Site icon Vistara News

Tech Neck | ಗೆಜೆಟ್‌ ಎಂಬ ಬ್ರಹ್ಮಕಪಾಲ ತಂದಿಟ್ಟ ಗಂಡಾಂತರ:‌ ಏನಿದು?

text neck symptoms

ಅತಿಯಾದರೆ ಅಮೃತವೂ ವಿಷವಂತೆ. ನಮ್ಮ ಅನುಕೂಲಕ್ಕಾಗಿ ಹುಟ್ಟಿಕೊಂಡ ಗೆಜೆಟ್‌ಗಳ ಕಥೆಯೂ ಹಾಗೆಯೇ. ಮೊಬೈಲ್‌, ಲ್ಯಾಪ್‌ಟಾಪ್‌ ಇತ್ಯಾದಿಗಳ ಅನುಕೂಲಕ್ಕಾಗಿಯೇ ನಾವು ಬದುಕಿದ್ದೇವೆ ಎನ್ನುವಂತೆ ಆಡುತ್ತಿರುವ ದೆಸೆಯಿಂದ ಒಂದಿಲ್ಲೊಂದು ಆರೋಗ್ಯ ಸಮಸ್ಯೆಗಳೂ ಹುಟ್ಟಿಕೊಳ್ಳುತ್ತಿವೆ. ಟೆಕ್‌ ನೆಕ್‌ ಅಥವಾ ಟೆಕ್ಸ್ಟ್‌ ನೆಕ್‌ ನಮ್ಮ ಚಿತ್ತವಿಕಾರದಿಂದಲೇ ಹುಟ್ಟಿಕೊಂಡಿದ್ದೂ ಎಂದರೂ ಸರಿಯೆ.

ಈ ಸಮಸ್ಯೆ ಯಾರನ್ನೂ ಕಾಡಬಹುದು. ಅದರಲ್ಲೂ ಎಚ್ಚರ ಇದ್ದಷ್ಟೂ ಹೊತ್ತು ಕೈಯಲ್ಲಿ ಒಂದಿಲ್ಲೊಂದು ಗೆಜೆಟ್‌ ಬೇಕು ಎನ್ನುವವರನ್ನು ಹೆಚ್ಚಾಗಿ ಕಾಡುವ ಸಮಸ್ಯೆಯಿದು. ಮೊದಲಿಗೆ ಕುತ್ತಿಗೆಯ ಸುತ್ತ ನೋವಿನಿಂದ ಆರಂಭವಾಗುವ ಸಮಸ್ಯೆ, ಭುಜ, ಬೆನ್ನು, ತಲೆ, ದವಡೆ, ಕೊನೆಗೆ ಬೆರಳುಗಳವರೆಗೂ ಹಬ್ಬುತ್ತದೆ. ಸ್ವಲ್ಪ ನೋವು ಎಂದು ಆರಂಭವಾಗಿದ್ದು, ತಡೆಯಲಾರದ ನೋವು ಎನ್ನುವಲ್ಲಿಗೆ ತಲುಪುತ್ತದೆ. ಕುತ್ತಿಗೆ ತಿರುಗಿಸಲೂ ಕಷ್ಟವಾಗಿ, ತೋಳು ಮತ್ತು ಬೆರಳುಗಳ ಸ್ಪರ್ಶ ಸಂವೇದನೆಯೂ ಕಡಿಮೆಯಾಗಬಹುದು.

ಏಕೆ ಹೀಗಾಗುತ್ತದೆ?: ನಮ್ಮ ದೇಹಕ್ಕೆ ಸೂಕ್ತವಲ್ಲದ ಭಂಗಿಗಳಲ್ಲಿ ದೀರ್ಘಕಾಲ ಕುಳಿತುಕೊಳ್ಳುವುದು, ಹೆಚ್ಚು ಸಮಯ ಒಂದೇ ಭಂಗಿಯಲ್ಲಿ ಕೂರುವುದು, ಮೊಬೈಲ್‌ನಂತಹ ಗೆಜೆಟ್‌ ಬಳಕೆಗಾಗಿ ಸದಾ ಕುತ್ತಿಗೆ ಬಗ್ಗಿಸಿರುವುದು ಇದಕ್ಕೆ ಮುಖ್ಯ ಕಾರಣ. ಬೆನ್ನು ಹುರಿಯ ಸರ್ವೇಕಲ್‌ ಭಾಗ ಮತ್ತು ಅದಕ್ಕೆ ಆಧಾರವಾಗಿರುವ ಮಾಂಸಖಂಡಗಳ ಮೇಲೆ ವಿಪರೀತ ಒತ್ತಡ ಹಾಕುತ್ತವೆ ಇಂಥ ದುರಭ್ಯಾಸಗಳು. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ನಮ್ಮ ಕುತ್ತಿಗೆಯನ್ನು ೧೫ ಡಿಗ್ರಿ ಕೋನದಲ್ಲಿ ಬಗ್ಗಿಸುವುದರಿಂದ, ಸುಮಾರು ೧೨.೫ ಕೆ.ಜಿಯಷ್ಟು ಭಾರವನ್ನು ಕುತ್ತಿಗೆಯ ಮೇಲೆ ಹೇರಿದ ಪರಿಣಾಮ ಉಂಟಾಗುತ್ತದೆ. ಕುತ್ತಿಗೆಯನ್ನು ೩೦ ಡಿಗ್ರಿ ಕೋನದಲ್ಲಿ ಬಗ್ಗಿಸಿದರೆ ೩೦ ಕೆ.ಜಿಯಷ್ಟು ಮತ್ತು ೬೦ ಡಿಗ್ರಿ ಬಗ್ಗಿಸಿದರೆ ೨೭ ಕೆ.ಜಿಯಷ್ಟು ಭಾರವನ್ನು ಕುತ್ತಿಗೆಯ ಮೇಲೆ ಹೊರಿಸಿದಂತಾಗುತ್ತದೆ. ಅಲ್ಲಿಗೆ ನಮ್ಮ ಕುತ್ತಿಗೆಗೆ ನಾವೇ ಶತ್ರುವಾಗಲಿಲ್ಲವೇ?

ಇದರಿಂದ ಏನಾಗುತ್ತದೆ?: ಇಷ್ಟೊಂದು ಭಾರವನ್ನು ದೀರ್ಘಕಾಲದವರೆಗೆ ಕುತ್ತಿಗೆಯ ಮೇಲೆ ಹೊರಿಸಿದರೆ ಇಲ್ಲಿನ ಡಿಸ್ಕ್‌ ಮತ್ತು ಕೀಲುಗಳ ಮೇಲೆ ಅಪಾರ ಪ್ರಮಾಣದ ಒತ್ತಡವನ್ನು ಸೃಷ್ಟಿಸುತ್ತದೆ. ಈ ಭಾಗದಲ್ಲಿ ಸವೆತ ಉಂಟಾಗಿ ಆರ್ಥೈಟಿಸ್‌ ಅಥವಾ ಸರ್ವೇಕಲ್‌ ಸ್ಪಾಂಡಿಲೋಸಿಸ್‌ ಆರಂಭವಾಗಬಹುದು. ಇಂಥ ಕೆಲವು ಸಮಸ್ಯೆಗಳು ಗುಣವಾಗುವುದಿಲ್ಲ ಮಾತ್ರವಲ್ಲ, ಕ್ರಮೇಣ ಹೆಚ್ಚಾಗುತ್ತಾ ಹೋಗುತ್ತವೆ.‌

ಇದನ್ನೂ ಓದಿ| ವಿಸ್ತಾರ Explainer | ಗರ್ಭಕಂಠ ಕ್ಯಾನ್ಸರ್‌ಗೆ ಸ್ವದೇಶಿ ಲಸಿಕೆ, ಇನ್ನಿಲ್ಲ ಸಾವಿನ ಅಂಜಿಕೆ

ಏನು ಮಾಡಬಹುದು?: ಕುಳಿತುಕೊಳ್ಳುವ ಭಂಗಿಯ ಬಗ್ಗೆ ಮೊದಲು ಗಮನ ಹರಿಸಿ. ಕೆಲಸದ ಹೊತ್ತಿನಲ್ಲಿ ಹೆಚ್ಚಿನ ಸಮಯ ಕಂಪ್ಯೂಟರ್‌ ಬಳಸುವ ಅಗತ್ಯವಿದೆ ಎಂದಾದರೆ, ನೀವು ಕುಳಿತುಕೊಳ್ಳುವ ವ್ಯವಸ್ಥೆ ನಿಮ್ಮ ಶರೀರದ ಅಳತೆಗೆ ಸೂಕ್ತವಾಗಿರಬೇಕು. ಅಂದರೆ ಪಾದ ನೆಲಕ್ಕೆ ಊರಿ, ಮಾನೀಟರ್‌ ದೃಷ್ಟಿಗೆ ನೇರವಾಗಿ, ಭುಜ ಏರಿ ಅಥವಾ ಇಳಿದು ಆಗದ ರೀತಿಯಲ್ಲಿ ಕೀಬೋರ್ಡ್‌ ಇಟ್ಟುಕೊಂಡು, ಬೆನ್ನು ನೇರವಾಗಿರಬೇಕು. ಬೇಕಿದ್ದರೆ ಕೆಳಬೆನ್ನಿಗೆ ಆಧಾರ ಇರಿಸಿಕೊಳ್ಳಿ.

ಬ್ರೇಕ್‌ ಬೇಕು: ಹೌದು. ದೀರ್ಘ ಕಾಲದವರೆಗೆ ಒಂದೇ ಭಂಗಿಯಲ್ಲಿ ಕೂರುವುದಲ್ಲ. ನಡುವೆ ಬ್ರೇಕ್‌ ತೆಗೆದುಕೊಳ್ಳಿ, ನೀರಿನ ಬಾಟಲಿ ಎದುರಿಗೆ ಇಟ್ಟುಕೊಳ್ಳುವ ಬದಲು, ನೀರಿದ್ದಲ್ಲಿ ಎದ್ದು ಹೋಗಿ. ನೀರು ಹೆಚ್ಚು ಕುಡಿದರೆ, ಬಾತ್‌ರೂಂ ಬ್ರೇಕ್‌ ಅಗತ್ಯವಾಗುತ್ತದೆ. ಕೈ-ಕಾಲು, ಕುತ್ತಿಗೆಗಳಿಗೆ ಸಣ್ಣ ವ್ಯಾಯಾಮ ಮಾಡಿಸಬಹುದು. ಕುತ್ತಿಗೆ ಮತ್ತು ಭುಜದ ಮಾಂಸಖಂಡಗಳನ್ನು ಸದೃಢ ಮಾಡುವುದು ಮುಖ್ಯ.

ಇನ್ನೂ ಮುಖ್ಯವಾಗಿ: ಗೆಜೆಟ್‌ಗೆ ಅಂಟಿಕೊಂಡಿದ್ದರೆ ಅದನ್ನು ಕಡಿಮೆ ಮಾಡಿ. ಅನಗತ್ಯವಾಗಿ ಮೊಬೈಲ್‌ ಗೀರುತ್ತಿರುವುದರಿಂದ ಒಂದಿಷ್ಟು ತೊಂದರೆಗಳು ಹೆಚ್ಚುತ್ತವೆ ಬಿಟ್ಟರೆ ಮತ್ತೇನಿಲ್ಲ. ಮನೆಯಲ್ಲಿ ಮಕ್ಕಳೋ, ನಾಯಿ-ಬೆಕ್ಕುಗಳೋ ಇದ್ದರೆ ಅವುಗಳೊಂದಿಗೆ ಸಮಯ ಕಳೆಯಿರಿ. ಹಿರಿಯರಿದ್ದರೆ ಅವರಿಗೆ ನಿಮ್ಮ ಕಾಳಜಿ ಬೇಕು. ಇದಾವುದೂ ಇಲ್ಲದಿದ್ದರೆ, ವಾಕ್‌ ಹೋಗಿ, ಸೈಕಲ್‌ ಹೊಡೆಯಿರಿ, ಯಾವುದಾದರೂ ಉತ್ತಮ ಹವ್ಯಾಸ ರೂಢಿಸಿಕೊಳ್ಳಿ. ಒಟ್ಟಿನಲ್ಲಿ ಕೈಗಳಿಗೆ ಅಂಟಿರುವ ಗೆಜೆಟ್‌ ಎಂಬ ಬ್ರಹ್ಮಕಪಾಲದಿಂದ ಮುಕ್ತಿ ಪಡೆಯಿರಿ, ಟೆಕ್‌ ನೆಕ್‌ ದೂರ ಮಾಡಿ.

ಇದನ್ನೂ ಓದಿ | ವಿಸ್ತಾರ Explainer | 4G ಸ್ಪೆಕ್ಟ್ರಮ್‌ಗಿಂತ 10 ಪಟ್ಟು ಹೆಚ್ಚು ಸ್ಪೀಡ್! ಟೆಕ್ನಾಲಜಿಯ ಕ್ರಾಂತಿ 5G

Exit mobile version