ನವದೆಹಲಿ: ಬಹುತೇಕ ಎಲ್ಲರೂ ಸೋಷಿಯಲ್ ಮೀಡಿಯಾ ಆ್ಯಪ್‌ಗಳನ್ನು ಬಳಸುತ್ತಾರೆ. ಟೈಮ್ ಪಾಸ್ ಮಾಡುವುದಕ್ಕಾಗಿ ಹೆಚ್ಚಿನವರು ಈ ಆ್ಯಪ್‌ಗಳನ್ನು ಮೊರೆ ಹೋಗುತ್ತಾರೆ. ಆದರೆ, ಹೀಗ ಟೈಮ್ ಪಾಸ್ ಮಾಡುತ್ತಲೇ ಹಣ ಗಳಿಸುವುದಾದರೆ ಹೇಗೆ? ಹೌದು, ಟಿಕ್‌ಟಾಕ್‌ನಲ್ಲಿ (TikTok) 10 ಗಂಟೆಗಳ ಸ್ಕ್ರಾಲಿಂಗ್ ಮಾಡುತ್ತ ಕಾಲ ಕಳೆದರೆ ಅಂಥವರಿಗೆ ಹಣವನ್ನು ನೀಡುವ ಆಫರ್‌ವನ್ನು ಕಂಪನಿಯೊಂದು ನೀಡಿದೆ. ಅಂದ ಹಾಗೆ, ಭಾರತದಲ್ಲಿ ಭಾರೀ ಜನಪ್ರಿಯವಾಗಿದ್ದ ಚೀನಾ ಮೂಲದ ಟಿಕ್‌ಟಾಕ್ ಈಗ ಬಳಕೆಗೆ ಲಭ್ಯವಿಲ್ಲ. ಕೇಂದ್ರ ಸರ್ಕಾರವು ಈ ಆ್ಯಪ್ ಮೇಲೆ ನಿಷೇಧ ಹೇರಿದೆ.
ಟಿಕ್‌ಟಾಕ್ ಆ್ಯಪ್‌ವನ್ನು ಒಟ್ಟು 10 ಗಂಟೆಗಳ ಕಾಲ ವೀಕ್ಷಿಸುವ ಮೂರು ಜನರಿಗೆ ಪ್ರತಿ ಗಂಟೆಗೆ ನೂರು ಡಾಲರ್ ಪಾವತಿಸುವುದಾಗಿ ಇನ್‌ಫ್ಲುಯೆನ್ಸರ್ ಮಾರ್ಕೆಟಿಂಗ್ ಏಜೆನ್ಸಿಯಾಗಿರುವ ಯುಬಿಕ್ವಿಟಸ್ (Ubiquitous) ಇತ್ತೀಚೆಗೆ ಘೋಷಿಸಿತು. ಆನ್‌ಲೈನ್‌ನಲ್ಲಿ ಉದಯೋನ್ಮುಖ ಪ್ರವೃತ್ತಿಗಳನ್ನು ಟ್ರ್ಯಾಕ್ ಮಾಡುವುದು ಈ ಆಫರ್ ಹಿಂದಿನ ಗುರಿಯಾಗಿದೆ.
ಇದಕ್ಕಾಗಿ ನೀವು ಯುಟ್ಯೂಬ್‌ನಲ್ಲಿ ಯುಬಿಕ್ವಿಟಸ್ ಚಾನೆಲ್‌ವನ್ನು ಸಬ್‌ಸ್ಕ್ರೈಬ್ ಮಾಡಬೇಕು. ಅಲ್ಲದೇ, ಈ ಉದ್ಯೋಗಕ್ಕಾಗಿ ನೀವು ಹೇಗೆ ಸೂಕ್ತ ಎಂಬುದನ್ನು ಕೆಲವು ಸಾಲುಗಳಲ್ಲಿ ಉತ್ತರಿಸಬೇಕು. ಹಾಗೆಯೇ, ಅಭ್ಯರ್ಥಿಗಳು 18 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟವರಾಗಿರಬೇಕು. ಜತೆಗೆ ಟಿಕ್ ಟಾಕ್ ವೇದಿಕೆಯನ್ನು ಚೆನ್ನಾಗಿ ಅರ್ಥಮಾಡಿಕೊಂಡಿರಬೇಕು. ವಿಶೇಷವಾಗಿ ಟಿಕ್‌ಟಾಕ್ ಟ್ರೆಂಡ್‌ಗಳನ್ನು ಅರ್ಥ ಮಾಡಿಕೊಳ್ಳಬೇಕು.
ಸೆಷನ್ ವೀಕ್ಷಣೆ ಮುಗಿದಬಳಿಕ ಅಭ್ಯರ್ಥಿಗಳಿಗೆ ತಮ್ಮ ಅನುಭವವನ್ನು ವಿವರಿಸುವಂತೆ ಕೇಳಿಕೊಳ್ಳಲಾಗುತ್ತದೆ. ಈ ಅನುಭವವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಳ್ಳಬೇಕಾಗುತ್ತದೆ ಮತ್ತು ಕಂಪನಿಯನ್ನ ಟ್ಯಾಗ್ ಮಾಡಬೇಕಾಗುತ್ತದೆ. ಈ ಟಿಕ್ ಟಾಕ್ ವೀಕ್ಷಣೆ ಕೆಲಸಕ್ಕಾಗಿ ಅರ್ಜಿ ಸಲ್ಲಿಸಲು ಮೇ 31 ಕೊನೆಯ ದಿನವಾಗಿದೆ. ಅಪ್ಲಿಕೇಶನ್ ಗಡುವಿನ ಏಳು ದಿನಗಳ ನಂತರ ಕಂಪನಿಯು ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಹಿತಿ ನೀಡುತ್ತದೆ.
ಇದನ್ನೂ ಓದಿ: TickTok layoffs : ಬ್ಯಾನ್ ಆಗಿ 3 ವರ್ಷಗಳ ಬಳಿಕ ಭಾರತದಲ್ಲಿ ಎಲ್ಲ 40 ಸಿಬ್ಬಂದಿಯನ್ನು ವಜಾಗೊಳಿಸಿದ ಟಿಕ್‌ಟಾಕ್
ಚೀನಾ ಮೂಲದ ಬೈಟ್‌ಡ್ಯಾನ್ ಒಡೆತನದ ಟಿಕ್‌ಟಾಕ್ ವಿಡಿಯೋ ಷೇರಿಂಗ್ ವೇದಿಕೆಯಾಗಿದೆ. ಭಾರತದಲ್ಲಿ ಈ ಟಿಕ್ ಟಾಕ್ ಆ್ಯಪ್ ಭಾರೀ ಪ್ರಸಿದ್ಧಿಯಾಗಿತ್ತು. ಆದರೆ, ಸುರಕ್ಷತೆಯ ಕಾರಣಗಳಿಂದಾಗಿ ಭಾರತ ಸರ್ಕಾರವು ಈ ಆ್ಯಪ್ ಮೇಲೆ ನಿಷೇಧ ಹೇರಿದೆ. ಹಾಗಾಗಿ, ಈ ಆ್ಯಪ್ ಸದ್ಯಕ್ಕೆ ಭಾರತದಲ್ಲಿ ಬಳಕೆಗೆ ಲಭ್ಯವಿಲ್ಲ.
ತಂತ್ರಜ್ಞಾನ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.