Site icon Vistara News

Hot water spring: ಚಳಿಗಾಲದಲ್ಲಿ ಈ ಹಿಮದೂರುಗಳ ಬಿಸಿನೀರಿನ ಚಿಲುಮೆಗಳಲ್ಲಿ ಮುಳುಗೆದ್ದು ಬನ್ನಿ!

Hot water spring

ಬಿಸಿನೀರಿನ ಬುಗ್ಗೆಗಳು ಯಾವಾಗಲೂ ಪ್ರಕೃತಿ ವಿಸ್ಮಯವೇ. ಅದರಲ್ಲೂ ಹಿಮಚ್ಛಾದಿತ ಬೆಟ್ಟಗಳ ನಡುವಿನ ಪುಟ್ಟ ಕೊಳವೊಂದು ವರ್ಷಪೂರ್ತಿ ಚಳಿ ಮಳೆಯನ್ನು ಲೆಕ್ಕಿಸದೆ ಕುದಿವ ಬಿಸಿನೀರಿನ ಒರತೆ ನೀಡುತ್ತಲೇ ಬಂದರೆ ಅದರಂಥ ಅಚ್ಚರಿ ಇನ್ನೊಂದಿಲ್ಲ. ಪ್ರಕೃತಿ ತನ್ನಲ್ಲಿ ಎಂತಥ ಮಾಯೆಯನ್ನು ಅಡಗಿಸಿಟ್ಟುಕೊಂಡಿದೆ ಎಂದು ಅಂದುಕೊಳ್ಳುವಾಗಲೆಲ್ಲ ರೋಮಾಂಚಿತರಾಗುತ್ತೇವೆ. ಇಂತಹ ಬಿಸಿನೀರಿನ ಚಿಲುಮೆಗಳು ನಮ್ಮ ದೇಶದೆಲ್ಲೆಡೆ ಉತ್ತರ ಹಿಮಾಲಯದಿಂದ ದಕ್ಷಿಣದ ಕನ್ಯಾಕುಮಾರಿಯವರೆಗೂ ಕಂಡುಬರುತ್ತವೆ. ಅದರಲ್ಲೂ ಹಿಮದೂರುಗಳಲ್ಲಿ ಸದಾ ಮಂಜು ಮುಚ್ಚಿರುವ ಹಿಮಾಚ್ಛಾದಿತ ಕಣಿವೆಗಳಲ್ಲಿ ಸಿಗುವ ಬಿಸಿನೀರ ಚಿಲುಮೆಗಳು ನಮ್ಮನ್ನು ಸದಾ ಸೆಳೆಯುತ್ತದೆ.

ಭೂಮಿಯ ಅತ್ಯಂತ ಒಳಪದರವಾದ ಕುದಿಯುವ ಮ್ಯಾಗ್ಮಾದ ಮೂಲಕವಾಗಿ ಬಿರುಕಿರುವ ಇತರ ಪದರಗಳ ಮೂಲಕವಾಗಿ ನೀರಿನ ಒರತೆಯು ಬಿಸಿಯಾಗಿ ಹೊರಬರುವುದರಿಂದ ಸದಾ ಕಾಲ ಒಂದೇ ಬಿಸಿಯನ್ನು ಹೊಂದಿದ ನೀರ ಒರತೆ ಭೂಮಿಯ ಮೇಲ್ಮೈಯಲ್ಲಿ ಚಿಲುಮೆಯಾಗಿ ಹೊರಬರುವುದರಿಂದಲೇ ಈ ಬಿಸಿನೀರ ಬುಗ್ಗೆಗಳಾಗಿವೆ. ಭೂಪದರದ ನಡುವಿನ ಬಿರುಕುಗಳಿಂದಾಗಿ ಈ ಚಿಲುಮೆಗಳಲ್ಲಿ, ಸಾಮಾನ್ಯ ನೀರಿಗಿಂತಲೂ ಹೆಚ್ಚು ಖನಿಜಾಂಶಗಳನ್ನು ಹೊಂದಿರುತ್ತದೆ. ಇದಕ್ಕಾಗಿಯೇ ಇವು, ವೈಜ್ಞಾನಿಕವಾಗಿಯೂ, ಚರ್ಮದ ತೊಂದರೆಗಳಿಗೆ, ದೇಹಕ್ಕೆ ಒಳ್ಳೆಯದೆಂದು ಭಾವಿಸಲಾಗುತ್ತದೆ.

ಹಾಗಾದರೆ, ಈ ಚಳಿಗಾಲ ಮುಗಿಯುವ ಮೊದಲೇ, ಹಿಮದೂರುಗಳ ಬಿಸಿನೀರ ಚಿಲುಮೆಗಳಲ್ಲಿ ಮುಳುಗೆದ್ದು ಬರುವ ಆಸೆಯಿದ್ದರೆ, ಯಾವೆಲ್ಲ ತಾಣಗಳಿಗೆ ಹೋಗಿ ಬರಬಹುದು ನೋಡೋಣ.

೧. ನುಬ್ರಾ ಕಣಿವೆಯ ಪನಾಮಿಕ್:‌ ನಮ್ಮ ದೇಶದ ಅತ್ಯಂತ ಉತ್ತರ ಭಾಗದಲ್ಲಿರುವ ಬಿಸಿನೀರಿನ ಬುಗ್ಗೆ ಇದು. ಲೇಹ್‌ಗಿಂತ ಸುಮಾರು ೧೫೦ ಕಿಮೀ ದೂರದಲ್ಲಿರುವ ಸಿಯಾಚಿನ್‌ ನೀರ್ಗಲ್ಲುಗಳ ಬಳಿಯ ಥರಗುಟ್ಟುವ ಚಳಿಯೂರಿನ ಪನಾಮಿಕ್‌ ಎಂಬ ಹಳ್ಳಿಯೊಂದರಲ್ಲಿ ಬಿಸಿನೀರಿನ ಬುಗ್ಗೆಯಿರುವ ಕೊಳವಿದೆ. ಇದು ಗಂಧಕದ ಅಂಶವಿರುವ ಬಿಸಿನೀರಿನ ಬುಗ್ಗೆ. ಇದರಲ್ಲಿ ಸ್ನಾನ ಮಾಡಿದರೆ ರೋಗರುಜಿನಗಳು ಮಾಯವಾಗುವುದೆಂಬ ಪ್ರತೀತಿ ಇದೆ. ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ. ಇದರಲ್ಲಿ ಸಾಕಷ್ಟು ಖನಿಜಾಂಶ ಹಾಗೂ ಔಷಧೀಯ ಸತ್ವಗಳಿರುವುದರಿಂದ ಈ ನೀರಿನ ಸ್ನಾನ ದೇಹಕ್ಕೆ ಒಳ್ಳೆಯದು ಎನ್ನಲಾಗಿದೆ.

ಖೀರ್‌ಗಂಗಾ

೨.ಖೀರ್‌ಗಂಗಾ, ಹಿಮಾಚಲ ಪ್ರದೇಶ: ಹಿಮಾಚಲ ಪ್ರದೇಶದ ಕುಲ್ಲು ಕಣಿವೆಯ ಕಸೋಲ್‌ನಿಂದ ಕೆಲ ಕಿಮೀಗಳಷ್ಟು ದೂರದಲ್ಲಿ ಪರ್ವತಗಳ ನಡುವೆ ಇರುವ ಖೀರ್‌ಗಂಗಾ ಬಿಸಿನೀರಿನ ಬುಗ್ಗೆಯನ್ನು ನೋಡಬೇಕೆಂದರೆ ಕೆಲವು ಬೆಟ್ಟಗುಡ್ಡಗಳ ಹತ್ತಿಳಿದು ಚಾರಣ ಮಾಡಬೇಕು. ನಯನ ಮನೋಹರ ಪಾರ್ವತೀ ಕಣಿವೆಯ ದೃಶ್ಯವನ್ನು ನೋಡುತ್ತಾ ಅನುಭವಿಸುತ್ತಾ ಇಲ್ಲಿ ಚಾರಣ ಮಾಡುವುದೇ ಅದ್ಭುತ ಅನುಭವ. ಚಾರಣದ ಅಂತ್ಯದಲ್ಲಿ ಸಿಗುವ ಪುಟ್ಟ ಕೊಳ ಎಂಥಾ ಚಳಿಗಾಲದಲ್ಲೂ ಹೊಗೆಯೇಳುವ ಬಿಸಿನೀರನ್ನೇ ಸದಾ ಹೊಂದಿರುತ್ತದೆ. ಇಲ್ಲಿ ಸ್ನಾನ ಮಾಡಿ, ಚಾರಣದ ಸುಸ್ತನ್ನೆಲ್ಲ ಮರೆಯಬಹುದು.

೩. ಮಣಿಕರಣ್ ಸಾಹಿಬ್, ಹಿಮಾಚಲ ಪ್ರದೇಶ: ಇದು ಸಿಖ್‌ ಪವಿತ್ರ ಕ್ಷೇತ್ರ. ಖೀರ್‌ಗಂಗಾಕ್ಕೆ ಚಾರಣ ಮಾಡಲಾಗದಿದ್ದವರು, ಹಿಮಾಚಲ ಪ್ರದೇಶದ ಕುಲ್ಲು ಕಣಿವೆಯಲ್ಲಿರುವ ಕಸೋಲ್‌ ಪಕ್ಕದಲ್ಲೇ ಇರುವ ಮಣಿಕರಣ್ ಸಾಹಿಬ್‌ಗೆ ಭೇಟಿ ಕೊಡಬಹುದು. ಇಲ್ಲಿನ ಬಿಸಿನೀರಿನ ಬುಗ್ಗೆಯಲ್ಲಿ ಮೈಯೊಡ್ಡಿ ಸ್ನಾನ ಮಾಡಿದರೆ ಸರ್ವ ಚರ್ಮರೋಗಗಳೂ ಗುಣವಾಗುತ್ತದೆ ಎಂಬ ನಂಬಿಕೆಯಿದೆ. ಇದರಲ್ಲಿರುವ ಗಂಧಕವೇ ಈ ಗುಣಕ್ಕೆ ಕಾರಣ.

ಗೌರಿಕುಂಡ

೪. ಗೌರೀಕುಂಡ, ಉತ್ತರಾಖಂಡ: ಮಂದಾಕಿನೀ ನದಿಯ ತೀರದಲ್ಲಿರುವ ಪುಟ್ಟ ಜಾಗ ಈ ಗೌರೀಕುಂಡ. ಹಿಂದೂಗಳ ಯಾತ್ರಾಸ್ಥಳವಾದ ಕೇದಾರನಾಥಕ್ಕೆ ಚಾರಣ ಮಾಡುವ ಹಾದಿಯಲ್ಲಿ ಸಿಗುವ ಪುಟ್ಟ ಹಳ್ಳಿ ಈ ಗೌರೀಕುಂಡ. ಇಲ್ಲಿನ ಬಿಸಿನೀರಿನ ಬುಗ್ಗೆಯ ಮೂಲ ಸ್ಥಳವು ಭೂಕಂಪದಿಂದಾಗಿ ನಾಶವಾಗಿದ್ದರೂ ಇಂದಿಗೂ ಸಣ್ಣ ಧಾರೆ ಈ ಹಳ್ಳಿಯ ಮೂಲಕವಾಗಿ ಹರಿಯುತ್ತದೆ. ಉತ್ತರಾಖಂಡದ ಗಡ್‌ವಾಲ್‌ ಹಿಮಾಲಯದ ಸುತ್ತಮುತ್ತಲ ಪ್ರದೇಶಗಳಲ್ಲಿ ಹಲವಾರು ಬಿಸಿನೀರಿನ ಚಿಲುಮೆಗಳಿದ್ದು, ಬಹುತೇಕ ಎಲ್ಲ ಪವಿತ್ರ ಕ್ಷೇತ್ರಗಳೂ ನೈಸರ್ಗಿಕ ಬಿಸಿನೀರಿನ ಕೊಳಗಳನ್ನು ಹೊಂದಿದೆ.

ಇದನ್ನೂ ಓದಿ: Solo travel | ಮಹಿಳೆಯರೇ, ಈ ಸ್ಥಳಗಳು ನಿಮ್ಮ ಸೋಲೋ ಪ್ರವಾಸಕ್ಕೆ ಸುರಕ್ಷಿತ!

೫. ಯಮತಂಗ್‌, ಸಿಕ್ಕಿಂ: ಸಿಕ್ಕಿಂ ಕೂಡಾ ಸಾಕಷ್ಟು ಬಿಸಿನೀರ ಚಿಲುಮೆಗಳನ್ನು ಹೊಂದಿರುವ ರಾಜ್ಯ. ಹಿಮಾಲಯ ಪರ್ವತ ಶ್ರೇಣಿಗಳ ಅತ್ಯಂತ ಸುಂದರ ರಾಜ್ಯ ಸಿಕ್ಕಿಂ. ಇಲ್ಲಿನ ಯಮತಂಗ್‌ ಕಣಿವೆಗಳಲ್ಲಿ ಇರುವ ಬಿಸಿನೀರಿನ ಬುಗ್ಗೆ ಸದಾ ೫೦ ಡಿಗ್ರಿ ತಾಪಮಾನದಲ್ಲಿ ಕುದಿಯುತ್ತಿರುವ ಕೊಳಗಳು ಇಲ್ಲಿವೆ.

ವಸಿಷ್ಠ ಕುಂಡ

೬. ವಸಿಷ್ಠ ಮಂದಿರ, ಮನಾಲಿ, ಹಿಮಾಚಲ ಪ್ರದೇಶ: ಹಿಮಾಚಲ ಪ್ರದೇಶದ ಮನಾಲಿ ಪ್ರವಾಸಿಗರ ಸ್ವರ್ಗ. ಈಗಷ್ಟೇ ಮದುವೆಯಾದವರ ಪಾಲಿಗೆ ಹನಿಮೂನ್‌ ಡೆಸ್ಟಿನೇಶನ್‌. ಸಾಹಸಿಗರಿಗೆ ತೆರೆವ ಚಾರಣಗಳೂ ಹಲವು. ಎಲ್ಲ ಬಗೆಯ ಮಂದಿಯನ್ನೂ ಸೆಳೆವ ಅವರೂಪಸ ಸ್ಥಳವಿದು. ಇಲ್ಲಿನ ವಸಿಷ್ಠ ಮಂದಿರದಲ್ಲೊಂದು ಬಿಸಿನೀರ ಕೊಳವಿದೆ. ಇಲ್ಲಿ ಸ್ನಾನಕ್ಕೂ ಅವಕಾಶವಿದೆ. ವರ್ಷದ ೩೬೫ ದಿನಗಳ ಕಾಲವೂ ಸದಾ ಬಿಸಿಬಿಸಿ ನೀರನ್ನೇ ಹೊಂದಿರುವ ಕೊಳವಿದು.

೭. ಬದ್ರೀನಾಥದ ತಪ್ತಕುಂಡ, ಉತ್ತರಾಖಂಡ: ಹಿಂದೂಗಳ ಚಾರ್‌ಧಾಮ್‌ನಲ್ಲಿ ಒಂದಾದ ಬದ್ರೀನಾಥ ದೇವಸ್ಥಾನದ ಪಕ್ಕದಲ್ಲೇ ಹರಿವ ಅಲಕನಂದೆಯ ಮಡಿಲಲ್ಲಿರುವ ತಪ್ತಕುಂಡವೂ ಬಿಸಿನೀರ ಬುಗ್ಗೆಯನ್ನು ಹೊಂದಿದೆ. ಹೀಗಾಗಿ, ಚಳಿಗಾಲದಲ್ಲಿ ಹಿಮ ಹೊದ್ದರೂ, ಥರ ಥರ ನಡುಗುವ ಚಳಿಯಿದ್ದರೂ ಇಲ್ಲಿನ ತಪ್ತಕುಂಡದಲ್ಲಿ ಮುಳುಗೇಳಲು ಯಾವ ಭಯವೂ ಇಲ್ಲ. ಬಿಸಿಬಿಸಿ ನೀರಲ್ಲಿ ಮಿಂದು ದೇವರ ದರ್ಶನ ಮಾಡುವುದು ಇಲ್ಲಿನ ಪದ್ಧತಿ.

ಇದನ್ನೂ ಓದಿ: Travel Tips | ನೀವು ಅಲೆಮಾರಿಗಳೇ? ಹೊಸ ಬಗೆಯ ಪ್ರವಾಸಕ್ಕೆ 5 ಅಣಿಮುತ್ತುಗಳು!

Exit mobile version