Site icon Vistara News

Happiness: ಈ ಪುಟ್ಟ ದ್ವೀಪದ ಜನ ಸದಾ ಸಂತೋಷವಾಗಿರ್ತಾರೆ, ಯಾಕೆ ಗೊತ್ತೆ?

happy country

ಭೂಮಿಯ ಮೇಲೆ ಅತ್ಯಂತ ಸಂತೋಷವಾಗಿ (happiness) ಇರುವ ಪ್ರಜೆಗಳನ್ನು ಹೊಂದಿರುವ ಒಂದು ದೇಶ ಪೆಸಿಫಿಕ್ ಮಹಾಸಾಗರದ ಮಧ್ಯದಲ್ಲಿದೆ. ʼಹ್ಯಾಪಿ ಪ್ಲಾನೆಟ್ ಇಂಡೆಕ್ಸ್‌ʼನ ಪ್ರಕಾರ ಆಸ್ಟ್ರೇಲಿಯಾದ ಪೂರ್ವಕ್ಕೆ ಸುಮಾರು 2,000 ಕಿಮೀ ದೂರದಲ್ಲಿರುವ ʼವನವಾಟುʼ ದೇಶವೇ ಈ ಪ್ರದೇಶ. 80ಕ್ಕೂ ಹೆಚ್ಚು ದ್ವೀಪಗಳನ್ನು ಒಳಗೊಂಡಿರುವ ದೇಶವಿದು. ಹ್ಯಾಪಿ ಪ್ಲಾನೆಟ್‌ ಇಂಡೆಕ್ಸ್‌ ಪ್ರಕಾರ ಇದು ವಿಶ್ವದ ನಾಲ್ಕು ಸಂತೋಷದ ರಾಷ್ಟ್ರಗಳಲ್ಲಿ ಒಂದು.
ಈ ಪುಟ್ಟ ರಾಷ್ಟ್ರಕ್ಕೆ ಇಷ್ಟು ಖುಷಿ ಕೊಡುವಂಥದ್ದು ಏನು?

ಒಂದು : ಇಲ್ಲಿ ಬಹುತೇಕ ಮಂದಿ ತಮ್ಮದೇ ಜಮೀನನ್ನು ಹೊಂದಿದ್ದಾರೆ.
1980ರಲ್ಲಿ ಫ್ರೆಂಚ್ ಮತ್ತು ಬ್ರಿಟಿಷ್ ಆಳ್ವಿಕೆಯಿಂದ ಈ ದೇಶ ಸ್ವಾತಂತ್ರ್ಯ ಪಡೆಯಿತು. ಆ ನಂತರ, ವನವಾಟುದಲ್ಲಿನ ಎಲ್ಲಾ ಭೂಮಿಯೂ ಸ್ಥಳೀಯ ನಿ-ವನವಾಟು ಸಮುದಾಯದ ಜನತೆಗೆ ಸೇರಿದೆ. ಇದನ್ನು ಯಾರೂ ವಿದೇಶಿಯರಿಗೆ ಮಾರಾಟ ಮಾಡುವುದಿಲ್ಲ. ವನವಾಟು ನ್ಯಾಷನಲ್ ಸ್ಟ್ಯಾಟಿಸ್ಟಿಕ್ಸ್ ಆಫೀಸ್ (VNSO) ನಡೆಸಿದ 2011ರ ಸಮೀಕ್ಷೆಯು ಭೂಮಿಯನ್ನು ಹೊಂದಿರುವಿಕೆಗೂ ಸಂತೋಷಕ್ಕೂ ತಳುಕು ಹಾಕಿದೆ.

ದೇಶದಲ್ಲಿ ಸುಮಾರು 2,98,000 ನಿವಾಸಿಗಳಿದ್ದಾರೆ. ಮುಕ್ಕಾಲು ಭಾಗದಷ್ಟು ಜನರು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಾರೆ. ಹೆಚ್ಚಿನ ದ್ವೀಪವಾಸಿಗಳು ತಮ್ಮ ಆಹಾರವನ್ನು ತಾವೇ ಬೆಳೆಯಲು ಬೇಕಾದ ಜಮೀನನ್ನು ಹೊಂದಿದ್ದಾರೆ. ಗೆಣಸುಗಳು ಮತ್ತು ದಕ್ಷಿಣ ಪೆಸಿಫಿಕ್ ಬೆಳೆ ಕಾವಾ (ಕೆಲವೊಮ್ಮೆ ಒತ್ತಡ ಮತ್ತು ಆತಂಕವನ್ನು ನಿವಾರಿಸಲು ಬಳಸಲಾಗುವ ಒಂದು ರೀತಿಯ ಮೆಣಸು ಸಸ್ಯ) ಬೆಳೆದುಕೊಳ್ಳುತ್ತಾರೆ. ಹಂದಿ ಸಾಕಣೆ ಮಾಡುತ್ತಾರೆ.

ಎರಡು : ಇವರು ಹಣವನ್ನು ಬಳಸುವುದಿಲ್ಲ.
ತಮ್ಮ ಆಹಾರವನ್ನು ತಾವೇ ಬೆಳೆದುಕೊಳ್ಳುವುದರ ಜೊತೆಗೆ, ತಮ್ಮ ಸರಕುಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ವ್ಯಾಪಾರ ನಡೆಸುತ್ತಾರೆ. ಆದ್ದರಿಂದ ಅಗತ್ಯಕ್ಕಿಂತ ಹೆಚ್ಚು ಹಣವನ್ನು ಕೂಡಿಡುವ ಗೋಜಿಲ್ಲ. ಅನಗತ್ಯ ಶಾಪಿಂಗ್‌ ಮಾಡುವ ರೂಢಿಯೂ ಇಲ್ಲ.

ಇದನ್ನೂ ಓದಿ: ಭಾರತದ ಈ 7 ಸಂಗತಿ ಕಂಡರೆ ಪ್ರವಾಸಿಗರಿಗೆ ಮೆಚ್ಚು

ಮೂರು : ಸಂಪ್ರದಾಯದ ಜೊತೆ ಅನುಬಂಧ.
ಸಂತೋಷದ ಇನ್ನೊಂದು ಮೂಲವೆಂದರೆ ದ್ವೀಪವಾಸಿಗಳು ತಮ್ಮ ಸಂಪ್ರದಾಯ, ರೀತಿ ರಿವಾಜುಗಳ ಜೊತೆ ನಿಕಟವಾದ ಸಂಪರ್ಕವನ್ನು ಹೊಂದಿದ್ದಾರೆ. ಆಧುನಿಕ ಜೀವನಶೈಲಿಯ ಭರಕ್ಕೆ ಸಿಕ್ಕಿಹಾಕಿಕೊಂಡಿಲ್ಲ. ನಿ-ವನವಾಟುಗಳು 139 ಸ್ಥಳೀಯ ಭಾಷೆಗಳನ್ನು ಹೊಂದಿದ್ದಾರೆ. “ವನವಾಟು” ಎಂದರೆ “ನಮ್ಮ ಭೂಮಿ ಶಾಶ್ವತ” ಎಂದರ್ಥ. ಇದು ವಿಶ್ವದ ಅತ್ಯಂತ ದಟ್ಟ ಭಾಷಾಶಾಸ್ತ್ರೀಯ ರಾಷ್ಟ್ರಗಳಲ್ಲಿ ಒಂದು. ಸ್ಥಳೀಯ ಭಾಷೆಗಳು 92% ನಿ-ವನವಾಟು ಜನಗಳು ಮಾತನಾಡುವ ಪ್ರಾಥಮಿಕ ಭಾಷೆ. ಬಹುಪಾಲು ಜನರು ಸಾಂಪ್ರದಾಯಿಕ ಬೆಳೆ ಆವೃತ್ತ, ಕುಟುಂಬದ ಇತಿಹಾಸ, ಆಚರಣೆಯ ಬಗ್ಗೆ ಒಲವು ಹೊಂದಿದ್ದಾರೆ.

ನಾಲ್ಕು : ನಿಸರ್ಗದ ಜೊತೆ ಗಾಢವಾದ ಬಂಧನ
ವನವಾಟು ಸುತ್ತ ನೀರು ಹಾಗೂ ನಡುವೆ ಕಾಡನ್ನು ಹೊಂದಿದ ದ್ವೀಪಗಳ ಸಮುದಾಯ. ದ್ವೀಪವಾಸಿಗಳು ತಮ್ಮ ಭೌಗೋಳಿಕತೆಯೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. ಕಲ್ಲಿನ ಪರ್ವತಗಳು, ಹವಳದ ಬಂಡೆಗಳು ಇಲ್ಲಿವೆ. ಇಲ್ಲಿನ ಸ್ಥಳೀಯ ಸಸ್ಯ ಮತ್ತು ಪ್ರಾಣಿಗಳ ಪ್ರಾಮುಖ್ಯತೆಯ ಬಗ್ಗೆ ತಿಳುವಳಿಕೆಯನ್ನು ಹೊಂದಿದ್ದಾರೆ. ಜೀವನಶೈಲಿಯೂ ಕಾಡು ಮತ್ತು ನೀರಿನ ಸಂಬಂಧದಿಂದ ಸುಪುಷ್ಟವಾಗಿದೆ. ಹೀಗಾಗಿ ಇವರು ದೀರ್ಘ ಸರಾಸರಿ ಜೀವನಾವಧಿಯನ್ನು ಹೊಂದಿದ್ದಾರೆ. ಆರೋಗ್ಯ ಸಮಸ್ಯೆಗಳು ಅತ್ಯಲ್ಪ.

ಐದು: ನಿಸರ್ಗ ವಿಕೋಪಗಳು
ಆದರೆ ವನವಾಟು ನಿಸರ್ಗದ ಬೆದರಿಕೆಗೂ ತುತ್ತಾಗಿದೆ. ಪೆಸಿಫಿಕ್‌ ಸಮುದ್ರದ ಮಧ್ಯದಲ್ಲಿ ಇರುವುದರಿಂದ ನೈಸರ್ಗಿಕ ವಿಕೋಪಗಳು ಅಧಿಕ. ಇತ್ತೀಚಿನ ವರ್ಷಗಳಲ್ಲಿ ಸಮುದ್ರ ಮಟ್ಟ ಏರಿಕೆ ಮತ್ತು ಹವಾಮಾನದ ಬದಲಾವಣೆಗಳಿಂದ ದ್ವೀಪಗಳು ಬೆದರಿಕೆಗೆ ಒಳಗಾಗಿವೆ. ವಿಶ್ವಸಂಸ್ಥೆಯ 2014ರ ವರದಿಯ ಪ್ರಕಾರ, ಈ ದ್ವೀಪಸಮೂಹ ವಿಶ್ವದ ಅತ್ಯಂತ ನೈಸರ್ಗಿಕ ಅಪಾಯಕಾರಿ ದೇಶವೆಂದು ಪರಿಗಣಿಸಲಾಗಿದೆ. 2015ರಲ್ಲಿ ಪಾಮ್ ಚಂಡಮಾರುತ ಇಲ್ಲಿ ಬೀಸಿ ವ್ಯಾಪಕ ಹಾನಿಯನ್ನುಂಟುಮಾಡಿತು. 75,000 ಜನರನ್ನು ನಿರಾಶ್ರಿತರನ್ನಾಗಿ ಮಾಡಿತು. ಆದರೆ ನಿವಾಸಿಗಳು ಶೀಘ್ರವಾಗಿ ತಮ್ಮ ಹಳ್ಳಿಗಳನ್ನು ಮರಳಿ ಕಟ್ಟಿಕೊಂಡರು.

ನಿಸರ್ಗ ವಿಕೋಪಗಳು ಎಂದೂ ಇವರ ಜೀವನಾಸಕ್ತಿ ಹಾಗೂ ಜೀವನೋತ್ಸಾಹವನ್ನು ಕಸಿದುಕೊಳ್ಳಲು ಆಗಿಲ್ಲ. ಇದೇ ಅವರ ಸಂತೋಷದ ಇನ್ನೊಂದು ಕಾರಣ. ವಿಕೋಪಗಳ ನಡುವಿನ ಬದುಕನ್ನು ಅವರು ಅತ್ಯಂತ ಸಂತೋಷದಿಂದ ಕಳೆಯುತ್ತಾರೆ.

ಇದನ್ನೂ ಓದಿ: Travel Guide | ಹೆಚ್ಚಿನ ಜನರಿಗೆ ತಿಳಿಯದ ಭಾರತದ 10 ಪ್ರವಾಸಿ ತಾಣಗಳು

Exit mobile version