ಲಡಾಕ್ ಎಂದರೆ ಹಾಗೆಯೇ! ಸಾಹಸಪ್ರಿಯ ಪ್ರವಾಸಿಗರ ಮೈಯಲ್ಲಿ ರೋಮಾಂಚನ. ಕಣ್ಣೆದುರಿಗೆ ಭವ್ಯ ಹಿಮಾಲಯವನ್ನೂ ನೋಡುತ್ತಾ, ನಮಗೇ ನಾವು ಸವಾಲು ಹಾಕುವಂತೆ, ಎಲ್ಲ ಮರೆತು ಬದುಕೆಂದರೆ ಇದೇ ನಿಜ ಎಂಬಷ್ಟು ಆತ್ಮತೃಪ್ತಿ ಕೊಡುವ ಘಳಿಗೆಗಳು ಇಂತಹ ನಾಡಿನಲ್ಲಿ ಬೊಗಸೆ ತುಂಬಾ ಸಿಗುತ್ತದೆ. ಅದಕ್ಕಾಗಿಯೇ, ಪ್ರವಾಸವನ್ನು ನಿಜಾರ್ಥದಲ್ಲಿ ಸವಿಯುವ ಮಂದಿಗೆ ಲಡಾಕ್ ಎಂದರೆ ಸ್ವರ್ಗ.
ಹಿಮಪರ್ವತಗಳಲ್ಲಿ ಚಾರಣ, ಮೈನಡುಗಿಸುವ ಚಳಿಯನ್ನು ಮೆಟ್ಟಿ ನಿಲ್ಲುವ ಕಷ್ಟಸುಖಗಳು, ನೀರ್ಗಲ್ಲ ನದಿಯ ಮೇಲಿನ ನಡಿಗೆ, ಇಲ್ಲಿನ ಬೌದ್ಧವಿಹಾರಗಳ ಶಾಂತಿಯುತ ವಾತಾವರಣ, ದಿನಗಟ್ಟಲೆ ಬೈಕ್ ಏರಿ ಬಿಸಿಲು ಚಳಿಯೆನ್ನದೆ ಪ್ರಯಾಣಿಸುವ ನಮ್ಮನ್ನೇ ನಾವು ಸವಾಲಿಗೆ ಒಡ್ಡಿಕೊಳ್ಳುವಾಗಿನ ಅನುಭವ ಎಂದಿಗೂ ಬೇರೆ ಯಾವುದರಿಂದಲೂ ದಕ್ಕದು ಎಂದು ಈ ಅನುಭವದ ರುಚಿ ಕಂಡವರಷ್ಟೇ ಬಲ್ಲರು. ಲಡಾಕ್ ಎಂಬ ಶೀತ ಮರುಭೂಮಿ, ಹೀಗೆ ಬದುಕಿಗೆ ಬೇಕಾಗುವ ಎಲ್ಲ ಅನುಭವಗಳನ್ನೂ ಧಾರೆಯೆರೆದು ಕೊಡುತ್ತದೆ. ಇಂಥಾ ಲಡಾಕ್‌ನಲ್ಲಿ ಝಂಸ್ಕಾರ್ ಚಳಿಗಾಲದ ಸಾಹಸಕ್ರೀಡಾ ಹಾಗೂ ಪ್ರವಾಸೋದ್ಯಮ ಉತ್ಸವ ನಡೆಯಲಿದೆ ಎಂದರೆ ಕೇಳಬೇಕೇ? ಸಾಹಸಪ್ರಿಯರ ಪಾಲಿಗದು ಹಬ್ಬ.
ಇದೇ ಜನವರಿ ೨೮ರಿಂದ ಫೆಬ್ರವರಿ ೧೫ರವರೆಗೆ ಎರಡನೇ ಝಂಸ್ಕಾರ್ ಸಾಹಸಕ್ರೀಡೆ ಹಾಗೂ ಪ್ರವಾಸೋದ್ಯಮ ಉತ್ಸವ ನಡೆಯಲಿದೆ. ಇಲ್ಲಿ ನಿಮ್ಮನ್ನು ನೀವು ಒರೆಗೆ ಹಚ್ಚಲು ಬೇಕಾದ ಎಲ್ಲ ಬಗೆಯ ಸಾಹಸಕ್ರೀಡೆಗಳೂ ಜೊತೆಯಾಗಿ ಸಿಗಲಿವೆ. ಸ್ಕೀಯಿಂಗ್, ಐಸ್ ಕ್ಲೈಂಬಿಂಗ್, ಹಿಮದಲ್ಲಿ ಯೋಗಾಭ್ಯಾಸ, ಬೈಕಿಂಗ್ ಸೇರಿದಂತೆ ಹತ್ತು ಹಲವು ಬಗೆಯ ಕ್ರೀಡೆಗಳು ಇಲ್ಲಿ ಲಭ್ಯವಾಗಲಿವೆ. ಲಡಾಕ್‌ಗೆ ಈಗಾಗಲೇ ಪ್ರವಾಸ ಮಾಡಿದ ಮಂದಿಗೆ ಅಲ್ಲಿನ ವಿಶೇಷ ಬಗೆಯ ಸಾಂಪ್ರದಾಯಿಕ ಉತ್ಸವಗಳನ್ನು ನೋಡಿ ಕೇಳಿ ತಿಳಿದಿರುತ್ತದೆಯಾದರೂ, ಈ ಉತ್ಸವ ಮಾತ್ರ ಸರ್ಕಾರ ಆಯೋಜಿಸುವುದಾದ್ದರಿಂದ ಸಂಪೂರ್ಣವಾಗಿ ಪ್ರವಾಸಿಗರನ್ನು ಉದ್ದೇಶವಾಗಿಟ್ಟುಕೊಂಡು ಪ್ರವಾಸೋದ್ಯಮ ವಿಸ್ತರಣೆಗಾಗಿ, ಇನ್ನಷ್ಟು ಪ್ರವಾಸಿಗರನ್ನು ಆಕರ್ಷಿಸುವ ಉತ್ಸವವಾಗಿದೆ.
ಇದನ್ನೂ ಓದಿ: Travel Tips | ನೀವು ಅಲೆಮಾರಿಗಳೇ? ಹೊಸ ಬಗೆಯ ಪ್ರವಾಸಕ್ಕೆ 5 ಅಣಿಮುತ್ತುಗಳು!
ಝಂಸ್ಕಾರ್‌ನ ಈ ಉತ್ಸವಕ್ಕೆ ಈಗಾಗಲೇ ಸಾಕಷ್ಟು ಸಿದ್ಧತೆಗಳು ನಡೆದಿದ್ದು ಇದರಲ್ಲಿ ಸಾಕಷ್ಟು ಮಂತ್ರಿ ಮಹೋದಯರೂ ರಾಜಕಾರಣಿಗಳೂ ಭಾಗವಹಿಸಲಿದ್ದಾರೆ. ಈ ಉತ್ಸವದ ಪ್ರಯತ್ನ ಈ ಹಿಂದೆಯೂ ಒಮ್ಮೆ ನಡೆದಿದ್ದು, ಇದು ಅದರ ಎರಡನೇ ಅವತರಣಿಕೆಯಾಗಿದೆ. ಈಗಾಗಲೇ ಈ ಬಗ್ಗೆ ಸಾಕಷ್ಟು ಸಭೆಗಳೂ ನಡೆದಿದ್ದು, ಮುಂಜಾಗರೂಕತಾ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಉತ್ಸವವನ್ನು ಯುವಜನ ಕ್ರೀಡಾ ಹಾಗೂ ಮಾಹಿತಿ ಹಾಗೂ ಪ್ರಸಾರ ಕೇಂದ್ರ ಸಚಿವ ಅನುರಾಗ್ ಠಾಕುರ್ ಉದ್ಘಾಟಿಸುವ ನಿರೀಕ್ಷೆಯಿದೆ ಎನ್ನಲಾಗಿದೆ.
ಪ್ರವಾಸೋದ್ಯಮವನ್ನು ಇನ್ನೂ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಹಾಗೂ ಸ್ಥಳೀಯ ಮಂದಿಗೆ ಈ ನಿಟ್ಟಿನ ಕೆಲಸಗಳಲ್ಲಿ ಇನ್ನೂ ಹೆಚ್ಚಿನ ಅವಕಾಶ ಸಿಗುವಂತಾಗಲು, ಹಿಮಕ್ರೀಡೆಗಳು ಹಾಗೂ ಹಲವು ಬಗೆಯ ಸಾಹಸಕ್ರೀಡೆಗಳಿಗೆ ಸ್ಥಳೀಯ ಮಂದಿಗೇ ಹೆಚ್ಚು ಅವಕಾಶ ನೀಡಲಾಗುತ್ತಿದ್ದು, ಪ್ರವಾಸೋದ್ಯಮದಲ್ಲಿ ತೊಡಗಿಸಿಕೊಂಡಿರುವ ಸ್ಥಳೀಯರಿಗೆ ಇದು ನೆರವಾಗಲಿದೆ.
ಈ ಉತ್ಸವದಲ್ಲಿ ಸಾಹಸಕ್ರೀಡೆಯ ಜೊತೆಗೆ ನಿತ್ಯವೂ ಮನರಂಜನಾ ಕಾರ್ಯಕ್ರಮವೂ ನಡೆಯಲಿದ್ದು, ಇದರ ಹೊರತಾಗಿ ಭಾಗವಹಿಸುವ ಮಂದಿಗೆ ಅನುಕೂಲವಾಗಿರಲೆಂದು ಎಲ್ಲ ರೀತಿಯ ಸೌಲಭ್ಯಗಳ ತಯಾರಿಯೂ ನಡೆದಿದೆ. ವೈದ್ಯಕೀಯ ತುರ್ತು ನೆರವು, ನೀರು ಸರಬರಾಜು, ಉಳಿದುಕೊಳ್ಳುವ ವ್ಯವಸ್ಥೆ, ವ್ಯಾಪಾರಕ್ಕಾಗಿ ವಿವಿಧ ಸ್ಟಾಲ್‌ಗಳು, ಆಹಾರ ಮಳಿಗೆಗಳು ಎಲ್ಲವೂ ಇಲ್ಲಿರಲಿದೆ.
ಇದನ್ನೂ ಓದಿ: Viral Video: ಕೇರಳದಿಂದ ಕಾಶ್ಮೀರದವರೆಗೆ; ಒಮ್ಮೆ ಕ್ವಿಕ್ ಆಗಿ ಪ್ರವಾಸಕ್ಕೆ ಹೋಗಿಬರೋಣ ಬನ್ನಿ!