ಬೆಂಗಳೂರು: ಚಂದ್ರಯಾನ 3 ಮಿಷನ್ನ ಸೇಫ್ ಲ್ಯಾಂಡಿಂಗ್ಗೆ ಕ್ಷಣಗಣನೆ ಆರಂಭವಾಗಿದೆ. ಆಗಸ್ಟ್ 23ರಂದು ಬುಧವಾರ ಸಂಜೆ 6 ಗಂಟೆ 4 ನಿಮಿಷಕ್ಕೆ ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ಮೇಲೆ ನಿಧಾನವಾಗಿ ಇಳಿಸಲು ಇಸ್ರೊ ವಿಜ್ಞಾನಿಗಳ ತಂಡ ಯೋಜನೆ ರೂಪಿಸಿದೆ. ಈ ಮಿಷನ್ ಜಗತ್ತಿನ ಗಮನ ಸೆಳೆದಿದ್ದು, ಈ ಯೋಜನೆ ಯಶಸ್ಸು ಕಂಡರೆ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಭಾರತ ದೊಡ್ಡ ಮೈಲುಗಲ್ಲು ಸ್ಥಾಪಿಸುವುದಂತೂ ಖಚಿತ. ಅಂತೆಯೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಸಾಮರ್ಥ್ಯಕ್ಕೆ ಪ್ರಪಂಚದ ಮೂಲೆಮೂಲೆಗಳಿಂದ ವ್ಯಾಪಕ ಪ್ರಶಂಸೆ ದೊರೆಯಲಿದೆ.
ಚಂದ್ರಯಾನ 3 ಮಿಷನ್ ಯಶಸ್ಸು ಕಂಡರೆ, ಭಾರತವು ಚಂದ್ರನ ಮೇಲೆ ಲ್ಯಾಂಡರ್ ಇಳಿಸಿದರೆ ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ರಾಷ್ಟ್ರ ಎನಿಸಿಕೊಳ್ಳಲಿದೆ. ಅಮೆರಿಕಾ, ಚೀನಾ, ರಷ್ಯಾ ಈ ಯಶಸ್ಸು ಸಾಧಿಸಿದ ಉಳಿದ ದೇಶಗಳಾಗಿವೆ. ಅಂತೆಯೇ ಚಂದಿರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಲ್ಯಾಂಡರ್ ಇಳಿಸಿದ ಮೊಟ್ಟಮೊದಲ ದೇಶ ಎಂಬ ಹೆಗ್ಗಳಿಕೆಗೂ ಭಾರತ ಪಾತ್ರವಾಗಲಿದೆ. ಹಾಗಾದರೆ ಚಂದ್ರಯಾನ-3 ಯೋಜನೆ ಏನು, ಇದರಿಂದ ಭಾರತಕ್ಕೆ ಏನು ಪ್ರಯೋಜನ ಎಂಬುದರ ಬಗ್ಗೆ ವಿಜ್ಞಾನ ಲೇಖಕರಾದ ಬಿ. ಆರ್ ಗುರುಪ್ರಸಾದ್ ಅವರು ವಿಸ್ತಾರ ಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ವಿವರಣೆ ನೀಡಿದ್ದಾರೆ.
ಯಾಕೆ ಇದು ದೊಡ್ಡ ಸಾಧನೆ?
ಚಂದ್ರಯಾನ-3 ಹೆಮ್ಮೆಯ ವಿಚಾರ ಎಂಬುದರಲ್ಲಿ ಸಂಶಯವೇ ಇಲ್ಲ. ಚಂದ್ರನ ಕಡೆಗೆ ರಾಕೆಟ್ ಉಡಾಯಿಸುವುದು. ಅದನ್ನು ಚಂದ್ರನ ಕಕ್ಷೆಗೆ ಕೊಂಡೊಯ್ಯುವುದು ಮತ್ತು ಅದನ್ನು ಸಾಫ್ಟ್ ಲ್ಯಾಂಡ್ ಮಾಡುವುದು ಸಣ್ಣ ವಿಚಾರವಲ್ಲ. ಬಾಹ್ಯಾಕಾಶ ತಂತ್ರಜ್ಞಾನ ಇರುವಂತಹ ದೇಶಗಳ ಪೈಕಿ ಕೆಲವೇ ಕೆಲವು ರಾಷ್ಟ್ರಗಳ ಸಾಲಿಗೆ ಭಾರತ ಸೇರುತ್ತಿದೆ. ಯುಎಸ್ಎಸ್ಆರ್ (ರಷ್ಯಾ), ಅಮೆರಿಕ, ಚೀನಾ ಈಗಾಗಲೇ ಚಂದ್ರನಲ್ಲಿಗೆ ಕಾಲಿಟ್ಟಿವೆ . ಭಾರತ ಈಗ ನಿಧಾನವಾಗಿ ನೌಕೆಯೊಂದನ್ನು ಇಳಿಸುವ ಮೂಲಕ ನಾಲ್ಕನೇ ರಾಷ್ಟ್ರವಾಗಲಿದೆ. ರಾಕೆಟ್ ಉಡಾವಣೆಯಾದ ಜುಲೈ 14ರಿಂದ ಇದುವರೆಗೆ ನಡೆದಿರುವ ಎಲ್ಲ ಪ್ರಕ್ರಿಯೆಗಳು ಅತ್ಯಂತ ಕ್ರಮಬದ್ಧವಾಗಿ ನಡೆದಿವೆ. ಚಂದ್ರಯಾನ 1 ಮತ್ತು 2ರಲ್ಲಿ ಭಾರತ ಸಾಕಷ್ಟು ಸಾಧನೆ ಮಾಡಿದೆ. ಹೀಗಾಗಿ ಚಂದ್ರಯಾನ 3ರಲ್ಲಿ ಸಾಧಿಸಲಿರುವುದು ಮತ್ತಷ್ಟು ಮಹತ್ತರವಾದುದು ಎಂದು ಹೇಳಿದ್ದಾರೆ ಬಿ. ಆರ್ ಗುರುಪ್ರಸಾದ್.
ಲ್ಯಾಂಡಿಂಗ್ ಯಾಕೆ ನಿರ್ಣಾಯಕ?
ಚಂದ್ರಯಾನದ ಕೊನೆಯ ಕೋಶವಾಗಿರುವ ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ಮೇಲೆ ಇಳಿಸುವುದು ನಿರ್ಣಾಯಕ. ಯಾಕೆಂದರೆ ಈ ಲ್ಯಾಂಡರ್ ಗಂಟೆಗೆ ಸಾವಿರಾರು ಕಿಲೋ ಮೀಟರ್ ವೇಗದಲ್ಲಿ ಚಂದ್ರನ ಸುತ್ತ ಮೊಟ್ಟೆಯಾಕಾರದಲ್ಲಿ ಸುತ್ತುತ್ತಿರುತ್ತದೆ. ಜತೆಗೆ ಎಲ್ಲ ಕಡೆಯೂ ಅದು ಒಂದೇ ವೇಗದಲ್ಲಿ ಇರುವುದಿಲ್ಲ. ಹೀಗಾಗಿ ವೇಗವನ್ನು ನಿಯಂತ್ರಿಸುವುದೇ ವಿಜ್ಞಾನಿಗಳ ಪಾಲಿಗೆ ದೊಡ್ಡ ಸವಾಲು. ಚಂದ್ರಯಾನದ ಲ್ಯಾಂಡರ್ ವೇಗವನ್ನು ಊಹಿಸುವುದಕ್ಕೂ ಸಾಧ್ಯವಿಲ್ಲ. ಹೀಗಾಗಿ ವಿಕ್ರಮ್ ಲ್ಯಾಂಡರ್ ಅನ್ನು ಆಗಸ್ಟ್ 23ರಂದು ಸಂಜೆಯ ವೇಳೆಗೆ ಗಂಟೆಗೆ ಸಾವಿರಾರು ಕಿಲೋಮೀಟರ್ ವೇಗದಿಂದ ಕನಿಷ್ಠ 12 ಕಿಲೋಮೀಟರ್ ವೇಗಕ್ಕೆ ತಂದು ಹೆಲಿಕಾಪ್ಟರ್ ರೀತಿಯಲ್ಲಿ ಚಂದ್ರನ ಮೇಲೆ ನಿಧಾನವಾಗಿ ಇಳಿಸಬೇಕಾಗುತ್ತದೆ. ಆ ಕಾರಣಕ್ಕೇ ಅದು ನಿರ್ಣಾಯಕ ಎಂದು ಹೇಳಿದ್ದಾರೆ ವಿಜ್ಞಾನಿ ಗುರುಪ್ರಸಾದ್.
ಇಲ್ಲಿಂದಲೇ ನಿಯಂತ್ರಣ ಹೇಗೆ?
ಸಾಮಾನ್ಯವಾಗಿ ಚಂದ್ರಯಾನ ಮಿಷನ್ ಬಗ್ಗೆ ಮಾತನಾಡುವಾಗ ನಾವು 14 ಮಹಡಿ ಎತ್ತರದ ಎಲ್ವಿಎಮ್-3 ರಾಕೆಟ್ ಮತ್ತು ನೌಕೆಯ ಬಗ್ಗೆ ಗಮನಹರಿಸುತ್ತೇವೆ. ಆದರೆ, ಯೋಜನೆಯ ಭೂಸೌಲಭ್ಯಗಳ ಕುರಿತು ಹೆಚ್ಚು ಚರ್ಚೆಗಳು ನಡೆಸುವುದಿಲ್ಲ. ಆದರೆ, ಮಿಷನ್ನಲ್ಲಿ ಚಂದ್ರನ ಭೂನೆಲೆಗಳು ಬಹಳ ಮುಖ್ಯ. ಮೊದಲನೆಯದು ನೌಕೆಯು ಪಿಸುಗುಟ್ಟುವ ಮಾಹಿತಿಯನ್ನು ಸ್ವೀಕರಿಸುವ ವ್ಯವಸ್ಥೆ. ನೌಕೆಯು ಕನಿಷ್ಠ ಪ್ರಮಾಣದ ಬ್ಯಾಟರಿ ಖರ್ಚು ಮಾಡಿಕೊಂಡು ಅಲ್ಲಿಂದ ರೇಡಿಯೊ ತರಂಗಗಳ ಮೂಲಕ ಮಾಹಿತಿ ರವಾನೆ ಮಾಡುತ್ತದೆ. ಯಾಕೆಂದರೆ ಜೋರಾಗಿ ತರಂಗಗಳನ್ನು ಕಳುಹಿಸುವಷ್ಟು ಬ್ಯಾಟರಿ ಶಕ್ತಿ ಅಲ್ಲಿ ಇರುವುದಿಲ್ಲ. ಹೀಗಾಗಿ ಪಿಸುಗುಟ್ಟುವ (Whisper) ಮಾಹಿತಿ ಭೂಮಿಗೆ ಬರುವಾಗ ಊಹಿಸಲಾಗದಷ್ಟು ಕ್ಷೀಣವಾಗಿರುತ್ತದೆ. ಈ ತರಂಗಗಳನ್ನು ಬೆಂಗಳೂರು ನಗರ ಸಮೀಪದ ಬ್ಯಾಲಾಳುವಿನಲ್ಲಿರುವ ದೈತ್ಯ 105 ಅಡಿ ಅಗಲದ ಆ್ಯಂಟೆನಾ ಸ್ವೀಕರಿಸುತ್ತದೆ. ಈ ಆಂಟೆನಾ ನೌಕೆಯಿಂದ ಸಂದೇಶ ಸ್ವೀಕಾರ ಹಾಗೂ ಮರು ಸಂದೇಶ ಕಳುಹಿಸುವ ಮಧ್ಯವರ್ತಿಯಂತೆ ಕೆಲಸ ಮಾಡುತ್ತದೆ. ಈ ಎಲ್ಲ ಸಂದೇಶಗಳನ್ನು ಬೆಂಗಳೂರಿನ ಪೀಣ್ಯದಲ್ಲಿರುವ ನಿಯಂತ್ರಣ ಕೇಂದ್ರದಿಂದ (ಸೆಂಟ್ರಲ್ ನರ್ವ್ ಸಿಸ್ಟಮ್) ವಿಜ್ಞಾನಿಗಳು ನಿರ್ವಹಿಸುತ್ತಾರೆ. ಆದಾಗ್ಯೂ ಇಳಿಯುವ ಪ್ರಕ್ರಿಯೆಯನ್ನು ಭೂಮಿಯಿಂದ ನಿಯಂತ್ರಿಸಲು ಸಾಧ್ಯವಿಲ್ಲ. ಬದಲಾಗಿ ಆ ಜವಾಬ್ದಾರಿಯನ್ನು ಲ್ಯಾಂಡರ್ನ ಎಲೆಕ್ಟ್ರಾನಿಕ್ ಮೆದುಳಿಗೆ ವಹಿಸಲಾಗಿರುತ್ತದೆ. ಅದು ಅನೇಕ ಸಂವೇದಕಗಳ (ಸೆನ್ಸರ್) ಮೂಲಕ ಕೆಲಸ ಮಾಡುತ್ತದೆ. ತನ್ನ ವೇಗ ಎಷ್ಟು, ಎಷ್ಟು ಎತ್ತರದಲ್ಲಿದ್ದೇನೆ, ತನ್ನ ವೇಗವನ್ನು ಎಷ್ಟು ಹೆಚ್ಚಿಸಬಹುದು, ಇಳಿಯುವುದು ಹೇಗೆ ಎಂಬುದನ್ನು ಗ್ರಹಿಸುವ ಸಂವೇದಕಗಳನ್ನು ಇದು ಹೊಂದಿದೆ. ಈ ವ್ಯವಸ್ಥೆಯನ್ನು ಮೈಕ್ರೋ ಕಂಪ್ಯೂಟರ್ ಎಂದೇ ಕರೆಯಬಹುದು. ರಾಕೆಟ್ಗಳ ನೆರವು ಬಳಸಿ ವೇಗ ವರ್ಧಕ ಹಾಗೂ ನಿಯಂತ್ರಣವನ್ನು ಮಾಡಲಾಗುತ್ತದೆ ಎಂದು ಗುರುಪ್ರಸಾದ್ ಅವರು ಮಾಹಿತಿ ನೀಡಿದ್ದಾರೆ.
ಮಿಷನ್ ಎಷ್ಟು ಹಂತದಲ್ಲಿ ಆರಂಭಗೊಳ್ಳುತ್ತದೆ?
ಉಡಾವಣೆಯ ಪೂರ್ವ ಹಂತ (ಪ್ರತಿಯೊಂದು ಉಪವಿಭಾಗಗಳನ್ನು ಪರೀಕ್ಷೆ ಮಾಡುವುದು. ಉಡಾವಣೆಗೆ ಅರ್ಹ ಎಂದು ತೀರ್ಮಾನಿಸುವುದು), ಉಡಾವಣೆಯ ಹಂತ (ನಿಖರವಾಗಿ ಕಕ್ಷೆಗೆ ಸೇರಿಸುವುದು), ಉಡಾವಣೆಯ ನಂತರದ ಹಂತ, ಭೂಮಿಯ ಪ್ರಭಾವದಲ್ಲಿರುವ ಹಂತ (ಭೂಮಿಯನ್ನು ಸುತ್ತುವ ಅವಧಿ. ಸುಮಾರು ಒಂದು ಲಕ್ಷ ಕಿಲೋಮೀಟರ್ ದೂರದ ತನಕ ಎತ್ತರವನ್ನು ಏರಿಸುತ್ತಾ ಕಕ್ಷೆಯಲ್ಲಿ ಸುತ್ತಿಸುವುದು), ಚಂದ್ರನತ್ತ ತೆರಳುವ ಒಂದು ಹಂತ (ನಾಲ್ಕು ದಿನಗಳಲ್ಲಿ ಈ ಹಂತ), ಚಂದ್ರನ ಗುರುತ್ವಾಕರ್ಷಣಾ ವಲಯದಲ್ಲಿ ಸುತ್ತುವ ಹಂತ (ಈ ಹಂತದಲ್ಲಿ ನೌಕೆ ಚಂದ್ರನಿಗೆ ಸುತ್ತ ಸುತ್ತುವುದು.), ಕಕ್ಷೆಯನ್ನು ಪರಿಷ್ಕರಿಸುವ ಹಂತ (ಕಕ್ಷೆಯ ಎತ್ತರವನ್ನು ಕಡಿಮೆ ಮಾಡುತ್ತಾ ಸುಮಾರು 100 ಕಿ.ಮೀ ಎತ್ತರಕ್ಕೆ ತರುವುದು), ಕೊನೆಯದಾಗಿ ಇಳಿಯುವ ಹಂತ (ಪ್ರೊಪಲ್ಷನ್ ಮಾಡ್ಯೂಲ್ ಮತ್ತು ಲ್ಯಾಂಡರ್ ಮಾಡ್ಯೂಲ್ ಪ್ರತ್ಯೇಕವಾಗುವುದು). ಕೊನೇ ಒಂದು ಹಂತ ಬಿಟ್ಟು ಉಳಿದೆಲ್ಲ ಹಂತವನ್ನು ಚಂದ್ರಯಾನ 3 ಈಗ ದಾಟಿದೆ ಎಂದು ಹೇಳಿದ್ದಾರೆ ಗುರುಪ್ರಸಾದ್ ಅವರು.
ಯಾವುದೆಲ್ಲ ಉಪಕರಣಗಳು ಬಳಕೆಯಾಗುತ್ತವೆ?
ಪ್ರೊಪಲ್ಷನ್ ಮಾಡ್ಯೂಲ್ ಕಕ್ಷೆಯನ್ನು ಏರಿಸುವ ಮತ್ತು ಇಳಿಸುವ ಕೆಲಸ ಮಾಡುತ್ತದೆ. ಲ್ಯಾಂಡರ್ ಮಾಡ್ಯೂಲ್ ಅದರಿಂದ ಪ್ರತ್ಯೇಕಗೊಂಡ ಬಳಿಕ ಅದರ ಕೆಲಸ ಮುಗಿಯುತ್ತದೆ. ಹಾಗೆಂದು ಸಂಪೂರ್ಣವಾಗಿ ನಿಲ್ಲುವುದಿಲ್ಲ. ಅದು ಚಂದ್ರನ ಸುತ್ತ ಸುಮಾರು 3ರಿಂದ 6 ತಿಂಗಳು ಸುತ್ತುತ್ತಲೇ ಇರುತ್ತದೆ. ಆದರೆ, ಲ್ಯಾಂಡರ್ ಮಾಡ್ಯೂಲ್ ಚಂದ್ರನ ಮೇಲೆ ಕೇವಲ 25 ಕಿಲೋಮೀಟರ್ ಎತ್ತರದಲ್ಲಿ ಸುತ್ತುತ್ತಿದೆ. ಈ 25 ಕಿಲೋ ಮೀಟರ್ ಎತ್ತರದಿಂದ ಚಂದ್ರನ ನೆಲಕ್ಕೆ ಇಳಿಯುವುದೇ ಸಾಫ್ಟ್ ಲ್ಯಾಂಡಿಂಗ್. ಇದೇ ವೇಳೆ ಪ್ರೊಪಲ್ಷನ್ ಮಾಡ್ಯೂಲ್ನಲ್ಲಿರುವ ವೈಜ್ಞಾನಿಕ ಉಪಕರಣ ಅಲ್ಲಿಂದಲೇ ಭೂಮಿಯನ್ನು ವೀಕ್ಷಿಸಲು ಆರಂಭಿಸುತ್ತದೆ. ಭೂಮಿಯಿಂದ ಬಿಡುಗಡೆಯಾಗುವ ಬೆಳಕನ್ನು ಸ್ವೀಕರಿಸುತ್ತಾ ಭೂಮಿಯದ್ದೇ ರೀತಿಯಲ್ಲಿ ಬೇರೆ ಯಾವುದಾದಾದರೂ ಗ್ರಹಗಳು ನಭೋಮಂಡಲದಲ್ಲಿ ಇವೆಯೇ ಎಂದು ಸಂಶೋಧನೆ ನಡೆಸುತ್ತದೆ. ಈ ಮೂಲಕ ಚಂದ್ರಯಾನ 3 ಮಿಷನ್ ಮತ್ತೊಂದು ಆವಿಷ್ಕಾರಕ್ಕೆ ನಾಂದಿ ಹಾಡಲಿದೆ ಎಂದು ಗುರುಪ್ರಸಾದ್ ಅವರು ಹೇಳುತ್ತಾರೆ.
ಕಡಿಮೆ ಖರ್ಚಿನಲ್ಲಿ ಭಾರತದ ಸಂಶೋಧನೆ
ಭಾರತದ ಪರಿಕಲ್ಪನೆ ಏನೆಂದರೆ ಕಡಿಮೆ ಖರ್ಚಿನಲ್ಲಿ ಸಂಶೋಧನೆಗಳು ನಡೆಯಬೇಕು ಎಂಬುದು. ಮಂಗಳಯಾನದ ಸಂದರ್ಭದಲ್ಲಿ ಅದು ಸಾಬೀತಾಗಿದೆ. ಕೆಲವರು ನಾವು ಬೇರೆ ದೇಶಗಳ ಸಂಸ್ಥೆಗಳಷ್ಟು ಮುಂದುವರಿದಿಲ್ಲ ಎಂದು ಹೇಳುತ್ತಾರೆ. ಅದರೆ, ಭಾರತ ಕಡಿಮೆ ವೆಚ್ಚದಲ್ಲೂ ಗಮನಾರ್ಹ ಸಾಧನೆ ಮಾಡಬಹುದು ಎಂಬುದನ್ನು ನಿರೂಪಿಸಿದೆ.
ಇದನ್ನೂ ಓದಿ :Chandrayaan 3: ಚಂದ್ರನ ಕೂಗಳತೆ ದೂರದಿಂದ ಸೆರೆಸಿಕ್ಕವು ಫೋಟೊಗಳು; ಇತಿಹಾಸಕ್ಕೆ ಬಾಕಿ ಇವೆ ಕೆಲವೇ ಗಂಟೆಗಳು
ಇದು ಸ್ಪರ್ಧೆಯಲ್ಲ
ಬಾಹ್ಯಾಕಾಶ ಸಂಶೋಧನೆ ಸ್ಪರ್ಧೆಯಲ್ಲ. ಯಾಕೆಂದರೆ ರಷ್ಯಾ ಇತ್ತೀಚೆಗೆ ಕಳುಹಿಸಿದ ಲೂನಾ 25 ವಿಫಲಗೊಂಡಿದೆ. ಅಂದರೆ ಅವರು ಅದಕ್ಕಿಂತ ಹಿಂದೆ 24 ನೌಕೆಗಳನ್ನು ಕಳುಹಿಸಿದ್ದಾರೆ ಎಂದರ್ಥ. ಅಷ್ಟೊಂದು ಅನುಭವ ಅವರಿಗೆ ಇದ್ದು ವೈಫಲ್ಯ ಕಂಡಿದ್ದಾರೆ. ಇಲ್ಲಿನ ಪಾಠ ಏನೆಂದರೆ ಅಂತರಿಕ್ಷದಲ್ಲಿ ಕಾರ್ಯನಿರ್ಹಿಸುವುದು ಸುಲಭವಲ್ಲ. ಹೀಗಿದ್ದಾಗಿಯೂ ನಮಗೆ ಲಭ್ಯವಿರುವ ಸಂಪನ್ಮೂಲ ಬಳಸಿಕೊಂಡಿರುವ ಭಾರತದ ಯಶಸ್ಸು ಶ್ಲಾಘನೀಯ.
ಸಾಫ್ಟ್ ಲ್ಯಾಂಡ್ ಆಗುವ ಪ್ರಯತ್ನ ಏನು?
ಇಳಿಯುವ ಕೋಶ ಅಂದರೆ ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ಮೇಲೆ ನಿಧಾನವಾಗಿ ಇಳಿಸುವುದೇ ಸಾಫ್ಟ್ ಲ್ಯಾಂಡಿಂಗ್. ಜೋರಾಗಿ ಅಪ್ಪಳಿಸಿದರೆ ಅಥವಾ ಅಡಚಣೆಯಾದರೆ ಅದನ್ನು ಹಾರ್ಡ್ ಲ್ಯಾಂಡಿಂಗ್ ಅಥವಾ ಕ್ರ್ಯಾಶ್ ಲ್ಯಾಂಡಿಂಗ್ ಎನ್ನುತ್ತಾರೆ. ಅದಕ್ಕಾಗಿಯೇ ಚಂದ್ರಯಾನ 2ರ ಹಾರ್ಡ್ ಲ್ಯಾಂಡಿಂಗ್ ಬಗ್ಗೆ ತಿಂಗಳಾನುಗಟ್ಟಲೆ ಅಧ್ಯಯನ ಮಾಡಿ ಕಂಡುಕೊಂಡ ಸತ್ಯಗಳ ಪ್ರಕಾರ ಈಗ ಲ್ಯಾಂಡರ್ನಲ್ಲಿ ಸುಧಾರಣೆ ಮಾಡಲಾಗಿದೆ. ಈ ಬಾರಿ ಸಂವೇದಕಗಳನ್ನು ಇನ್ನಷ್ಟು ಹೆಚ್ಚು ಮಾಡಲಾಗಿದೆ. ಇಳಿಯುವ ಪ್ರದೇಶವನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಲಾಗಿದೆ ಇಳಿಯುವ ಜಾಗವನ್ನು ದಕ್ಷಿಣ ಧ್ರುವ ಎಂದು ಕರೆಯುತ್ತಾರೆ. ದಕ್ಷಿಣ ಧ್ರುವ ಪ್ರದೇಶ ಅಂದರೆ 69 ಡಿಗ್ರಿ ಅಕ್ಷಾಂಶದಲ್ಲಿ (69 degree South latitude) ಲ್ಯಾಂಡ್ ಆಗಲಿದೆ ಎಂದರ್ಥ ಎಂದು ಗುರುಪ್ರಸಾದ್ ವಿವರಿಸಿದ್ದಾರೆ.