Site icon Vistara News

UPI Payment: ತಪ್ಪು ಯುಪಿಐ ವಿಳಾಸಕ್ಕೆ ಹಣ ಪಾವತಿಸಿದಿರಾ? ಅದನ್ನು ಮರಳಿ ಪಡೆಯೋದು ಹೇಗೆ?

UPI

ಬೆಂಗಳೂರು: ಇಂದು ಹಣ ಪಾವತಿ ಬಹುತೇಕ ಎಲ್ಲ ಕಡೆಯೂ ಡಿಜಿಟಲ್ (Digital payment) ಆಗಿದೆ. ವೇಗದ ವಹಿವಾಟಿನ ಈ ಕಾಲದಲ್ಲಿ ಯುಪಿಐ (UPI payment) ಬಳಸುವಾಗ ತಪ್ಪು ವ್ಯಕ್ತಿಯ ಅಕೌಂಟ್‌ಗೆ ಹಣವನ್ನು ಕಳುಹಿಸುವ ಪ್ರಮಾದ ಉಂಟಾಗುವುದು ಸಾಮಾನ್ಯ. ತಪ್ಪಾಗಿ ಫೋನ್ ಸಂಖ್ಯೆ ಸಮೂದಿಸುವುದು, UPI IDಯಲ್ಲಿ ಟೈಪಿಂಗ್ ದೋಷ ಸೇರಿದಂತೆ ವಿವಿಧ ಕಾರಣಗಳಿಂದ ಇದು ಸಂಭವಿಸಬಹುದು. ಅಂತಹ ಸಂದರ್ಭಗಳಲ್ಲಿ ಅಥವಾ ಪಾವತಿ ಬಾಕಿಯಿರುವ ಸ್ಥಿತಿಗೆ ಹೋದಾಗ, ಅದನ್ನು ಹೋಲ್ಡ್‌ ಮಾಡಿ ನಿಮ್ಮ ಪಾವತಿಯನ್ನು ಮರುಪಡೆಯುವುದು ಹೇಗೆ?

ಈ ಸಂದರ್ಭಗಳಲ್ಲಿ, ಈ ದೋಷಗಳನ್ನು ಹೇಗೆ ಸರಿಪಡಿಸುವುದು ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಹಣ ಸ್ವೀಕರಿಸುವವರ ಖಾತೆಗೆ ಹಣ ಸೇರದಂತೆ ತ್ವರಿತವಾಗಿ ಜಮಾ ಪ್ರಕ್ರಿಯೆ (ಅದು PhonePe, Google Pay ಅಥವಾ Paytm ಆಗಿರಬಹುದು) ತಡೆಗಟ್ಟುವುದು ಸಾಧ್ಯ. ಆದರೆ ಇದು ಕೆಲವೊಮ್ಮೆ ಕೈಮೀರಿ ಪಾವತಿಯಾಗಿ ಹೋಗಿಬಿಡುತ್ತದೆ. ಅಂಥ ಸಂದರ್ಭಗಳಲ್ಲಿ ನೀವು ಅನುಸರಿಸಬೇಕಾದ ಹಂತಗಳು ಇಲ್ಲಿವೆ:

ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಿ: ನಿಮ್ಮ ಬ್ಯಾಂಕ್ ಅನ್ನು ನೇರವಾಗಿ ಸಂಪರ್ಕಿಸಿ ಮತ್ತು ತಪ್ಪಾದ ಕ್ರೆಡಿಟ್ ಚಾರ್ಜ್‌ಬ್ಯಾಕ್ ಅನ್ನು ಪ್ರಾರಂಭಿಸಿ, ಪಾವತಿಗೆ ಸಂಬಂಧಿಸಿದ ವಿಶಿಷ್ಟ ವಹಿವಾಟು ಉಲ್ಲೇಖ (UTR) ಸಂಖ್ಯೆಯನ್ನು ಅವರಿಗೆ ಒದಗಿಸಿ. ತಪ್ಪಾಗಿ ಸ್ವೀಕರಿಸಿದವರು ಅದೇ ಬ್ಯಾಂಕ್‌ನಲ್ಲಿ ಖಾತೆಯನ್ನು ಹೊಂದಿದ್ದರೆ, ನಿಮ್ಮ ಬ್ಯಾಂಕ್ ಬೇಗನೆ ಕಾರ್ಯನಿರ್ವಹಿಸಬಹುದು. ಅಲ್ಲೇ ರಿವರ್ಸಲ್‌ಗೆ ವಿನಂತಿಸಬಹುದು. ಸ್ವೀಕರಿಸಿದವರ ಖಾತೆಯು ಬೇರೆ ಬ್ಯಾಂಕ್‌ನಲ್ಲಿ ಇದ್ದರೆ, ಶಾಖೆಯ ವಿವರಗಳನ್ನು ಒದಗಿಸುವ ಮೂಲಕ ನಿಮ್ಮ ಬ್ಯಾಂಕ್ ಸಹಾಯ ಮಾಡಬಹುದು. ಹೆಚ್ಚಿನ ಸಹಾಯಕ್ಕಾಗಿ ನೀವು ಆ ಶಾಖೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥಾಪಕರೊಂದಿಗೆ ಸಂಪರ್ಕ ಸಾಧಿಸಬೇಕು.

ಸ್ವೀಕರಿಸಿದವರ ಒಪ್ಪಿಗೆ ಪಡೆಯಿರಿ: ಸ್ವೀಕರಿಸಿದವರ ಒಪ್ಪಿಗೆಯೊಂದಿಗೆ ಮಾತ್ರ ಹಣವನ್ನು ಮರಳಿ ಪಡೆಯಬಹುದು ಎಂಬುದನ್ನು ಗಮನಿಸಿ. ಅವರು ಒಪ್ಪಿದರೆ, ಹಣವನ್ನು ಏಳು ದಿನಗಳಲ್ಲಿ ನಿಮ್ಮ ಖಾತೆಗೆ ಹಿಂತಿರುಗಿಸಲಾಗುತ್ತದೆ. ಸ್ವೀಕರಿಸಿದವರು ನಿಮ್ಮ ವಿನಂತಿಗೆ ಪ್ರತಿಕ್ರಿಯಿಸದಿದ್ದರೆ ಅಥವಾ ಮೊತ್ತವನ್ನು ಹಿಂಪಡೆಯುವಲ್ಲಿ ಬ್ಯಾಂಕ್ ತೊಂದರೆಗಳನ್ನು ಎದುರಿಸಿದರೆ, ನೀವು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಪೋರ್ಟಲ್‌ನಲ್ಲಿ ದೂರು ಸಲ್ಲಿಸಬೇಕಾಗುತ್ತದೆ.

ಒಂಬುಡ್ಸ್‌ಮನ್‌ಗೆ ದೂರಿ: ಮೇಲೆ ತಿಳಿಸಿದ ಹಂತಗಳನ್ನು ಅನುಸರಿಸಿದ ನಂತರವೂ ಸಮಸ್ಯೆಯು ಬಗೆಹರಿಯದಿದ್ದರೆ, ಬ್ಯಾಂಕಿಂಗ್ ಒಂಬುಡ್ಸ್‌ಮನ್‌ಗೆ ಈ ವಿಷಯವನ್ನು ನೀವು ಒಯ್ಯಬಹುದು. ಆದರೆ ಪ್ರಕ್ರಿಯೆ ನಡೆದ 30 ದಿನಗಳ ನಂತರ ಮಾತ್ರ ನೀವು ದೂರು ನೀಡಬಹುದು.

ಹ್ಯಾಂಗ್‌ ಆಗಿರುವ ಪಾವತಿ ನಿರ್ವಹಣೆ

ಪಾವತಿಗಳು ಹ್ಯಾಂಗ್‌ ಆದಾಗ, ಬಾಕಿಯಾದಾಗ ಸಂದಿಗ್ಧತೆ ಉಂಟಾಗುತ್ತದೆ. ಈ ಸನ್ನಿವೇಶವನ್ನು ನ್ಯಾವಿಗೇಟ್ ಮಾಡುವುದು ಹೇಗೆ ಎಂಬುದು ಇಲ್ಲಿದೆ:

ತಾಳ್ಮೆಯಿಂದಿರಿ: ಈ ಪರಿಸ್ಥಿತಿಯಲ್ಲಿ ನಿಮ್ಮ ಹಣ ಸುರಕ್ಷಿತವಾಗಿರುತ್ತದೆ ಮತ್ತು ಅದು ನಿಮ್ಮಲ್ಲಿಗೆ ಹಿಂತಿರುಗುತ್ತದೆ.

ಸಮಸ್ಯೆಯನ್ನು ವರದಿ ಮಾಡಿ: ಸಮಸ್ಯೆಯನ್ನು ವರದಿ ಮಾಡಲು ಅಪ್ಲಿಕೇಶನ್ ಅಥವಾ ನಿಮ್ಮ ಸಂಬಂಧಿತ UPI ಪ್ಲಾಟ್‌ಫಾರ್ಮ್ ಅನ್ನು ಬಳಸಿ. ಇದು ಪ್ರಗತಿಯನ್ನು ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತದೆ.

ಬ್ಯಾಂಕಿನ ಅಂತಿಮ ಅಪ್‌ಡೇಟ್: ಪಾವತಿಯ ಅಂತಿಮ ಸ್ಥಿತಿಯನ್ನು ಒದಗಿಸಲು ನಿಮ್ಮ ಬ್ಯಾಂಕ್‌ಗೆ 48 ಗಂಟೆಗಳ ಕಾಲಾವಕಾಶ ನೀಡಿ. ನಿಮ್ಮ ಕಡೆಯಿಂದ ಪಾವತಿ ಯಶಸ್ವಿಯಾದರೆ, ಸ್ವೀಕರಿಸುವವರು ಹಣವನ್ನು ಸ್ವೀಕರಿಸುತ್ತಾರೆ.

ವಿಫಲ ಪಾವತಿ: ಪಾವತಿಯು ವಿಫಲವಾದರೆ, ಪಾವತಿ ದಿನಾಂಕದಿಂದ 3–5 ವ್ಯವಹಾರ ದಿನಗಳಲ್ಲಿ ನಿಮ್ಮ ಖಾತೆಗೆ ಮೊತ್ತವನ್ನು ಹಿಂತಿರುಗಿಸಲಾಗುತ್ತದೆ.

ಬ್ಯಾಂಕ್ ದೂರು: ತ್ವರಿತ ಪರಿಹಾರಕ್ಕಾಗಿ, ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಿ ಮತ್ತು ದೂರು ಸಲ್ಲಿಸಿ, ವಹಿವಾಟಿನ UTR ಸಂಖ್ಯೆಯನ್ನು ನೆನಪಿಟ್ಟುಕೊಂಡು ಸೇರಿಸಿ.

UPI ಕಂಪನಿಗೆ ದೂರಿರಿ: ಸಮಸ್ಯೆಯು ನಿಗದಿತ ಸಮಯದ ಚೌಕಟ್ಟನ್ನು ಮೀರಿ ಮುಂದುವರಿದರೆ, ಸೂಕ್ತ ಕ್ರಮ ಕೈಗೊಳ್ಳಲು ನಿಮ್ಮ UPI ಅಪ್ಲಿಕೇಶನ್ ಪೂರೈಕೆದಾರರಾದ PhonePe, Google Pay ಅಥವಾ Paytmಗೆ ದೂರು ನೀಡಿ. ಆಯಾ UPI ಅಪ್ಲಿಕೇಶನ್‌ನ ಸಹಾಯ ವಿಭಾಗವನ್ನು ನೋಡಿ ಅಥವಾ ಮಾರ್ಗದರ್ಶನಕ್ಕಾಗಿ ಸಂಪರ್ಕಿಸಿ.

ಇದನ್ನೂ ಓದಿ: UPI Payment : Gpay ​ಮಾಡುತ್ತೀರಾ? ನಿಮ್ಮ ಬ್ಯಾಂಕ್​ಗಳು ನೀಡಿರುವ ಮಿತಿ ಎಷ್ಟಿದೆ ಎಂದು ಇಲ್ಲಿ ತಿಳಿದುಕೊಳ್ಳಿ

Exit mobile version