Site icon Vistara News

Christmas celebration | ಕ್ರಿಸ್‌ಮಸ್‌ ಸಂಭ್ರಮಾಚರಣೆಗೆ ಭಾರತದ ಈ ಎಲ್ಲ ತಾಣಗಳು ಬೆಸ್ಟ್‌!

christmas celebration

ವರ್ಷಾಂತ್ಯದಲ್ಲಿ ಬರುವ ಕ್ರಿಸ್‌ಮಸ್‌ ಒಂದು ಬಗೆಯ ಖುಷಿ, ಸಡಗರಗಳನ್ನು ಎಲ್ಲೆಡೆ ಚಿಮ್ಮಿ, ವರ್ಷವೊಂದನ್ನು ಅದ್ಭುತವಾಗಿ, ಮುಗಿಸಿದ ತೃಪ್ತಿಯೊಂದಿಗೆ ಮುಂದಿನ ಹೊಸವರ್ಷಕ್ಕೆ ಒಂದಿಷ್ಟು ನಿರೀಕ್ಷೆಯನ್ನೂ ಹುಟ್ಟು ಹಾಕುವ ಸಂಭ್ರಮಾಚರಣೆ. ವರ್ಷಪೂರ್ತಿ ದುಡಿದು ಸುಸ್ತಾಗಿ, ಬದಲಾವಣೆ ಬಯಸುವ ಎಲ್ಲ ಜೀವಗಳನ್ನು ಈ ಕ್ರಿಸ್‌ಮಸ್‌ ಸಡಗರ ಒಂದಿಷ್ಟು ರಿಲ್ಯಾಕ್ಸ್‌ ಮಾಡಿಸಿ ಮುಂದಿನ ವರ್ಷಕ್ಕೆ, ಮುಂದಿನ ಕೆಲಸಗಳಿಗೆ ತಯಾರು ಮಾಡುತ್ತದೆ. ಇಂತಹ ಸಂದರ್ಭ ಕೈಯಲ್ಲಿ ಸಾಕಷ್ಟು ರಜೆಗಳನ್ನು ಇಟ್ಟುಕೊಂಡು ಬಹುತೇಕರು ಎಲ್ಲಿಗೆ ಹೋಗೋಣ ಎಂದು ತಲೆಕೆಡಿಸಿಕೊಂಡು ಕೊನೇ ಕ್ಷಣದಲ್ಲಿ ಯೋಜನೆಗಳನ್ನು ಹಾಕಿಕೊಂಡು ಹೊರಟು ನಿಲ್ಲುವವರೂ ಇದ್ದಾರೆ. ಹಾಗಾಗಿಯೇ ಕ್ರಿಸ್‌ಮಸ್‌ ಹಾಗೂ ಹೊಸ ವರ್ಷದ ಸಂದರ್ಭ ಬಹುತೇಕ ಎಲ್ಲ ಖ್ಯಾತ ಪ್ರವಾಸೀ ತಾಣಗಳು ಜನರಿಂದ ತುಂಬಿ ತುಳುಕುತ್ತವೆ.  ನಮ್ಮ ದೇಶದಲ್ಲಿಯೇ ಕ್ರಿಸ್‌ಮಸ್‌ನ ಸಂಭ್ರಮವನ್ನು ನೋಡಲು ಸಾಕಷ್ಟು ತಾಣಗಳಿವೆ. ಹಬ್ಬದ ಮೂಡನ್ನು ತರಿಸುವ ಇಂತಹ ಜಾಗಗಳು ಯಾವುವು ನೋಡೋಣ.

ದಿಯು ದಾಮನ್‌, ದಾದ್ರ ಮತ್ತು ನಗರ್‌ ಹವೇಲಿ: ಕೇಂದ್ರಾಡಳಿತ ಪ್ರದೇಶಗಳಾದ ದಿಯು ದಾಮನ್‌, ದಾದ್ರಾ ಹಾಗೂ ನಗರ್‌ ಹವೇಲಿಯಲ್ಲಿ ಸುತ್ತಾಡಿ ಬರಲು ಕ್ರಿಸ್‌ಮಸ್‌ನಂತಹ ಇನ್ನೊಂದು ಅತ್ಯುತ್ತಮ ಸಮಯ ಇನ್ನೊಂದಿಲ್ಲ. ಈ ಇಡೀ ಪರಿಸರವೇ ಕ್ರಿಸ್‌ಮಸ್‌ಗಾಗಿ ಶೃಂಗಾರಗೊಳ್ಳುತ್ತದೆ. ಇಲ್ಲಿನ ಎಲ್ಲಾ ಚರ್ಚ್‌ಗಳಲ್ಲೂ ಮಧ್ಯರಾತ್ರಿಯ ಸಂಭ್ರಮಾಚರಣೆಗಳೂ ನಡೆಯುತ್ತವೆ. ಪೋರ್ಚುಗೀಸ್‌ ನೃತ್ಯಗಳು, ಎಲ್ಲೆಡೆ ಕ್ರಿಸ್‌ಮಸ್‌ ಪಾರ್ಟಿಗಳು, ಶಾಪಿಂಗ್‌ ಉತ್ಸವಗಳು ಧಾಂ ಧೂಂ ಆಗಿ ನಡೆಯುತ್ತವೆ. ಕೆಂಪು, ಹಸಿರು ಹಾಗೂ ಬಿಳಿ ಬಣ್ಣಗಳಲ್ಲಿ ಸಜ್ಜಾಗಿ ರಾತ್ರಿ ಪಳಪಳ ವಿದ್ಯುದ್ದೀಪಗಳಿಂದ ಇದು ಝಗಮಗಿಸುತ್ತದೆ. ಒಂದು ವರ್ಷವನ್ನು ಚಂದಕ್ಕೆ ಸ್ಮರಣೀಯವಾಗಿ ಮುಗಿಸಲು ಇದಕ್ಕಿಂದ ಚಂದದ ಜಾಗ ಬೇಕಿಲ್ಲ.

ಗೋವಾ: ಗೋವಾದ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಯಾಕೆಂದರೆ ಈ ಸಮುದ್ರ ತೀರದ ನಗರಿಯೇ ಹಾಗೆ. ವರ್ಷಪೂರ್ತಿ ಸಡಗರ ಮೂಡಿನಲ್ಲೇ ಇರುತ್ತದೆ. ಆದರೆ, ಕ್ರಿಸ್‌ಮಸ್‌ ಹಾಗೂ ಹೊಸವರ್ಷಗಳಲ್ಲಿ ಸ್ವಲ್ಪ ಹೆಚ್ಚೇ ಇರುತ್ತದೆ. ನೀವು ಪಾರ್ಟಿಪ್ರಿಯರಾಗಿದ್ದಲ್ಲಿ, ಕ್ರಿಸ್‌ಮಸ್‌, ಹೊಸ ವರ್ಷಗಳನ್ನು ಗೆಳೆಯರ ಗುಂಪಿನಲ್ಲಿ ಮಸ್ತಾಗಿ ಸಂಭ್ರಮಿಸುವ ಮೂಡಿರುವ ಮಂದಿ ಎಂದಾದಲ್ಲಿ ಒಮ್ಮೆಯಾದರೂ ಕ್ರಿಸ್‌ಮಸ್‌ ಸಮಯದಲ್ಲಿ ಗೋವಾಕ್ಕೆ ಹೋಗಬೇಕು. ಕ್ರಿಸ್‌ಮಸ್‌ಗಾಗಿಯೇ ಇಲ್ಲಿ ಏರ್ಪಡುವ ಪಾರ್ಟಿಗಳು, ಚರ್ಚ್‌ಗಳಲ್ಲಿರುವ ವಿಶೇಷ ಅಲಂಕಾರಗಳು, ಝಗಮಗಿಸುವ ರಾತ್ರಿಗಳು ಎಲ್ಲವೂ ಬೇರೆಯದೇ ಲೋಕಕ್ಕೆ ನಿಮ್ಮನ್ನು ಕೊಂಡೊಯ್ಯುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ, ಕೊನೆಯ ಕ್ಷಣದ ಪ್ಲಾನಿಂಗ್‌ ಖಂಡಿತ ಫ್ಲಾಪ್‌ ಆಗಬಹುದು. ಮೊದಲೇ ಪ್ಲಾನ್‌ ಮಾಡಿಕೊಂಡಿದ್ದರೆ ಒಳ್ಳೆಯದು.

ಶಿಲ್ಲಾಂಗ್‌: ಮೇಘಾಲಯದ ಶಿಲ್ಲಾಂಗ್‌ ಕೂಡಾ ಕ್ರಿಸ್‌ಮಸ್‌ಗೆ ಹೇಳಿ ಮಾಡಿಸಿದ ಜಾಗ. ಈಶಾನ್ಯ ರಾಜ್ಯಗಳ ಪೈಕಿ ಅತ್ಯಂತ ಪ್ರಮುಖ ಹಾಗೂ ಪ್ರವಾಸೋದ್ಯಮದಲ್ಲಿ ಮುಂಚೂಣಿಯಲ್ಲಿರುವ ಮಳೆನಾಡು ಮೇಘಾಲಯದ ಶಿಲ್ಲಾಂಗ್‌ ಕ್ರಿಸ್‌ಮಸ್‌ನಲ್ಲಿ ಕೆಂಪೇರುತ್ತದೆ. ಇಲ್ಲಿನ ಚರ್ಚ್‌ಗಳು, ರಸ್ತೆಗಳು, ಬದಿಬದಿಯಲ್ಲಿ ಸಾಲಾಗಿ ಚಳಿಗಾಲಕ್ಕೆ ಅರಳಿ ನಿಂತ ಹೂಗಳ ಜೊತೆಗೆ ಸುಂದರವಾಗಿ ಕಾಣುತ್ತದೆ. ವರ್ಷಪೂರ್ತಿ ಎಡೆಬಿಡದೆ ಸುರಿವ ಮಳೆಗೆ ತಣ್ಣಗೆ ಮಲಗಿರುವ ಊರು ಝಗಮಗಿಸಿ ಚುರುಕಾಗುವುದು ಕ್ರಿಸ್‌ಮಸ್‌ಗೇ.

ಇದನ್ನೂ ಓದಿ | Christmas Decoration | ಕ್ರಿಸ್ಮಸ್‌ ಆಕರ್ಷಕ ಡೆಕೋರೇಷನ್‌ಗೆ ಇಲ್ಲಿದೆ 5 ಐಡಿಯಾ

ಪಾಂಡಿಚೇರಿ: ಪಾಂಡಿಚೇರಿ ಎಂಬ ಪುಟಾಣಿ ನಗರ ಖಂಡಿತ ಪ್ರವಾಸಿಗರಲ್ಲೊಂದು ಅದ್ಭುತ ಅನುಭವ ಕಟ್ಟಿಕೊಡುತ್ತದೆ. ಪುಟಾಣಿ ಫ್ರಾನ್ಸ್‌ ಎಂದು ಕರೆಯಲ್ಪಡುವ ಇದು ನಿಜಕ್ಕೂ ತನ್ನ ಶುಚಿತ್ವ, ಒಪ್ಪ ಓರಣ, ಹಳೇ ಫ್ರೆಂಚ್‌ ವಸಾಹತುಶಾಹೀ ಕಟ್ಟಡಗಳ ಶೈಲಿಯಿಂದ ವಿಶೇಷವಾಗಿ ಆಕರ್ಷಿಸುತ್ತದೆ. ಧ್ಯಾನ ಕೇಂದ್ರಗಳು, ಆಶ್ರಮಗಳಿಂದ ಹಿಂದೂಗಳನ್ನು ಸೆಳೆದಷ್ಟೇ, ಕ್ರಿಸ್‌ಮಸ್‌ಗೂ ಇಲ್ಲೆ ಪಾತಿನಿಧ್ಯವಿದೆ. ಇಲ್ಲಿನ ಚರ್ಚ್‌ಗಳು ಕ್ರಿಸ್‌ಮಸ್‌ಗೆಂದೇ ವಿಶೇಷವಾಗಿ ಸಜ್ಜಾಗಿ, ನಗರವಿಡೀ ವಿದ್ಯುದ್ದೀಪಗಳಿಂದ ಝಗಮಗಿಸುತ್ತದೆ. ಬೆಂಗಳೂರಿನಿಂದ ದಿಢೀರ್‌ ಭೇಟಿ ಕೊಡಬಹುದಾದ ಅದ್ಭುತ ಜಾಗವಿದು.

ಕೇರಳ: ಕೇರಳವನ್ನು ನೋಡಲು ಇಂಥದ್ದೇ ಸಮಯ ಬೇಕೆಂದಿಲ್ಲ. ಕೇರಳದ ಬಹುತೇಕ ಎಲ್ಲ ಪ್ರವಾಸೀ ತಾಣಗಳೂ ರಿಸ್‌ಮಸ್‌ ಸಂದರ್ಭ ಭೆಟಿಗೆ ಯೋಗ್ಯವೇ. ಯಾಕೆಂದರೆ, ಕೇರಳದ ಇನ್ನೊಂದು ಆಯಾಮವನ್ನು ಕಣ್ತುಂಬಿಕೊಳ್ಳಲು ಕ್ರಿಸ್‌ಮಸ್‌ ಸಂದರ್ಭ ಭೇಟಿಕೊಡಬೇಕು. ಇಲ್ಲಿನ ಚರ್ಚ್‌ಗಳಲ್ಲಿ ನಡೆವ ಪ್ರಾರ್ಥನೆಗಳು, ವಿಶೇಷ ಅಲಂಕಾರಗಳು, ಅಲಂಕಾರಗಳ ಹಿನ್ನೆಲೆಯಲ್ಲಿ, ಸಹಜ ಪ್ರಾಕೃತಿಕ ಸೌಂದರ್ಯ, ನೀಲಿ ಹಿನ್ನೀರಿನ ಹಿನ್ನೆಲೆಯಲ್ಲಿ ಅಲಂಕೃತ ಊರುಗಳು ನೋಡುವುದೇ ಒಂದು ಸಡಗರ!

ಇದನ್ನೂ ಓದಿ | New Year 2023 | ಹೊಸ ವರ್ಷಾಚರಣೆಗೆ ರಾಜಧಾನಿ ರೆಡಿ; ಪ್ರೇಮಿಗಳು, ಪತಿ-ಪತ್ನಿ ಡ್ಯಾನ್ಸ್‌ಗೆ ಸ್ಪೆಷಲ್ ಫ್ಲೋರ್, ರಕ್ಷಣೆಗೆ ಲೇಡಿ ಬೌನ್ಸರ್ಸ್!

Exit mobile version