ದಿನ ಕಳೆದಂತೆ ಪ್ರಪಂಚ ಚಿಕ್ಕದಾಗುತ್ತಾ ಹೋಗಿದೆ. ಕ್ಷಣ ಮಾತ್ರದಲ್ಲಿ ಸುದ್ದಿ ತಿಳಿಯಬಹುದಾದ ಸಮೂಹ ಸಂವಹನಗಳು, ವೇಗವಾಗಿ ತಲುಪಬಹುದಾದ ಸಾರಿಗೆ ಸಂಪರ್ಕಗಳು ಪ್ರಪಂಚವನ್ನು ಚಿಕ್ಕದಾಗಿಸಿವೆ ಎಂಬುದು ನಿಜವಾದರೂ, ರೋಡ್ ಟ್ರಿಪ್‌ಗಳು ಕೊಡುವ ಮಜಾವೇ ಬೇರೆ.
ವಿಮಾನದ ಮೂಲಕ ಹಾರಿಕೊಂಡು ಗಂಟೆಗಳಲ್ಲಿ ಸಾವಿರಾರು ಕಿ.ಮೀ ತಲುಪಬಹುದಾದ ಜಾಗಗಳನ್ನು ಕಷ್ಟಪಟ್ಟು ನಿಧಾನವಾಗಿ ತಲುಪುವುದರಲ್ಲೇ ಮಜಾ ಅನುಭವಿಸುವ ಮಂದಿಯೂ ಇದ್ದಾರೆ. ಅಂಥ ಪ್ರವಾಸದಲ್ಲಿ ಆನಂದ ಕಾಣುವ ಮಂದಿ ಸುತ್ತಿ ಬಳಸಿ, ನಡೆದುಕೊಂಡೋ, ಬೈಕ್ ಮೂಲಕವೋ, ಕಾರಿನಲ್ಲೋ, ರೈಲಿನಲ್ಲೋ, ಬಸ್ಸಿನಲ್ಲೋ ದಿನಗಟ್ಟಲೆ ಪ್ರಯಾಣ ಮಾಡಿ ಸಂತೋಷ ಹೊಂದುತ್ತಾರೆ. ಜೀವನ ಧನ್ಯವೆಂದುಕೊಳ್ಳುತ್ತಾರೆ.
ಇದನ್ನೂ ಓದಿ | Travel tips: ಪ್ರವಾಸ ದುಡ್ಡಿದ್ದವರಿಗೆ ಮಾತ್ರವೇ ಸಾಧ್ಯವೇ?
ಪ್ರವಾಸೀ ಪ್ಯಾಕೇಜ್
ಇದು ಅಂಥದ್ದೇ ಒಂದು ಪ್ರವಾಸ. ಇತ್ತೀಚಿಗಿನ ದಿನಗಳಲ್ಲಿ ಭಾರೀ ಪ್ರಚಾರ ಪಡೆದ ಪ್ರವಾಸೀ ಪ್ಯಾಕೇಜ್ ಇದಾಗಿದೆ! ಒಂದು ಬಸ್ಸು 18 ದೇಶಗಳನ್ನು ದಾಟಿಕೊಂಡು 20,000 ಕಿ.ಮೀ ಕ್ರಮಿಸಿ ಲಂಡನ್ನಿಗೆ ಕರೆದುಕೊಂಡು ಹೋಗಿ ಬಿಟ್ಟರೆ! ಆಹಾ, ಅದಕ್ಕಿಂತ ಚಂದದ, ಅದ್ಭುತ ಪ್ರವಾಸವೊಂದು ಇನ್ನೆಲ್ಲಿ ಸಿಕ್ಕೀತು! ಇದೂ ಅದುವೇ. ಬಸ್ಸೊಂದರಲ್ಲೇ ಭಾರತದಿಂದ ಹೊರಟು 70 ದಿನಗಳಲ್ಲಿ ಲಂಡನ್ ತಲುಪುವ ಮಾರ್ಗವಿದು. ಇಂಥ ಪ್ರವಾಸವೊಂದು ಮುಂದಿನ ವರ್ಷ ಅಂದರೆ 2023 ಎಪ್ರಿಲ್‌ನಲ್ಲಿ ಆರಂಭವಾಗಲಿದೆ.
ಈ ವನ್ ವೇ ಪ್ರವಾಸ ಗೈಡ್‌ಗಳನ್ನೂ, ಸ್ಥಳೀಯ ಪ್ರವಾಸ, ಹೊಟೇಲ್, ವಿಸಾ, ಊಟ ತಿಂಡಿಗಳ ವೆಚ್ಚ ಎಲ್ಲವನ್ನೂ ಒಳಗೊಂಡಿದೆ. ಭಾರತದಿಂದ ಹೊರಡಲಿರುವ ಈ ಬಸ್ಸು ಥಾಯ್ಲೆಂಡ್, ಲಾವೋಸ್, ಮಯನ್ಮಾರ್, ಚೀನಾ, ಕಜಕಿಸ್ತಾನ್, ರಷ್ಯಾ, ಕಿರ್ಗಿಸ್ತಾನ್, ಲತ್ವಿಯಾ, ಉಜ್ಬೇಕಿಸ್ತಾನ್, ಲಿತುವೇನಿಯಾ, ಜರ್ಮನಿ, ಪೋಲೆಂಡ್, ನೆದರ್‌ಲ್ಯಾಂಡ್, ಝೆಕ್ ರಿಪಬ್ಲಿಕ್, ಬೆಲ್ಜಿಯಂ, ಫ್ರಾನ್ಸ್ ದಾಟಿಕೊಂಡು ಲಂಡನ್ ತಲುಪಲಿದೆ.
ಇದನ್ನೂ ಓದಿ | Rain travel: ಮಳೆಯಲಿ ಜೊತೆಯಲಿ ಇಲ್ಲಿಗೆ ಪ್ರವಾಸ ಮಾಡಿ!
ಈ ಇಡೀ ಪ್ರಯಾಣಕ್ಕೆ 15 ಲಕ್ಷ ರುಪಾಯಿಗಳ ವೆಚ್ಚ ತಗುಲಲಿದೆ. ಕೋವಿಡ್ ಕಾರಣದಿಂದ ಈ ಪ್ರವಾಸ ತಡವಾಗಿದ್ದು, ಹಲವು ದೇಶಗಳಲ್ಲಿ ಕೋವಿಡ್ ಕುರಿತು ಇದ್ದ ನಿರ್ಬಂಧಗಳಿಂದಾಗಿಯೇ ಮತ್ತಷ್ಟು ತಡವಾಗಿತ್ತು.
ಬ್ರಿಟಿಷ್ ಕಂಪನಿ ಪ್ರಯಾಣ ಶುರು ಮಾಡಿತ್ತು
1957ರಲ್ಲಿ ಕೋಲ್ಕತ್ತಾ- ಲಂಡನ್ ಬಸ್ ಪ್ರಯಾಣವನ್ನು ಬ್ರಿಟಿಷ್ ಕಂಪನಿಯೊಂದು ಆರಂಭಿಸಿತ್ತು. ಆಗ ಇದರ ವೆಚ್ಚ ಭಾರತದಿಂದ ಲಂಡನ್‌ಗೆ 85 ಪೌಂಡ್ ಹಾಗೂ ಲಂಡನ್ ನಿಂದ ಭಾರತಕ್ಕೆ ಮರಳಿ 65 ಪೌಂಡ್ ತಗುಲಿತ್ತು. ಆಗ ಈ ಬಸ್ ಫ್ರಾನ್ಸ್, ಇಟಲಿ, ಯುಗೋಸ್ಲಾವಿಯಾ, ಬಲ್ಗೇರಿಯಾ, ಟರ್ಕಿ, ಇರಾನ್ ಹಾಗೂ ಪಾಕಿಸ್ತಾನಗಳ ಮೂಲಕ ಭಾರತಕ್ಕೆ ಬಂದಿತ್ತು. ಇದರ ನಂತರ ಸಾಕಷ್ಟು ಮಂದಿ ಇಂಥದ್ದೇ ಪ್ರವಾಸದಿಂದ ಸ್ಪೂರ್ತಿಗೊಂಡು ಕಾರುಗಳಲ್ಲಿ, ಹಾಗೂ ಇತರ ಸಾರಿಗೆಗಳ ಮೂಲಕ ರಸ್ತೆ ಮಾರ್ಗದಲ್ಲಿ ಪ್ರಯಾಣಿಸಿದ, ಲೋಕ ಸುತ್ತಿದ ಉದಾಹರಣೆಗಳಿವೆ. ಈಗಲೂ ಇವೆ. ಮನುಷ್ಯನ ಮೂಲತಃ ಅಲೆಮಾರಿ ಸ್ವಭಾವ ಆತನನ್ನು ಪದೇ ಪದೇ ಇಂತಹ ಸಾಹಸಗಳನ್ನು ಮಾಡುವಂತೆ ಪ್ರೇರೇಪಿಸುತ್ತಲೇ ಇರುತ್ತದೆ ಎಂಬುದಕ್ಕೆ ಇದೇ ಉದಾಹರಣೆಯಾಗಿದೆ.
ಇದೀಗ 46 ವರ್ಷಗಳ ನಂತರ ಮತ್ತೆ ಆರಂಭವಾಗಿದೆ. ಅಡ್ವೆಂಚರ್ ಓವರ್‌ಲ್ಯಾಂಡ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಈ ಪ್ರವಾಸವನ್ನು ಆಯೋಜಿಸಿದೆ. ರಸ್ತೆಯಲ್ಲಿ ಸಾಗುತ್ತಾ ಸಾಗುತ್ತಾ, ವಿವಿಧ ದೇಶಗಳ ವಿಸ್ಮಯಗಳನ್ನು ಕಣ್ತುಂಬಿಕೊಳ್ಳುವ ಅಪರೂಪದ ಭಾಗ್ಯ ಇದಾಗಿದೆ.
ಅಭೂತಪೂರ್ವ ಪಯಣ
ಈ ಪ್ರಯಾಣದಲ್ಲಿ ಮಯನ್ಮಾರಿನ ಪಗೋಡಾಗಳು, ಚೈನಾದ ಮಹಾಗೋಡೆ, ಉಜ್ಬೇಕಿಸ್ತಾನದ ಬುಕಾರಾ, ತಾಷ್ಕೆಂಟ್ ನಗರಗಳು, ಕಜಕಿಸ್ತಾನದಲ್ಲಿ ಕ್ಯಾಸ್ಪಿಯನ್ ಸಮುದ್ರದಲ್ಲಿ ಕ್ರೂಸ್ ಮತ್ತಿತರ ಪ್ರವಾಸೀ ಆಕರ್ಷಣೆಗಳನ್ನು ಹೊಂದಿದೆ. ಈ ಬಸ್ ಪ್ರಯಾಣ ಲಂಡನ್ ತಲುಪಿದ ಮೇಲೆ ಒಂದು ತಿಂಗಳ ಬ್ರೇಕ್ ನಂತರ ಲಂಡನ್‌ನಿಂದ ಭಾರತಕ್ಕೆ ಮರಳಿ ಹೊರಡಲಿದೆ. ಮರಳುವ ಮಾರ್ಗ ಹೋದ ರಸ್ತೆಯೇ ಆಗಿರಲಿದೆ. ಭಾರತ -ಲಂಡನ್ ಬಸ್ ಪ್ರಯಾಣದ ಪ್ರತಿಯೊಂದು ದಿನವೂ ಜೀವನದ ಅತ್ಯಪೂರ್ವ ಮರೆಯದ ಗಳಿಗೆಗಳಾಗಿ ಉಳಿಯಲಿದ್ದು. ಜೀವಿತಾವಧಿಯಲ್ಲಿ ಅನುಭವಿಸಬಹುದಾದ ಅಭೂತಪೂರ್ವ ಪಯಣಗಳಲ್ಲಿ ಒಂದಾಗಿದೆ.
ಇದನ್ನೂ ಓದಿ | ಕಬಿನಿ ಕಾಡಿನ ಭೋಗೇಶ್ವರ ಇನ್ನು ನೆನಪು ಮಾತ್ರ, ಹಿರಿಯಜ್ಜನ ಕಳೆದುಕೊಂಡ ದು:ಖದಲ್ಲಿ ಪ್ರವಾಸಿಗರು