Site icon Vistara News

Video Game: ಕಠಿಣ ವೀಡಿಯೊ ಗೇಮ್ ಟೆಟ್ರಿಸ್ ಅನ್ನು ಸೋಲಿಸಿದ ಮೊದಲ ಮನುಷ್ಯ, 13ರ ಹುಡುಗ!

Video Game tetris

ಲಾಸ್ ಏಂಜಲೀಸ್: ಅಮೆರಿಕದ ಹದಿಹರೆಯದ ಹುಡುಗನೊಬ್ಬ ಬಲು ಕಠಿಣವಾದ ಕ್ಲಾಸಿಕ್ ಕಂಪ್ಯೂಟರ್ ಗೇಮ್ ʼಟೆಟ್ರಿಸ್ʼ ಅನ್ನು ಸೋಲಿಸಿದ್ದಾನೆ. ಹೀಗೆ ಟೆಟ್ರಿಸ್‌ ಅನ್ನು ಸೋಲಿಸಿದ ಮೊದಲ ಮನುಷ್ಯ ಎನ್ನಿಸಿಕೊಂಡಿದ್ದಾನೆ. ಹಿಂದೆ ಕೃತಕ ಬುದ್ಧಿಮತ್ತೆ (ಎಐ) ಮಾತ್ರ ಈ ಆಟದಲ್ಲಿ ತುದಿ ಮುಟ್ಟಲು ಸಾಧ್ಯವಾಗಿತ್ತು. ಈತನ ಸಾಧನೆ ಈಗ ವೈರಲ್‌ (viral news) ಆಗಿದೆ.

ʼಬ್ಲೂ ಸ್ಕುಟಿʼ ಎಂದು ಆನ್‌ಲೈನ್‌ನಲ್ಲಿ ಕರೆಸಿಕೊಳ್ಳುವ ಒಕ್ಲಹೋಮಾದ 13 ವರ್ಷದ ವಿಲ್ಲೀಸ್ ಗಿಬ್ಸನ್ ಇದರ ಸಾಧಕ. ಟೆಟ್ರಿಸ್‌ ಪಝಲ್ ಗೇಮ್‌ನ ನಿಂಟೆಂಡೊ ಆವೃತ್ತಿಯ ʼಕಿಲ್ ಸ್ಕ್ರೀನ್ʼ ಅನ್ನು ತಲುಪಿದ ಮೊದಲ ವ್ಯಕ್ತಿ ಎನಿಸಿಕೊಂಡಿದ್ದಾನೆ. ಸಹ ಆಟಗಾರರು ಆನ್‌ಲೈನ್‌ನಲ್ಲಿ ಈತನ ಆಟವನ್ನು ಗಮನಿಸಿದ್ದಾರೆ.

ವಿಲ್ಲೀಸ್ ಈ ವಾರ ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಿದ 40 ನಿಮಿಷಗಳ ಆಟದ ವೀಡಿಯೊದ ಅಂತ್ಯದಲ್ಲಿ ಗೆಲುವು ಸಾಧಿಸಿದ್ದು ಹಾಗೂ “ಓ ಮೈ ಗಾಡ್‌!” ಎಂದು ಪದೇ ಪದೆ ಉದ್ಗರಿಸಿದ್ದು ದಾಖಲಾಗಿದೆ. ʼʼನನ್ನ ಬೆರಳುಗಳು ಮರಗಟ್ಟಿವೆʼʼ ಎಂದಿದ್ದಾನೆ. ಅದಕ್ಕೂ ಮುನ್ನ ಈತ ಆಟ ಪೂರ್ತಿ ನಿಶ್ಚಲವಾಗಿ ಕುಳಿತು ಬೆರಳುಗಳನ್ನು ಅತಿ ವೇಗವಾಗಿ ಆಟದಲ್ಲಿ ತೊಡಗಿಸಿದ್ದ.

“ಇದನ್ನು ಹಿಂದೆಂದೂ ಮನುಷ್ಯರಿಂದ ಸಾಧಿಸಲಾಗಿಲ್ಲ” ಎಂದು ಕ್ಲಾಸಿಕ್ ಟೆಟ್ರಿಸ್ ವಿಶ್ವ ಚಾಂಪಿಯನ್‌ಶಿಪ್ ಅಧ್ಯಕ್ಷ ವಿನ್ಸ್ ಕ್ಲೆಮೆಂಟೆ ಹೇಳಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. “ಒಂದೆರಡು ವರ್ಷಗಳ ಹಿಂದೆ ಇದು ಅಸಾಧ್ಯವೆಂದು ಎಲ್ಲರೂ ಭಾವಿಸಿದ್ದರು” ಎಂದಿದೆ.

ಟೆಟ್ರಿಸ್‌, ಸೋವಿಯತ್ ಸಾಫ್ಟ್‌ವೇರ್ ಇಂಜಿನಿಯರ್‌ ಒಬ್ಬನ ಮೆದುಳಿನ ಕೂಸು. ಟೆಟ್ರಿಸ್ ಸರಳ ಆದರೆ ಹೆಚ್ಚು ವ್ಯಸನಕಾರಿ ಆಟ. ಇದರಲ್ಲಿ ಆಟಗಾರರು ಬೀಳುತ್ತಿರುವ ವಿಭಿನ್ನ ಆಕಾರಗಳ ಬೀಳುವ ಬ್ಲಾಕ್‌ಗಳನ್ನು ತಿರುಗಿಸುತ್ತಾ ಅವು ಕೆಳಗಿರುವ ಬಾಕ್ಸ್‌ನೊಳಗೆ ಹೊಂದಿಕೊಂಡು ಕೂರುವಂತೆ ಮಾಡಬೇಕು. ಆಟಗಾರ ಮುಂದಿನ ಹಂತಗಳಿಗೆ ಹೋಗುತ್ತಿದ್ದಂತೆ ಆಟದ ವೇಗ ಹೆಚ್ಚಾಗುತ್ತ ಹೋಗುತ್ತದೆ. ಹೀಗೆ ಹಲವು ಹಂತಗಳಿವೆ. ಇದರಲ್ಲಿ ಮನುಷ್ಯರು ಯಂತ್ರವನ್ನು ಗೆಲ್ಲಲಾರರು ಎಂದು ನಂಬಲಾಗಿತ್ತು. ಯಾಕೆಂದರೆ ಇದು ಮನುಷ್ಯರು ಪ್ರತಿಕ್ರಿಯಿಸಲು ಸಾಧ್ಯವಾಗದಷ್ಟು ವೇಗವಾಗಿದೆ.

ಆದರೆ ಇತ್ತೀಚಿನ ವರ್ಷಗಳಲ್ಲಿ ಆಟಗಾರರು ಈ ಆಟದ ಕೋಡ್‌ ಅನ್ನು ಬ್ರೇಕ್‌ ಮಾಡಿ ಮುಂದುವರಿಯುವ ಸಾಧ್ಯತೆಗಳನ್ನೂ ಕಂಡುಕೊಂಡಿದ್ದಾರೆ. ಆದರೆ ಇದು ಕಂಪ್ಯೂಟರ್‌ನಿಂದ ಮಾತ್ರ ಸಾಧ್ಯವಾಗಿದೆ. ಡಿಸೆಂಬರ್ 21ರವರೆಗೆ ವಿಲ್ಲೀಸ್ 157ನೇ ಹಂತದಲ್ಲಿದ್ದರು. ನಂತರ ವಿಲ್ಲೀಸ್‌ ಇದನ್ನು ಸಾಧಿಸಿದಾಗ ಈ ಹಿಂದಿನ ಕ್ಲಾಸಿಕ್ ಟೆಟ್ರಿಸ್ ವರ್ಲ್ಡ್ ಚಾಂಪಿಯನ್ ಫ್ರ್ಯಾಕ್ಟಲ್ ʼಹಿ ಡಿಡ್‌ ಇಟ್‌ʼ ಎಂದು ಲೈವ್‌ಸ್ಟ್ರೀಮ್‌ನಲ್ಲಿ ಉದ್ಗರಿಸಿದ.

2024ನೇ ವರ್ಷ ಆಟದ 40ನೇ ವಾರ್ಷಿಕೋತ್ಸವ. ಇದು ಸೂಕ್ತ, ಸಕಾಲಿಕ ಸಾಧನೆಯಾಗಿದೆ ಎಂದು ಟೆಟ್ರಿಸ್ ಮುಖ್ಯ ಕಾರ್ಯನಿರ್ವಾಹಕ ಮಾಯಾ ರೋಜರ್ಸ್ ಹೇಳಿದ್ದಾರೆ.

ಇದನ್ನೂ ಓದಿ: Actor Rajinikanth: ರಜನಿಕಾಂತ್ ಕಂಡೊಡನೆ ʻತಲೈವಾʼ ಎಂದು ಕಿರುಚಿದ ಫ್ಯಾನ್ಸ್‌; ವಿಡಿಯೊ ವೈರಲ್‌!

Exit mobile version