Site icon Vistara News

YouTube New Feature: ನಿಮ್ಮಿಷ್ಟದ ಹಾಡು ಗುನುಗಿದ್ರೂ ಸಾಕು ಯುಟ್ಯೂಬ್ ಆ ಹಾಡನ್ನು ಹೆಕ್ಕಿ ತೆಗೆಯುತ್ತದೆ!

Youtube Channels Bans

ನವದೆಹಲಿ: ನಿಮಗೂ ಹೀಗೆ ಆಗಿರುತ್ತದೆ… ಬೆಳಗ್ಗೆಯಿಂದ ತಲೆಯಲ್ಲಿ ಒಂದೊಳ್ಳೆ ಹಾಡು (Song) ಸುಳಿದಾಡುತ್ತಿರುತ್ತದೆ. ಆದರೆ, ಹಾಡಿನ ಸಾಹಿತ್ಯ ನೆನಪಿಗೆ ಬರುವುದಿಲ್ಲ. ಟ್ಯೂನ್‌ ಮಾತ್ರ ನಾಲಿಗೆಯ ಮೇಲೆ ಸುಳಿಯುತ್ತಿರುತ್ತದೆ. ಇಂಥ ಸಂದರ್ಭದಲ್ಲಿ ಯುಟ್ಯೂಬ್(YouTube) ನಿಮ್ಮ ನೆರವಿಗೆ ಬರಲಿದೆ. ಹೌದು, ಯುಟ್ಯೂಬ್ ಹೊಸ ಫೀಚರ್ (YouTube New Feature) ಪರಿಚಯಿಸುತ್ತಿದ್ದು, ನಿಮಗೆ ಗೊತ್ತಿರುವ ಹಾಡನ್ನು ಸುಮ್ಮನೆ ಗುನುಗಿದರೂ (Song Humming) ಸಾಕು, ಆ ಹಾಡು ಯಾವುದು ಎಂಬುದನ್ನು ಪತ್ತೆ ಹಚ್ಚಿ, ನಿಮಗೆ ಶೋಧಿಸಿ ನೀಡುತ್ತದೆ. ಅಂದ ಹಾಗೆ, ಈ ಫೀಚರ್ ಈಗಾಗಲೇ ಆ್ಯಂಡ್ರಾಯ್ಡ್ ಸಾಧನಗಳಲ್ಲಿ ಚಾಲ್ತಿಯಲ್ಲಿದ್ದು, ಅಂಥದ್ದನ್ನೇ ಈಗ ಗೂಗಲ್ ಯುಟ್ಯೂಬ್‌ಗೂ ತರುತ್ತಿದೆ.

ಪ್ರಸ್ತುತ ಪ್ಲೇ ಆಗುತ್ತಿರುವ ಹಾಡನ್ನು ಗುನುಗುವ ಅಥವಾ ರೆಕಾರ್ಡ್ ಮಾಡುವ ಮೂಲಕ ಜನರು ಯೂಟ್ಯೂಬ್‌ನಲ್ಲಿ ಹಾಡನ್ನು ಹುಡುಕುವ ಸಾಮರ್ಥ್ಯವನ್ನು ಯುಟ್ಯೂಬ್(YouTube) ಪರೀಕ್ಷಿಸುತ್ತಿದೆ ಎಂದು ಗೂಗಲ್‌ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸದ್ಯಕ್ಕೆ ಈ ಫೀಚರ್ ಎಲ್ಲ ಬಳಕೆದಾರರಿಗೂ ಲಭ್ಯವಿಲ್ಲ. ಬಹಳ ಚಿಕ್ಕ ಗುಂಪಿನ ಬಳಕೆದಾರರಿಗೆ ಈ ಫೀಚರ್ ಲಭ್ಯವಿದ್ದು, ಪರೀಕ್ಷೆ ಮಾಡಲಾಗುತ್ತಿದೆ. ಆಂಡ್ರಾಯ್ಡ್‌ ಸಾಧನ ಯುಟ್ಯೂಬ್‌ ಬಳಕೆದಾರರಿಗೆ ಮಾತ್ರವೇ ಈ ಫೀಚರ್ ಬಳಕೆಗೆ ಸಿಗುತ್ತಿದೆ. ಮತ್ತೊಂದು ಗಮನಿಸಬೇಕಾದ ಸಂಗತಿ ಏನೆಂದರೆ, ಐಒಎಸ್(iOS) ಬಳಕೆದಾರರಿಗೆ ಲಭ್ಯವಿಲ್ಲ. ಅಲ್ಲದೇ, ಎಲ್ಲ ಬಳಕೆದಾರರಿಗೂ ಈ ಫೀಚರ್ ಯಾವಾಗ ದೊರೆಯತ್ತದೆ ಎಂಬ ಖಚಿತ ಮಾಹಿತಿ ಇಲ್ಲ.

ಈ ಫೀಚರ್ ಬಳಸಿಕೊಳ್ಳುವುದಕ್ಕಾಗಿ ಬಳಕೆದಾರರು, ಹೊಸ ಹಾಡು ಹುಡುಕಲು ಯುಟ್ಯೂಬ್‌ ವಾಯ್ಸ್ ಸರ್ಚ್ ಟಾಗಲ್ ಮಾಡಬೇಕು. ನೀವು ಹುಡುಕುತ್ತಿರುವ ಹಾಡನ್ನು ಹಾಡಬೇಕು ಇಲ್ಲವೇ ಗುನುಗಬೇಕು ಮತ್ತು ಕನಿಷ್ಠ ಮೂರು ಸೆಕೆಂಡ್‌ವರೆಗೂ ಅಥವಾ ಹಾಡು ಗುರುತಿಸುವವರೆಗೂ ಹೋಲ್ಡ್ ಮಾಡಬೇಕಾಗುತ್ತದೆ. ಆಗ ಸಾಂಗ್ ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ.

ಈ ಸುದ್ದಿಯನ್ನೂ ಓದಿ: YouTube Channels: ದೇಶ ವಿರೋಧಿ ಚಟುವಟಿಕೆಗಳಿಗೆ ಬ್ರೇಕ್; 8 ಯುಟ್ಯೂಬ್‌ ಚಾನೆಲ್‌ ನಿಷೇಧಿಸಿದ ಕೇಂದ್ರ ಸರ್ಕಾರ

2020ರಲ್ಲಿ ಗೂಗಲ್ ಕಂಪನಿಯು, ತನ್ನ ಗೂಗಲ್ ಅಸಿಸ್ಟೆಂಟ್(Google Assistant) ಮತ್ತು ಗೂಗಲ್ ಸರ್ಚ್ ಆ್ಯಪ್‍ (Google Search App)ಗೆ ಪರಿಚಯಿಸಿತ್ತು. ‌ಬಳಕೆದಾರರು ಹಾಡನ್ನು ಗುನುಗಿದರೂ ಆ ಹಾಡನ್ನು ಸರ್ಚ್ ಮಾಡಿ ಬಳಕೆದಾರರಿಗೆ ಒದಗಿಸಲಾಗುತ್ತಿದೆ. ಬಳಕೆದಾರರು ಒದಗಿಸುವ ಮಾಹಿತಿ ಮತ್ತು ಗುನುಗುವ ಹಾಡನ್ನು ಪತ್ತೆ ಹಚ್ಚಲು ಗೂಗಲ್ ಮಷಿನ್ ಲರ್ನಿಂಗ್ ತಂತ್ರಜ್ಞಾನವನ್ನು ಬಳಸಿಕೊಂಡು ಪತ್ತೆ ಹಚ್ಚುತ್ತದೆ.

ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version