ನವ ದೆಹಲಿ: ಜನಪ್ರಿಯ ಮೈಕ್ರೋ ಬ್ಲಾಗಿಂಗ್ ಟ್ವಿಟರ್ ಎಡಿಟ್ ಬಟನ್ ಪರಿಚಯಿಸಲು ಮುಂದಾಗಿರುವ ಬೆನ್ನಲ್ಲೇ, ಮತ್ತೊಂದು ಜನಪ್ರಿಯ ಸೋಷಿಯಲ್ ಮೀಡಿಯಾ ವಾಟ್ಸ್ಆ್ಯಪ್ (WhatsApp) ಕೂಡ ಎಡಿಟ್ ಫೀಚರ್ ಅಳವಡಿಸಲು ಮುಂದಾಗಿದೆ. ಅಂದರೆ, ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿದ ಸಂದೇಶವನ್ನು ಎಡಿಟ್ ಮಾಡಲು ಈ ಫೀಚರ್ ಅವಕಾಶ ಕಲ್ಪಿಸಲಿದೆ. ಒಂದೊಮ್ಮೆ ವಾಟ್ಸ್ಆ್ಯಪ್ ಮಾಡುವಾಗ ಏನಾದರೂ ತಪ್ಪುಗಳಾಗಿದ್ದರೆ, ಈ ಎಡಿಟ್ ಫೀಚರ್ ಬಳಸಿಕೊಂಡು ಸರಿಪಡಿಸಬಹುದು!
ಫೇಸ್‌ಬುಕ್ ಒಡೆತನ ಹೊಂದಿರುವ ಮೆಟಾ ಮಾಲೀಕತ್ವದ ವಾಟ್ಸ್ಆ್ಯಪ್ ತನ್ನ ಬಳಕೆದಾರರ ಅನುಕೂಲಕ್ಕೆ ತಕ್ಕ ಹಾಗೆ ಅಪ್‌ಡೇಟ್ಸ್ ಮತ್ತು ಹೊಸ ಫೀಚರ್‌ಗಳನ್ನು ಪರಿಚಯಿಸುತ್ತದೆ. ಈಗ ಅದೇ ರೀತಿಯಾಗಿ, ಎಡಿಟ್ ಫೀಚರ್ ಅಳವಡಿಸಲು ಮುಂದಾಗಿದೆ. ಆದರೆ, ಈ ಫೀಚರ್ ಇನ್ನೂ ಪ್ರಾಯೋಗಿಕ ಹಂತದಲ್ಲಿದೆ.
ಈಗಾಗಲೇ ಬಳಕೆದಾರರು ವಾಟ್ಸ್ಆ್ಯಪ್‌ನಲ್ಲಿ ದಿನಾಂಕ ಅನುಸಾರ ಮೆಸೇಜ್‌ಗಳನ್ನು ಶೋಧಿಸಬಹುದು. ಹಾಗೆಯೇ, ತಮ್ಮ ಆನ್‌ಲೈನ್ ಸ್ಟೇಟಸ್ ಕೂಡ ಹೈಡ್ ಮಾಡಬಹುದು. ಈಗ ಅದೇ ರೀತಿ, ಮೆಸೇಜ್ ಎಡಿಟ್ ಮಾಡುವ ಸೌಲಭ್ಯವನ್ನು ಕಲ್ಪಿಸಲಿದೆ. ಒಂದೊಮ್ಮೆ ಈ ಸೌಲಭ್ಯ ಸಾಧ್ಯವಾದರೆ, ಎಡಿಟ್ ಆದ ಸಂದೇಶಕ್ಕೆ ‘edited’ ಎಂಬ ಲೇಬಲ್ ಅಂಟಿಸಲಿದೆ. ಇದರಿಂದಾಗಿ ಈ ಸಂದೇಶವನ್ನು ಎಡಿಟ್ ಮಾಡಲಾಗಿದೆ ಎಂಬುದು ಇತರರಿಗೂ ಗೊತ್ತಾಗುತ್ತದೆ.
ಈಗಿರುವ ಪ್ರಾಥಮಿಕ ಮಾಹಿತಿ ಪ್ರಕಾರ, ಎಡಿಟ್ ಮೆಸೇಜ್ ಫೀಚರ್ ಇನ್ನೂ ಪ್ರಯೋಗ ಹಂತದಲ್ಲಿದ್ದು, ಮೆಸೇಜ್ ಕಳುಹಿಸಿದ ನಿರ್ದಿಷ್ಟ ಸಮಯದಲ್ಲಿ ಮಾತ್ರವೇ ಎಡಿಟ್ ಮಾಡಲು ಸಾಧ್ಯವಾಗುವ ರೀತಿಯಲ್ಲಿ ಎಡಿಟ್ ಫೀಚರ್ ಇರಲಿದೆ ಎನ್ನಲಾಗುತ್ತಿದೆ.
ಕಳೆದ ಮೇ ತಿಂಗಳಲ್ಲಿ ಎಡಿಟ್ ಫೀಚರ್ ಬಗ್ಗೆ ವಾಟ್ಸ್ಆ್ಯಪ್ ಹೇಳಿಕೊಂಡಿತ್ತು. ಆದರೆ, ಅದೇನು ಆಯಿತೋ ಗೊತ್ತಿಲ್ಲ. ಸಡನ್ ಆಗಿ ಈ ಕಾರ್ಯದಿಂದ ವಾಟ್ಸ್ಆ್ಯಪ್ ಹಿಂದೆ ಸರಿಯಿತು. ಈಗ ಮತ್ತೆ ಅದೇ ಎಡಿಟ್ ಫೀಚರ್ ಮೇಲೆ ಕೆಲಸ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಎಡಿಟ್ ಫೀಚರ್ ಯಾವಾಗ ಬಳಕೆದಾರರಿಗೆ ಸಿಗಲಿದೆ ಎಂಬ ಬಗ್ಗೆ ಯಾವುದೇ ಖಚಿತ ಮಾಹಿತಿಗಳಿಲ್ಲ.
ಇದನ್ನೂ ಓದಿ | WhatsApp Accounts Ban | 23.9 ಲಕ್ಷ ವಾಟ್ಸ್ಆ್ಯಪ್ ಖಾತೆ ಬ್ಯಾನ್, ಕಾರಣ ಏನು?