ನವದೆಹಲಿ: ಬಳಕೆದಾರರ ಅಗತ್ಯಗಳನ್ನು ಪೂರೈಸಲು ಮತ್ತು ಆ್ಯಪ್ ಅನ್ನು ಹೆಚ್ಚು ಬಳಕೆದಾರರಸ್ನೇಹಿಯಾಗಿಸುವ ನಿಟ್ಟಿನಲ್ಲಿ ವಾಟ್ಸ್ಆ್ಯಪ್ ಹೊಸ ಹೊಸ ಫೀಚರ್ ಲಾಂಚ್ (WhatsApp New Feature) ಮಾಡುತ್ತಲೇ ಇರುತ್ತದೆ. ಇದೀಗ ಕಂಪನಿಯು ಆ್ಯಕ್ಸಿಡೆಂಟಲ್ ಡಿಲೀಟ್(Accidental Delete) ಎಂಬ ಹೊಸ ಫೀಚರ್ ಪರಿಚಯಿಸಿದೆ. ಈ ಹೊಸ ಫೀಚರ್ ಬಳಕೆದಾರರಿಗೆ ಮತ್ತೊಂದು ಸ್ತರದ ಸುರಕ್ಷತೆಯನ್ನು ಒದಗಿಸಲಿದೆ.
ಬಹಳಷ್ಟು ಸಂದರ್ಭದಲ್ಲಿ ನಾವು, ಗಡಿಬಿಡಿಯಲ್ಲಿ ತಪ್ಪಾದ ವ್ಯಕ್ತಿ ಅಥವಾ ತಪ್ಪಾದ ಗ್ರೂಪಿಗೆ ಸಂದೇಶವನ್ನು ರವಾನಿಸುತ್ತೇವೆ. ನಾವು ಮಾಡಿದ ತಪ್ಪು ಗೊತ್ತಾದ ತಕ್ಷಣ ಆ ಸಂದೇಶವನ್ನು ಅಳಿಸಿ ಹಾಕುವ ಭರದಲ್ಲಿ ಇನ್ನೊಂದು ತಪ್ಪು ಮಾಡುವ ಸಾಧ್ಯತೆಗಳು ಹೆಚ್ಚಿರುತ್ತವೆ. ಈ ರೀತಿಯ ಒತ್ತಡದಲ್ಲಿ ತಪ್ಪುಗಳನ್ನು ಪ್ರತಿಯೊಬ್ಬರು ಮಾಡಿಯೇ ಇರುತ್ತಾರೆ. ಏನೆಂದರೆ, ಡಿಲೀಟ್ ಫಾರ್ ಆಲ್ ಎನ್ನುವ ಆಪ್ಷನ್ ಆಯ್ಕೆ ಮಾಡಿಕೊಳ್ಳುವ ಬದಲು ಡಿಲೀಟ್ ಫಾರ್ ಮಿ ಆಪ್ಷನ್ ಆಯ್ಕೆ ಮಾಡಿಕೊಳ್ಳುತ್ತೇವೆ. ಆಗ ಸಂದೇಶ ಹಾಗೆಯೇ ಉಳಿದುಬಿಡುತ್ತದೆ. ಈ ಸಮಸ್ಯೆಯನ್ನು ಬಗೆಹರಿಸಲು ವಾಟ್ಸ್ಆ್ಯಪ್, ಆ್ಯಕ್ಸಿಡೆಂಟಲ್ ಡಿಲೀಟ್ ಎಂಬ ಹೊಸ ಫೀಚರ್ ಪರಿಚಯಿಸಿದೆ.
ಈ ಹೊಸ ಫೀಚರ್ ಬಳಸಿಕೊಂಡು ಬಳಕೆದಾರರು, ತಾವು ಮಾಡಿದ ತಪ್ಪನ್ನು ತಿದ್ದುಕೊಳ್ಳಲು ಸಾಧ್ಯವಾಗುತ್ತದೆ. ಹೇಗೆಂದರೆ, ಒಂದೊಮ್ಮೆ ನೀವು ಡಿಲೀಟ್ ಫಾರ್ ಆಲ್ ಎಂಬುದರ ಬದಲಿಗೆ ಡಿಲೀಟ್ ಫಾರ್ ಮಿ ಆಯ್ಕೆ ಮಾಡಿಕೊಂಡಿದ್ದರೆ, ಮೆಸೇಜ್ ಡಿಲೀಟ್ ಆದರೂ ಐದು ಸೆಕೆಂಡ್‌ಗಳ ಕಾಲ ಅದು ಹಾಗೆಯೇ ಇರುತ್ತದೆ. ಆಗ ಕೂಡಲೇ ಅದನ್ನು ಅನ್ ಡು ಮಾಡಿಕೊಂಡು, ಡಿಲೀಟ್ ಫಾರ್ ಆಲ್ ಆಪ್ಷನ್ ಆಯ್ಕೆ ಮಾಡಿಕೊಳ್ಳಬಹುದು.
ಈ ಹೊಸ ಫೀಚರ್ ಎಲ್ಲ ಬಳಕೆದಾರರಿಗೆ ಲಭ್ಯವಿದೆ. ಆಂಡ್ರಾಯ್ಡ್ ಹಾಗೂ ಐಒಎಸ್ ಸಾಧನಗಳಿಗೂ ಸಪೋರ್ಟ್ ಮಾಡುತ್ತದೆ. ಇತ್ತೀಚೆಗಷ್ಟೇ ವಾಟ್ಸ್ಆ್ಯಪ್ ಮೆಸೇಜ್ ಯುವರ್‌ಸೆಲ್ಫ್ ಎಂಬ ಫೀಚರ್ ಲಾಂಚ್ ಮಾಡಿತ್ತು. ಈ ವೈಶಿಷ್ಟ್ಯವೂ ಬಳಕೆದಾರರಿಗೆ ಸಾಕಷ್ಟು ಉಪಯೋಗಕಾರಿಯಾಗಿದೆ. ಹಾಗೆಯೇ ಆ್ಯಕ್ಸಿಡೆಂಟಲ್ ಡಿಲೀಟ್ ಕೂಡ ಬಳಕೆದಾರರಿಗೆ ಹೆಚ್ಚು ಉಪಯೋಗವಾಗಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ | Message Yourself | ವಾಟ್ಸ್ಆ್ಯಪ್‌ನ ಹೊಸ ಫೀಚರ್ ‘ಮೆಸೇಜ್ ಯುವರ್‌ಸೆಲ್ಫ್’ ಶುರು! ಬಳಸಲು ಹೀಗೆ ಮಾಡಿ…