ನವದೆಹಲಿ: ಜನಪ್ರಿಯ ವಿಡಿಯೋ ಸ್ಟ್ರೀಮಿಂಗ್ (Video Streaming) ವೇದಿಕೆಯಾಗಿರುವ ಯುಟ್ಯೂಬ್ (YouTube) ಹೊಸ ವಿಡಿಯೋ ಎಡಿಟಿಂಗ್ ಆ್ಯಪ್ (Editing App) ಯುಟ್ಯೂಬ್ ಕ್ರಿಯೇಟ್ (YouTube Create) ಘೋಷಿಸಿದೆ. ಈ ಮೂಲಕ ಬಳಕೆದಾರರಿಗೆ ವಿಡಿಯೋ ಕ್ರಿಯೇಟ್ ಮತ್ತು ಷೇರ್ ಮಾಡಲು ಅನುಮತಿಸಲಿದೆ. ಗುರುವಾರ ನಡೆದ ಮೇಡ್ ಆನ್ ಯುಟ್ಯೂಬ್ ಇವೆಂಟ್ನಲ್ಲಿ ಈ ಹೊಸ ಆ್ಯಪ್ ಕುರಿತು ಘೋಷಣೆ ಮಾಡಲಾಗಿದೆ. ಸದ್ಯ ಈ ಆ್ಯಪ್ ಬೀಟಾ ವರ್ಷನ್ನಲ್ಲಿದ್ದು, ಭಾರತ, ಅಮೆರಿಕ, ಜಮರ್ಮನಿ, ಫ್ರಾನ್ಸ್, ಇಂಗ್ಲೆಂಡ್, ಇಂಡೋನೇಷ್ಯಾ, ಕೋರಿಯಾ, ಸಿಂಗಾಪುರ್ ಮಾರುಕಗಳಲ್ಲಿ ಲಭ್ಯವಾಗಲಿದೆ. 2024ರಲ್ಲಿ ಐಒಎಸ್ಗೆ ಅಪ್ಡೇಟ್ ದೊರೆಯಲಿದೆ.
ವಿಡಿಯೋಗಳ ಉತ್ಪಾದನಾ ಪ್ರಕ್ರಿಯೆಯು ಕಷ್ಟಕರವಾಗಿರುತ್ತದೆ ಎಂದು ನಮಗೆ ತಿಳಿದಿದೆ. ಇದರಿಂದಾಗಿ ಮೊದಲ ಬಾರಿಗೆ ವಿಡಿಯೋ ಮಾಡುವವರು ತಮ್ಮ ಮೊದಲ ವೀಡಿಯೊವನ್ನು ಅಪ್ಲೋಡ್ ಮಾಡುವುದಕ್ಕೆ ತುಂಬ ಕಷ್ಟಪಡುತ್ತಾರೆ. ಈ ಪ್ರಕ್ರಿಯೆಯನ್ನು ಸರಳೀಕರಿಸಲು ಮತ್ತು ಯುಟ್ಯೂಬ್ನಲ್ಲಿ ವಿಡಿಯೋಗಳನ್ನು ರಚಿಸಲು ಮತ್ತು ಹಂಚಿಕೊಳ್ಳಲು ಅನುಮತಿಸಲು ನಾವು ಯುಟ್ಯೂಬ್ ಕ್ರಿಯೇಟ್ ಎಂಬ ಹೊಸ ಮೊಬೈಲ್ ಅಪ್ಲಿಕೇಷನ್ ಆರಂಭಿಸುತ್ತಿದ್ದೇವೆ ಎಂದು ಕಂಪನಿಯು ಮೇಡ್ ಆನ್ ಯುಟ್ಯೂಬ್ ಇವೆಂಟ್ನಲ್ಲಿ ಹೇಳಿದೆ.
ಯೂಟ್ಯೂಬ್ ಕ್ರಿಯೇಟ್ ಎನ್ನುವುದು ಕಿರುಚಿತ್ರಗಳು ಮತ್ತು ದೀರ್ಘವಾದ ವೀಡಿಯೊಗಳೆರಡಕ್ಕೂ ವಿಡಿಯೋ ನಿರ್ಮಾಣವನ್ನು ಸರಳ ಮತ್ತು ಸುಲಭ ಮಾಡಲು ವಿನ್ಯಾಸಗೊಳಿಸಿದ ಉಚಿತ ಅಪ್ಲಿಕೇಶನ್ ಎಂದು ಕಂಪನಿಯು ಹೇಳಿದೆ. ಆ ಆ್ಯಪ್ ಸಹಾಯದಿಂದ ವಿಡಿಯೋ ಕ್ರಿಯೇಟರ್ಸ್, ಇತರ ಕೆಲಗಳ ಮೇಲೆ ಹೆಚ್ಚು ಗಮನವನ್ನು ಕೇಂದ್ರೀಕರಿಸುವ ಬದಲು ತಮ್ಮ ಸೃಜನಾತ್ಮಕವಾಗಿ ರೂಪಿಸಲು ನೆರವು ಸಾಧ್ಯವಾಗುತ್ತದೆ.
ಈ ಸುದ್ದಿಯನ್ನು ಓದಿ: YouTube New Feature: ನಿಮ್ಮಿಷ್ಟದ ಹಾಡು ಗುನುಗಿದ್ರೂ ಸಾಕು ಯುಟ್ಯೂಬ್ ಆ ಹಾಡನ್ನು ಹೆಕ್ಕಿ ತೆಗೆಯುತ್ತದೆ!
ಹೊಸ ಜನರೇಟಿವ್ ಕೃತಕ ಬುದ್ಧಿಮತ್ತೆ ಚಾಲಿತ ಅಪ್ಲಿಕೇಶನ್ ನಿಖರವಾದ ಎಡಿಟಿಂಗ್ ಟ್ರಿಮ್ಮಿಂಗ್, ಸ್ವಯಂಚಾಲಿತ ಶೀರ್ಷಿಕೆ, ವಾಯ್ಸ್ಓವರ್ ಮತ್ತು ಪರಿವರ್ತನೆಗಳಂತಹ ಫೀಚರ್ಗಳನ್ನು ಒಳಗೊಂಡಿರುತ್ತದೆ. ಟಿಕ್ಟಾಕ್ನಂತೆಯೇ ಬೀಟ್-ಮ್ಯಾಚಿಂಗ್ ತಂತ್ರಜ್ಞಾನದೊಂದಿಗೆ ರಾಯಲ್ಟಿ-ಮುಕ್ತ ಸಂಗೀತದ ಶ್ರೇಣಿಯನ್ನು ಆಯ್ಕೆ ಮಾಡಲು ಅಪ್ಲಿಕೇಶನ್ ಬಳಕೆದಾರರಿಗೆ ಅವಕಾಶ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಸುಮಾರು ಮೂರು ಸಾವಿರ ಜನರಿಂದ ಫೀಡ್ಬ್ಯಾಕ್ ಪಡೆದುಕೊಂಡ ಬಳಿಕ ಈ ಹೊಸ ಆ್ಯಪ್ ರೂಪಿಸಲಾಗಿದೆ. ಅಲ್ಲದೇ, ಮುಂದಿನ ದಿನಗಳಲ್ಲಿ ಈ ಆ್ಯಪ್ಗೆ ಇನ್ನಷ್ಟು ಹೊಸ ಫೀಚರ್ಗಳು ಸೇರಲಿವೆ. ಬಳಕೆದಾರರು ಈ ಆ್ಯಪ್ ಬಳಸಿಕೊಂಡು ಎಐ ಸೃಜಿತ ಬ್ಯಾಕ್ಗ್ರೌಂಡ್ ಕೂಡ ಬಳಸಿಕೊಳ್ಳಬಹುದು.