ನವ ದೆಹಲಿ: ಭಾರತೀಯ ಮಾರುಕಟ್ಟೆಯಲ್ಲಿ ವಿವೋ ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್. ಭಾರತೀಯ ಮಾರುಕಟ್ಟೆಯಲ್ಲಿ ತನ್ನ ವೈ ಶ್ರೇಣಿಗೆ ಮತ್ತೊಂದು ಸ್ಮಾರ್ಟ್‌ಫೋನ್ ಸೇರ್ಪಡೆ ಮಾಡಿದೆ. ಅರ್ಥಾತ್, ಹೊಸ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ವಿವೋ ವೈ35 (Vivo Y35) ಸೋಮವಾರ ಲಾಂಚ್ ಆದ ಹೊಸ ಫೋನ್. ಕ್ಯಾಮೆರಾ, ಬ್ಯಾಟರಿ, ಚಾರ್ಜಿಂಗ್… ಹೀಗೆ ಎಲ್ಲ ದೃಷ್ಟಿಯಿಂದಲೂ ಸಾಕಷ್ಟು ಗಮನ ಸೆಳೆಯುವಂತಿದೆ ಈ ಫೋನ್. 44W ಫ್ಲ್ಯಾಶ್ ಚಾರ್ಜ್ ಈ ಫೋನಿನ ಮತ್ತೊಂದು ವಿಶೇಷತೆಯಾಗಿದೆ. ಬೆಲೆಯನ್ನು ಗಮನಿಸಿದರೆ, ಈ ಫೋನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಿಡ್ ರೇಂಜ್‌ಗೆ ಸೇರಿಸಬಹುದು.
ವಿಶೇಷತೆಗಳೇನು?
90Hz ರಿಫ್ರೆಶ್ ದರದೊಂದಿಗೆ ವಿವೋ ವೈ35 ಸ್ಮಾರ್ಟ್‌ಫೋನ್, 6.58 ಇಂಚ್ ಫುಲ್ ಎಚ್‌ಡಿ ಪ್ಲಸ್ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. 8 ಜಿಬಿ RAMನೊಂದಿಗೆ Qualcomm Snapdragon 680 ಪ್ರೊಸೆಸರ್ ಅನ್ನು ಈ ಫೋನ್‌ನಲ್ಲಿ ಕಾಣಬಹುದು. ಈ ಫೋನಿನಲ್ಲಿ ನೀವು RAM ಅನ್ನು ಕೂಡ ವಿಸ್ತರಿಸಬಹುದು. ಅಂದರೆ, 8 ಜಿಬಿ RAM ಅನ್ನು 16 ಜಿಬಿ RAMವರೆಗೂ ಹೆಚ್ಚಿಸಬಹುದಾಗಿದೆ. ಡಿಫಾಲ್ಟ್ ಆಗಿ 128 ಜಿಬಿ ಸ್ಟೋರೇಜ್ ದೊರೆಯುತ್ತದೆ. ಬಳಕೆದಾರರಿಗೆ ಇನ್ನೂ ಹೆಚ್ಚಿನ ಸ್ಟೋರೇಜ್ ಬೇಕು ಎಂದರೆ, ಮೈಕ್ರೋಎಸ್‌ಡಿ ಕಾರ್ಡ್ ಮೂಲಕ 1 ಟಿಬಿವರೆಗೂ ವಿಸ್ತರಿಸಿಕೊಳ್ಳಬಹುದು.
ಕ್ಯಾಮೆರಾ?
ಈ ಫೋನ್ ಕ್ಯಾಮೆರಾ ಕೂಡ ಆಕರ್ಷಕವಾಗಿದೆ. ಕಂಪನಿಯು ಮೂರು ಕ್ಯಾಮೆರಾಗಳು ಸೆಟ್‌ಅಪ್ ಒದಗಿಸಿದ್ದು, ಈ ಪೈಕಿ ಮೊದಲನೆಯದ್ದು f/1.8 aperture ಲೆನ್ಸ್‌ನೊಂದಿಗೆ 50 ಮೆಗಾ ಪಿಕ್ಸೆಲ್ ಕ್ಯಾಮೆರಾ ಕೊಡಲಾಗಿದೆ. ಎಲೆಕ್ಟ್ರಾನಿಕ್ ಇಮೇಜ್ ಸ್ಟೇಬಿಲೈಸೇಷನ್(ಇಐಎಸ್) ತಂತ್ರಜ್ಞಾನ ಇರುವುದರಿಂದ, ರಾತ್ರಿ ವೇಳೆ ಕೂಡ ಅದ್ಭುತ ಚಿತ್ರಗಳನ್ನು ಸೆರೆ ಹಿಡಿಯಬಹುದು. 2 ಮೆಗಾ ಪಿಕ್ಸೆಲ್ ಬೊಕೆ, 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾಗಳಿದ್ದು, ಎರಡೂ ಕ್ಯಾಮೆರಾಗಳಿಗೆ f/2.4 aperture ಲೆನ್ಸ್‌ಗಳನ್ನು ನೀಡಲಾಗಿದೆ. ಇದೇ ವೇಳೆ, ಫ್ರಂಟ್‌ನಲ್ಲಿ f/2.0 aperture ಲೆನ್ಸ್‌ನೊಂದಿಗೆ 16 ಮೆಗಾ ಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. ಸೆಲ್ಫಿ ಮತ್ತು ವಿಡಿಯೋ ಚಾಟ್ಸ್‌ಗೆ ಇದು ಸಖತ್ ಆಗಿದೆ ಕ್ಯಾಮೆರಾ.
ವೈ ಫೈ, ಬ್ಲೂಟೂಥ್ ವಿ5, ಜಿಪಿಎಸ್, ಗ್ಲಾನ್‌ಆ್ಯಸ್, ಒಟಿಜಿ, ಎಫ್ಎಂ ರೆಡಿಯೋ, ಯುಎಸ್‌ಬಿ ಟೈಪ್ ಸಿ ಪೋರ್ಟ್ ಸೇರಿದಂತೆ ಇತರ ಕನೆಕ್ಟಿವಿಟಿ ಆಪ್ಷನ್‌ಗಳಿವೆ. ಇಷ್ಟು ಮಾತ್ರವಲ್ಲದೇ, ಅಕ್ಸೆಲೆರೊಮೀಟರ್, ಆ್ಯಂಬಿಯೆಂಟ್ ಸೆನ್ಸರ್, ಇ-ದಿಕ್ಸೂಚಿ, ಗೈರೊಸ್ಕೋಪ್ ಮತ್ತು ಪ್ರಾಕ್ಸಿಮಿಟಿ ಸೆನ್ಸರ್‌ಗಗಳಿವೆ. ಕಂಪನಿಯು 500mAh ಸಾಮರ್ಥ್ಯದ ಬ್ಯಾಟರಿಯನ್ನು ಒದಗಿಸಿದ್ದು, 44 ವ್ಯಾಟ್ ಫಾಸ್ಟ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುತ್ತದೆ.
ಬೆಲೆ ಎಷ್ಟು?
ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿರುವ ವಿವೋ ವೈ35 ಸ್ಮಾರ್ಟ್‌ಫೋನ್ ಬೆಲೆಯನ್ನು ವಿಶ್ಲೇಷಿಸಿದರೆ ಮಿಡ್ ರೇಂಜ್ ವ್ಯಾಪ್ತಿಗೆ ಈ ಫೋನ್ ಅನ್ನು ಸೇರಿಸಬಹುದು. 8 ಜಿಬಿ RAM ಮ್ತತು 128 ಜಿಬಿ ಸ್ಟೋರೇಜ್ ವೆರಿಯೆಂಟ್ ಫೋನ್ ಬೆಲೆ 18,499 ರೂ. ವಿವೋ ಇಂಡಿಯಾ ಇ ಸ್ಟೋರ್ ಮತ್ತು ಎಲ್ಲ ರಿಟೇಲ್ ಸ್ಟೋರ್‌ಗಳಲ್ಲೂ ಈ ಫೋನ್ ಮಾರಾಟಕ್ಕೆ ಸಿಗಲಿದೆ. ಗ್ರಾಹಕರಿಗೆ ಈ ಫೋನ್ ಡಾನ್ ಗೋಲ್ಡ್ ಮತ್ತು ಆ್ಯಗಟ್ ಬ್ಲ್ಯಾಕ್‌ನಲ್ಲಿ ಸಿಗಲಿದೆ.
ಇದನ್ನೂ ಓದಿ | Vivo Y02s | ವಿವೋ ಮತ್ತೊಂದು ಫೋನ್ ಲಾಂಚ್, ಭಾರತದಲ್ಲಿ ಯಾವಾಗ ಬಿಡುಗಡೆ?