UPI ಪಾವತಿ ಇಂದು ಆನ್ಲೈನ್ ಪಾವತಿಗಳಲ್ಲಿ ಹೆಚ್ಚು ಬಳಸಲಾಗುತ್ತಿರುವ ವಿಧಾನ. ಈ ಕ್ಷೇತ್ರದಲ್ಲಿ ಹಲವಾರು ಸಂಸ್ಥೆಗಳು ನಿಮಗೆ ಪಾವತಿ ಮಾಧ್ಯಮ ಕಲ್ಪಿಸಿಕೊಡುತ್ತವೆ. ಪೇಮೆಂಟ್ ಸುಲಭ ಮತ್ತು ಪರಿಣಾಮಕಾರಿ ಎಂಬುದು ಇದನ್ನು ಜನಪ್ರಿಯಗಳಿಸಿದೆ. ಜನಪ್ರಿಯತೆಯೊಂದಿಗೆ ವಂಚನೆಯ ಸಾಧ್ಯತೆಯೂ ಹೆಚ್ಚಾಗಿದೆ. UPI ಬಳಕೆದಾರರನ್ನು ವಂಚಿಸಿದ ಅನೇಕ ಪ್ರಕರಣಗಳು ಕಳೆದ ಹಲವು ವರ್ಷಗಳಲ್ಲಿ ನಡೆದಿವೆ. ಅಂತಹ ಸಂದರ್ಭಗಳಲ್ಲಿ, ಪಾವತಿ ಸುಲಭವಾಗಿರುವುದೇ ವರಕ್ಕಿಂತ ಶಾಪವಾಗಿ ಪರಿಣಮಿಸುತ್ತದೆ. ಯುಪಿಐನಲ್ಲಿ ಹಣ ಪಾವತಿಸುವಾಗ ಅಥವಾ ಸ್ವೀಕರಿಸುವಾಗ ಬಳಕೆದಾರರು ಕೆಲವು ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ವಂಚನೆಯ ಸಾಧ್ಯತೆಗಳನ್ನು ಕಡಿಮೆ ಮಾಡಲು ಕೆಲವು ಮುನ್ನೆಚ್ಚರಿಕೆಗಳು ಮುಂದೆ ಇವೆ.
- ಅಪರಿಚಿತ ಗುರುತು, ಸಂಖ್ಯೆಗಳ ಬಗ್ಗೆ ಎಚ್ಚರ
ನಿಮಗೆ ಪರಿಚಯವಿಲ್ಲದ ಸಂಖ್ಯೆ ಅಥವಾ ಅನುಮಾನಾಸ್ಪದ ಗುರುತನ್ನು ಕಂಡರೆ, ಯಾವುದೇ ಪೇಮೆಂಟ್ ಮಾಡದಿರುವುದು ಉತ್ತಮ. ತೆರೆದ ಜಾಗಗಳಲ್ಲಿ, ಮುಕ್ತ ವೆಬ್ಸೈಟ್ಗಳಲ್ಲಿ ಹಂಚಿಕೊಳ್ಳಲಾದ ಫೋನ್ ಸಂಖ್ಯೆಗಳ ಬಗ್ಗೆ ವಿಶೇಷವಾಗಿ ಜಾಗರೂಕರಾಗಿರಬೇಕು. ವಿಶೇಷವಾಗಿ ಆಹಾರ ಅಥವಾ ಪಾನೀಯ ಮಳಿಗೆಗಳ ಫೋನ್ ಸಂಖ್ಯೆಗಳು. ಪೇಮೆಂಟ್ ಮುಗಿಸುವ ಮೊದಲು ವ್ಯಕ್ತಿಯ ಗುರುತನ್ನು ಡಬಲ್ ಚೆಕ್ ಮಾಡುವುದು ಯಾವಾಗಲೂ ಉತ್ತಮ ಅಭ್ಯಾಸ. - ಹಣ ಸ್ವೀಕರಿಸಲು ಪಿನ್ ಅಗತ್ಯವಿಲ್ಲ
ವಂಚನೆಯ ದೂರುಗಳಲ್ಲಿ ಒಂದು ಸಾಮಾನ್ಯ ಅಂಶವೆಂದರೆ, ಪೇಮೆಂಟ್ ಮಾಡುತ್ತೇವೆ ಎಂದು ನಿಮ್ಮ ಬಳಿ ಒಟಿಪಿ ಅಥವಾ ಪಿನ್ ಕೇಳುವುದು. ನಿಮ್ಮ ಯುಪಿಐಯಲ್ಲಿ ಹಣವನ್ನು ಸ್ವೀಕರಿಸಲು ಯಾರೊಂದಿಗೂ ನೀವು ಪಿನ್, ಒಟಿಪಿ ಹಂಚಿಕೊಳ್ಳುವ ಅಗತ್ಯವೇ ಇಲ್ಲ. ಬ್ಯಾಂಕ್ ಕೂಡ ನಿಮ್ಮ ಪಿನ್ ಅನ್ನು ಎಂದಿಗೂ ಕೇಳುವುದಿಲ್ಲ. ವಂಚಕರು ಹಣ ಕಳುಹಿಸುವ ಭರವಸೆ ನೀಡುವಾಗ ನಿಮ್ಮಲ್ಲಿ ಎಮರ್ಜೆನ್ಸಿ ಭಾವನೆ ಸೃಷ್ಟಿಸಲು ಯತ್ನಿಸುತ್ತಾರೆ. ಅಂತಿಮವಾಗಿ ಹಣ ಸ್ವೀಕರಿಸಲು ನಿಮ್ಮ ಪಿನ್ ಅನ್ನು ನಮೂದಿಸಲು ಕೇಳುತ್ತಾರೆ. ಎಂದಿಗೂ ಪಿನ್ ನಂಬರ್ ಹೊಡೆಯಬೇಡಿ. - ಸ್ಕ್ಯಾಮ್ ಪಾವತಿ ರಿಕ್ವೆಸ್ಟ್
ಹೆಚ್ಚಿನ UPI ಅಪ್ಲಿಕೇಶನ್ಗಳು ಕೆಲವು ಹಾನಿಕರ UPI ಐಡಿಗಳಿಂದ ಬರುವ ಪಾವತಿ ವಿನಂತಿಗಳನ್ನು ಫಿಲ್ಟರ್ ಮಾಡಿ ತಡೆಗಟ್ಟುವ ವ್ಯವಸ್ಥೆಯನ್ನು ಹೊಂದಿವೆ. ಅಂತಹ ರಿಕ್ವೆಸ್ಟ್ಗಳು ಕಂಡುಬಂದರೆ ನಿಮಗೆ ಎಚ್ಚರಿಕೆ ನೀಡಲಾಗುತ್ತದೆ. ಇದು ನಿಮ್ಮನ್ನು ಅಲರ್ಟ್ ಮಾಡಬೇಕು. ಆ ಕಡೆ ಇರುವ ವ್ಯಕ್ತಿ ವಂಚಕನಲ್ಲ ಎಂದು ನೀವು ನೂರು ಪರ್ಸೆಂಟ್ ಖಚಿತವಾಗಿದ್ದರೆ ಮಾತ್ರ ವಹಿವಾಟು ಮುಂದುವರಿಸಿ. ನಿಮಗೆ ʼಪೇ’ ಅಥವಾ ʼಡಿಕ್ಲೈನ್’ ಆಯ್ಕೆ ಬರಬಹುದು. ಸಣ್ಣ ಸಂದೇಹವಿದ್ದರೂ ಮುಂದುವರಿಯದೆ ʼನಿರಾಕರಣೆ’ ಮಾಡಬೇಕು. ನೀವು ‘ಪೇ’ ಆಯ್ಕೆಯನ್ನು ಕ್ಲಿಕ್ ಮಾಡಿದರೆ ಹಣ ಬರುವುದಿಲ್ಲ, ಕೈಬಿಟ್ಟು ಹೋಗುತ್ತದೆ. - ನಕಲಿ UPI ಅಪ್ಲಿಕೇಶನ್ಗಳು
ಎಟಿಎಂ ಕಾರ್ಡ್ ಪೇಮೆಂಟ್ ಯಂತ್ರಗಳ ಯುಗದಲ್ಲಿ ಕಾರ್ಡ್ ಸ್ಕಿಮ್ಮಿಂಗ್ನ ಸಾಕಷ್ಟು ನಿದರ್ಶನಗಳಿವೆ. ನಕಲಿ ಮೆಶಿನ್ ಮೂಲಕ ನಿಮ್ಮ ಕಾರ್ಡ್ ವಿವರಗಳನ್ನು ದಾಖಲಿಸುವ ಅಭ್ಯಾಸ ಹೆಚ್ಚಿದೆ. ಅದೇ ರೀತಿ ನಕಲಿ UPI ಅಪ್ಲಿಕೇಶನ್ಗಳು ನಿಮ್ಮ ವಿವರಗಳನ್ನು ಪಾವತಿ ಮಾಡುವ ಅಥವಾ UPI ಮೂಲಕ ಸ್ವೀಕರಿಸುವ ನೆಪದಲ್ಲಿ ಪಡೆದುಕೊಳ್ಳಲು ಪ್ರಯತ್ನಿಸುತ್ತವೆ. ಅಂತಹ ಅಪ್ಲಿಕೇಶನ್ಗಳನ್ನು ಸಾಮಾನ್ಯವಾಗಿ ಮೂಲ ಬ್ಯಾಂಕ್ ಅಪ್ಲಿಕೇಶನ್ನಂತೆ ವಿನ್ಯಾಸಗೊಳಿಸಲಾಗಿರುತ್ತದೆ ಮತ್ತು ಡೌನ್ಲೋಡ್ಗೆ ಸುಲಭವಾಗಿರುತ್ತದೆ. ನೀವು ಆಕಸ್ಮಿಕವಾಗಿ ನಕಲಿ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿದರೆ, ಅದು ನಿಮ್ಮ ಸೂಕ್ಷ್ಮ ಡೇಟಾವನ್ನು ವಂಚಕರೊಂದಿಗೆ ಹಂಚಿಕೊಳ್ಳುತ್ತದೆ. ನಿಮ್ಮ ಖಾತೆಯಿಂದ ಹಣ ಕದಿಯಲು ಅನುವು ಮಾಡಿಕೊಡುತ್ತದೆ. ಮೋದಿ ಮತ್ತು ಭೀಮ್ ಯುಪಿಐ ಗೈಡ್ ಹೆಸರಿನಲ್ಲಿ ಇಂಥ ಹಲವಾರು ನಕಲಿ ಆಪ್ಗಳಿವೆ.
ಇದನ್ನೂ ಓದಿ: WhatsApp ಅಪ್ಡೇಟ್: 2GB ವರೆಗಿನ ಫೈಲ್ ಕಳಿಸಬಹುದು!
ನೆನಪಿನಲ್ಲಿಟ್ಟುಕೊಳ್ಳಲೇಬೇಕಾದ ವಿಷಯಗಳು
- ಅಪರಿಚಿತರಿಗೆ ನಿಮ್ಮ ಪಿನ್ ಅನ್ನು ಎಂದಿಗೂ ಬಹಿರಂಗಪಡಿಸಬೇಡಿ.
- ಆಂಟಿವೈರಸ್ ಮತ್ತು ಬಯೋಮೆಟ್ರಿಕ್ ಗುರುತಿಸುವಿಕೆ ಸಾಫ್ಟ್ವೇರ್ ಅನ್ನು ಇನ್ಸ್ಟಾಲ್ ಮಾಡಿಕೊಳ್ಳಿ.
- ಅಪರಿಚಿತ ಮೂಲಗಳಿಂದ ಬಂದ ಇಮೇಲ್ ಅಥವಾ ಲಿಂಕ್ಗಳನ್ನು ಎಂದಿಗೂ ತೆರೆಯಬೇಡಿ.
- ನಿಮ್ಮ ಬ್ಯಾಂಕ್ನೊಂದಿಗೆ ನಿಮ್ಮ ವಿವರಗಳನ್ನು ನವೀಕರಿಸಿ.
- ನೀವು ನಂಬುವ ಸುರಕ್ಷಿತ ವೈಫೈ ಸಂಪರ್ಕಗಳನ್ನು ಮಾತ್ರ ಬಳಸಿ.
- ನಿಮ್ಮ ಹಣಕಾಸಿನ ವಹಿವಾಟುಗಳು ಮತ್ತು ಬ್ಯಾಂಕ್ ಸ್ಟೇಟ್ಮೆಂಟ್ಗಳನ್ನು ಟ್ರ್ಯಾಕ್ ಮಾಡಿ.
- ನಿಮ್ಮ ಖಾತೆಯಲ್ಲಿ ಅನುಮಾನಾಸ್ಪದ ಟ್ರಾನ್ಸಾಕ್ಷನ್ ಕಂಡುಬಂದರೆ ತಕ್ಷಣವೇ ನಿಮ್ಮ ಬ್ಯಾಂಕ್ ಅನ್ನು ಎಚ್ಚರಿಸಿ.