ಬೆಂಗಳೂರು, ಕರ್ನಾಟಕ: ಜಗತ್ತಿನ ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ (WhatsApp) ಹೊಸ ಫೀಚರ್ ಜಾರಿಗೆ ತಂದಿದೆ. ಡಿಸ್‌ಅಪಿಯರಿಂಗ್ ಮೆಸೇಜ್‌ಗಳನ್ನು (disappearing messages) ಉಳಿಸಿಕೊಳ್ಳಲು ಬಳಕೆದಾರರಿಗೆ ಈ ಹೊಸ ಫೀಚರ್ ಕೀಪ್ ಇನ್ ಚಾಟ್ (Keep in Chat) ಅನುವು ಮಾಡಿಕೊಡಲಿದೆ. ಆದರೆ, ಇದಕ್ಕಾಗಿ ಸಂದೇಶಗಳನ್ನು ಕಳುಹಿಸಿದವರು ಯಾವ ಸಂದೇಶಗಳನ್ನು ಇಟ್ಟುಕೊಳ್ಳಬೇಕೆಂಬುದನ್ನು ನಿರ್ಧರಿಸಬೇಕಾಗುತ್ತದೆ.
ಹೆಚ್ಚುವರಿಯಾಗಿ, ಮೆಸೇಜಿಂಗ್ ಪ್ಲಾಟ್‌ಫಾರ್ಮ್ iOS ಸಾಧನಗಳಿಗಾಗಿ ಹೊಸ ಸ್ಥಿರವಾದ ನವೀಕರಣವನ್ನು ಸಹ ಹೊರತಂದಿದೆ. ಆ್ಯಪಲ್‌ನ ಆಪರೇಟಿಂಗ್ ಸಿಸ್ಟಮ್‌ನ ಇತ್ತೀಚಿನ ಆವೃತ್ತಿಯನ್ನು ಚಾಲನೆ ಮಾಡುವ ಬಳಕೆದಾರರಿಗೆ ಹೊಸ ಸ್ಟಿಕ್ಕರ್ ತಯಾರಕ ಸಾಧನವನ್ನು ಒದಗಿಸುತ್ತದೆ.
ತನ್ನ ಈ ಹೊಸ ಸೇವೆಗಳ ಕುರಿತು ಮೆಟಾ ಒಡೆತನದ ವಾಟ್ಸಾಪ್, ಬ್ಲಾಗ್‌ನಲ್ಲಿ ಬರೆದುಕೊಂಡಿದ್ದು, ಡಿಸ್‌ಅಪಿಯರಿಂಗ್ ಮೆಸೇಜ್‌ಗಳು ಚಾಟ್‌ನಲ್ಲಿ ಉಳಿಯುವುದಿಲ್ಲ. ಆದರೆ, ಬಳಕೆದಾರರು ಕೀಪ್ ಇನ್ ಚಾಟ್(Keep in Chat) ಫೀಚರ್‌ನೊಂದೆಗ ತಮಗೆ ಬೇಕಾದ ಉಪಯುಕ್ತ ಸಂದೇಶಗಳನ್ನು ಹಾಗೆಯೇ ಉಳಿಸಿಕೊಳ್ಳಬಹುದು. ಹಾಗಿದ್ದಾಗ್ಯೂ, ಚಾಟ್‌ನಲ್ಲಿ ಯಾವ ಸಂದೇಶವನ್ನು ಉಳಿಸಿಕೊಳ್ಳಬೇಕೆಂಬುದನ್ನು ಮೆಸೇಜ್ ಕಳುಹಿಸಿದವರು ನಿರ್ಧರಿಸಬೇಕಾಗುತ್ತದೆ. ಯಾರಾದರೂ ಚಾಟ್ ಉಳಿಸಿಕೊಂಡರೆ ಆ ಬಗೆಗಿನ ಮಾಹಿತಿಯನ್ನು ಸೆಂಡರ್‌ಗೆ ರವಾನೆಯಾಗುತ್ತದೆ ಎನ್ನುತ್ತದೆ ವಾಟ್ಸಾಪ್.
ಈ ಮಧ್ಯೆ, ಆಪ್ ಸ್ಟೋರ್ ಮೂಲಕ iOS 23.7.82 ನವೀಕರಣಕ್ಕಾಗಿ ವಾಟ್ಸಾಪ್ ಅಪ್‌ಡೇಟ್ ಮಾಡಲಾಗಿದೆ. WABetaInfo ವರದಿಯ ಪ್ರಕಾರ, ಹೊಸ ಅಪ್‌ಡೇಟ್‌ನಿಂದಾಗಿ ಥರ್ಡ್ ಪಾರ್ಟಿ ಆ್ಯಪ್ ಬಳಸದೇ ಬಳಕೆದಾರರು ವಾಟ್ಸಾಪ್‌ನಲ್ಲೇ ಸ್ಟಿಕರ್ ರೂಪಿಸಬಹುದು. ಇದಕ್ಕಾಗಿ ಸ್ಟಿಕರ್ ಮೇಕರ್ ಟೂಲ್ ಒದಗಿಸಲಾಗಿದೆ. ಐಓಎಸ್ 16ನಲ್ಲಿ ಇಮೇಜ್‌ನಲ್ಲಿ ಯಾವುದೇ ವಸ್ತುವನ್ನು ತೆಗೆದು ನಿಮಗೆ ಬೇಕಾದ ಹಾಗೆ ಸ್ಟಿಕರ್ಸ್ ಕ್ರಿಯೇಟ್ ಮಾಡಿಕೊಳ್ಳಬಹುದು.
ಇದನ್ನೂ ಓದಿ: WhatsApp New Feature: ನಿಮ್ಮ ಖಾತೆ ಸುರಕ್ಷತೆಯನ್ನು ಖಾತ್ರಿಪಡಿಸುವ ಮೂರು ಫೀಚರ್ ಲಾಂಚ್ ಮಾಡಿದ ವಾಟ್ಸಾಪ್
ಸ್ಟಿಕ್ಕರ್ ತಯಾರಕ ಟೂಲ್‌ವನ್ನು ಐಒಎಸ್ 16ನಲ್ಲಿ ಕೆಲಸ ಮಾಡಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಐಒಎಸ್‌ನ ಹಳೆಯ ಆವೃತ್ತಿಗಳಲ್ಲಿ ಚಾಲನೆಯಲ್ಲಿರುವ ಸಾಧನಗಳಿಗೆ ಕಾರ್ಯವನ್ನು ತರಲು ಯಾವುದೇ ಯೋಜನೆಗಳು ಸದ್ಯಕ್ಕಿಲ್ಲ.