Site icon Vistara News

ವಿಸ್ತಾರ ಸಂಪಾದಕೀಯ: ಆನ್‌ಲೈನ್‌ನಲ್ಲಿ ಮಕ್ಕಳ ಕೈಗೆ ಲೈಂಗಿಕ ಸರಕು ಆಘಾತಕಾರಿ

cyber bulyeing

ಮಕ್ಕಳನ್ನು ಆನ್‌ಲೈನ್‌ನಲ್ಲಿ ಹಲವು ಬಗೆಗಳಲ್ಲಿ ಮಾನಸಿಕವಾಗಿ ಬಲಿಯಾಗಿಸಲಾಗುತ್ತಿದೆ. ಸೋಶಿಯಲ್‌ ಮೀಡಿಯಾಗಳನ್ನು (Social media) ಇದಕ್ಕಾಗಿಯೇ ಬಳಸುವ ಹ್ಯಾಕರ್‌ಗಳು, ಸೈಬರ್‌ ಬುಲ್ಲೀಗಳು, ಲೈಂಗಿಕ ಪೀಡಕರು (Sexual predators) ಇದ್ದಾರೆ. ಇವರನ್ನು ನಿಗ್ರಹಿಸಲು ಅಗತ್ಯ ಕ್ರಮಗಳನ್ನು ಆಯಾ ಸೋಶಿಯಲ್‌ ಮೀಡಿಯಾ ನಿರ್ವಹಿಸುವ ಫ್ಲಾಟ್‌ಫಾರಂ ಹೊಂದಿರುವ ಕಂಪನಿಗಳೇ ತೆಗೆದುಕೊಳ್ಳಬೇಕು. ಆದರೆ ಈ ಕಂಪನಿಗಳೇ ಇಂಥ ಲೈಂಗಿಕ ದೌರ್ಜನ್ಯಕ್ಕೆ ಅವಕಾಶ ಮಾಡಿಕೊಟ್ಟರೆ? ಈಗ ಹೀಗಾಗಿದೆ. ದೈತ್ಯ ಟೆಕ್‌ ಕಂಪನಿ ಮೆಟಾ (Meta) ನಿರ್ವಹಿಸುವ ಫೇಸ್‌ಬುಕ್ (Facebook) ಮತ್ತು ಇನ್‌ಸ್ಟಾಗ್ರಾಮ್ (Instagram) ವೇದಿಕೆಗಳಲ್ಲಿ ಇಂಥದೊಂದು ಕಿರುಕುಳ ನಡೆಯುತ್ತಿರುವ ಆಘಾತಕಾರಿ ಅಂಶ ಬಯಲಾಗಿದೆ. ಪ್ರತಿಷ್ಠಿತ ಮೀಡಿಯಾ ಸಂಸ್ಥೆ ವಾಲ್ ಸ್ಟ್ರೀಟ್ ಜರ್ನಲ್ (WSJ)ನಲ್ಲಿನ ವರದಿಯ ಪ್ರಕಾರ, ಈ ಮೀಡಿಯಾಗಳಲ್ಲಿ ಪ್ರತಿದಿನ ಸುಮಾರು 1,00,000 ಮಂದಿ ಅಪ್ರಾಪ್ತರು ಲೈಂಗಿಕವಾಗಿ ಪ್ರಚೋದಕವಾದ, ಲೈಂಗಿಕ ಪೀಡನೆಗೆ ಕಾರಣವಾಗುವ, ಲೈಂಗಿಕ ದೌರ್ಜನ್ಯಕಾರಿ ಕಂಟೆಂಟ್‌ಗಳನ್ನು ಪಡೆಯುವಂತೆ ಮಾಡಲಾಗುತ್ತಿದೆ. ಮೆಟಾದ ಈ ವೇದಿಕೆಗಳು ಅಪ್ರಾಪ್ತ ವಯಸ್ಸಿನ ಬಳಕೆದಾರರಿಗೆ ಲೈಂಗಿಕ ವಿಷಯವನ್ನು ಶಿಫಾರಸು ಮಾಡುತ್ತವೆ; ಮಾತ್ರವಲ್ಲ, ಲೈಂಗಿಕ ಶೋಷಕರಾದ ವಯಸ್ಕ ಬಳಕೆದಾರರಿಗೆ ಅಪ್ರಾಪ್ತ ವಯಸ್ಸಿನವರ ಖಾತೆಗಳನ್ನು ಪ್ರಮೋಟ್ ಮಾಡುವ ರೀತಿಯಲ್ಲಿಯೂ ಕೆಲಸ ಮಾಡುತ್ತವೆ ಎಂದು ಆರೋಪಿಸಲಾಗಿದೆ.

ಇದು ತುಂಬಾ ಆಘಾತಕಾರಿ ಸಂಗತಿಯೇ ಸರಿ. ಆನ್‌ಲೈನ್‌ನಲ್ಲಿ ಮಕ್ಕಳ ಹಿತವನ್ನು ಎಲ್ಲ ರೀತಿಯಿಂದಲೂ ಕಾಯುವ ರಕ್ಷಣಾ ವ್ಯವಸ್ಥೆಗಳನ್ನು ಆಯಾ ಆನ್‌ಲೈನ್‌ ವೇದಿಕೆಗಳು ಮಾಡಬೇಕು. ಉದಾಹರಣೆಗೆ ಒಟಿಟಿ ವೇದಿಕೆಗಳು ವಯಸ್ಕರ ಹಾಗೂ ಮಕ್ಕಳ ಕಂಟೆಂಟ್‌ಗಳಿಗೆ ಪ್ರತ್ಯೇಕ ಖಾತೆಗಳನ್ನು ನಿಗದಿಪಡಿಸಿ, ವಯಸ್ಸಿಗೆ ತಕ್ಕ ಕಂಟೆಂಟ್‌ ಮಾತ್ರ ಸಿಗುವ ಹಾಗೆ ನಿಯೋಜಿಸಿರುತ್ತವೆ. ಇದನ್ನು ಫೇಸ್‌ಬುಕ್‌, ಇನ್‌ಸ್ಟಾಗ್ರಾಂನಂಥ ವೇದಿಕೆಗಳಲ್ಲೂ ಮಾಡಲು ಯಾಕೆ ಸಾಧ್ಯವಿಲ್ಲ? ಲೈಂಗಿಕ ಪೀಡನೆಗೆ ಕಾರಣವಾಗುವ ಕಂಟೆಂಟ್‌ಗಳನ್ನು ಗುರುತಿಸಲು ಮೆಟಾ ತಂತ್ರಜ್ಞಾನ ಟೀಮ್‌ಗೆ ಸಾಧ್ಯವಿಲ್ಲವೇ? ಇದ್ದೇ ಇದೆ. ಯಾವುದೇ ಆಕ್ಷೇಪಾರ್ಹ ಚಿತ್ರ, ಪದ, ವಾಕ್ಯಗಳು ಕಾಣಿಸಿಕೊಂಡರೆ ಅಂಥ ಪೋಸ್ಟ್‌ಗಳನ್ನು ಈ ವೇದಿಕೆಗಳು ಬ್ಲಾಕ್‌ ಮಾಡುವಂತಿರಬೇಕು. ಆಗ ಅಶ್ಲೀಲ ಕಂಟೆಂಟ್‌ ಅನ್ನು ತಡೆಯಲು ಸಾಧ್ಯ. ಆದರೆ ಬೇಲಿಯೇ ಎದ್ದು ಹೊಲ ಮೇಯುವಂತಾದರೆ ಕಷ್ಟ. ಮೆಟಾ ಈಗ ಹೀಗೆ ಮಾಡುತ್ತಿದೆಯೇ ಎಂಬುದು ಪ್ರಶ್ನೆ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಕೊಲೆ, ಅಪಹರಣವನ್ನೂ ಮೀರಿಸಿದ ಸೈಬರ್ ವಂಚನೆಗಳು

ಕೆಲ ವರ್ಷಗಳ ಹಿಂದೆ ಮೆಟಾದ ಒಡೆಯ ಮಾರ್ಕ್‌ ಜುಕರ್‌ಬರ್ಗ್‌, ಅಮೆರಿಕದ ಆಡಳಿತಾಧಿಕಾರಿಗಳ ಮುಂದೆ ಒಂದು ವಿಚಾರಣೆಯನ್ನು ಎದುರಿಸಿದ್ದರು. ಅಮೆರಿಕದ ರಾಜಕೀಯ ವಿಚಾರಗಳಲ್ಲಿ ಒಂದು ಪಕ್ಷಕ್ಕೆ ಅನುಕೂಲವಾಗುವಂಥ ಕಂಟೆಂಟ್‌ಗೆ ಪ್ರಮೋಟ್‌ ಮಾಡಿದ, ಇನ್ನೊಂದು ಪಕ್ಷದ ಕಡೆಯವರ ಕಂಟೆಂಟ್‌ ಅನ್ನು ತಡೆಹಿಡಿದ ದೂರು ಅವರ ಮೇಲೆ ಇತ್ತು. ವಿಚಾರಣೆಯನ್ನು ಎದುರಿಸಿದರೂ ಅವರ ಮೇಲೆ ಯಾವುದೇ ಕ್ರಮ ಆಗಲಿಲ್ಲ. ಮೆಟಾ ಇಂದು ಇಡೀ ಜಗತ್ತನ್ನೇ ಪ್ರಭಾವಿಸಬಲ್ಲ ಸಾಮರ್ಥ್ಯ ಹೊಂದಿರುವ ಸೋಶಿಯಲ್‌ ಮೀಡಿಯಾ. ಮೆಟಾ ಒಡೆತನದ ವಾಟ್ಸ್ಯಾಪ್‌ ಬಳಸದವರೇ ಇಂದು ಇಲ್ಲ ಎನ್ನಬಹುದು. ವಾಟ್ಸ್ಯಾಪ್‌ನಲ್ಲಿ ಸಾಕಷ್ಟು ಸೆಕ್ಯುರಿಟಿ ಕ್ರಮಗಳು ಇವೆ; ಆದರೆ ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂಗಳು ಹಾಗಿಲ್ಲ. ಇವು ಏಕಕಾಲಕ್ಕೆ ಲಕ್ಷಾಂತರ ಮಂದಿಯನ್ನು ತಲುಪಬಲ್ಲ ವೇದಿಕೆಗಳಾದುದರಿಂದ ಭದ್ರತೆಯ ಪ್ರಶ್ನೆ ಮರೀಚಿಕೆಯಾಗಿದೆ. ಆದರೆ ಮಕ್ಕಳ ವಿಷಯದಲ್ಲಿ ಹೆಚ್ಚಿನ ಎಚ್ಚರ ವಹಿಸಲೇಬೇಕಿದೆ. ಯಾಕೆಂದರೆ ಮಕ್ಕಳ ಮನಸ್ಸು ಬಹಳ ಸೂಕ್ಷ್ಮ. ಅವು ಆನ್‌ಲೈನ್‌ನಲ್ಲಿ ಬರುವ ಕಂಟೆಂಟ್‌ ಅನ್ನು ಬಹುಬೇಗ ನಂಬುತ್ತವೆ. ಇವರನ್ನು ದಾರಿ ತಪ್ಪಿಸುವುದು ಸುಲಭ; ಹಾಗೆಯೇ ತಿರುಚಿದ ಮಾಹಿತಿ- ಚಿತ್ರ- ವಿಡಿಯೋಗಳ ಮೂಲಕ ಇವರನ್ನು ಬ್ಕ್ಯಾಕ್‌ಮೇಲ್‌ ಮಾಡುವುದು ಕೂಡ ಸುಲಭ. ಇಂಥ ಎಷ್ಟೋ ಪ್ರಕರಣಗಳು ನಡೆದಿವೆ.

ಮೆಟಾ ಉದ್ಯೋಗಿಯ ಹೇಳಿಕೆಯನ್ನು ಒಳಗೊಂಡಿರುವ 2021ರ ದಾಖಲೆಗಳಲ್ಲಿ ಒಂದು ದಾಖಲೆಯ ಪ್ರಕಾರ, ಪ್ಲಾಟ್‌ಫಾರ್ಮ್‌ನ ಶಿಫಾರಸು ಅಲ್ಗಾರಿದಮ್‌ಗಳಲ್ಲಿ ಒಂದಾದ ʼಪೀಪಲ್ ಯು ಮೇ ನೋʼ, ಸಂಭಾವ್ಯ ಲೈಂಗಿಕ ಶೋಷಕ ವಯಸ್ಕ ಬಳಕೆದಾರರಿಗೂ ಮಕ್ಕಳನ್ನು ಸಂಪರ್ಕಿಸಬಹುದು ಎಂಬುದು ಮೆಟಾ ಉದ್ಯೋಗಿಗಳಿಗೆ ತಿಳಿದಿತ್ತು. ಕೆಲವು ವರ್ಷಗಳ ಹಿಂದೆಯೇ ಇದರ ಬಗ್ಗೆ ಕಂಪನಿಯ ಕಾರ್ಯನಿರ್ಹಾಕರಿಗೆ ತಿಳಿಸಲಾಗಿತ್ತು. ಆದರೆ ಈ ಸಲಹೆಗಳನ್ನು ತಿರಸ್ಕರಿಸಿ, ಕೇವಲ ಅಲ್ಗಾರಿಮ್‌ಗಳನ್ನು ಸರಿ ಹೊಂದಿಸಿದರೆ ಸಾಕು ಎನ್ನಲಾಗಿತ್ತು. ಅನುಚಿತ, ಲೈಂಗಿಕ ಪೀಡನಕಾರಿ ವಯಸ್ಕ- ಅಪ್ರಾಪ್ತ ಸಂಪರ್ಕದಲ್ಲಿ ಇದು 75 ಪ್ರತಿಶತದವರೆಗೆ ಕೊಡುಗೆ ನೀಡಿದೆಯಂತೆ. ಇದು ಆಘಾತಕಾರಿ. ಬಳಕೆದಾರರಾದ ಮಕ್ಕಳು ಮತ್ತು ಅವರ ಪೋಷಕರಿಗೆ ಸುರಕ್ಷತೆ ಕೇಂದ್ರಿತ ಸಾಧನಗಳನ್ನು ರೂಪಿಸುವಲ್ಲಿ ಕಂಪನಿಯು ಇನ್ನಷ್ಟು ಪ್ರಯತ್ನ ಮಾಡಬೇಕಿದೆ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಇರಾನ್‌ ದಾಳಿ ನಂತರವಾದರೂ ಪಾಕಿಸ್ತಾನಕ್ಕೆ ಬುದ್ಧಿ ಬರಲಿ!

Exit mobile version