Site icon Vistara News

ದೀಪಾವಳಿ ಪ್ರವಾಸ: ಈ ಎಲ್ಲ ಜಾಗಗಳು ಹಣತೆಯ ಹಬ್ಬಕ್ಕೆ ಬೆಸ್ಟ್‌!

diwali

ದೀಪಾವಳಿ ಹಬ್ಬವೇ ಹಾಗೆ. ದೀಪಗಳ ಬೆಳಕು ತರುವ ಉತ್ಸಾಹ, ಚೈತನ್ಯ, ಹೊಸತನಕ್ಕೆ ಸಾಟಿಯಿಲ್ಲ. ಏಕತಾನತೆಗೆ ಹೋಗಿದ್ದ ಬದುಕನ್ನು ಮತ್ತೆ ಭಿನ್ನ ಜಗತ್ತಿಗೆ, ಹೊಸ ಉಲ್ಲಾಸದೆಡೆಗೆ ಕರೆದೊಯ್ಯುವ ಉತ್ಸಾಹ ದೀಪಾವಳಿಗಿದೆ. ನಮ್ಮ ನಮ್ಮ ಮನೆಗಳಲ್ಲಿ ಆಚರಿಸುವ ದೀಪಾವಳಿ ಪ್ರತಿವರ್ಷ ಇದ್ದಿದ್ದೇ. ಈ ವರ್ಷ ಹೊಸತೊಂದು ದೀಪಾವಳಿ ಆಚರಿಸೋಣ, ದೀಪಾವಳಿಗೆ ಸಿಕ್ಕ ರಜೆಯನ್ನು ಸಮರ್ಪಕವಾಗಿ ಬಳಸಿ ಯಾವುದಾದೊಂದು ಹೊಸ ಊರಿಗೆ ಪ್ರವಾಸ ಮಾಡುವ ಮೂಲಕ ಅಲ್ಲಿ ದೀಪಾವಳಿ ಆಚರಿಸೋಣ, ಹೊಸ ಊರಿನ ದೀಪಾವಳಿ ಕಣ್ತುಂಬಿಕೊಳ್ಳೋಣ ಅಂತ ನಿಮಗನಿಸಿದರೆ ಅಂಥವರು ಇಂತಹ ಪ್ರವಾಸಗಳನ್ನು ಮಾಡಬಹುದು. ಆ ಮೂಲಕ ಹೊಸ ಅನುಭವ ನಿಮ್ಮದಾಗಿಸಬಹುದು.

೧. ವಾರಣಾಸಿ: ಕಾಶಿಯೆಂದೇ ಹೆಸರುವಾಸಿಯಾಗಿರುವ ವಾರಣಾಸಿ ಹೇಳಿ ಕೇಳಿ ಜಗತ್ತಿನ ಅತ್ಯಂತ ಹಳೆಯ ನಗರ ಎಂಬ ನಂಬಿಕೆಯಿದೆ. ಶಿವನೇ ಸ್ವತಃ ನಿರ್ಮಿಸಿದ ನಗರಿ ಈ ಕಾಶಿ ಎಂದು ಹಿಂದೂಗಳು ಭಕ್ತಿಯಿಂದ ನಂಬುತ್ತಾರೆ. ಇಂತಹ ಕಾಶಿಯನ್ನು ನೋಡುವ ಆಸೆಯಿದ್ದರೆ ದೀಪಾವಳಿ ಇದಕ್ಕೆ ಪರ್ಫೆಕ್ಟ್‌ ಸಮಯ. ಗಂಗಾನದಿಯ ತೀರದಲ್ಲಿ ದೀಪಗಳ ಸಾಲನ್ನು ನೋಡುತ್ತಾ, ಗಂಗಾರತಿಯ ಭಕ್ತಿಯಲ್ಲಿ ಮುಳುಗೇಳುತ್ತಾ, ಅಷ್ಟೂ ಘಾಟ್‌ಗಳಲ್ಲಿ ಹಣತೆಯ ಸಾಲನ್ನು ಕಣ್ತುಂಬಿಕೊಳ್ಳುತ್ತಾ ಅದ್ಭುತವಾದ ದೀಪಾವಳಿಯನ್ನೂ ಆಚರಿಸಬಹುದು!

೨. ಅಯೋಧ್ಯೆ: ರಾಮಾಯಣದ್ದೇ ಜಾಗದಲ್ಲಿ ಕೂತು ದೀಪಾವಳಿ ಆಚರಿಸುವುವ ಅದೃಷ್ಟ ನಿಮಗೆ ಬೇಕಿದ್ದರೆ, ದೀಪಾವಳಿಗೆ ಅಯೋಧ್ಯೆ ಪ್ಲಾನ್‌ ಮಾಡಬಹುದು. ೨೦೧೮ರಲ್ಲಿ ಮೂರು ಲಕ್ಷ ಹಣತೆಗಳನ್ನು ಉರಿಸುವ ಮೂಲಕ ದೀಪಾವಳಿ ಆಚರಿಸಿ ಗಿನ್ನಿಸ್‌ ದಾಖಲೆಯ ಪುಟಗಳಲ್ಲೂ ಸೇರಿಹೋದ ಅಯೋಧ್ಯೆಯ ದೀಪಾವಳಿ ಜೀವನದ ಅತ್ಯದ್ಭುತ ಗಳಿಗೆಗಳಲ್ಲಿ ಖಂಡಿತಾ ಮುಖ್ಯವೆನಿಸದೆ ಇರದು. ಸರಯೂ ನದಿ, ರಾಮನ ಹುಟ್ಟೂರು, ದಶರಥನ ಅರಮನೆ, ಸೀತೆಯ ಮಹಲು ಹೀಗೆ ಪುರಾಣಕ್ಕೆ ನಮ್ಮನ್ನು ಬೆಸೆಯುವ ಶಕ್ತಿಯಿರುವ ಅಯೋಧ್ಯೆಯನ್ನು ದೀಪಾವಳಿಯ ಸಂದರ್ಭ ಕಣ್ತುಂಬಿಕೊಳ್ಳುವುದೇ ಸೊಗಸು.

೩. ಅಮೃತ್‌ಸರ: ಪಂಜಾಬಿನ ಅಮೃತಸರವನ್ನು ದೀಪಾವಳಿಯಲ್ಲಿ ನೋಡಬೇಕು. ಸಿಖ್ಖರ ಪವಿತ್ರಧಾಮವಾದರೂ ಅಲ್ಲೂ ದೀಪಾವಳಿಗೆ ಮಹತ್ವದ ಸ್ಥಾನವಿದೆ. ಅಮೃತಸರದ ಗೋಲ್ಡನ್‌ ಟೆಂಪಲ್‌ ಕೂಡಾ ದೀಪಗಳಿಂದ ಇನ್ನೂ ಸುಂದರವಾಗಿ ಕಾಣಿಸುತ್ತದೆ. ೧೫೭೭ರಲ್ಲಿ ದೀಪಾವಳಿಯ ಸಂದರ್ಭವೇ ಈ ಗೋಲ್ಡನ್‌ ಟೆಂಪಲ್‌ ಶಿಲಾನ್ಯಾಸ ನಡೆಯಿತು ಎಂದೂ ಹೇಳಲಾಗುತ್ತದೆ. ಸಿಖ್‌ ಗುರು ಹರ್‌ಗೋಬಿಂದ್‌ ಸಾಹಿಬ್‌ ದೀಪಾವಳಿಯ ಸಂದರ್ಭವೇ ಜೈಲಿನಿಂದ ಹೊರಬಂದಿದ್ದರು ಎಂಬ ನಂಬಿಕೆ ಸಿಖ್ಖರಿಗಿದೆ. ಈ ಎಲ್ಲ ಕಾರಣಗಳಿಂದಾಗಿ ಅಮೃತಸರದಲ್ಲಿ ದೀಪಾವಳಿ ಝಗಮಗಿಸುತ್ತದೆ. ಅದಕ್ಕಾಗಿಯೇ ಅಲ್ಲೊಮ್ಮೆ ದೀಪಾವಳಿಯ ಸಂಭ್ರಮ ನೋಡಬೇಕು!

೪. ಉದಯಪುರ: ರಾಜಸ್ಥಾನದಲ್ಲಿ ದೀಪಾವಳಿಗೆ ಅದರದ್ದೇ ಆದ ಮಹತ್ವವಿದೆ. ಹಲವಾರು ಸಾಂಪ್ರದಾಯಿಕ ಆಚರಣೆಗಳಿವೆ. ದೀಪಾವಳಿ ಬಂತೆಂದರೆ ಚಿನ್ನದ ಬಣ್ಣದ ಮರಳುಗಾಡು ದೀಪದ ಬೆಳಕಿನಲ್ಲಿ ಮತ್ತಷ್ಟು ಹೊಳೆಯುತ್ತದೆ. ಉದಯಪುರವೆಂಬ ಅರಮನೆಗಳ ನಗರಿಯ ಸೊಬಗು ದೀಪದ ಬೆಳಕಿನಲ್ಲಿ ಮತ್ತಷ್ಟು ವೈಭವೋಪೇತವಾಗಿ ಕಾಣಿಸುತ್ತದೆ. ಹಾಗಾಗಿ ಉದಯಪುರವೂ ದೀಪಾವಳಿಯ ಸಂದರ್ಭ ಒಂದು ಉತ್ತಮ ಆಯ್ಕೆ.

೫. ಗೋವಾ: ಸಮುದ್ರ ತೀರ, ಪಾಶ್ಚಾತ್ಯ ಸಂಸ್ಕೃತಿಗೇ ಹೆಸರುವಾಸಿಯಾದ ಗೋವಾದಲ್ಲಿ ದೀಪಾವಳಿಯಲ್ಲಿ ಏನು ಸೊಬಗಿದ್ದೀತು ಎನ್ನುತ್ತೀರಾ? ಹಾಗಾದರೆ ನಿಮ್ಮ ಊಹೆ ತಪ್ಪು. ಗೋವಾದಲ್ಲಿ ದೀಪಾವಳಿಯ ಸಂದರ್ಭ ಶ್ರೀಕೃಷ್ಣ ನರಕಾಸುರನನ್ನು ಕೊಂದ ನೆನಪಿಗಾಗಿ ಪ್ರತಿ ಮನೆಯಲ್ಲೂ ಸ್ಪರ್ಧೆಗೆ ಬಿದ್ದವರಂತೆ ಚಿತ್ರವಿಚಿತ್ರ ರಾಕ್ಷಸನ ಪ್ರತಿಕೃತಿ ಮಾಡಿ ಅದನ್ನು ದಹಿಸುವಂಥ ಆಚರಣೆಯಿದೆ. ಇಷ್ಟೇ ಅಲ್ಲ, ಇಲ್ಲಿನ ಜೀವಂತವಾಗಿರುವ ರಾತ್ರಿಗಳು ದೀಪಾವಳಿಯ ಸಂದರ್ಭ ಝಗಮಗಿಸುತ್ತವೆ. ಕ್ಯಾಸಿನೋಗಳು ಇನ್ನಷ್ಟು ಮತ್ತಷ್ಟು ಲವಲವಿಕೆ ಪಡೆಯುತ್ತವೆ. ಅಲ್ಲಿನ ಜೂಜಿಗೆ ಮತ್ತಷ್ಟು ಶಕ್ತಿ ಬರುತ್ತದೆ. ಸಮುದ್ರ ತೀರದಲ್ಲಿ ಥರಹೇವಾರಿ ಲಾಟೀನುಗಳನ್ನು ಹಾರಿಸಿಬಿಡುವ ಅಮೋಘ ದೃಶ್ಯವೂ ಪ್ಲಸ್‌ ಪಾಂಯಿಂಟೇ. ಸಂಭ್ರಮ, ಸಡಗರ, ಮೋಜು ಮಸ್ತಿ ಇರುವ ಹ್ಯಾಪನಿಂಗ್‌ ದೀಪಾವಳಿ ಬೇಕೆಂದರೆ ಗೋವಾ ಬೆಸ್ಟ್‌ ಸ್ಥಳ!

Exit mobile version