್ಡ್ ಕಾಂಬ್ಯಾಟ್ ಏರ್ ವೆಹಿಕಲ್) ಆವೃತ್ತಿಯಾಗಿದೆ. ಈ ಸ್ವಿಫ್ಟ್ ಯುಎವಿಯ ಪ್ರಾಥಮಿಕ ಗುರಿ ಎಂದರೆ ಮಾನವ ರಹಿತ ಚಾಲನೆಯಲ್ಲಿ ಅತಿವೇಗದ ಲ್ಯಾಂಡಿಂಗ್ ಹಾಗೂ ಮಾನವ ರಹಿತ ಚಾಲನೆಯಲ್ಲಿ ಸ್ಟೆಲ್ತ್ ತಂತ್ರಜ್ಞಾನವನ್ನು ಬಳಸಿಕೊಳ್ಳುವುದು ಎಂದು ಡಿಆರ್ಡಿಓ ಹೇಳಿದೆ.
2020ರಲ್ಲಿ ಈ ಕುರಿತು ಮಾಹಿತಿ ನೀಡಿದ್ದ ಡಿಆರ್ಡಿಓ, ಈ ಯೋಜನೆಗೆ ಅಗತ್ಯವಿರುವ ಹಾರಾಟ ಉಪಕರಣಗಳ ತಯಾರಿಕೆಯ ಕಾರ್ಯ ಆರಂಭವಾಗಿದ್ದು, ಯೋಜನೆಯ ಲ್ಯಾಂಡಿಂಗ್ ಗೇರ್ ನಿರ್ಮಾಣ ಕಾರ್ಯ ಸಂಪೂರ್ಣವಾಗಿದೆ ಎಂದು ತಿಳಿಸಿತ್ತು.
ಮೂಲಗಳ ಪ್ರಕಾರ, ಡಿಆರ್ಡಿಓದ ಚೆನ್ನೈ ಮೂಲದ ಕಾಂಬ್ಯಾಟ್ ವೆಹಿಕಲ್ಸ್ ರಿಸರ್ಚ್ ಆ್ಯಂಡ್ ಡೆವಲಪ್ಮೆಂಟ್ ಎಸ್ಟಾಬ್ಲಿಷ್ಮೆಂಟ್ ಇತ್ತೀಚೆಗೆ ವಿಮಾನದ ಲ್ಯಾಂಡಿಂಗ್ ಗೇರ್ ವ್ಯವಸ್ಥೆಯನ್ನು ಸಾಗಾಟಗೊಳಿಸಿತ್ತು.
– ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರು
ಇದನ್ನೂ ಓದಿ|ನಮ್ಮ ಚಳ್ಳಕೆರೆ; ಭಾರತದ ಭವಿಷ್ಯದ ವಿಜ್ಞಾನ ಕೇಂದ್ರ