ಚಳಿಗಾಲ ಬಂತೆಂದರೆ ಸಾಕು, ಇರುವ ರಜೆಯಲ್ಲಿ ಬೆಚ್ಚಗೆ ಹೊದ್ದು ಮನೆಯಲ್ಲಿ ಮಲಗುವ ಅನಿಸಿದರೆ ತಪ್ಪಲ್ಲ. ಚಳಿಗಾಲದ ಆಲಸ್ಯದಿಂದ ಹೊರಬರಲು ನಿಜವಾದ ಮನೋ ಇಚ್ಛೆ ಬೇಕಾಗುತ್ತದೆ. ಇಂಥದ್ದೊಂದು ಆತ್ಮಬಲದಿಂದ ನೀವು ಬೆಚ್ಚನೆಯ ಬ್ಲ್ಯಾಂಕೆಟ್ ಒಳಗಿಂದ ಹೊರಗಿಣುಕಿದರೆ ಭಾರತದಲ್ಲಿ ಅದ್ಭುತವೆನಿಸುವ ಜಾಗಗಳು ಬೇಕಾದಷ್ಟಿವೆ. ಒಂದಿಷ್ಟು ರಜೆಯನ್ನು ಒಟ್ಟು ಹಾಕಿದರೆ, ಚಳಿಗಾಲದಲ್ಲೇ ಹೋಗಬೇಕಾದ ಜಾಗಗಳು ಅನೇಕ. ನೀವು ಪ್ರವಾಸೀ ಪ್ರಿಯರಾಗಿದ್ದರೆ ಕನಿಷ್ಟ ಮರಳುಗಾಡಿನ ಅನುಭವವನ್ನಾದರೂ ನಿಮ್ಮದಾಗಿಸಿಕೊಳ್ಳಬೇಕು.
ಹೌದು, ರಾಜಸ್ಥಾನ ಎಂಬ ರಾಜ್ಯವೇ ಹಾಗೆ. ಕಲರ್ಫುಲ್. ಇಲ್ಲಿನ ಅತ್ಯಪೂರ್ವ ಕುಶಲಕಲೆ, ವಾಸ್ತುಶಿಲ್ಪದ ಬೆರಗೇ ಒಂದೆಡೆಯಾದರೆ, ಭೂಪ್ರದೇಶದ ಸೊಬಗೇ ಮತ್ತೊಂದು ಬಗೆಯಲ್ಲಿ ಸುಂದರ. ʻಅಯ್ಯೋ, ಅದೊಂದು ಮರುಭೂಮಿ, ಬೆಂಗಾಡು, ಇಲ್ಲಿ ಜನವಸತಿ ಕಡಿಮೆ, ನೀರಿಗೆ ಬರ, ಬಿಸಿಲೋ ಬಿಸಿಲು, ಯಾರಿಗೆ ಬೇಕು ಇಲ್ಲಿಂದ ಅಲ್ಲಿ ಹೋಗಿ ಸಾಯುವ ಪರಿಸ್ಥಿತಿʼ ಎಂದು ಯೋಚಿಸುತ್ತಾ ಮೂಗು ಮುರಿದರೆ ನಿಮ್ಮಷ್ಟು ಅದೃಷ್ಟ ಹೀನರು ಇನ್ನೊಬ್ಬರಿಲ್ಲ. ಯಾಕೆಂದರೆ, ಹೋಗಿ ನೋಡಿದರಷ್ಟೇ ಅದು ನಿಮ್ಮ ತಪ್ಪು ತಿಳುವಳಿಕೆ ಎಂದು ಅರಿವಾಗುತ್ತದೆ. ಅದಕ್ಕಾಗಿಯೇ ಚಳಿಗಾಲದಲ್ಲಿ ರಾಜಸ್ಥಾನಕ್ಕೆ ಭೇಟಿ ಕೊಡಬೇಕು. ಹೆಚ್ಚು ಬಿಸಿಲೂ ಇಲ್ಲದ, ಸುಖಾಸುಮ್ಮನೆ ರಾಜಸ್ಥಾನದ ಎಲ್ಲ ಜಾಗಗಳಲ್ಲಿ ಮನಸೋ ಇಚ್ಛೆ ತಿರುಗಾಡಬಹುದಾದ ಕಾಲವಿದು.
೧. ಜೈಸಲ್ಮೇರ್‌ನ ಮರುಳುಗಾಡಿನಲ್ಲೊಂದು ರಾತ್ರಿ: ಮರುಳುಗಾಡಿನಲ್ಲಿ ರಾತ್ರಿ ಕಳೆಯುವ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ಅದಕ್ಕೆ ನೀವು ಬೇರೆ ದೇಶಕ್ಕೆ ಹೋಗುವ ಬಗ್ಗೆ ಚಿಂತಿಸಬೇಕಾಗಿಲ್ಲ. ನಮ್ಮ ದೇಶದ ಥಾರ್ ಮರುಳುಗಾಡಿನ ಥರಗುಟ್ಟುವ ರಾತ್ರಿಯ ಅನುಭವ ಹೊಂದದಿದ್ದರೆ ನಮ್ಮ ಭಾರತದಲ್ಲಿದ್ದೂ ವೇಸ್ಟ್. ಈ ಅನುಭವವನ್ನು ಚೆನ್ನಾಗಿ ಹೊಂದಬೇಕೆಂದರೆ ರಾಜಸ್ಥಾನದ ಜೈಸಲ್ಮೇರಿಗೆ ನೀವು ಚಳಿಗಾಲದಲ್ಲಿ ಹೋಗಬೇಕು. ಹಗಲಿನ ಬಿಸಿಲಿನ ಜೊತೆಗೆ ಮೈಗೆ ಅಡರುವ ಚಳಿಗಾಳಿಯ ಸುಖವನ್ನು ಅನುಭವಿಸುತ್ತಾ, ಸಂಜೆಯ ಹೊತ್ತು ಟೆಂಟ್ ಸೇರಿಕೊಂಡರೆ, ರಾತ್ರಿ ದಪ್ಪನೆಯ ಸ್ವೆಟರ್ ತೊಟ್ಟು, ಚಳಿ ಕಾಯಿಸುತ್ತಾ, ಕಣ್ಣು ಹಾಯಿಸಿದಷ್ಟೂ ದೂರ ಕಾಣುವ ಹೊಂಬಣ್ಣದ ಮರಳ ರಾಶಿಯನ್ನು ನೋಡುತ್ತಾ, ಆಕಾಶದಲ್ಲಿ ಹೊಳೆವ ನಕ್ಷತ್ರಗಳನ್ನು ಕಣ್ತುಂಬಿಕೊಳ್ಳುತ್ತಾ, ಒಂಟೆಗಳ ಮೇಲೆ ಸವಾರಿ ಮಾಡುತ್ತಾ, ಸಾಹಸೀ ಪ್ರವೃತ್ತಿಯಿದ್ದರೆ ಧೂಳೆಬ್ಬಿಸುವ ಜೀಪ್ ಸಫಾರಿ ಮಾಡುತ್ತಾ ಚಳಿಗಾಲದ ಮರಳುಗಾಡಿನ ಅನುಭವವನ್ನು ಜೀವನದ ಅತ್ಯಪೂರ್ವ ಅನುಭವಗಳಲ್ಲಿ ಒಂದಾಗಿಸಬಹುದು! ಅದಕ್ಕಾಗಿ ಜೈಸಲ್ಮೇರ್ ಬೆಸ್ಟ್. ಇದಲ್ಲದೆ, ಇಲ್ಲಿ ಪ್ರವಾಸಿಗರಿಂದ ಗಿಜಿಗುಡುತ್ತಿದೆ ಅನಿಸಿದರೆ, ಒಂದಿಷ್ಟು ಹುಡುಕಾಡಿ ಹತ್ತಿರದ ಹೆಚ್ಚು ಪ್ರವಾಸಿಗರಿಲ್ಲದ ಜಾಗಗಳನ್ನು ಹುಡುಕಬಹುದು. ಕುಡಿಯಂತಹ ಜಾಗಗಳು ನಿಮಗೆ ಇಂಥ ಎಲ್ಲ ಅನುಭವಗಳನ್ನು ನೀಡಬಹುದು.
೨. ಪುಷ್ಕರ್ ಎಂಬ ಒಂಟೆಯೂರು: ಈ ಹೆಸರು ಕೇಳಿದ ತಕ್ಷಣ ನೆನಪಾಗುವುದು ಪ್ರತಿವರ್ಷ ಇಲ್ಲಿ ನಡೆಯುವ ಒಂಟೆ ಮೇಳ. ಛಾಯಾಗ್ರಾಹಕರುಗಳಿಗೆ, ಪ್ರವಾಸಿಪ್ರಿಯರಿಗೆ ಇಲ್ಲಿ ನಡೆಯುವ ಈ ಉತ್ಸವವನ್ನು ನೋಡುವುದೇ ಬಕೆಟ್ ಲಿಸ್ಟಿನ ಮುಖ್ಯ ಉದ್ದೇಶವಾದರೂ ಇಲ್ಲಿ ನೋಡಲು ಕೆಲವು ಜಾಗಗಳಿವೆ. ಇಲ್ಲಿನ ಬ್ರಹ್ಮ ದೇವಸ್ಥಾನ, ಸರೋವರ ಕೂಡಾ ನೋಡಬಹುದಾದ ಜಾಗಗಳ ಪಟ್ಟಿಗೇ ಸೇರುತ್ತದೆ. ಹಿಂದೂ ಹಾಗೂ ಸಿಖ್ಖರಿಗೂ ಇದು ಪವಿತ್ರ ಜಾಗಗಳು. ಇಲ್ಲಿಂದ ಸುಮಾರು ೧೦ ಕಿಮೀ ದೂರದಲ್ಲಿ ಪ್ರಸಿದ್ಧ ಅಜ್ಮೇರ್ ದರ್ಗಾ ಕೂಡಾ ಇದೆ. ಹಾಗಾಗಿ ಬಹುತೇಕ ಎಲ್ಲ ಧರ್ಮದವರನ್ನೂ ತನ್ನೆಡೆಗೆ ಸೆಳೆಯುವ ತಾಕತ್ತು ಪುಷ್ಕರ್‌ಗಿದೆ. ಪಿಂಕ್ ಸಿಟಿ ಜೈಪುರದಿಂದ ಸುಮಾರು ೧೫೦ ಕಿಮೀ ದೂರದಲ್ಲಿರುವ ಇದು ಜೈಪುರ ಪ್ರವಾಸ ಮಾಡಬಯಸುವವರ ಪಟ್ಟಿಯಲ್ಲಿ ಒಂದು ದಿನದ ಭೇಟಿಗೆ ಇರಿಸಿಕೊಳ್ಳಬಹುದಾದ ಜಾಗ ಇದು.
೩. ಅತ್ಯದ್ಭುತ ವಾಸ್ತುಶಿಲ್ಪ: ಹೆಚ್ಚು ತ್ರಾಸವಿಲ್ಲದೆ ಅಲೆದಾಡಿಕೊಂಡು ಅದ್ಭುತ ವಾಸ್ತುಶಿಲ್ಪಗಳಿರುವ ಜೈನ ಮಂದಿರಗಳನ್ನೂ, ಹಳೆಯ ಹವೇಲಿಗಳನ್ನು ನೋಡಬೇಕೆಂದರೆ ಬಿಕಾನೇರ್, ಉದಯಪುರ, ಜೋಧಪುರಕ್ಕೆ ಹೋಗಬೇಕು. ನೀಲಿನಗರಿಯ ಸೌಂದರ್ಯ ಸವಿಯಬೇಕಿದ್ದರೆ ಜೋಧಪುರದ ಎತ್ತರದ ಕಟ್ಟಡದ ಮೇಲೆ ಹತ್ತಿ ನಿಂತು ನೋಡಬೇಕು. ಪಿಂಕ್ ಸಿಟಿಯ ಜೊಬಗು ಜೈಪುರದ ಹವಾಮಹಲಿನ ಮೇಲೆ ಹತ್ತಿ ನಿಂತರೆ ವೇದ್ಯವಾಗುತ್ತದೆ. ಚೀನಾದ ಗೋಡೆಯೇನು ಮಹಾ, ನಮ್ಮ ದೇಶದಲ್ಲೇ ಇದನ್ನೂ ಮೀರಿಸುವಂಥದ್ದೊಂದು ಇದೆ ಎಂದಾದರೆ ಅದು ರಾಜಸ್ಥಾನದ ಕುಂಬಲ್‌ಘಡ್ ಕೋಟೆ. ತನ್ನದೇ ವಿಶೇಷ ಬಗೆಯ ವಾಸ್ತುಶಿಲ್ಪ, ಕುಸುರಿ ಕಲೆ, ವಸ್ತ್ರವೈವಿಧ್ಯ, ಸಂಸ್ಕೃತಿ, ಭಾಷೆಯಿಂದ ಗಮನ ಸೆಳೆವ ರಾಜಸ್ಥಾನದ ಈ ಎಲ್ಲ ಪ್ರಮುಖ ಊರುಗಳನ್ನು ನಿಮ್ಮ ಪ್ರವಾಸದ ಪಟ್ಟಿಯಿಂದ ಬಿಟ್ಟರೆ ಅದರಷ್ಟು ದೊಡ್ಡ ನಷ್ಟ ಇನ್ನೊಂದಿಲ್ಲ.
ಇದನ್ನೂ ಓದಿ | Travel Story | ಈ ಅಜ್ಜಿ ಮೊಮ್ಮಗ ಏಳು ವರ್ಷಗಳಲ್ಲಿ ತಿರುಗಾಡಿದ್ದು 50 ಸಾವಿರ ಮೈಲಿ!
೪. ತರಹೇವಾರಿ ತಿಂಡಿತಿನಿಸುಗಳು: ನೀವು ತಿಂಡಿ ಪೋತರಾ? ಬಗೆಬಗೆಯ ತಿಂಡಿಗಳನ್ನು ಸವಿಯುವುದರಲ್ಲಿ ಸ್ವರ್ಗ ಸುಖ ಅನಿಸುತ್ತದೋ? ಹಾಗಾದರೆ, ರಾಜಸ್ಥಾನದ ಈ ಕೆಲವು ಜಾಗಗಳಿಗೆ ಭೇಟಿ ಕೊಡಲೇ ಬೇಕು. ಬಿಕಾನೇರಿನಲ್ಲಿ ಯಥೇಚ್ಛವಾಗಿ ತಯಾರಾಗಿ ಭಾರತದಾದ್ಯಂತ ಮನೆಮಾತಾಗಿರುವ ಭುಜಿಯಾ ಸೇವ್ ಕೂಡಾ ಇಲ್ಲೇ ಬೀದಿ ಬದಿಯಲ್ಲಿ ಬೇರೆ ಬೇರೆ ಕುಟುಂಬಗಳ ಪ್ರಮುಖ ಉದ್ಯಮವಾಗಿ ಕಣ್ಣಿಗೆ ಬೀಳುತ್ತದೆ. ಅಲ್ಲೇ ಬಿಸಿಬಿಸಿ ಕೈಲಿ ಹಿಡಿದು ಸವಿಯಬಹುದು. ಇನ್ನು, ಇಲ್ಲಿನ ಮಂದಿಯ ಬೆಳಗಿನಪ್ರಮುಖ ಆಹಾರಗಳಾದ ಕಚೋಡಿಯ ವಿವಿಧ ಬಗೆಗಳನ್ನೂ ರಸ್ತೆಯದಿಯ ಪುಟ್ಟ ಪುಟ್ಟ ಅಂಗಡಿಗಳಲ್ಲಿ ಸಿಗುತ್ತದೆ. ಬೆಳಗಿನ ಏಳು ಗಂಟೆಗೇ ರಸ್ತೆಬದಿಯ ತಳ್ಳು ಗಾಡಿಯಲ್ಲಿ ಸಿಗುವ ಹತ್ತು ರುಪಾಯಿಯ ಪೋಹಾ ನಿಮ್ಮ ಹೃದಯ ಗೆಲ್ಲುತ್ತದೆ. ಎಲ್ಲ ಹೊತ್ತಲ್ಲೂ ಸಿಗುವ ಬಿಸಿಬಿಸಿ ಗರಮಾಗರಂ ಮಸಾಲೆಭರಿತ ಮಟ್ಕಾ ಚಾಯ್ ಅಂತೂ ಸವಿಸವಿದು ಕುಡಿಯಬಹುದು. ನೀವು ಸಿಹಿ ಪ್ರಿಯರಾದರಂತೂ ಮುಗಿಯಿತು. ಬೆಳ್ಳಂಬೆಳಗ್ಗೆ ಎದ್ದ ಕೂಡಲೇ ತಟ್ಟೆಯಲ್ಲಿ ಬಿಸಿಬಿಸಿ ಜಿಲೇಬಿಯಿಂದ ಹಿಡಿದು ಘೇವರ್‌ವರೆಗೂ ಎಲ್ಲವನ್ನೂ ಎಲ್ಲಾ ಹೊತ್ತು ಮನಬಂದಷ್ಟು ಸವಿಯಬಹುದು. ಇಔಕ್ಕೆ ಇಂಥದ್ದೇ ಊರು ಎಂದಿಲ್ಲ. ರಾಜಸ್ಥಾನದಲ್ಲಿ ಎಲ್ಲೇ ಕಾಲಿಟ್ಟರೂ ಆಹಾರಪ್ರಿಯರ ಮನತಣಿಸಬಹುದಾದಷ್ಟು ಖಾದ್ಯಗಳು ಸಿಕ್ಕೇ ಸಿಗುತ್ತವೆ. ಇವುಗಳೆಲ್ಲವನ್ನೂ ಚಳಿಗಾಲದಲ್ಲಿ ಹೊಟ್ಟೆಗೆ ಹಾಕುವ ಸುಖ ಒಂದು ಹಿಡಿ ಹೆಚ್ಚು.
ಇದನ್ನೂ ಓದಿ | Bicycle travel | ಕರ್ನಾಟಕದಿಂದ ಕಾಶ್ಮೀರಕ್ಕೆ ಇಬ್ಬರು ಕನ್ನಡಿಗರ 3,500 ಕಿಮೀ ಸೈಕಲ್ ಯಾತ್ರೆ!