ನಿಮ್ಮ ಮೊಬೈಲ್ ಏನಾದರೂ ಕಳೆದು ಹೋದರೆ, ಸಾಕಷ್ಟು ತೊಂದರೆಯನ್ನು ಎದುರಿಸುತ್ತೀರಿ. ನಿಮ್ಮೆಲ್ಲ ಮಾಹಿತಿಯ ಭಂಡಾರವೇ ಅದರಲ್ಲಿ ಇರುತ್ತದೆ. ಮೊಬೈಲ್ ಕದ್ದವರು ಆ ಮಾಹಿತಿಯನ್ನು ದುರುಪಯೋಗಪಡಿಸಿಕೊಳ್ಳಬಹುದು. ನಿಮ್ಮ ಬ್ಯಾಂಕ್ ಖಾತೆಯ ಮಾಹಿತಿಯೇನಾದರೂ ಅವರ ಕೈಗೆ ಸಿಕ್ಕರೆ, ನಷ್ಟದ ಪ್ರಮಾಣ ಊಹೆಗೂ ಮೀರಿದ್ದಾಗಬಹುದು. ಆದರೆ, ಕಳೆದು ಹೋದ ಮೊಬೈಲ್ ಅನ್ನು ಹುಡುಕುವುದು ತೀರಾ ದೊಡ್ಡ ಕೆಲಸವೇನಲ್ಲ ಈಗ. ಜಿಪಿಎಸ್ ಲೊಕೇಷನ್, ಸಿಮ್ ಕಾರ್ಡ್ ಮತ್ತು ಇಂಟರ್ನೆಟ್ ಅಕ್ಸೆಸ್ ಇಲ್ಲದೆಯೂ ನೀವು ಫೋನ್ ಪತ್ತೆ ಹಚ್ಚಬಹುದು. ಹೇಗೆಂದರೆ, ಫೋನ್‌ನಲ್ಲಿರುವ ಐಎಂಇಐ ನಂಬರ್ ( IMEI Number) ಬಳಸಿಕೊಂಡು, ಕಳೆದು ಹೋಗಿರುವ ನಿಮ್ಮ ಮೊಬೈಲ್ ಕಾರ್ಯನಿರ್ವಹಿಸದಂತೆ ಮಾಡಬಹುದು.
ಏನಿದು ಐಎಂಇಐ ನಂಬರ್?
ಪ್ರತಿ ಮೊಬೈಲ್ 15 ಅಂಕಿಯುಳ್ಳ ವಿಶಿಷ್ಟ ಗುರುತಿನ ನಂಬರ್ ಹೊಂದಿರುತ್ತವೆ. ಈ ಸಂಖ್ಯೆಯನ್ನೇ ಇಂಟರ್‌ನ್ಯಾಷನಲ್ ಮೊಬೈಲ್ ಇಕ್ವಿಪ್‌ಮೆಂಟ್ ಐಡೆಂಟಿಟಿ(IMEI) ಎಂದು ಕರೆಯಲಾಗುತ್ತದೆ. ಈ ಸಂಖ್ಯೆಯು ಪ್ರತಿ ಮೊಬೈಲ್‌ನ ವಿಶಿಷ್ಟ ಗುರುತಿನ ರೀತಿಯಲ್ಲಿ ಕೆಲಸ ಮಾಡುತ್ತದೆ ಮತ್ತು ಅದನ್ನು ಬದಲಿಸಲು ಸಾಧ್ಯವಿಲ್ಲ. ಈ ನಂಬರ್ ಅನ್ನೇ ಬಳಸಿಕೊಂಡು ನೀವು ಕಳೆದು ಹೋಗಿರುವ ಫೋನ್ ಟ್ರ್ಯಾಕ್ ಮಾಡಬಹುದು. ಹಾಗಾಗಿ, ನಿಮ್ಮ ಫೋನ್‌ನ ಐಎಂಇಐ ಸಂಖ್ಯೆಯನ್ನು ಬರಿದಿಟ್ಟುಕೊಳ್ಳುವುದು ಇಲ್ಲವೇ ನೆನಪಿಟ್ಟುಕೊಳ್ಳುವುದು ಅತ್ಯಗತ್ಯವಾಗಿರುತ್ತದೆ.
ಐಎಂಇಐ ಬಳಸಿಕೊಂಡು ಫೋನ್ ಹುಡುಕುವುದು ಹೇಗೆ?
ಮೊದಲಿಗೆ CEIR(https://ceir.gov.in/Home/index.jsp#) ವೆಬ್‌ಸೈಟ್‌ಗೆ ಹೋಗಿ. ಸದ್ಯಕ್ಕೆ ಈ ವೆಬ್‌ಸೈಟ್‌ನಲ್ಲಿ ದಿಲ್ಲಿ, ಮಹಾರಾಷ್ಟ್ರ, ಕರ್ನಾಟಕ ರಾಜ್ಯಗಳು ಮಾತ್ರ ತಮ್ಮ ಸೇವೆಗಳನ್ನು ಒದಗಿಸುತ್ತಿವೆ.
ಬಳಿಕ, ಕಳೆದು ಹೋಗಿರುವ ಮೊಬೈಲ್‌ನ ಎಲ್ಲ ಅಗತ್ಯ ಮಾಹಿತಿಯನ್ನು ದಾಖಲಿಸಿ. ಅಂದರೆ ಮೊಬೈಲ್ ಬ್ರ್ಯಾಂಡ್, ಮಾಡೆಲ್, ಕಳೆದು ಹೋದ ಜಾಗ, ಖರೀದಿಯ ರಶೀದಿ ಇತ್ಯಾದಿ ಮಾಹಿತಿಯನ್ನು ಕೇಳಿದ ಹಾಗೆ ಕೊಡಿ.
ಇಷ್ಟಾದ ಬಳಿಕ, ಪರ್ಯಾಯ ನಂಬರ್ ಸಂಖ್ಯೆಯನ್ನು ಕೇಳುತ್ತದೆ. ಆಗ ನಂಬರ್ ದಾಖಲಿಸಿ ಮತ್ತು Get OTP ಮೇಲೆ ಕ್ಲಿಕ್ ಮಾಡಿ.
ಕಳೆದು ಹೋಗಿರುವ ಮೊಬೈಲ್ ಲೊಕೇಷನ್ ಪತ್ತೆ ಹಚ್ಚುವ ಕ್ರಿಯೆ ಪೂರ್ಣಗೊಳ್ಳಲು ನೀವು ಅಂತಿಮವಾಗಿ, ಪರ್ಯಾಯ ನಂಬರ್‌ಗೆ ಬರುವ OTP ಅನ್ನು ನಮೂದಿಸಿ. ಅಂತಿಮವಾಗಿ ಸಬ್‌ಮಿಟ್ ಮಾಡಿ.
ಬಳಿಕ, ನಿಮಗೆ ರಿಕ್ವೆಸ್ಟ್ ಐಡಿ ನಂಬರ್ ನೀಡಲಾಗುತ್ತದೆ. ಈ ಐಡಿಯನ್ನು ನೀವು ನಿಮ್ಮ ಐಎಂಇಐ ನಂಬರ್ ಮತ್ತು ಫೋನ್ ಅನ್‌ಬ್ಲಾಕ್ ಮಾಡಲು ಬಳಸಬಹುದು.
ಮತ್ತೇನು ಮಾಡಬಹುದು?
ಕಳೆದು ಹೋಗಿರುವ ಫೋನ್‌ನ ಹೆಚ್ಚಿನ ದುರುಪಯೋಗವನ್ನು ತಡೆಯಲು ಆ ಮೊಬೈಲ್ ಅನ್ನು ಬ್ಲಾಕ್ ಮಾಡಲಾಗುತ್ತದೆ. ಈ ಕುರಿತು ನೆಟ್ವರ್ಕ್ ಆಪರೇಟರ್‌ಗೆ ನೋಟಿಫೈ ಮಾಡಲಾಗುತ್ತದೆ. ಜತೆಗೆ, ಕಳೆದು ಹೋಗಿರುವ ಮೊಬೈಲ್‌ನ ಐಎಂಇಐ ನಂಬರ್ ಅನ್ನು ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ. ಜತೆಗೆ, ಟೆಲಿಕಾಂ ಆಪರೇಟರ್ ಕಂಪನಿಗಳಿಗೆ ಸಿಮ್ ಕಾರ್ಡ್ ನಿಷ್ಕ್ರಿಯಗೊಳಿಸುವಂತೆಯೂ ಮನವಿ ಮಾಡಿಕೊಳ್ಳಬಹುದು.
ಇದನ್ನೂ ಓದಿ: Samsung no. 1: ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್‌ಗೆ ಮತ್ತೆ ಅಗ್ರ ಸ್ಥಾನ: ಸಮೀಕ್ಷೆ
ಇದೇ ಸಿಇಐಆರ್ ವೆಬ್‌ಸೈಟ್ ಬಳಸಿಕೊಂಡು, ಕಳೆದು ಹೋದ ಫೋನ್ ಸ್ಟೇಟಸ್ ಕೂಡ ಚೆಕ್ ಮಾಡಬಹುದು. ಜತೆಗೆ, ಪೊಲೀಸ್ ತನಿಖೆಯ ಮಾಹಿತಿಯೂ ದೊರೆಯುತ್ತದೆ. ಹಾಗೆಯೇ, ಕಳೆದು ಹೋದ ಫೋನ್ ಸಿಕ್ಕ ಮೇಲೆ, ಅದನ್ನು ಅನ್‌ಬ್ಲಾಕ್ ಕೂಡ ಮಾಡಬಹುದು.