ಸೆಲೆಬ್ರಿಟಿಗಳಿಗೂ ಪ್ರವಾಸಕ್ಕೂ ನಂಟು ಬಹಳ. ಬಹಳಷ್ಟು ಸಾರಿ ಪ್ರವಾಸೀ ತಾಣವೊಂದು ಪ್ರಸಿದ್ಧಿಗೆ ಬರಲು ಸೆಲೆಬ್ರಿಟಿಗಳೂ ಕಾರಣರಾಗುತ್ತಾರೆ. ಸಿನಿಮಾಗಳು ಬಂದ ಕಾಲದಿಂದಲೂ, ಮುಖ್ಯವಾಗಿ ೮೦-೯೦ರ ದಶಕದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಭಾರತದ ಮನಮೋಹಕ ತಾಣಗಳು ಸಿನಿಮಾಗಳ ಮೂಲಕ ಹೆಚ್ಚು ಪ್ರಸಿದ್ಧವಾಗಿ, ಜನರು ಇವುಗಳೆಡೆಗೆ ಆಕರ್ಷಿತರಾಗಿದ್ದು ನಿಜ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳ ಪಾತ್ರ ದೊಡದಿದ್ದರೂ, ಹಿಂದಿನ ಕಾಲದಿಂದ ಸಿನಿಮಾಗಳೇ ಜನರನ್ನು ಸೆಳೆಯುವ ಪ್ರಮುಖ ಮಾಧ್ಯಮವಾಗಿದ್ದರಿಂದ ಕಾಶ್ಮೀರದಂತಹ ಜಾಗದ ಸೌಂದರ್ಯ ಮನೆಮನೆಗೂ ತಲುಪಿತು. ತ್ರಿ ಈಡಿಯಟ್ಸ್ ಚಿತ್ರದಿಂದಾಗಿ ಕಳೆದೊಂದು ದಶಕದಲ್ಲಿ ಭಾರೀ ಪ್ರಮಾಣದಲ್ಲಿ ಲಡಾಖ್ ಕಡೆಗೆ ಯುವ ಪ್ರವಾಸಿಗರು ಮುಖ ಮಾಡಿದಂತೆ, ಭಾರತದ ಪ್ರವಾಸೀ ತಾಣಗಳು ಪ್ರಸಿದ್ಧಿಗೆ ಬರುವಲ್ಲಿ ಸೆಲೆಬ್ರಿಟಿಗಳ ಹಾಗೂ ಸಿನಿಮಾಗಳ ಪಾತ್ರ ದೊಡ್ಡದು.
ಆದರೆ ಸೆಲೆಬ್ರಿಟಿಗಳು, ಸಿನಿಮಾ ಹೊರತಾದ ಪ್ರವಾಸದ ವಿಷಯ ಬಂದರೆ ವಿದೇಶೀ ತಾಣಗಳೇ ಹೆಚ್ಚು ಗೋಚರವಾಗುತ್ತದೆ. ಅವರುಗಳ ಜಾಲತಾಣದಲ್ಲಿ ಐಷಾರಾಮಿ ವಿದೇಶೀ ತಾಣಗಳೇ ಕಣ್ಣಿಗೆ ಬೀಳುವುದು ಹೆಚ್ಚು. ಇವು ಸಾಮಾನ್ಯರು ಪ್ರವಾಸ ಮಾಡಬಹುದಾದ ಆಯ್ಕೆಗಳಿಗಿಂತ ಭಿನ್ನವಾಗಿ ಕಾಣುವುದಲ್ಲದೆ, ಸಾಮಾನ್ಯರಿಗೆ ಮರೀಚಿಕೆಯಾಗುವುದೇ ಹೆಚ್ಚು. ಆದರೆ, ಕೆಲವೇ ಕೆಲವು ಸೆಲೆಬ್ರಿಟಿಗಳು ಭಾರತದ ಪ್ರವಾಸೀತಾಣಗಳನ್ನೂ ತಮ್ಮ ಮೆಚ್ಚಿನ ತಾಣಗಳಾಗಿ ಆಗಾಗ ಕೆಲವೊಮ್ಮೆ ಪೋಸ್ಟ್ ಮಾಡುವುದುಂಟು. ಹಾಗಾದರೆ, ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಮಿಂಚುವ ಭಾರತೀಯ ಕೆಲವು ತಾಣಗಳನ್ನು ನೋಡೋಣ.
೧. ಲಡಾಖ್: ಹಿಮಾಲಯದ ಮಾಯೆಯೇ ಅಂಥದ್ದು. ಒಮ್ಮೆ ನೋಡಿದರೆ ಮತ್ತೆ ಮತ್ತೆ ತನ್ನೆಡೆಗೆ ಸೆಳೆಯದೆ ಇರುವುದಿಲ್ಲ. ಲಡಾಖ್ ಕೂಡಾ ಸಾಹಸ ಪ್ರಿಯರಿಗೆ ಸಾಕಷ್ಟು ಅವಕಾಶಗಳನ್ನು ಹಾಸುವ ತಾಣ. ಜೊತೆಗೆ ಹಿಮಚ್ಛಾದಿತ ಪರ್ವತಗಳು. ಅಡ್ವೆಂಚರ್ ಪ್ರವಾಸವನ್ನು ಇಷ್ಟಪಡುವ ಸೆಲೆಬ್ರಿಟಿಗಳು ಲಡಾಖ್ ಅನ್ನು ತಮ್ಮ ಲಿಸ್ಟಿನಿಂದ ಎಂದಿಗೂ ಕೈಬಿಡುವುದಿಲ್ಲ. ಹೀಗಾಗಿ ಬಾಲಿವುಡ್ ನಟಿ ಗುಲ್‌ಪನಾಗ್, ನಟ ರಾಜ್ ಕುಮಾರ್ ರಾವ್, ಮಿಲಿಂದ್ ಸೋಮನ್, ಅನುಷ್ಕಾ ಶರ್ಮ, ವಿರಾಟ್ ಕೊಹ್ಲಿ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಲಡಾಖ್ ಬಗೆಗೆ ತಮ್ಮ ಪ್ರೀತಿಯನ್ನು ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
೨. ಗೋವಾ: ಹೇಳಿಕೇಳಿ ಸಮುದ್ರತೀರ. ಸಮುದ್ರತೀರ, ಸೂರ್ಯ ಬಿಸಿಲಿಗೆ ಮೈಯೊಡ್ಡಿ ಕುಳಿತುಕೊಳ್ಳುವ ಸುಖ, ಕ್ಯಾಸಿನೋಗಳು, ಪಾರ್ಟಿಗಳು, ಝಗಮಗಿಸುವ ರಾತ್ರಿಗಳು, ಹೀಗೆ ಸದಾ ಗಿಜಿಗುಡುವ ಸಾಮಾನ್ಯರಿಂದ ಸೆಲೆಬ್ರಿಟಿಗಳವರೆಗೆ ತನ್ನೆಡೆ ಸೆಳೆಯುವ ತಾಣವೊಂದಿದ್ದರೆ ಅದು ಗೋವಾ. ಗೋವಾಕ್ಕೆ ಹೋಗಿ ಬಂದೆ ಎಂದು ನಮ್ಮ ಪಕ್ಕದ ಮನೆಯಾಕೆ ಇನ್ಸ್‌ಟಾದಲ್ಲಿ ಪೋಸ್ಟ್ ಮಾಡುವ ಹೊತ್ತಿಗೆ, ಅದೇ ಗೋವಾಕ್ಕೆ ಹೋಗಿ ಬಂದ ಚಿತ್ರಗಳನ್ನು ನಟಿ ಮಲೈಕಾ ಅರೋರಾ ಪೋಸ್ಟ್ ಮಾಡುತ್ತಾರೆ, ಅಷ್ಟರಮಟ್ಟಿಗೆ ಗೋವಾ ಎಲ್ಲರ ಫೇವರಿಟ್ಟು. ದಿಗ್ಗಜ ಅಮಿತಾಭ್ ಬಚ್ಚನ್ ಕುಟುಂಬದಿಂದ ಹಿಡಿದು ಆಲಿಯಾ ಭಟ್‌ವರೆಗೆ ಎಲ್ಲರೂ ಗೋವಾವನ್ನು ಭಾರತದ ಇಷ್ಟದ ಸ್ಥಳಗಳ ಪಟ್ಟಿಯಲ್ಲಿ ಅನಾಯಾಸವಾಗಿ ಸೇರಿಸುತ್ತಾರೆ ಎಂದರೆ, ಇನ್ನು ಸಾಮಾನ್ಯರ ಮಾತೆಲ್ಲಿ!
೩. ರಾಜಸ್ಥಾನ: ರಾಜಸ್ಥಾನ ಯಾವಾಗಲೂ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಮುಖ್ಯ ಸ್ಥಾನ ಪಡೆದುಕೊಂಡ ರಾಜ್ಯ. ಇಲ್ಲಿನ ಜೈಪುರದಿಂದ ಹಿಡಿದು ಜೈಸಲ್ಮೇರ್‌ವರೆಗೆ ಎಲ್ಲವೂ ಸೆಲೆಬ್ರಿಟಿಗಳು ಆಗಾಗ ಕಾಣಿಸಿಕೊಳ್ಳುವ ಜಾಗಗಳೇ. ಜೈಪುರ, ಉದಯಪುರ, ಜೋಧ್‌ಪುರ ಮತ್ತಿತರ ಕಲರ್‌ಫುಲ್ ಕೋಟೆಕೊತ್ತಲ, ಅರಮನೆಗಳ ನಗರಿಗಳು ಸೆಲೆಬ್ರಿಟಿಗಳನ್ನು ಆಕರ್ಷಿಸುವುದಕ್ಕೆ ಬೇರೆ ಕಾರಣ ಬೇಕಿಲ್ಲ. ಡೆಸ್ಟಿನೇಷನ್ ವೆಡ್ಡಿಂಗ್‌ಗಳು, ಐಷಾರಾಮಿ ಪಾರ್ಟಿಗಳು ನಡೆಯಲು ಸೂಕ್ತ ಪ್ರವಾಸೀ ತಾಣಗಳಾಗಿ ಸೆಲೆಬ್ರಿಟಿಗಳಿಗೆ ಭಾರತದಲ್ಲಿ ಮೊದಲು ಕಣ್ಣಿಗೆ ಬೀಳುವ ತಾಣಗಳು ಇವೇ. ಕಾರಣ ಇಲ್ಲಿನ ಅದ್ಭುತ ಅರಮನೆಗಳು. ಇತ್ತೀಚೆಗೆ ಕತ್ರಿನಾ ಕೈಫ್- ವಿಕಿ ಕೌಶಲ್ ಜೋಡಿ ಮದುವೆಯಾಗಿದ್ದೂ ರಾಜಸ್ಥಾನದಲ್ಲೇ. ಇನ್ನು, ಈ ಲಿಸ್ಟಿಗೆ ಸೇರುವ ಹಲವು ಬಾಲಿವುಡ್ ಹಾಲಿವುಡ್ ನಟನಟಿಯರೂ ಇದ್ದಾರೆ. ನಿಕ್ ಜೋನಾಸ್-ಪ್ರಿಯಾಂಕಾ ಛೋಪ್ರಾ ಜೋಡಿಯೂ ರಾಜಸ್ಥಾನದ ಜೋಧ್‌ಪುರದಲ್ಲೇ ಮದುವೆಯಾಗಿದ್ದರು. ನೀಲ್ ನಿತಿನ್ ಮುಖೇಶ್, ಕ್ಯಾಟಿ ಪೆರ್ರಿ, ಎಲಿಝಬೆತ್ ಹರ್ಲೀ, ಶ್ರೇಯಾ ಶರಣ್, ರವೀನಾ ಟಂಡನ್ ಹೀಗೆ ಪಟ್ಟಿ ದೊಡ್ಡದಿದೆ.
ಇದನ್ನೂ ಓದಿ: Travel Tips | ನೀವು ಅಲೆಮಾರಿಗಳೇ? ಹೊಸ ಬಗೆಯ ಪ್ರವಾಸಕ್ಕೆ 5 ಅಣಿಮುತ್ತುಗಳು!