Site icon Vistara News

Deepavali 2023: ಭಾರತದ ಈ ಊರುಗಳ ದೀಪಾವಳಿಯ ಸಂಭ್ರಮ ಒಮ್ಮೆಯಾದರೂ ಕಣ್ತುಂಬಿಕೊಳ್ಳಲೇಬೇಕು!

Young man bursts crackers

ನವರಾತ್ರಿ ಕಳೆದ ಕೂಡಲೇ ಎಲ್ಲರೂ ಸಜ್ಜಾಗುವುದು ದೀಪಾವಳಿಗೆ. ಈ ಹಬ್ಬಕ್ಕೆ ಭಾರತವಿಡೀ ದೀಪಗಳಿಂದ ಕಂಗೊಳಿಸುವುದನ್ನು ನೋಡುವುದೇ ಚಂದ. ಮನೆಮನೆಯಲ್ಲೂ ಪುಟಟ ಪುಟ್ಟ ಹಣತೆಗಳು ಬೆಳಗುವುದೇ ಜೀವನೋತ್ಸಾಹ ಇಮ್ಮಡಿಸುತ್ತದೆ. ಪಾಸಿಟಿವ್‌ ಶಕ್ತಿ ಕೊಡುತ್ತದೆ. ದೀಪಾವಳಿ (deepavali 2023) ಹಬ್ಬದ ತಾಕತ್ತೇ ಅದು. ಈ ದೀಪಗಳ ಹಬ್ಬವನ್ನು ಮನೆಮನೆಯಲ್ಲೂ ಹೀಗೆ ಸಂಭ್ರಮದಿಂದ ಆಚರಿಸುತ್ತೇವಾದರೂ, ಕೆಲವೊಂದು ಊರುಗಳ ದೀಪಾವಳಿಯೇ (diwali celebration) ನೋಡಲು ಸೊಗಸು. ಅದಕ್ಕಾಗಿ ಒಮ್ಮೆಯಾದರೂ ಹಬ್ಬದ ಸಂಭ್ರಮವನ್ನು ಕಣ್ತುಂಬಿಕೊಳ್ಳಲಾದರೂ ಇಂಥ ಊರುಗಳಿಗೆ ಪ್ರಯಾಣ ಮಾಡಬೇಕು. ದೀಪಾವಳಿಯಲ್ಲಿ ಈ ಊರುಗಳು ಚಂದ ಕಂಡಷ್ಟು ಮತ್ಯಾವತ್ತೂ ಕಾಣದು. ಅದಕ್ಕಾಗಿಯೇ ಒಮ್ಮೆಯಾದರೂ ಯೋಚಿಸಿ, ಯೋಜಿಸಿ ದೀಪಾವಳಿಯ ಸಂದರ್ಭ ಭಾರತದ ಈ ಎಲ್ಲ ನಗರಿಗಳಿಗೆ ಪ್ರವಾಸ ಮಾಡಿಬನ್ನಿ.

೧. ಅಯೋಧ್ಯೆ: ಶ್ರೀರಾಮಚಂದ್ರ ಜನಿಸಿದ ಅಯೋಧ್ಯೆ ಪಟ್ಟಣವೆಂದರೆ, ಹಿಂದೂಗಳಿಗೆ ಪವಿತ್ರ ಜಾಗ. ಶ್ರೀರಾಮ ಸೀತೆ ಹಾಗೂ ಲಕ್ಷ್ಮಣರೊಂದಿಗೆ ವನವಾಸದಿಂದ ಮರಳಿದ ದಿನ ದೀಪಾವಳಿ. ಹೀಗಾಗಿ, ಅಯೋಧ್ಯೆಯ ಜನರೆಲ್ಲರೂ ಮನೆಮನೆಯಲ್ಲೂ ದೀಪ ಹಚ್ಚಿ ಸಂಭ್ರಮಿಸಿದ ಕಾಲವದು. ಹೀಗಾಗಿ ಇಂದಿಗೂ ಅಯೋಧ್ಯೆಯ ಮಂದಿಗೆ ದೀಪಾವಳಿಯೆಂದರೆ ಎಲ್ಲಿಲ್ಲದ ಸಂಭ್ರಮ. ಸರಯೂ ನದಿಯ ತೀರದಲ್ಲೆಲ್ಲ ಸಾಲು ಸಾಲು, ಲಕ್ಷೋಪಲಕ್ಷ ದೀಪ ಹಚ್ಚಿ ಅಯೋಧ್ಯೆಗೆ ಅಯೋಧ್ಯೆಯೇ ಬೆಳಗುತ್ತದೆ. ನೋಡಲು ಎರಡು ಕಣ್ಣು ಸಾಲದು ಎಂಬ ಭಾಯ ಇಲ್ಲಿಗೆ ಬಂದೇ ಅನುಭವಿಸಬೇಕು.

udaipur

೨. ವಾರಣಾಸಿ: ಭೂಮಿಯ ಮೇಲಿನ ಅತ್ಯಂತ ಹಳೆಯ ಪಟ್ಟಣವೆಂದರೆ ಅದು ವಾರಣಾಸಿ ಎಂಬ ನಂಬಿಕೆ ಹಿಂದೂಗಳದ್ದು. ಸಾಕ್ಷಾತ್‌ ಶಿವನೇ ನಿರ್ಮಿಸಿದ ಪಟ್ಟಣವಿದು. ಹಾಗಾಗಿ, ಭಕ್ತಿಯ ಸುಧೆಯಲ್ಲಿ ಮಿಂದೇಳಲು ಕಾಶಿಗಿಂತ ಬೇರೆ ಜಾಗ ಭೂಮಿಯ ಮೇಲೆ ಎಲ್ಲಿದೆ ಹೇಳಿ. ಅದರಲ್ಲೂ, ದೀಪಾವಳಿಯಲ್ಲಿ ಕಾಶಿ ಝಗಮಗಿಸುತ್ತದೆ. ಎಲ್ಲೆಲ್ಲೂ ಅಲಂಕಾರ, ಪೂಜೆ, ದೀಪಗಳ ಸಾಲು ಸಾಲು, ಗಂಗಾರತಿ, ಗಂಗೆಯಲ್ಲಿ ತೇಲಿಬಿಡುವ ದೀಪಗಳ ಸಾಲು… ಆಹಾ, ಒಮ್ಮೆಯಾದರೂ ಕಾಶಿಯಲ್ಲಿ ದೀಪಾವಳಿಯ ಸಂಭ್ರಮ ನೋಡಬೇಕು. ಅದರಲ್ಲೂ ಹುಣ್ಣಿಮೆಯ ದಿನ ಆಚರಿಸುವ ದೇವ ದೀಪಾವಳಿಯನ್ನು ನೋಡಬೇಕು.

udaipur

೩. ಅಮೃತಸರ: ಪಂಜಾಬಿನ ಸಿಖ್ಖರ ನೆಲದ ಅಮೃತಸರವೂ ಕೂಡಾ ದೀಪಾವಳಿಯಲ್ಲಿ ಅದ್ಭುತವಾಗಿ ಕಾಣುತ್ತದೆ. ಸಿಖ್ಖರ ಆರನೇ ಗುರು ಅರ್‌ಗೋವಿಂದ್‌ ಸಿಂಗ್‌ ಅವರು ಜೈಲಿನಿಂದ ೧೬೧೯ರಲ್ಲಿ ದೀಪಾವಳಿಯಂದೇ ಮರಳಿದ ಕಾರಣ ಸಿಖ್ಖರೂ ಕೂಡಾ ಇದನ್ನು ಸಂಭ್ರಮದಿಂದ ಆಚರಿಸುತ್ತಾರೆ. ೧೫೭೭ರಲ್ಲಿ ದೀಪಾವಳಿಯಂದೇ ಅಮೃತಸರದ ಗೋಲ್ಡನ್‌ ಟೆಂಪಲ್‌ನ ಶಿಲಾನ್ಯಾಸ ಕಾರ್ಯಕ್ರಮವೂ ನಡೆದ ಕಾರಣ ದೀಪಾವಳಿಯ ಸಂಭ್ರಮಕ್ಕೆ ಹಲವು ಕಾರಣಗಳು. ಗೋಲ್ಡನ್‌ ಟೆಂಪಲ್‌ ದೀಪಾವಳಿಯ ದೀಪಗಳಲ್ಲಿ ಕಂಗೊಳಿಸುವುದನ್ನು ಕಣ್ತುಂಬಬೇಕಾದರೆ, ದೀಪಾವಳಿಯ ಸಂದರ್ಭವೇ ಹೋಗಬೇಕು.

೪. ಉದಯಪುರ: ರಾಜಸ್ಥಾನದ ಉದಯಪುರ ಅರಮನೆಗಳ ನಗರಿ. ಝಗಮಗಿಸುವ ಕಟ್ಟಡಗಳ ದೀಪಾಲಂಕಾರಗಳು, ದೇವಸ್ಥಾನಗಳಲ್ಲಿ ಪೂಜೆಗಳು ಇತ್ಯಾದಿಗಳಿಂದಾಗಿ ಉದಯಪುರ ದೀಪಾವಳಿಗೆ ಬೇರೆಯೇ ಖದರಿನಲ್ಲಿ ಮಿಂದೇಳುತ್ತದೆ. ೨೦೧೨ರಿಂದ ರಾಜಸ್ಥಾನ ಸರ್ಕಾರವೂ ಕೂಡಾ ಅಧಿಕೃತವಾಗಿ ದೀಪಾವಳಿ ಆಚರಿಸಲು ಆರಂಭಿಸಿದೆ.

udaipur

೫. ಕೋಲ್ಕತ್ತಾ: ಕೋಲ್ಕತ್ತಾದ ಮಂದಿ ಕಾಳಿ ಮಾತೆಯ ಪೂಜೆಗೆ ಹೆಚ್ಚು ಪ್ರಾತಿನಿಧ್ಯ ನೀಡುತ್ತಾರೆ. ಹೀಗಾಗಿ ಇಲ್ಲಿನ ಕಾಳಿ ಮಂದಿರಗಳಲ್ಲಿ ದೀಪಾವಳಿಯ ವಿಶೇಷ ಸಂದರ್ಭದಲ್ಲಿ ದೇವಿಯ ಪೂಜೆಗಾಗಿ ಭಕ್ತಗಣದ ಸಂಭ್ರಮ ಮುಗಿಲು ಮುಟ್ಟುತ್ತದೆ. ಮುಖ್ಯವಾಗಿ ನವರಾತ್ರಿಯ ಸಂಬ್ರಮಾಚರಣೆಯ ಗೌಜು ದೀಪಾವಳಿಯವರೆಗೂ ಮುಂದುವರಿದಿರುತ್ತದೆ. ಹೀಗಾಗಿ ದೀಪಾವಳಿಯಲ್ಲಿ ಕೋಲ್ಕತ್ತಾವನ್ನು ನೋಡುವುದೂ ಕೂಡಾ ಚಂದವೇ.

ಇದನ್ನೂ ಓದಿ: Deepavali 2023: ಈ ದೀಪಾವಳಿಗೆ ಪರ್ಫೆಕ್ಟ್‌ ಲಡ್ಡುಗಳನ್ನು ಮಾಡಬೇಕೇ? ಹಾಗಿದ್ದರೆ, ಈ ತಪ್ಪುಗಳನ್ನು ಮಾಡಬೇಡಿ!

Exit mobile version