ವರ್ಷಕ್ಕೊಮ್ಮೆ ಮಾತ್ರವೇ ಬರುವುದು ಹೊಸವರ್ಷ! ಇದನ್ನು ಸ್ವಾಗತಿಸಲು ಹೊಸದೇನೋ ಮಾಡಬೇಕೆಂಬ ಉತ್ಸಾಹ ಉಳ್ಳವರಿಗೆ ಬರವಿಲ್ಲ. ಅದರಲ್ಲೂ ಇರುವ ಊರು ಬಿಟ್ಟು, ಬೇರೆ ಊರಿಗೆ ಹೋಗಿ ಹೊಸ ವರ್ಷವನ್ನು ಇದಿರುಗೊಳ್ಳಬೇಕೆಂಬ ತವಕ ಬಹಳಷ್ಟು ಮಂದಿಯದ್ದು. ಅದಕ್ಕಾಗೇ ತಾನೇ ಪ್ರವಾಸಿ ಸ್ಥಳಗಳಲ್ಲಿ ಇಷ್ಟೊಂದು ಜನ-ಜಾತ್ರೆ. ಮರುಭೂಮಿಗಳಿಂದ ಹಿಡಿದು ಕರಾವಳಿಗಳವರೆಗೆ ಹೊಸ ಊರು, ಹೊಸ ಜಾಗ, ಹೊಸ ತಿನಿಸು ಮುಂತಾದವೆಲ್ಲ ಜನರ ಹುರುಪು ಹೆಚ್ಚಿಸುತ್ತವೆ. ಹಾಗಾದರೆ ಯಾವೆಲ್ಲಾ ಸ್ಥಳಗಳಿಗೆ ಹೋಗಬಹುದು?
ಗೋವಾ
ಇದಕ್ಕಿರುವ ಗ್ಲಾಮರ್ ಭಾರತದ ಇನ್ಯಾವುದಾದರೂ ಕರಾವಳಿಗೆ ಇದ್ದರೆ ಹೇಳಿ ಮತ್ತೆ! ಇಲ್ಲಿನ ಬೀಚ್‌ಗಳಿಗಿಂತ ಬೀಚ್-ಪಾರ್ಟಿಗಳ ಲೋಕವೇ ಜನರನ್ನು ಸೆಳೆಯುತ್ತದೆ. ವಿಶ್ವದೆಲ್ಲೆಡೆಯಿಂದ ಜನ ಇಲ್ಲಿಗೆ ಪ್ರಯಾಣಿಸುತ್ತಾರೆ ಮತ್ತು ಸರಿಯುತ್ತಿರುವ ವರ್ಷವನ್ನು ಬೀಳ್ಕೊಡುತ್ತಾರೆ. ಹಾಗಾಗಿ ಹೊಸ ವರ್ಷವನ್ನು ಸ್ವಾಗತಿಸುವ ಉತ್ಸಾಹಿಗಳಿಗೆ ಗೋವಾ ಹೇಳಿ ಮಾಡಿಸಿದ ಸ್ಥಳ.
ಮನಾಲಿ
ಕ್ರಿಸ್‌ಮಸ್ ಮತ್ತು ಹೊಸವರ್ಷಗಳು ಪಾಶ್ಚಾತ್ಯ ಕಲ್ಪನೆಗಳಲ್ಲಿ ಕಳೆಗಟ್ಟುವ ರೀತಿಯೇ ಭಿನ್ನ. ಹಿಮದ ಚಾದರ ಹೊದ್ದ ಮನೆಗಳು, ಅದರ ಮುಂದೊಂದು ಸುಂದರವಾಗಿ ಅಲಂಕರಿಸಲಾದ ಕ್ರಿಸ್‌ಮಸ್ ಟ್ರೀ, ಪುಟ್ಟ ಹಗಲನ್ನೂ ಬೆಳಗುವ ಬಣ್ಣದ ಬೆಳಕಿನ ಸರಮಾಲೆಗಳು, ಅಲ್ಲೊಂದು ಉಡುಗೊರೆಗಳನ್ನು ಹೊತ್ತ ರೈನ್‌ಡೀರ್, ಸಾಂತಾಕ್ಲಾಸ್… ಇಂಥವೆಲ್ಲ ವರ್ಷಾಂತ್ಯದ ಆಚರಣೆಗಳಿಗೆ ಬೇರೆಯದೇ ರಂಗು ತುಂಬುತ್ತವೆ. ಹೀಗೆಯೇ ಹಿಮ ಚಾದರ ಹೊದ್ದ ಊರು ಮನಾಲಿ ಮಾತ್ರ ರಾತ್ರಿಯಾಗುತ್ತಿದ್ದಂತೆ ಡಿಜೆಗಳ ಆಡುಂಬೊಲವಾಗುತ್ತದೆ. ಈ ಆಕರ್ಷಣೆಗೂ ದೂರದೂರುಗಳಿಂದ ಜನ ಆಗಮಿಸುತ್ತಾರೆ.
ಶಿಲ್ಲಾಂಗ್
ಮೇಘಾಲಯದ ಬೆಟ್ಟ-ಗುಡ್ಡಗಳ ಎಡೆಯಲ್ಲಿ ತಂಪಾಗಿ ಮಲಗಿರುವ ರಾಜಧಾನಿ ಶಿಲ್ಲಾಂಗ್ ಹೊಸವರ್ಷದ ಮುನ್ನಾದಿನ ಭಾರೀ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸುತ್ತದೆ. ದಟ್ಟ ಹಸಿರಿನೆಡೆಯ ಈ ನಗರ ಎಲ್ಲರೀತಿಯ ಆಸಕ್ತರನ್ನೂ ಕೈ ಬೀಸಿ ಕರೆಯುತ್ತದೆ. ಝಗಮಗಿಸುವ ರಸ್ತೆಗಳು, ಬಾಯಲ್ಲಿ ನೀರೂರಿಸುವ ಸ್ಥಳೀಯ ತಿನಿಸುಗಳು, ಇಂಪಾದ ಜನಪದ ಸಂಗೀತ- ಎಲ್ಲವೂ ಸೇರಿ ಯಾವುದೋ ಫೇರಿಟೇಲ್‌ನ ಊರಿಗೆ ಹೋದಂತೆನಿಸುತ್ತದೆ.
ಜೈಸಲ್ಮೇರ್
ʻಗೋಲ್ಡನ್ ಸಿಟಿʼ ಎಂಬ ಅಭಿದಾನವನ್ನು ಹೊತ್ತ ಇದು, ಕೋಟೆ-ಕೊತ್ತಲಗಳ ನಾಡು. ಹಿಂದೆಂದೋ ಆಳಿದ್ದ ಅರಸೊತ್ತಿಗೆಗಳ ವೈಭವ ಸಾರುವ ಅರಮನೆಗಳು, ರಾಜಸ್ಥಾನದ ಜಾನಪದ ಲಯಗಳು, ರಂಗಾದ ಮಾರುಕಟ್ಟೆಗಳು, ಮರಳುಗಾಡಿನ ಸೂರ್ಯಾಸ್ತದ ವೈಭವ- ಇವೆಲ್ಲವೂ ಜಸಲ್ಮೇರ್‌ನ ಜನಪ್ರಿಯತೆಯನ್ನು ಹೆಚ್ಚಿಸಿವೆ.
ಊಟಿ
ಮಂಜಿನ ಮುಸುಕು ಹೊದ್ದ ಈ ಬೆಟ್ಟಗಳ ಸಾಲಿಗೆ ಬೇಸಿಗೆಯಲ್ಲೇ ಹೋಗಬೇಕೆಂದಿಲ್ಲ. ಮಳೆಯಲ್ಲಿ ಐಸ್‌ಕ್ರೀಮ್ ಮೆಲ್ಲುವ ಮಜವೇ ಬೇರೆ ಇರುವಂತೆ, ಚಳಿಗಾಲದಲ್ಲಿ ಊಟಿಗೆ ಹೋಗುವ ಮಜವೂ ಭಿನ್ನವೇ. ಕೊರೆಯುವ ಚಳಿಯ ಕಾರಣದಿಂದ, ಹೊಸವರ್ಷಕ್ಕೆ ಅತ್ಯಂತ ಜನಪ್ರಿಯ ತಾಣ ಇದಲ್ಲದೆ ಇರುವುದರಿಂದ ಶಾಂತಿ-ನೆಮ್ಮದಿಯಿಂದ ೨೦೨೪ನ್ನು ಸ್ವಾಗತಿಸಬಹುದು.
ಪುದುಚೇರಿ
ಹಿಂದೊಮ್ಮೆ ಫ್ರಾನ್ಸ್ ವಸಾಹತು ಆಗಿತ್ತೆಂಬುದನ್ನು ನೆನಪಿಸುವ ಫ್ರೆಂಚ್ ಮಾದರಿಯ ಕಟ್ಟಡಗಳು ಇಡೀ ಊರನ್ನು ಆವರಿಸಿವೆ. ಬೀಚ್‌ಗಳಲ್ಲಿ ಬೈಕಿಂಗ್‌ನಿಂದ ಹಿಡಿದು, ಅಲ್ಲಿನ ರೂಫ್‌ಟಾಪ್ ಕೆಫೆಗಳವರೆಗೆ ಹಲವು ರೀತಿಯ ಚಟುವಟಿಕೆಗಳನ್ನಿಲ್ಲಿ ಮಾಡಬಹುದು. ಸಿಕ್ಕಾಪಟ್ಟೆ ದುಬಾರಿಯಲ್ಲದ ಈ ಸ್ಥಳ, ಹೊಸ ವರ್ಷಾಚರಣೆಗೆ ಸೂಕ್ತ ಎನಿಸಿದೆ.
ಇದಲ್ಲದೆ, ಮಹಾನಗರಗಳಾದ ಮುಂಬಯಿ, ಕೋಲ್ಕತಾ, ದಿಲ್ಲಿ, ಬೆಂಗಳೂರಿನಂಥವು ಎಂತಿದ್ದರೂ ಜನರ ಮೆಚ್ಚಿನ ತಾಣಗಳು. ಇದಲ್ಲದೆ ನಿಮ್ಮಿಷ್ಟದ ಇನ್ಯಾವುದಾದರೂ ಹೊಸ ಊರನ್ನು, ಅಷ್ಟಾಗಿ ಚಾಲ್ತಿಯಲ್ಲಿ ಇಲ್ಲದ, ಜನಪ್ರಿಯವಲ್ಲದ ಹೊಸ ನಾಡನ್ನು ಅರಸುತ್ತ ಹೊರಡುವ ಉತ್ಸಾಹವಿದ್ದರೆ, ತಡವೇಕೆ? ಹೊಸ ವರ್ಷ ಬರುವುದಕ್ಕೆ ಇನ್ನು ಹೆಚ್ಚು ಸಮಯವಿಲ್ಲ… ಹೊರಡಿ!
ಇದನ್ನೂ ಓದಿ: Traveling Tips: ಪ್ರಯಾಣಿಸುವಾಗ ಕಣ್ಣಿನ ಕಾಳಜಿ ಹೀಗಿರಲಿ