Site icon Vistara News

ವಿಶ್ವದ ವೇಗದ ಪಯಣಿಗರು: ಐದೇ ದಿನದಲ್ಲಿ 50 ರಾಜ್ಯ ಸುತ್ತಿ ಬಂದವರು!

travel

ಇದೊಂದು ವಿಶಿಷ್ಟ ವಿಶ್ವದಾಖಲೆ. ನಂಬಲು ಕಷ್ಟವಾದರೂ ನಂಬಲೇಬೇಕು ಎಂಬುದೂ ಅಷ್ಟೇ ಸತ್ಯ. ನಾವು, ಸೈಕಲಿನಲ್ಲಿ ಹೊರಟು ದಿನಗಟ್ಟಲೆ ಸಾವಿರಗಟ್ಟಲೆ ಕಿಮೀ ದೂರ ಪ್ರವಾಸ ಮಾಡಿ ಬರುವವರನ್ನು ನೋಡಿದ್ದೇವೆ. ಕಾರಿನಲ್ಲೇ ಮಲಗಿ ಎದ್ದು, ವರ್ಷವಿಡಿ ಸುತ್ತುತ್ತಲೇ ಇರುವ ಪ್ರವಾಸಪ್ರಿಯರನ್ನೂ ನೋಡಿದ್ದೇವೆ. ದುಡ್ಡೇ ಖರ್ಚು ಮಾಡದೆ, ಹಿಚ್‌ ಹೈಕ್‌ ಮಾಡಿಕೊಂಡು ಪ್ರಪಂಚ ಸುತ್ತುವ ಮಂದಿಯೂ ಇದ್ದಾರೆ. ನಿರ್ದಿಷ್ಟ ಜಾಗದಲ್ಲಿ ಬೇರೂರದೆ, ತಿರುಗಾಡಿಕೊಂಡೇ ಜೀವನ ಮಾಡುವವರನ್ನೂ ನೋಡಿದ್ದೇವೆ. ಆದರೆ, ಇದೊಂದು ಸ್ವಲ್ಪ ಡಿಫರೆಂಟ್‌ ಕಥೆ. ಇಲ್ಲಿ ಮೂರು ಮಂದಿ ಗೆಳೆಯರು ಅತಿ ಕಡಿಮೆ ಸಮಯದಲ್ಲಿ ೫೦ ರಾಜ್ಯಗಳನ್ನು ಸುತ್ತಿ ಬಂದಿದ್ದಾರೆ. ೫೦ ರಾಜ್ಯಗಳನ್ನು ಸುತ್ತಲು ಇವರು ತೆಗೆದುಕೊಂಡ ಸಮಯ ಕೇವಲ ೫ ದಿನ ೧೩ ಗಂಟೆ ಹಾಗೂ ೧೦ ನಿಮಿಷಗಳು!

ಐದುವರೆ ದಿನಗಳಲ್ಲಿ ೫೦ ರಾಜ್ಯವಾ? ಇದು ಹೇಗೆ ಸಾಧ್ಯ ಎಂದು ಪ್ರಶ್ನೆ ಮೂಡುವುದು ಸಹಜ. ಆದರೂ, ಈ ಮೂವರು ಐದೇ ದಿನಗಳಲ್ಲಿ ೫೦ ರಾಜ್ಯ ಸುತ್ತಿದ್ದು ಮಾತ್ರ ಸತ್ಯ. ಅದಕ್ಕೇ ಈಗದು ವಿಶ್ವದಾಖಲೆಯಾಗಿದೆ. ಯುಎಸ್‌ನ ಎಲ್ಲಾ ೫೦ ರಾಜ್ಯಗಳನ್ನು ಅತೀ ಕಡಿಮೆ ಸಮಯದಲ್ಲಿ ಸುತ್ತಿದ ಮಂದಿ ಎಂಬ ಹೆಸರೀಗ ಅವರಿಗೇ ಲಭಿಸಿದೆ. ಆಸ್ಟಿನ್‌ ನಗರದ ಪೀಟರ್‌ ಮೆಕ್‌ಕೊನ್ವಿಲ್ಲೆ ಅವರು ತನ್ನಿಬ್ಬರು ಗೆಳೆಯರಾದ ಆಸ್ಟಿನ್‌ನ ಪಾವೆಲ್‌ (ಪಾಶಾ) ಕ್ರೆಚೆತೋವ್‌ ಹಾಗೂ ಮಿನ್ನೆಪೊಲಿಸ್‌ನ ಅಬ್ದುಲ್ಲಾಹಿ ಸಾಲ್ಹಾ ಅವರನ್ನು ಸೇರಿಸಿಕೊಂಡು ಈ ಭರ್ಜರಿ ಪ್ರವಾಸವನ್ನು ಮಾಡಿ ಮುಗಿಸಿ ಮರಳಿದ್ದಾರೆ!

ಅಂದಹಾಗೆ ಪೀಟರ್ ಅವರಿಗೆ ಇಂಥದ್ದೊಂದು ಪಯಣದ ಯೋಚನೆ ಬರಲು ಕಾರಣ ಥಾಮಸ್‌ ಕ್ಯಾನನ್‌ ಹಾಗೂ ಜಸ್ಟಿನ್‌ ಮೋರಿಸ್‌! ಈ ಹಿಂದೆ ಆ ಇಬ್ಬರು ೫೦ ರಾಜ್ಯಗಳನ್ನು ಐದು ದಿನಗಳು ೧೬ ಗಂಟೆ ಹಾಗೂ ೨೦ ನಿಮಿಷಗಳಲ್ಲಿ ಪ್ರಯಾಣಿಸಿದ್ದರು.ವರಿಬ್ಬರ ಪಯಣವನ್ನೇ ಸ್ಪೂರ್ತಿಯಾಗಿಸಿಕೊಂಡು ಆ ದಾಖಲೆ ಮುರಿಯಬೇಕೆಂದೇ, ಅವರದೇ ಹಾದಿಯಲ್ಲಿ  ಅವರದ್ದೇ ಸಿದ್ಧ ಮಾದರಿಯಲ್ಲಿ ಈ ಪ್ರಯಾಣವನ್ನು ಮಾಡಿದ್ದಾರೆ.

ಇದನ್ನೂ ಓದಿ: ಪ್ರವಾಸವೆಂದರೆ ಪ್ರಯಾಸ ಪಡುವ Motion sickness ಮಂದಿಗೊಂದಿಷ್ಟು ಗುಟ್ಟು!

ಆದರೂ, ಐದುವರೆ ದಿನಗಳಲ್ಲಿ ಅವರು ಈ ಪಯಣ ಮಾಡಿದ್ದಾದರೂ ಹೇಗೆ ಎಂಬ ಕುತೂಹಲ ಮೂಡಿದರೆ ಅವರ ಮಾತುಗಳಲ್ಲೇ ಕೇಳಬೇಕು. ಈ ಪಯಣದ ರುವಾರಿ ಮೆಕ್‌ಕೊನ್ವಿಲ್ಲೆ ಹೇಳುವ ಪ್ರಕಾರ, ಈ ಇಡೀ ಐದುವರೆ ದಿನಗಳ ಅನುಭವವನ್ನು ಹೇಗೆ ಹೇಳಬೇಕೆಂದೇ ಅರ್ಥವಾಗುತ್ತಿಲ್ಲ. ಮುಖ್ಯವಾಗಿ ಎಷ್ಟು ಸುಸ್ತಾಗಿದೆ ಎಂದರೆ ವಿವರಿಸಲು ಪದಗಳೇ ಇಲ್ಲ. ಆದರೆ, ಒಂದೇ ಸಲ ಬಹಳಷ್ಟನ್ನು ನೋಡಿದೆವು. ಕಡಿಮೆ ಸಮಯದಲ್ಲಿ ಎಷ್ಟೊಂದು ನೋಡಿದೆವು ಅನಿಸುತ್ತಿದೆ. ಆದರೆ ಜೀವಮಾನ ಮರೆಯದ ಐದು ದಿನಗಳಿವು. ಇದನ್ನು ಬೇರೆ ಯಾವುದರೊಂದಿಗೂ ಹೋಲಿಸಲಾಗದು. ಅದ್ಭುತ ಅನುಭವ ಎಂದಷ್ಟೇ ಹೇಳಬಲ್ಲೆ ಎಂದು ವಿವರಿಸಿದ್ದಾರೆ.

ಈ ಮೂವರ ಪಯಣ ಶುರುವಾಗಿದ್ದು ವೆರ್‌ಮೌಂಟ್‌ನಿಂದ ಕಾರಿನಲ್ಲಿ. ಕೊನೆಯ ಎರಡು ರಾಜ್ಯಗಳಾದ ಅಲಾಸ್ಕಾ ಹಾಗೂ ಹವಾಯ್‌ಗಳಿಗೆ ಮಾತ್ರ ವಿಮಾನದಲ್ಲಿ ಪ್ರಯಾಣ ಮಾಡಿದ್ದು ಬಿಟ್ಟರೆ, ಉಳಿದ ಎಲ್ಲ ೪೮ ರಾಜ್ಯಗಳನ್ನೂ ಕಾರಿನಲ್ಲೇ ಪಯಣಿಸಿ ಪೂರ್ಣಗೊಳಿಸಿದ್ದಾರೆ. ಆದರೂ, ಐದುವರೆ ದಿನಗಳಲ್ಲಿ ಇಷ್ಟು ದೊಡ್ಡ ಪಯಣ ಊಹಿಸುವುದೂ ಕಷ್ಟ ಸಾಧ್ಯವಾಗಿದ್ದು, ಇವರು ಗಂಟೆಗೆ ೧೨೦ ಕಿಮೀ ವೇಗದಲ್ಲಿ ಒಟ್ಟು ೭,೨೦೦ ಕಿಮೀ ದೂರವನ್ನು ಐದುವರೆ ದಿನಗಳಲ್ಲಿ ಕ್ರಮಿಸಿದ್ದಾರೆ. ಈ ಇಡೀ ಪಯಣಕ್ಕೆ ೧೨,೦೦೦ ಡಾಲರ್‌ಗಳನ್ನು ಪೆಟ್ರೋಲ್‌, ಊಟ ಹಾಗೂ ವಸತಿಗಾಗಿ ಖರ್ಚು ಮಾಡಿದ್ದಾರೆ. ವಾಷಿಂಗ್ಟನ್‌ನಿಂದ ಅಲಾಸ್ಕಾಕ್ಕೆ ವಿಮಾನದಲ್ಲಿ ಪಯಣಿಸಿ ಅಲ್ಲಿಂದ ಮತ್ತೆ ಹವಾಯ್‌ಗೆ ವಿಮಾನದಲ್ಲಿ ತೆರಳಿ ಈ ಪಯಣಕ್ಕೆ ಅವರು ಮಂಗಳ ಹಾಡಿದ್ದಾರೆ.

ಇದನ್ನೂ ಓದಿ: Travel tips | ಈ 10 ಮಂದಿ ಜೊತೆಗೆ ಪ್ರವಾಸ ಮಾಡಲೇಬಾರದು!

೧೯೯೬ರಲ್ಲಿ ಗಿನ್ನಿಸ್‌ ವಿಶ್ವದಾಖಲೆ, ವೇಗವಾದ ಪ್ರಯಾಣ ವಿಭಾಗವನ್ನೇ ತೆಗೆದು ಹಾಕಿದೆ. ಯಾಕೆಂದರೆ ಜನರು ಈ ವಿಭಾಗದಲ್ಲಿ ಪ್ರಯತ್ನಗಳನ್ನು ಮಾಡುವ ಮೂಲಕ ವೇಗವಾಗಿ ಪ್ರಯಾಣಿಸಿ ದಾಖಲೆ ಮಾಡಲು ತಮ್ಮ ಜೀವವನ್ನೇ ಅಪಾಯಕ್ಕೆ ತಂದೊಡ್ಡಿಕೊಳ್ಳುತ್ತಾರೆ ಎಂಬುದು ಇದಕ್ಕೆ ಕಾರಣವಾಗಿತ್ತು. ಆದರೆ ಮೆಕ್‌ಕೋನ್ವಿಲ್ಲೆ ಹಾಗೂ ಅವನ ಗೆಳೆಯರು ಇದೀಗ ʻಆಲ್‌ ಫಿಫ್ಟಿ ಸ್ಟೇಟ್ಸ್‌ ಕ್ಲಬ್‌ʼನಲ್ಲಿ ವೇಗದ ಪಯಣಿಗರೆಂಬ ವಿಶ್ವದಾಖಲೆ ಹೊಂದಿದ್ದಾರೆ.

Exit mobile version