ಭಾರತದಂತಹ ಭೌಗೋಳಿಕ ಹಿನ್ನೆಲೆಯನ್ನು ಹೊಂದಿರುವ ಭೂಪ್ರದೇಶವನ್ನು ಮಳೆಯಲ್ಲಿ ನೋಡುವುದಕ್ಕಿಂತ ಚಂದದ ಸಂದರ್ಭ ಯಾವುದಿದ್ದೀತು! ಹಾಗಾಗಿಯೇ, ಮಳೆ ಬಂತೆಂದು ಮನೆಯಲ್ಲಿ ಬೆಚ್ಚಗೆ ಕೂತೇ ಇದ್ದರಾದೀತೇ? ಖಂಡಿತ ಕಾಲು ಹೊರಗಿಡಲೇಬೇಕು. ನಮ್ಮದೇ ಈ ನೆಲವನ್ನು ಮಳೆಗಾಲದಲ್ಲೊಮ್ಮೆ ಸುಖಾಸುಮ್ಮನೆ ಯಾವುದೇ ಗೊತ್ತು ಗುರಿಯಿಲ್ಲದಂತೆ ತಿರುಗಾಡಬೇಕು. ಜೊತೆಗೊಬ್ಬರು ಸಂಗಾತಿಯಿದ್ದಲ್ಲಿ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ!
ಹೆಚ್ಚು ದಿನವೆಲ್ಲ ಇದಕ್ಕೆ ಬೇಕಾಗಿಲ್ಲ. ಕೈಲಿರುವ ಮೂರೋ ನಾಲ್ಕೋ ದಿನಗಳನ್ನು ಚೆಂದದ ಮಳೆಯಲ್ಲಿ, ಸೊಗಸಾದ ಹಾಡು ಕೇಳಿಕೊಂಡು, ಜೊತೆಯಲ್ಲಿ ಗುನುಗಿಕೊಂಡು ನಮ್ಮದೇ ಕನ್ನಡ ನೆಲದ ಮಳೆಯ ಗಂಧವನ್ನು ಒಳಗೆಳೆದುಕೊಳ್ಳಬೇಕೆಂದು ಯೋಚಿಸುತ್ತೀರಾದರೆ, ಇದೇ ನೆಲದಲ್ಲಿದ್ದುಕೊಂಡು ಈ ನಾಡಿನ ಒಂದಿಷ್ಟು ಜಾಗಗಳು ಮಳೆಯಲ್ಲಿ ಮಿಂದೇಳುವ ಸೌಂದರ್ಯವನ್ನು ಕಣ್ತುಂಬಬೇಕೆಂದರೆ, ಹೋಗಲೇಬೇಕಾದ, ಒಮ್ಮೆಯಾದರೂ ನೋಡಲೇಬೇಕಾದ ಸ್ಥಳಗಳು ಇಲ್ಲಿವೆ.
ಮಳೆಯಲ್ಲಿ ಮಿಂದೆದ್ದ ಎಂಥದೇ ಜಾಗ ಕೂಡ ಎಂದಿಗಿಂತ ಚಂದವೇ ಕಾಣುತ್ತದೆ. ಇನ್ನು, ಪ್ರಕೃತಿ ಸಹಜ ಸೌಂದರ್ಯದ ಜಾಗಗಗಳು ಹೇಗಿರಬಹುದು? ಅದಕ್ಕಾಗಿಯೇ ನೀವು ಮಳೆಯಲ್ಲಿ ಇಷ್ಟಾದರೂ ಜಾಗಗಳನ್ನು ನೋಡಲೇಬೇಕು.
1.. ಮಡಿಕೇರಿ: ಹೇಳಿ ಕೇಳಿ ಕೊಡಗು ಜಿಲ್ಲೆ. ದಟ್ಟ ಕಾನನದ ನಡುವೆ ಜಲಪಾತಗಳ ಸೊಬಗಿನ ಸಹಜ ಪ್ರಕೃತಿ ಸೌಂದರ್ಯದ ಊರು ಕೊಡಗು. ಇಂಥ ಕೊಡಗಿಗೆ ಮಳೆಗಾಲದಲ್ಲಿ ಪ್ರಯಾಣ ಮಾಡಿಲ್ಲ ಎಂದಾದರೆ ಖಂಡಿತ ಮಾಡಲೇಬೇಕು. ಈ ಕಾಫಿನಾಡಿನ ಹಾದಿಯಲ್ಲೊಮ್ಮೆ ಗಾಡಿ ನಿಲ್ಲಿಸಿ, ಇನ್ನೂ ಹಸಿರಾಗಿ, ಸದಾ ಜಳಕ ಮಾಡಿಕೊಂಡಿರುವ ವನರಾಶಿಯನ್ನು, ಬೆಳ್ಳಂಬೆಳಗ್ಗೆ ಮಂಜು ಹೊದ್ದು ಮಲಗಿರುವ ರಸ್ತೆಯ ಏಕಾಂತದಲ್ಲಿ ಹಿತಮಳೆಗೆ ನೆನೆಯುತ್ತಾ ನಡೆಯಬೇಕು. ಬಿಸಿಬಿಸಿ ಕಾಫಿ ಹೀರಿ, ಮಳೆಯ ಸಂಜೆಗಳಲ್ಲಿ ಬೆಚ್ಚಗೆ ಕುರುಕಲು ತಿನ್ನುತ್ತಾ ಏನೂ ಮಾಡದೆ ಬಿದ್ದಿರಲಾದರೂ ಕೊಡಗಿಗೆ ಹೋಗಬೇಕು.
2. ಆಗುಂಬೆ: ಆಗುಂಬೆಯಂತ ಆಗುಂಬೆಗೇ ಹೋಗದೆ ಮಳೆಯನ್ನು ನೋಡದೇ ಇದ್ದರೆ ಕರ್ನಾಟಕದಲ್ಲಿದ್ದು ಏನು ಪ್ರಯೋಜನ ಎಂದು ನಿಮಗನಿಸುವುದಿಲ್ಲವೇ? ಕನಿಷ್ಟ ಪಕ್ಷ ನಮ್ಮ ಹೆಮ್ಮೆಯ ಜೋಗ ಜಲಪಾತ ಮಳೆಗಾಲದಲ್ಲಿ ಭೋರ್ಗರೆದು ಧುಮ್ಮಿಕ್ಕುವುದನ್ನು ನೋಡುವ ನೆವನದಲ್ಲಾದರೂ ಒಮ್ಮೆ ಆಗುಂಬೆಯ ಹಾದಿಯಲ್ಲಿ ಸಾಗಬೇಕು. ಮಳೆಯಲ್ಲಿ ನೆನೆಯುತ್ತಾ ಕಾಡ ಹಾದಿಯಲ್ಲಿ ಜಿಗಣೆಗಳಿಂದ ರಕ್ತ ಹೀರಿಸಿಕೊಂಡು ಮಳೆಯಲ್ಲಿ ಮೀಯಬೇಕು.
3. ದಾಂಡೇಲಿ: ದಾಂಡೇಲಿಯ ಗಾಢಾಂಧಕಾರದ ದಟ್ಟ ಮಳೆಕಾಡುಗಳ ಅದಮ್ಯ ಅನುಭವ ಮಳೆಯಲ್ಲದೆ, ಇನ್ಯಾವ ಕಾಲದಲ್ಲೂ ದಕ್ಕಿಸಿಕೊಳ್ಳುವುದು ಸಾಧ್ಯವಿಲ್ಲ. ಇಲ್ಲಿನ ಕಾಳೀ ನದಿಯ ರುದ್ರ ನರ್ತನವನ್ನು, ದೂದ್ ಸಾಗರ್ ಜಲಪಾತದ ಸೊಬಗನ್ನು ಹಸುರು ವನರಾಶಿಯ ನಡುವೆ ಧೋ ಎಂದು ಸುರಿವ ಮಳೆಯ ಏಕಾಂತದಲ್ಲಿ ಸುಮ್ಮನೆ ಕೂತು ಅನುಭವಿಸಲಾದರೂ ಮಳೆಗಾಲದಲ್ಲಿ ಇಲ್ಲಿಗೆ ಭೇಟಿ ಕೊಡಬೇಕು.
4. ಚಾರ್ಮಾಡಿ ಘಾಟ್: ಚಾರ್ಮಾಡಿ ಘಾಟಿನ ಹೆಬ್ಬಾವಿನಂಥಾ ರಸ್ತೆಯಲ್ಲಿ ಮಳೆಗಾಲದಲ್ಲಿ ಯಾವ ಉದ್ದೇಶವೂ ಇಲ್ಲದೇ ಡ್ರೈವ್ ಮಾಡುವುದೇ ಸುಂದರ ಅನುಭವ. ಇಲ್ಲಿ ಆಗಾಗ ನಿಲ್ಲಿಸುತ್ತಾ ಕಾಣುವ ಮಂಜುಹೊದ್ದ ಪ್ರಕೃತಿ ಸೌಂದರ್ಯವನ್ನು ನೋಡುವುದೇ ಒಂದು ದಿವ್ಯಾನುಭೂತಿ.
5. ಹಂಪೆ: ಮಳೆಗೂ ಹಂಪೆಗೂ ಸಂಬಂಧ ಏನು ಅಂತನಿಸಿದರೂ, ಮಳೆಗಾಲದಲ್ಲಿ ಹಂಪೆಯ ಸೌಂದರ್ಯ ಇಮ್ಮಡಿಸುತ್ತದೆ. ಕರ್ನಾಟಕದ ಇತರೆ ಪ್ರದೇಶಗಳಿಗೆ ಹೋಲಿಸಿದರೆ ಹಂಪೆಯಲ್ಲಿ ಕಡಿಮೆ ಮಳೆಯಾದರೂ, ಹಂಪೆಯ ಐತಿಹಾಸಿಕ ಸೌಂದರ್ಯದ ಜೊತೆಗೆ ತುಂಬಿ ಹರಿವ ತುಂಗಭದ್ರೆಯನ್ನು ನೋಡುವುದೇ ಕಣ್ಣಿಗೆ ಹಬ್ಬ. ಇನ್ನು ಮಾತಂಗ, ಹೇಮಕೂಟ ಬೆಟ್ಟಗಳೂ ಕೂಡಾ ಮಳೆಗಾಲದಲ್ಲೇ ಸುಂದರವಾಗಿ ಕಾಣುತ್ತವೆ.
ಇವು ಐದು ಜಾಗಗಳು ಕೇವಲ ಉದಾಹರಣೆಯಷ್ಟೆ. ಕರ್ನಾಟಕದ ಮೂಲೆ ಮೂಲೆಯೂ ಮಳೆಗಾಲದಲ್ಲಿ ಲಕಲಕ ಹೊಳೆಯುವುದನ್ನು ನೋಡುವುದೇ ಒಂದು ಅಪೂರ್ವ ಗಳಿಗೆ. ಇದಕ್ಕಾಗಿ, ಪ್ರವಾಸಿ ತಾಣಕ್ಕೇ ಹೋಗಬೇಕೆಂದಿಲ್ಲ. ಕಾಡಹಾದಿಯ ನಡುವಿನಲ್ಲೊಂದು ಡ್ರೈವ್, ಬೆಟ್ಟಕ್ಕೊಂದು ಚಾರಣವೂ ಸಾಕು. ಮತ್ತೊಂದು ಮಳೆಗಾಲದವರೆಗೆ ನಿಮ್ಮನ್ನಿದು ಸಂತೃಪ್ತವಾಗಿಟ್ಟಿರುವುದರಲ್ಲಿ ಅನುಮಾನವಿಲ್ಲ.