ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಭಾರತದಲ್ಲಿಯೇ ಅತ್ಯಂತ ಆಕರ್ಷಣೀಯ ನಗರ. ಈ ಉದ್ಯಾನ ನಗರಿ ನೋಡುವುದಕ್ಕೆ ದೇಶ ಮಾತ್ರವಲ್ಲದೆ ವಿದೇಶಿಗರೂ ಕೂಡ ಆಗಮಿಸುವುದು ವಿಶೇಷ. ಕೆಂಪೇಗೌಡರು ನಿರ್ಮಿಸಿದ ಈ ಕರುನಾಡ ರಾಜಧಾನಿಯಲ್ಲಿ ಪ್ರೇಕ್ಷಣೀಯ ಸ್ಥಳಗಳಿಗೇನೂ ಕಡಿಮೆಯಿಲ್ಲ. ಲಾಲ್‌ಬಾಗ್, ಕಬ್ಬನ್‌ಪಾರ್ಕ್‌ನಿಂದ ಹಿಡಿದು ನಂದಿಬೆಟ್ಟದವರೆಗೆ ಹಲವಾರು ಅದ್ಭುತ ಸ್ಥಳಗಳು ಇಲ್ಲಿವೆ. ಈ ನಮ್ಮ ಬೆಂಗಳೂರಿನಲ್ಲಿ ನೀವು ನೋಡಲೇಬೇಕಾದ ಟಾಪ್ 10 ಪ್ರವಾಸಿ ತಾಣಗಳ (Bengaluru tour) ವಿವರ ಇಲ್ಲಿದೆ.
ಲಾಲ್‌ಬಾಗ್
ಇದು ನಗರದ ಅತ್ಯಂತ ಹಳೆಯ ಉದ್ಯಾನವನ. ಇದು ಪ್ರವಾಸಿಗರಿಗೆ ಬೆಂಗಳೂರಿನಲ್ಲಿ ಭೇಟಿ ನೀಡಲು ಅತ್ಯಂತ ನೆಚ್ಚಿನ ಸ್ಥಳಗಳಲ್ಲಿ ಒಂದಾಗಿದೆ. ವಿಶಿಷ್ಟ ಜಾತಿಯ ಸಸ್ಯಗಳು, ಹೂವಿನ ಗಿಡಗಳು ಹಾಗೂ ಮರಗಳನ್ನು ನೀವಿಲ್ಲಿ ನೋಡಬಹುದು. ಪ್ರತಿ ವರ್ಷ ಗಣರಾಜ್ಯೋತ್ಸವದ ದಿನದ ಸಮಯದಲ್ಲಿ ಹಾಗೂ ಸ್ವಾತಂತ್ರ್ಯ ದಿನಾಚರಣೆಯ ಸಮಯದಲ್ಲಿ ವಿಶೇಷವಾದ ಪುಷ್ಪ ಪ್ರದರ್ಶನ ಇಲ್ಲಿ ನಡೆಯುತ್ತದೆ.
ನಂದಿಬೆಟ್ಟ
ನಂದಿ ಬೆಟ್ಟಗಳು ಬೆಂಗಳೂರಿಗರಿಗೆ ವಾರಾಂತ್ಯದ ಸ್ಥಳವಾಗಿದೆ. ನೀವು ಪ್ರಕೃತಿ ಪ್ರೇಮಿಗಳಾಗಿದ್ದರೆ ಈ ಸ್ಥಳಕ್ಕೆ ಭೇಟಿ ನೀಡಲೇಬೇಕು. ಚಳಿಗಾಲದ ಸಮಯದಲ್ಲಂತೂ ಮಂಜು ಕವಿದಿರುವ ಬೆಟ್ಟವನ್ನು ನೋಡುವುದಕ್ಕೆ ಎರಡು ಕಣ್ಣು ಸಾಲದು. ಇದು ಒಂದು ರೀತಿಯಲ್ಲಿ ಬೆಂಗಳೂರಿನಲ್ಲಿರುವ ಊಟಿ ಎಂದೇ ಹೇಳಬಹುದು. ಬೆಂಗಳೂರಿನಿಂದ ಕೇವಲ 60 ಕಿಲೋಮೀಟರ್ ದೂರದಲ್ಲಿರುವ ನಂದಿ ಬೆಟ್ಟ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿದೆ.
ವಂಡರ್ಲಾ
ಬೆಂಗಳೂರಿನಲ್ಲಿ ಮನೋರಂಜನೆ ಬೇಕೆಂದರೆ ನೀವು ವಂಡರ್ಲಾಕ್ಕೆ ಭೇಟಿ ನೀಡಬಹುದು. 50ಕ್ಕೂ ಹೆಚ್ಚು ವಿಶೇಷ ರೀತಿಯ ಸಾಹಸಮಯ ಆಟಗಳು ಇಲ್ಲಿವೆ. ಹೆಚ್ಚು ಧೈರ್ಯವಂತರಾಗಿದ್ದರೆ ರೋಲರ್ ಕೋಸ್ಟರ್‌ಗಳನ್ನು ಆಡಬಹುದು. ನೀರಿನಲ್ಲಿ ಆಟವಾಡಲು ಇಷ್ಟಪಡುವವರಾದರೆ ಅನೇಕ ವಾಟರ್ ಗೇಮ್‌ಗಳೂ ಇಲ್ಲಿವೆ. ರೈನ್ ಡಿಸ್ಕೋ ಸೇರಿ ವಿಶೇಷ ರೀತಿಯ ಆಟಗಳು ಇಲ್ಲಿವೆ.
ಕಬ್ಬನ್ ಪಾರ್ಕ್
ಬೆಂಗಳೂರಿಗರ ಆಲ್ ಟೈಮ್ ಫೇವರಿಟ್ ಸ್ಥಳಗಳಲ್ಲಿ ಕಬ್ಬನ್ ಪಾರ್ಕ್ ಕೂಡ ಒಂದು. ಮೈಸೂರಿನ ಮುಖ್ಯ ಇಂಜಿನಿಯರ್ ಆಗಿದ್ದ ರಿಚರ್ಡ್ ಸ್ಯಾಂಕಿ ಈ ಪಾರ್ಕ್ ಅನ್ನು ನಿರ್ಮಿಸಿದ್ದು. ಈ ಕಬ್ಬನ್‌ಪಾರ್ಕ್ 300 ಎಕರೆ ಪ್ರದೇಶಕ್ಕೆ ಹರಡಿದೆ. ಇಲ್ಲಿನ ಪ್ರಮುಖ ಆಕರ್ಷಣೆಯೆಂದರೆ ಅದು ರಾಣಿ ವಿಕ್ಟೋರಿಯಾ, ಸರ್ ಮಾರ್ಕ್ ಕಬ್ಬನ್, ಚಾಮರಾಜೇಂದ್ರ ಒಡೆಯರ್ ಸೇರಿ ಹಲವು ಜನಪ್ರಿಯ ವ್ಯಕ್ತಿಗಳ ಪ್ರತಿಮೆಗಳು. ಡಾಲ್ ಮ್ಯೂಸಿಯಂ, ಚೆಷೈರ್ ಡೈಯರ್ ಮೆಮೋರಿಯಲ್ ಹಾಲ್, ಸರ್ಕಾರಿ ವಸ್ತುಸಂಗ್ರಹಾಲಯ ಸೇರಿ ಹಲವು ಆಕರ್ಷಣೆಗಳು ಇಲ್ಲಿವೆ.
ಇಸ್ಕಾನ್ ದೇಗುಲ
ಬೆಂಗಳೂರಿನ ಇಸ್ಕಾನ್ ದೇವಾಲಯವನ್ನು ಶ್ರೀ ರಾಧಾ ಕೃಷ್ಣ ದೇವಾಲಯ ಎಂದೂ ಕರೆಯಲಾಗುತ್ತದೆ. ಇದು ವಿಶ್ವದ ಅತಿದೊಡ್ಡ ಇಸ್ಕಾನ್ ದೇವಾಲಯವಾಗಿದೆ. ನಗರದ ರಾಜಾಜಿನಗರ ಭಾಗದಲ್ಲಿರುವ ಈ ದೇವಾಲಯವು ತನ್ನ ವಿಶಿಷ್ಟ ವಾಸ್ತುಶಿಲ್ಪದಿಂದಾಗಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ದೇಗುಲಕ್ಕೆ ಭೇಟಿ ನೀಡುವವರು ಪ್ರಸಾದ ಸ್ವೀಕರಿಸಿ, ಆಧ್ಯಾತ್ಮಕ್ಕೆ ಸಂಬಂಧಿಸಿರುವ ಪುಸ್ತಕಗಳನ್ನು ಖರೀದಿಸಬಹುದು.
ಬೆಂಗಳೂರು ಅರಮನೆ
19ನೇ ಶತಮಾನದಲ್ಲಿ ಚಾಮರಾಜ ಒಡೆಯರ್ ಅವರು ಈ ಅರಮನೆಯನ್ನು ನಿರ್ಮಿಸಿದರು. ಟ್ಯೂಡರ್ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾದ ಈ ಅರಮನೆಯು ಇಂಗ್ಲೆಂಡ್‌ನ ವಿಂಡ್ಸರ್ ಕ್ಯಾಸಲ್‌ನಿಂದ ಪ್ರೇರಿತವಾಗಿದೆ. ಅರಮನೆಯು 430 ಎಕರೆಗಳಷ್ಟು ವಿಶಾಲವಾದ ಉದ್ಯಾನವನಗಳಿಂದ ಆವೃತವಾಗಿದೆ. ಬೆಂಗಳೂರಿನ ಹಲವು ಅದ್ಧೂರಿ ಕಾರ್ಯಕ್ರಮಗಳು, ಸಂಗೀತ ಕಚೇರಿಗಳು, ಪ್ರದರ್ಶನಗಳು ನಡೆಯುವ ಸ್ಥಳ ಇದಾಗಿದೆ. ಅರಮನೆಯ ಒಳಾಂಗಣವು ರಾಜಮನೆತನದವರು ತಮ್ಮ ಜೀವನವನ್ನು ಹೇಗೆ ನಡೆಸುತ್ತಿದ್ದರು ಎಂಬುದರ ಒಳನೋಟವನ್ನು ನಿಮಗೆ ನೀಡುತ್ತದೆ.
ಟಿಪ್ಪು ಸುಲ್ತಾನ್ ಅರಮನೆ
ಈ ಅರಮನೆಯು ಭಾರತದಲ್ಲಿನ ಇಂಡೋ-ಇಸ್ಲಾಮಿಕ್ ವಾಸ್ತುಶಿಲ್ಪದ ಒಂದು ಉತ್ತಮ ಉದಾಹರಣೆ. ಇದು ಆಗಿನ ಮೈಸೂರು ದೊರೆ ಟಿಪ್ಪು ಸುಲ್ತಾನನ ಬೇಸಿಗೆ ನಿವಾಸವಾಗಿತ್ತು. ಬೆಂಗಳೂರು ಕೋಟೆಯೊಳಗೆ ಹೈದರ್ ಅಲಿ ಅವರು ಈ ಅರಮನೆಯ ನಿರ್ಮಾಣವನ್ನು ಪ್ರಾರಂಭಿಸಿದರು. ನಂತರ ಇದನ್ನು 1791ರಲ್ಲಿ ಟಿಪ್ಪು ಸುಲ್ತಾನ್ ಆಳ್ವಿಕೆಯಲ್ಲಿ ಪೂರ್ಣಗೊಳಿಸಲಾಯಿತು. ಅರಮನೆಯ ಕುಶಲತೆ ಮತ್ತು ಶಿಲ್ಪಕಲೆಯು ಪ್ರವಾಸಿಗರನ್ನು ಮೂಕವಿಸ್ಮಿತರನ್ನಾಗಿಸುವಂತಿದೆ.
ವಿಧಾನ ಸೌಧ
ಕಬ್ಬನ್‌ಪಾರ್ಕ್ ಹತ್ತಿರದಲ್ಲೇ ಇರುವ ವಿಧಾನಸೌಧ 1956ರಲ್ಲಿ ನಿರ್ಮಾಣವಾಯಿತು. ಈ ಕಟ್ಟಡವು ನವ-ದ್ರಾವಿಡ ವಾಸ್ತುಶಿಲ್ಪದ ಉದಾಹರಣೆಯಾಗಿದೆ. ವಿಧಾನಸೌಧದ ನಾಲ್ಕು ಮೂಲೆಗಳಲ್ಲಿ ನಾಲ್ಕು ಗುಮ್ಮಟಗಳಿವೆ. ಇದು ಕರ್ನಾಟಕ ಸರ್ಕಾರದ ವಿಧಾನಸಭೆ ಹಾಗೂ ಅನೇಕ ಇತರ ಸರ್ಕಾರಿ ಇಲಾಖೆಗಳು ಇದರಲ್ಲಿವೆ. ಈ ಕಟ್ಟಡದ ಒಳಗೆ ಜನರಿಗೆ ಪ್ರವೇಶವಿಲ್ಲವಾದರೂ ಸೌಧದ ಎದುರು ನಿಂತು ವೀಕ್ಷಣೆ ಮಾಡಬಹುದು.
ಕರ್ನಾಟಕ ಚಿತ್ರಕಲಾ ಪರಿಷತ್ತು
ನೀವು ಕಲಾತ್ಮಕ ವ್ಯಕ್ತಿಯಾಗಿದ್ದು, ಕಲೆಯನ್ನು ಪ್ರೀತಿಸುವವರಾದರೆ ಬೆಂಗಳೂರಿನ ಪ್ರಸಿದ್ಧ ಕರ್ನಾಟಕ ಚಿತ್ರಕಲಾ ಪರಿಷತ್ತಿಗೆ ಭೇಟಿ ನೀಡಬೇಕು. ಈ ಸಂಕೀರ್ಣವು ವರ್ಣಚಿತ್ರಗಳು, ಶಿಲ್ಪಗಳು ಮತ್ತು ಜಾನಪದ ಕಲೆಗಳ ವಿಸ್ತಾರವಾದ ಸಂಗ್ರಹವನ್ನು ಹೊಂದಿದೆ. ಇದರಲ್ಲಿ ಹಲವಾರು ರೀತಿಯ ಪ್ರದರ್ಶನಗಳನ್ನು ಆಯೋಜಿಸಲಾಗುತ್ತಿರುತ್ತದೆ ಹಾಗೂ ಅಲ್ಲಿಗೆ ಪ್ರಪಂಚದಾದ್ಯಂತದ ಪ್ರವಾಸಿಗರು ಭೇಟಿ ನೀಡುತ್ತಾರೆ.
ಜವಾಹರಲಾಲ್ ನೆಹರು ತಾರಾಲಯ
ಜವಾಹರಲಾಲ್ ನೆಹರು ತಾರಾಲಯವು ಬೆಂಗಳೂರಿನಲ್ಲಿ ಭೇಟಿ ನೀಡಲೇಬೇಕಾದ ಮತ್ತೊಂದು ಆಕರ್ಷಣೀಯ ಸ್ಥಳವಾಗಿದೆ. ಇದೊಂದು ಖಗೋಳಶಾಸ್ತ್ರದ ಕೇಂದ್ರವಾಗಿದೆ. ಆಗಸದಲ್ಲಿ ಉಂಟಾಗುವ ವಿಸ್ಮಯಗಳ ಮಾದರಿಯನ್ನು ನೀವಿಲ್ಲಿ ಕಾಣಬಹುದು. ವರ್ಷವಿಡೀ ತಾರಾಲಯದಲ್ಲಿ ಅನೇಕ ಕಾರ್ಯಾಗಾರಗಳು ಮತ್ತು ಪ್ರದರ್ಶನಗಳು ನಡೆಯುತ್ತಿರುತ್ತವೆ.