Site icon Vistara News

ವಿಸ್ತಾರ Explainer: Metaverse ವರ್ಚುವಲ್ ಲೋಕ ಪ್ರವೇಶಿಸಲು ಹೊಸ ಅಕೌಂಟ್‌

meta

ಭವಿಷ್ಯದ ಮೆಟಾವರ್ಸ್‌ ಅಥವಾ ಬಹು ಆಯಾಮದ ಡಿಜಿಟಲ್‌ ಜಗತ್ತನ್ನು ಪ್ರವೇಶಿಸಲು ನಿಮಗಿನ್ನು ಫೇಸ್‌ಬುಕ್‌ ಅಕೌಂಟ್‌ ಬೇಕಾಗಿಲ್ಲ. ಅಥವಾ ಅದರ ಅಗತ್ಯ ಬೀಳುವುದಿಲ್ಲ. ಆಗಸ್ಟ್‌ನಲ್ಲಿ ತನ್ನ ಹೊಸ ʻಮೆಟಾ ಅಕೌಂಟ್‌ʼಗಳನ್ನು ಕಂಪನಿ ಹೊರಬಿಡಲಿದೆ. ಹಾಗೆಂದು ಫೇಸ್‌ಬುಕ್‌ ಸಿಇಒ ಮಾರ್ಕ್‌ ಝುಕರ್‌ಬರ್ಗ್‌ ಟ್ವೀಟ್‌ ಮಾಡಿದ್ದಾರೆ.

ವರ್ಚುವಲ್‌ ರಿಯಾಲಿಟಿ ಹೆಡ್‌ಸೆಟ್‌ ಬಳಸಲು ಒಂದು ಅಕೌಂಟ್‌ ಅನ್ನು ಬಳಸಬೇಕಿದ್ದು, ಅದರ ಮೂಲಕವೇ ಮೆಟಾದಲ್ಲಿ ಹಲವು ಆ್ಯಪ್‌ಗಳನ್ನು ಮುಂದೆ ಬಳಸಬಹುದಾಗಿದೆ.

ಕಳೆದ ವರ್ಷ, ವರ್ಚುವಲ್‌ ರಿಯಾಲಿಟಿ ಹೆಡ್‌ಸೆಟ್‌ಗಳನ್ನು ಬಳಸಲು ಫೇಸ್‌ಬುಕ್‌ ಅಕೌಂಟ್‌ ಬೇಕು ಎಂಬ ನಿಯಮವನ್ನು ಮೆಟಾ ಮಾಡಿತ್ತು. ಈ ಮುನ್ನ ಬಳಕೆದಾರರು ಒಕ್ಯುಲಸ್‌ (Oculus) ಅಕೌಂಟ್‌ನಿಂದ ಹೆಡ್‌ಸೆಟ್‌ಗಳನ್ನು ಬಳಸುತ್ತಿದ್ದರು. 2013ರಲ್ಲಿ ಈ ಕಂಪನಿಯನ್ನು ಫೇಸ್‌ಬುಕ್‌ ಕೊಂಡುಕೊಂಡಿತ್ತು. ಫೇಸ್‌ಬುಕ್‌ ಅಕೌಂಟ್‌ ಕಡ್ಡಾಯ ನಿಯಮದಿಂದ ಬಳಕೆದಾರರು ಸಿಟ್ಟಿಗೆದ್ದಿದ್ದರು. ಇದೀಗ ನಿಯಮ ಬದಲಾಯಿಸಲಾಗಿದೆ.

Meta Horizon ಪ್ರೊಫೈಲ್‌ಗಳ ಮೂಲಕ ಬಳಕೆದಾರರು ಮೆಟಾದಲ್ಲಿ ತಮ್ಮ ಸೋಶಿಯಲ್‌ ಅಸ್ತಿತ್ವವನ್ನು ಕಾಪಾಡಿಕೊಳ್ಳಬಹುದು, ಭಾಗವಹಿಸಬಹುದು, ಆ್ಯಪ್‌ಗಳನ್ನು ಖರೀದಿಸಬಹುದು. ಹಾಗೇ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ವಾಟ್ಸ್ಯಾಪ್‌ ಬಳಕೆದಾರರೂ ಈಗಾಗಲೇ ಇರುವ ತಮ್ಮ ಅಕೌಂಟ್‌ಗಳ ಮೂಲಕವೂ ವರ್ಚುವಲ್‌ ರಿಯಾಲಿಟಿಯತ್ತ ಹೊರಳಿಕೊಳ್ಳಬಹುದು.

ಅಂದರೆ ನೀವು ಮೆಟಾ ಕಂಪನಿಯ ಯಾವುದೇ ಆ್ಯಪ್‌ನ (ಮೆಟಾ, ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ವಾಟ್ಸ್ಯಾಪ್‌, ಮೆಸೆಂಜರ್‌, ಒಕ್ಯುಲಸ್)‌ ಅಕೌಂಟ್‌ ಹೊಂದಿದ್ದರೂ ಅದನ್ನು ಮೆಟಾದ ವರ್ಚುವಲ್‌ ರಿಯಾಲಿಟಿಯೊಂದಿಗೆ ಇಂಟಿಗ್ರೇಟ್‌ ಮಾಡಬಹುದಾದ ಸಾಧ್ಯತೆಗಳನ್ನು ಮೆಟಾ ಜಾರಿಗೆ ತರಲು ಮುಂದಾಗುತ್ತಿದೆ. 2019ರಲ್ಲಿ ಹೊರಬಿಟ್ಟಿರುವ Meta Pay ಆ್ಯಪ್‌ನ ಮೂಲಕ ಹೆಚ್ಚಿನ ಸೇವೆಗಳನ್ನು ಪಡೆಯಬಹುದಾಗಿದೆ.

ಯಾರಿಗಾಗಿ ಮೆಟಾವರ್ಸ್?

ಮೆಟಾವರ್ಸ್ ಎಂದರೆ ಭೌತಿಕ ವಾಸ್ತವ ಹೊಂದಿರುವ ವರ್ಚುವಲ್ ಜಗತ್ತು. ಸರಳವಾಗಿ ಇದು ʻಮೆಟಾʼ. ಇದು ಮುಂದೊಮ್ಮೆ ಎಲ್ಲಾ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಆವರಿಸಲಿದೆ. ವಿಂಡೋಸ್ ಆಧಾರಿತ ಪಿಸಿಗಳಿಂದ ಹಿಡಿದು ನಮ್ಮ ಮೊಬೈಲ್ ಫೋನ್‌ಗಳ ವರೆಗೆ. ಅಸ್ತಿತ್ವದಲ್ಲಿರುವ ಯಾವುದೇ ಡಿಜಿಟಲ್ ಪ್ಲಾಟ್‌ಫಾರ್ಮ್ ಅನ್ನು ಮೆಟಾವರ್ಸ್‌ನ ಭಾಗವಾಗಿ ಮಾಡಬಹುದು.

ಸಾಟಿಯೇ ಇಲ್ಲದ ಗ್ರಾಹಕ ಅನುಭವವನ್ನು ನೀಡುವುದು ಮೆಟಾವರ್ಸ್ ಗುರಿ. ಇಂಥ ಅನುಭವ ಬಯಸುವ ಎಲ್ಲರೂ ಇದರ ಭಾಗವಾಗಬಹುದು. ಮೆಟಾವರ್ಸ್‌ನ ಮಾರುಕಟ್ಟೆ ಮೌಲ್ಯ 2022ರ ವೇಳೆಗೆ 100 ಲಕ್ಷ ಕೋಟಿ ಡಾಲರ್‌ ಮೀರಲಿದೆ. ಕೃತಕ ಬುದ್ಧಿಮತ್ತೆ ಮತ್ತು ಮೆಶಿನ್‌ ಲರ್ನಿಂಗ್‌ನಂತಹ ಹೊಸ ತಂತ್ರಜ್ಞಾನಗಳು ಇದಕ್ಕೆ ನೆರವಾಗಲಿವೆ. ಇವು ವಿಶ್ವದ ಅತ್ಯಂತ ಪ್ರಭಾವಶಾಲಿ ಕಾರ್ಪೊರೇಟ್‌ ಸಂಸ್ಥೆಗಳನ್ನು ಸಹ ಬದಲಾಯಿಸುವ ಶಕ್ತಿ ಹೊಂದಿವೆ. ಈ ವರ್ಚುವಲ್ ಪ್ರಪಂಚದಲ್ಲಿ ಡಿಜಿಟಲ್ ಸ್ವತ್ತುಗಳನ್ನು ಭೌತಿಕ ವಸ್ತುಗಳಂತೆ ಪ್ರತಿನಿಧಿಸಬಹುದು. ಭವಿಷ್ಯದಲ್ಲಿ ನೈಸರ್ಗಿಕ ಜೀವನದ ವಸ್ತುಗಳ ಡಿಜಿಟಲ್ ಪ್ರಾತಿನಿಧ್ಯಗಳು ಭೌತಿಕ ವಸ್ತುಗಳಷ್ಟೇ ಮೌಲ್ಯಯುತವಾಗಿರುತ್ತವೆ.‌

ಇದನ್ನೂ ಓದಿ: Super App | ಟೆಕ್‌ ಬಿಲಿಯನೇರ್‌ಗಳು ಇವುಗಳ ಹಿಂದೆ ಬಿದ್ದಿರುವುದೇಕೆ?

ಮೆಟಾವರ್ಸ್ ಭೌತಿಕ ಲೋಕದಂತೆಯೇ ಹಲವು ಆಯಾಮಗಳ (ಶಬ್ದ, ಸ್ಪರ್ಶ, ರೂಪ, ರಸ, ಗಂಧ) ಬಳಕೆದಾರ ಅನುಭವ ನೀಡುತ್ತದೆ. ನಿರ್ದಿಷ್ಟ ವ್ಯಕ್ತಿಯ ಆದ್ಯತೆಗಳಿಗೆ ತಕ್ಕಂತೆ ಕಸ್ಟಮೈಸ್ ಮಾಡಬಹುದು. Metaverse ಸಂವಹನಕ್ಕಾಗಿಯೇ ಹೊಸ ಡಿಜಿಟಲ್ ಸ್ವತ್ತುಗಳು ಭವಿಷ್ಯದಲ್ಲಿ (ಕ್ರಿಪ್ಟೊಕರೆನ್ಸಿಯಂತೆ) ಸೃಷ್ಟಿಯಾಗಬಹುದು. ಇದರಿಂದ ಜನತೆ ಸಾಂಪ್ರದಾಯಿಕ ಹಣಕಾಸು ಸಂಸ್ಥೆಗಳಿಂದ ವಿಮುಖರಾಗಬಹುದು.

ಹೇಗೆ ಕಾರ್ಯಾಚರಿಸುತ್ತದೆ?

ಮೆಟಾವರ್ಸ್ ಅನ್ನು ವಿವಿಧ ಗ್ಯಾಜೆಟ್‌ಗಳ, ವೆಬ್‌ ಬ್ರೌಸರ್‌ಗಳ ಮೂಲಕ ಪ್ರವೇಶಿಸಬಹುದು. ಗ್ರಾಹಕ ಮಾರುಕಟ್ಟೆಯ ವಿವಿಧ ವೈಶಿಷ್ಟ್ಯಗಳನ್ನು ಅನುಭವಿಸಬಹುದು. ಮೆಟಾವರ್ಸ್ ಬ್ಲಾಕ್‌ಚೈನ್ 3.0 ಪ್ಲಾಟ್‌ಫಾರ್ಮ್‌ನ ಭಾಗ. ಎಥೆರಿಯಮ್ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ವಿಕೇಂದ್ರೀಕೃತ ವೇದಿಕೆಯಾಗಿದ್ದು, ಬಳಕೆದಾರರು ತಮ್ಮ ಡಿಜಿಟಲ್ ಸ್ವತ್ತುಗಳನ್ನು ಸುರಕ್ಷಿತವಾಗಿ ನಿಯಂತ್ರಿಸಲು ಅನುವು ಮಾಡಿಕೊಡುತ್ತದೆ. ಇದು ಬ್ಲಾಕ್‌ಚೈನ್ ನೆಟ್‌ವರ್ಕ್ ಹೊಂದಿರುವುದರಿಂದ ಇದನ್ನು ಪ್ರತಿಯೊಬ್ಬರೂ ಪ್ರವೇಶಿಸಬಹುದು. ಮೆಟಾವರ್ಸ್ ನೆಟ್‌ವರ್ಕ್ ಒಬ್ಬ ವ್ಯಕ್ತಿಯ ಮಾಲೀಕತ್ವವನ್ನು ಅಥವಾ ಒಂದೇ ಸರ್ವರ್‌ ಅನ್ನು ಹೊಂದಿರುವುದಿಲ್ಲ. ಇದು ಸಂಸ್ಥೆಗಳು, ಸರ್ಕಾರಗಳು ಮತ್ತು ವ್ಯಕ್ತಿಗಳಿಗೆ ಸೇವೆಗಳನ್ನು ಒದಗಿಸುವ ಸ್ವಾಯತ್ತ ವ್ಯವಸ್ಥೆ. ‌

ಬ್ಲಾಕ್‌ಚೈನ್ ತಂತ್ರಜ್ಞಾನ

ಇಂದು ಕ್ರಿಪ್ಟೊಕರೆನ್ಸಿಗಳು ಕಾರ್ಯಾಚರಿಸುತ್ತಿರುವ ಬ್ಲಾಕ್‌ಚೈನ್‌ ತಂತ್ರಜ್ಞಾನವನ್ನು ಈ ಮೆಟಾ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಿದೆ. ಮುಂದಿನ ದಿನಗಳಲ್ಲಿ ಕ್ರಿಪ್ಟೊಕರೆನ್ಸಿಗಳು ಕೂಡ ಇದರ ಪ್ರಮುಖ ಭಾಗವಾಗಬಹುದು. ಫೇಸ್‌ಬುಕ್‌ ಕೂಡ ತನ್ನದೇ ಆದ ಕ್ರಿಪ್ಟೊಕರೆನ್ಸಿ ಹೊಂದಿರುವುದನ್ನು ಗಮನಿಸಬಹುದು. ಮೆಟಾ ಬಳಕೆಯು ಅತ್ಯಾಧುನಿಕ ತಂತ್ರಜ್ಞಾನ. ಆದರೆ ಮೆಟಾವನ್ನು ಪ್ರವೇಶಿಸಲು ಹೊಸ ತಂತ್ರಜ್ಞಾನದ ಬಳಕೆಯ ಹೆಚ್ಚಿನ ಪರಿಚಯ ಇರಲೇಬೇಕೆಂದಿಲ್ಲ. ಬಳಕೆದಾರ ಜಗತ್ತಿನ ಮೂಲಸೂತ್ರಗಳು ಗೊತ್ತಿದ್ದರೆ ಸಾಕು.

ಇದನ್ನೂ ಓದಿ: ಫೇಸ್‌ಬುಕ್‌, ಟ್ವಿಟರ್‌ ಇತ್ಯಾದಿ ಜಾಲ ತಾಣಗಳ ನಿಯಂತ್ರಣಕ್ಕೆ ಹೆಚ್ಚಿನ ಅಧಿಕಾರ ಬಯಸಿದ ಕೇಂದ್ರ

Exit mobile version