Site icon Vistara News

ವಿಸ್ತಾರ ಸಂಪಾದಕೀಯ: ಸೋಷಿಯಲ್ ಮೀಡಿಯಾಗಳಲ್ಲಿ ಡೀಪ್‌ಫೇಕ್‌ ಅಪಾಯಕ್ಕೆ ಕಡಿವಾಣ ಅಗತ್ಯ

Vistara Editorial, New Regulation is must To Tackle Deepfake

ತ್ತೀಚೆಗೆ ಕಳವಳ ಮೂಡಿಸುತ್ತಿರುವ ಡೀಪ್‌ಫೇಕ್‌ (DeepFake) ಫೋಟೋ ಅಥವಾ ವಿಡಿಯೋಗಳ ಪೋಸ್ಟಿಂಗ್‌ಗೆ ಸಂಬಂಧಿಸಿ ಭಾರತೀಯ ಐಟಿ ಕಾನೂನುಗಳು (IT Rules) ಮತ್ತು ನಿಬಂಧನೆಗಳನ್ನು ಕೇಂದ್ರ ಸರ್ಕಾರ ಎತ್ತಿ ಹೇಳಿದೆ. ಐಟಿ ಕಾನೂನಿಗೆ ಬದ್ಧವಾಗಿ ತಮ್ಮ ತಮ್ಮ ಸೇವಾ ನಿಯಮಗಳು ಮತ್ತು ಇತರ ನೀತಿಗಳನ್ನು ಹೊಂದಿಸಿಕೊಳ್ಳಲು ಸೋಶಿಯಲ್‌ ಮೀಡಿಯಾ (Social media) ವೇದಿಕೆಗಳಿಗೆ 7 ದಿನಗಳ ಕಾಲಾವಕಾಶವನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ನೀಡಿದೆ. ಜತೆಗೆ, ನೊಂದ ಸಂತ್ರಸ್ತರು ದೂರು ದಾಖಲಿಸುವುದಾದರೆ ಅವರಿಗೆ ಸರ್ಕಾರ ನೆರವು ನೀಡಲಿದೆ ಎಂದೂ ಸಚಿವರು ಹೇಳಿದ್ದಾರೆ. ಹಾಗೂ ಡೀಪ್‌ಫೇಕ್‌ಗಳ ಬಗ್ಗೆ ಬಳಕೆದಾರರು ತಮ್ಮ ದೂರುಗಳನ್ನು ಸಲ್ಲಿಸಲು ಒಂದು ಆಡಳಿತಾತ್ಮಕ ವ್ಯವಸ್ಥೆಯನ್ನು ನಿರ್ಮಿಸಲಾಗುತ್ತದೆ ಎಂದೂ ಐಟಿ ಸಹಕಾರ ಸಚಿವ ರಾಜೀವ್‌ ಚಂದ್ರಶೇಖರ್ ಹೇಳಿದ್ದಾರೆ. ಇದು ಅಗತ್ಯವಾಗಿ ಆಗಬೇಕಾದ ಕೆಲಸವಾಗಿದೆ(Vistara Editorial).

ಆಕ್ಷೇಪಾರ್ಹ ಡೀಪ್‌ಫೇಕ್‌ ಕಂಟೆಂಟ್‌ ಪ್ರಸ್ತುತ ಐಟಿ ನಿಯಮಗಳ ಅಡಿಯಲ್ಲಿ ನಿರ್ದಿಷ್ಟವಾಗಿ ನಿಯಮ 3(1)(ಬಿ) ಅಡಿಯಲ್ಲಿ ಕಾನೂನು ಕ್ರಮಕ್ಕೆ ಒಳಪಡಬಹುದು. ಇದರ ಪ್ರಕಾರ ಇಂಥ ಕಂಟೆಂಟ್‌ಗಳ ಬಗ್ಗೆ ಬಳಕೆದಾರರ ದೂರುಗಳನ್ನು ಸ್ವೀಕರಿಸಿದ 24 ಗಂಟೆಗಳ ಒಳಗೆ ಈ ಕಂಟೆಂಟ್‌ಗಳನ್ನು ಫ್ಲಾಟ್‌ಫಾರಂಗಳು ತೆಗೆದುಹಾಕಬೇಕು. ಐಟಿ ನಿಯಮಾವಳಿಯಲ್ಲಿ ಈ ಬಗೆಯ 12 ಥರದ ಕಂಟೆಂಟ್‌ಗಳನ್ನು ಉಲ್ಲೇಖಿಸಲಾಗಿದ್ದು, ಇವುಗಳನ್ನು ಅಳಿಸುವುದು ಕಡ್ಡಾಯ. ಆದರೆ 24 ಗಂಟೆಗಳ ಒಳಗೇ ಇವು ಸಾಕಷ್ಟು ಹಾನಿಯನ್ನು ಸಂತ್ರಸ್ತರಿಗೆ ಮಾಡಿಬಿಟ್ಟಿರುತ್ತವೆ. ಇದನ್ನು ಸರಿಪಡಿಸಲೂ ವ್ಯವಸ್ಥೆ ರೂಪುಗೊಳ್ಳಬೇಕು. ಅಂದರೆ ಇಲ್ಲಿ ಇದನ್ನು ಪ್ರಕಟಿಸಲು ಅನುವು ಮಾಡಿಕೊಟ್ಟ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೇಲೂ, ಪ್ರಕಟಿಸಿದ ವ್ಯಕ್ತಿ ಅಥವಾ ಸಂಘಟನೆಗಳ ಮೇಲೂ ದೂರು ದಾಖಲಾಗಿ ತನಿಖೆ ನಡೆದು ಸೂಕ್ತ ಶಿಕ್ಷೆಯಾಗಬೇಕು. ಆಗ ಮಾತ್ರ ಸೋಶಿಯಲ್‌ ಮೀಡಿಯಾ ಫ್ಲ್ಯಾಟ್‌ಫಾರಂಗಳು ಇನ್ನಷ್ಟು ಜವಾಬ್ದಾರಿಯುತವಾಗಿ ವರ್ತಿಸಲು ಸಾಧ್ಯ.

ಡೀಪ್‌ಫೇಕ್‌ಗಳನ್ನು ನಿಭಾಯಿಸಲು ಮೀಸಲಾಗಿರುವ ನಿಯಂತ್ರಣ ವ್ಯವಸ್ಥೆಯ ಕೆಲಸವನ್ನು ಸರ್ಕಾರ ಪ್ರಾರಂಭಿಸಿದೆ. ಇದು ಒಳ್ಳೆಯ ಸಂಗತಿ. ಇತ್ತೀಚೆಗೆ ತಪ್ಪು ಮಾಹಿತಿ ಹರಡುವಂಥ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಹಲವಾರು ಘಟನೆಗಳು ಕಂಡುಬಂದಿದ್ದವು. ನಟಿ ರಶ್ಮಿ ಮಂದಣ್ಣ ಮತ್ತಿತರರ ಡೀಪ್‌ಫೇಕ್‌ ವಿಡಿಯೋಗಳು ವೈರಲ್ ಆಗಿದ್ದವು. ಹೀಗಾಗಿ ಇದರ ಬಗ್ಗೆ ಕಳವಳ ಹೆಚ್ಚುತ್ತಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರ ಕೂಡ ಇದರ ಬಗ್ಗೆ ಕಳವಳ ತೋರಿಸಿದ್ದರು. AI ಡೀಪ್‌ಫೇಕ್ ಒಂದು ಆಧುನಿಕ ತಂತ್ರಜ್ಞಾನ. ಚಿತ್ರಗಳು ಅಥವಾ ವೀಡಿಯೊಗಳನ್ನು ಬೇಕಾದಂತೆ ಬಳಸಿಕೊಂಡು, ನಿಜವೆನಿಸುವಂತೆ ಕಾಣುವ ನಕಲಿ ಸೃಷ್ಟಿಗಳನ್ನು ಇದರಲ್ಲಿ ಮಾಡಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸುತ್ತದೆ. ಕೃತಕ ಬುದ್ಧಿಮತ್ತೆ (AI), ಫೋಟೋಶಾಪ್, ಯಂತ್ರ ಕಲಿಕೆ ಮತ್ತು ಆನ್‌ಲೈನ್‌ನಲ್ಲಿ ಲಭ್ಯವಿರುವ ಇತರ ಪರಿಕರಗಳನ್ನು ಬಳಸಿಕೊಂಡು ಈ ನಕಲಿ ವೀಡಿಯೊಗಳನ್ನು ವ್ಯಾಪಕವಾಗಿ ತಯಾರಿಸಲಾಗುತ್ತಿದೆ. ಇತ್ತೀಚಿನವರೆಗೂ ಇದರ ಅಪಾಯಗಳು ಗೊತ್ತಾಗಿರಲಿಲ್ಲ. AIಯಿಂದ ರಚಿತವಾದ ನಕಲಿ ಸಂಗತಿಗಳು ನೈಜವಾಗಿ ಕಾಣುವುದೇ ಅದರ ಅಪಾಯದ ಮೂಲವಾಗಿದೆ. ಡೀಪ್‌ಫೇಕ್‌ಗಳು ಇಂದು ಅಸಲಿಯಂತೆ ಕಾಣುವ ನಕಲಿ ವೀಡಿಯೊಗಳನ್ನು ಸೃಷ್ಟಿಸಿ ವಿಐಪಿಗಳನ್ನು ಬ್ಲ್ಯಾಕ್‌ಮೇಲ್‌ ಮಾಡಲು ಉಪಯೋಗವಾಗತೊಡಗಿವೆ. ತಾನು ಮಾಡದೇ ಇದ್ದುದನ್ನು ಮಾಡಿದಂತೆ ಚಿತ್ರಿಸುವ ವಿಡಿಯೋಗಳು ಯಾರಿಗೇ ಆದರೂ ಆತಂಕಕಾರಿಯೇ ಆಗಿವೆ. ಇಂದು ವಿಐಪಿಗಳಿಗೆ ಆಗಿರುವುದು ನಾಳೆ ಎಲ್ಲ ಶ್ರೀಸಾಮಾನ್ಯರಿಗೂ ಆಗುತ್ತದೆ.

ಇದನ್ನು ನಿಯಂತ್ರಿಸಲು ಕಾನೂನುಗಳನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕಾದುದು ಹಾಗೂ ಇರುವ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕಾದುದು ಅಗತ್ಯ. ಡೀಪ್‌ಫೇಕ್ ಸೈಬರ್‌ಕ್ರೈಮ್‌ನೊಂದಿಗೆ ವಿಶೇಷವಾಗಿ ವ್ಯವಹರಿಸಲು ಸ್ಪಷ್ಟವಾದ ಕಾನೂನು ಇಲ್ಲ. ಪ್ರಸ್ತುತ ನಮ್ಮಲ್ಲಿ ಐಟಿ ಕಾಯಿದೆ ಹಾಗೂ ಅಪರಾಧ ದಂಡ ಸಂಹಿತೆಯ ಕೆಲವು ಸೆಕ್ಷನ್‌ಗಳು ಈ ಪಿಡುಗನ್ನು ನಿರ್ವಹಿಸುವ ಕೆಲಸವನ್ನು ಮಾಡುತ್ತಿವೆ. ಆದರೆ ಇವು ಸಾಲದು. ಇಂಟರ್ನೆಟ್ ಸೈಟ್‌ಗಳು ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ತಪ್ಪು ಮಾಹಿತಿ ಪೋಸ್ಟ್ ಮಾಡದಂತೆ ಖಚಿತಪಡಿಸಿಕೊಳ್ಳುವುದು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಕಾನೂನು ಬಾಧ್ಯತೆ. ಸಂಬಂಧಪಟ್ಟವರು ರಿಪೋರ್ಟ್‌ ಮಾಡಿದರೆ ಅದನ್ನು 24 ಗಂಟೆಗಳಲ್ಲಿ ತೆಗೆದುಹಾಕುವ ಬಾಧ್ಯತೆಯನ್ನು ಸೋಶಿಯಲ್‌ ಮೀಡಿಯಾಗಳು ಕಟ್ಟನಿಟ್ಟಾಗಿ ಪಾಲಿಸುತ್ತಿಲ್ಲ. ಪಾಲಿಸುವಂತೆ ಮಾಡುವುದು ಸರ್ಕಾರಕ್ಕೆ ಬಾಧ್ಯತೆ.

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ವಿಶ್ವಕಪ್ ಕ್ರಿಕೆಟ್ ಸೋಲು, ರಾಜಕೀಯ ಮುಖಂಡರಿಗೇಕೆ ಕೀಳು ಮಾತಿನ ಗೀಳು?

Exit mobile version