Site icon Vistara News

Winter tour | ಚಳಿಗಾಲದಲ್ಲಿ ಈ ಜಾಗಗಳಿಗೆ ಹೋದರೆ ಸ್ವರ್ಗವೇ ಕೈಗೆ ಎಟುಕಿದಂತೆ!

kashmir

ಮಳೆಗಾಲ, ಬೇಸಿಗೆ ಕಾಲಗಳಿಗಿಂತಲೂ ಪ್ರವಾಸಕ್ಕೆ ಬಲು ಸೂಕ್ತ ಕಾಲವೆಂದರೆ ಚಳಿಗಾಲ. ಹೆಚ್ಚು ಬಿಸಿಲಿನ ಝಳವಿಲ್ಲದೆ ಮಧ್ಯಾಹ್ನವಾದರೂ ಸ್ವೆಟರ್‌ ಹಾಕಿಕೊಂಡು ಬೆಚ್ಚಗೆ ಬಿಸಿಲಿನಲ್ಲಿ ತಿರುಗಾಡಿಕೊಂಡಿರಬಹುದಾದ, ಮಳೆಯ ಕಿರಿಕಿರಿಯೂ ಇರದ, ರಾತ್ರಿ ಹೊದ್ದು ಮಲಗಬಹುದಾದ ಕಾಲ. ಇಂತಹ ಚಳಿಗಾಲ ಪ್ರೇಮಿಗಳ ಪಾಲಿನ ರಮ್ಯಕಾಲ. ಆಗಷ್ಟೇ ದಾಂಪತ್ಯಕ್ಕೆ ಕಾಲಿಟ್ಟ ಜೋಡಿಗಳಿಗೆ ನಿತ್ಯನೂತನ. ಇಂಥ ಕಾಲದಲ್ಲಿ ಸುಮ್ಮನೆ ಬೆಳಗೆ ನಿಧಾನಕ್ಕೆ ಎದ್ದು ಬಿಸಿಬಿಸಿ ಚಹಾ ಹೀರಿ, ಸೂರ್ಯ ಬಿಸಿಲಿಗೆ ಮೈಯೊಡ್ಡಿ ಕುಳಿತು ಹೊಸ ಜಾಗದಲ್ಲಿ ಸುಖಾಸುಮ್ಮನೆ ಅಡ್ಡಾಡಿಕೊಂಡು ಬಂದು ರಾತ್ರಿ ಬೆಂಕಿಯ ಮುಂದೆ ಕುಳಿತರೆ ಆಹಾ, ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಎನ್ನಬಹುದೇನೋ. ಇಂತಹ ಚಳಿಗಾಲದಲ್ಲಿ ಹೀಗೆ ಮಾಡಬೇಕೆಂದರೆ ಅದಕ್ಕೆ ಪರ್ಫೆಕ್ಟ್‌ ಎನಿಸುವಂಥ ಜಾಗಗಳೂ ಬೇಕು. ಅಂಥ ಜಾಗಕ್ಕೇನೂ ನಾವು ವಿದೇಶಕ್ಕೆ ಹಾರಬೇಕಿಲ್ಲ. ಭಾರತದಲ್ಲಿ ಚಳಿಗಾಲದಲ್ಲಿ ಮಜವಾಗಿ ಕಳೆಯಬಹುದಾದ, ಜೀವನದಲ್ಲಿ ಒಮ್ಮೆಯಾದರೂ ಇದ್ದು ಅನುಭವಿಸಬೇಕಾದ ಹಲವಾರು ಜಾಗಗಳಿವೆ. ಅವುಗಳಲ್ಲಿ ಕೆಲವು ಇಲ್ಲಿವೆ.

೧. ಔಲಿ, ಉತ್ತರಾಖಂಡ: ಹಿಮಾಲಯದ ಸೊಬಗಿನ ಗಿರಿಶಿಖರಗಳಲ್ಲಿ ಪ್ರಮುಖವಾದ ನಂದಾದೇವಿಯ ಸೌಂದರ್ಯವನ್ನು ಹೊಟೇಲಿನ ಕಿಟಕಿಯಿಂದಲೇ ಸವಿಯಬೇಕೇ? ಕೇಬಲ್‌ ಕಾರ್‌ನಲ್ಲಿ ಕುಳಿತು ಹಿಮಕಣಿವೆಗಳನ್ನು ಕಣ್ತುಂಬಿಕೊಳ್ಳಬೇಕೇ? ಮನಸೋ ಇಚ್ಛೆ ಹಿಮದಲ್ಲಿ ಹೊರಳಾಡಿ ಮತ್ತೆ ಮಗುವಾಗಬೇಕೇ? ಒಂದು ಪುಟಾಣಿ ಸರೋವರದ ಪಕ್ಕ ಎಲ್ಲ ಮರೆತು ಕೂತು ಬೆಳ್ಳನೆ ಹಿಮರಾಶಿಯನ್ನು ಕಣ್ತುಂಬಬೇಕೇ? ಇಂಥದ್ದೆಲ್ಲ ಆಸೆಯಿದ್ದರೆ ಅಂಥವರಿಗೆ ಉತ್ತರಾಖಂಡದ ಔಲಿ ಬೆಸ್ಟ್‌. ಚಳಿಗಾಲದ ಹಿಮರಾಶಿಯಲ್ಲಿ ಹಿಮದಲ್ಲಿ ಸ್ಕೀಯಿಂಗ್‌ ಮಾಡಲೂ ಇದು ಪರ್ಫೆಕ್ಟ್‌ ತಾಣ.

೨. ಗುಲ್ಮಾರ್ಗ್‌, ಕಾಶ್ಮೀರ: ಇದೂ ಕೂಡಾ ಔಲಿಯಂಥದ್ದೇ ಜಾಗ. ಸುತ್ತಲೂ ಹಿಮ ಮುಚ್ಚಿದ ಗಿರಿ ಶಿಖರಗಳ ಸೌಂದರ್ಯ ಸವಿಯುತ್ತಾ, ಹಿಮದಲ್ಲಿ ಜಾರುತ್ತಾ, ಸ್ಕೀಯಿಂಗ್‌, ಸ್ನೋಬೋರ್ಡಿಂಗ್‌ ಮಾಡುತ್ತಾ ಕಾಶ್ಮೀರವೆಂಬ ಸ್ವರ್ಗದಲ್ಲಿ ಕೆಲವು ದಿನಗಳಾದರೂ ಕಳೆಯಬೇಕೆಂದಿದ್ದರೆ ಗುಲ್ಮಾರ್ಗ್‌ ಸುಂದರ ತಾಣ. ಇಲ್ಲಿಂದ ಮಧುರವಾದ ನೆನಪುಗಳನ್ನು ನಿಮ್ಮ ಜೊತೆ ಕೊಂಡೊಯ್ಯಬಹುದು.

೩. ತವಾಂಗ್‌, ಅರುಣಾಚಲ ಪ್ರದೇಶ: ಇಲ್ಲಿಗೆ ಹೋಗುವುದು ಸ್ವಲ್ಪ ಕಷ್ಟದ ಕೆಲಸವಾದರೂ ಹೋದರೆ, ಯಾಕೆ ಬಂದೆವು ಎಂದು ಅನಿಸುವಂಥ ಜಾಗವಲ್ಲ. ಹಿಮಚ್ಚಾದಿತ ಪರ್ವತಗಳಿಂದ ಸುತ್ತುವರಿದಿರುವ, ಬೌದ್ಧ ವಿಹಾರಗಳಿಂದ ಸ್ತೂಪಗಳಿಂದ ಸದಾ ಗಂಟೆಯ ನಾದ ಅನುರಣಿಸುವ ಸದಾ ಶಾಂತಿ ನೆಮ್ಮದಿ ನೆಲೆಸಿರುವ ತಾಣ.

೪. ಗ್ಯಾಂಗ್ಟಕ್‌, ಸಿಕ್ಕಿಂ: ಬಣ್ಣಬಣ್ಣದ ಬೌದ್ಧವಿಹಾರಗಳು, ಎಲ್ಲೆಲ್ಲೂ ಅರಳಿ ನಳನಳಿಸುವ ಹೂಗಳು, ಹೈ ಟಲ್ಟಿಟ್ಯೂಡ್‌ ಸರೋವರಗಳು, ಸುತ್ತಲೂ ಅದ್ಭುತವಾಗಿ ಕಾಣುವ ಹಿಮಾಲಯ ಬೇಕೆನಿಸುವ ಎಲ್ಲವನ್ನೂ ಒಂದೇ ತಟ್ಟೆಯಲ್ಲಿ ಹಾಖಿ ಉಣಬಡಿಸಿದಂತಿರುವ ಜಾಗ, ಗ್ಯಾಂಗ್ಟಕ್!

೫. ಗೋವಾ: ಗೋವಾಕ್ಕೆ ಇಂಥದ್ದೇ ಕಾಲಕ್ಕೆ ಹೋಗಬೇಕೆಂದೇನೂ ಇಲ್ಲ. ಆದರೆ ಗೋವಾಕ್ಕೆ ಚಳಿಗಾಲದಲ್ಲೇ ಹೋಗಬೇಕಾದ ಕಾರಣವಿದೆ. ಹೆಚ್ಚು ಬಿಸಿಲಿನ ಝಳವಿಲ್ಲದ ಸಮುದ್ರತೀರದಲ್ಲಿ ಬೆಚ್ಚಗೆ ಮೈ ಕಾಯಿಸುವುದರಿಂದ ಹಿಡಿದು, ಹೊಸ ವರ್ಷದ ಗಮ್ಮತ್ತಿನಲ್ಲಿ ಪಾರ್ಟಿ ಮೂಡಿನಲ್ಲಿ ಗೋವಾ ನಳನಳಿಸುವುದನ್ನೂ ನೋಡದೆ ಇದ್ದರೆ ಹೇಗೆ.

೬. ರಣ್‌ ಆಫ್‌ ಕಚ್‌, ಗುಜರಾತ್:‌ ಜಗತ್ಪ್ರಸಿದ್ಧ ರಣ್‌ ಉತ್ಸವ ನೋಡಬೇಕೆಂದರೆ, ಬೆಳ್ಳನೆಯ ಉಪ್ಪಿನ ನೆಲದಲ್ಲಿ ನಡೆದಾಡಿ, ನೆಲದಲ್ಲಿ ಪ್ರತಿಫಲಿಸುವ ಆಗಸವನ್ನು ನೋಡಿ ಅವಕ್ಕಾಗುತ್ತಾ, ಬಣ್ಣಬಣ್ಣದ ದಿರಿಸಿನ ಗುಜರಾತಿನ ಬುಡಕಟ್ಟು ಜನಾಂಗವನ್ನೂ, ಅವರ ಕಲೆ ಸಂಸ್ಕೃತಿಯನ್ನೂ ನೋಡಿ ತಿಂದುಂಡು ಬರಬೇಕೆಂದರೆ ಗುಜರಾತಿಗೆ ಒಮ್ಮೆ ಹೋಗಲೇಬೇಕು!

೭. ಉದಯಪುರ, ರಾಜಸ್ಥಾನ: ರಾಜಸ್ಥಾನದ ಮರುಳುಗಾಡಿನಲ್ಲಿ ಚಳಿಗಾಲವಲ್ಲದೆ ಅನುಭವಿಸಲು ಬೇರೆ ಕಾಲವಿಲ್ಲ. ಅರಮನೆಗಳ, ಸರೋವರಗಳ ನಗರಿ ಉದಯಪುರದ ರಾಜ ವೈಭೋಗವನ್ನು ಸುಸ್ತಾಗದಂತೆ ತಿರುಗಾಡುತ್ತಾ, ಮರಳುಗಾಡಿನ ಚಳಿಯನ್ನೂ ಅನುಭವಿಸುವ ಮನಸ್ಸಿದ್ದರೆ ಉದಯಪುರದಷ್ಟು ಸುಂದರ ಹಾಗೂ ಅಷ್ಟೇ ಪ್ರಶಸ್ತ ಜಾಗ ಇನ್ನೊಂದಿಲ್ಲ.

೮. ಮುನ್ನಾರ್‌, ಕೇರಳ: ಕೇರಳವನ್ನು ಚಳಿಗಾಲದಲ್ಲಿ ನೋಡಬೇಕು. ಅಣ್ಣಾಮುಡಿ ಪರ್ವತ ಮಂಜಿನಲ್ಲಿ ಕಣ್ಣಾಮುಚ್ಚಾಲೆ ಆಡುವುದನ್ನು, ಚಹಾ ತೋಟದಲ್ಲಿ ಮೆಲ್ಲಗೆ ಹಸಿರಿನೆಡೆಯಿಂದ ಮಂಜು ಮೇಲೇರುವುದನ್ನು ದಾರಿಯಿಡೀ ಮಂಜು ಮುಸುಕಿ ಗಾಳಿಗೆ ಮುಖವೊಡ್ಡಿ ಹೋಗುವ ಆನಂದದ ಕ್ಷಣಕ್ಕೆ ಸಾಟಿಯೆಲ್ಲಿ ಅನಿಸುವವರೆಲ್ಲ ಚಳಿಗಾಲದಲ್ಲಿ ಮುನ್ನಾರಿಗೆ ಹೋಗಲೇಬೇಕು.

ಇದನ್ನೂ ಓದಿ | ನೀಲಕುರಿಂಜಿ | ಬೆಟ್ಟ ಹೊದ್ದ ನೀಲಿ ಹೊದಿಕೆ: ಹೊಸಕಬೇಡಿ, ಆನಂದಿಸಿ

Exit mobile version