Site icon Vistara News

Hiking Story: ಆಫ್ರಿಕಾದ ಮೌಂಟ್‌ ಕಿಲಿಮಂಜಾರೋ ಹತ್ತಿದ ಬೆಂಗಳೂರಿನ 8ರ ಬಾಲಕಿ ಆದ್ಯ!

mount kilimanjaro

ತನ್ನ ವಯಸ್ಸಿನ ಮಕ್ಕಳು ಆಟವಾಡಿಕೊಂಡು ಕಳೆವಾಗ ಬೆಂಗಳೂರಿನ ಆದ್ಯ ಬೆನ್ನೂರು ಎಂಬ ಎಂಟು ವರ್ಷದ ಪುಟಾಣಿ ಇದೀಗ ಆಫ್ರಿಕಾದ ಅತ್ಯಂತ ಎತ್ತರದ ಶಿಖರ ಕಿಲಿಮಂಜಾರೋ ಚಾರಣ (Kilimanjaro trekking) ಮುಗಿಸಿ ಬಂದಿದ್ದಾಳೆ. ಕಳೆದ ವರ್ಷ ಈಕೆ ಮೌಂಟ್‌ ಎವರೆಸ್ಟ್‌ ಬೇಸ್‌ಕ್ಯಾಂಪ್‌ ಚಾರಣ (Everest base camp trekking) ಮುಗಿಸಿದ್ದು, ಮುಂದಿನ ಸೆಪ್ಟೆಂಬರ್‌ನಲ್ಲಿ ರಷ್ಯಾದ ಮೌಂಟ್‌ ಎಲ್ಬ್ರಸ್‌ ಶಿಖರವೇರುವ ಕನಸು ಕಾಣುತ್ತಿದ್ದಾಳೆ. ಬೆಂಗಳೂರಿನ ಗ್ರೀನ್‌ಫೀಲ್ಡ್‌ ಪಬ್ಲಿಕ್‌ ಶಾಲೆಯಲ್ಲಿ ಓದುವ ಈ ಪುಟಾಣಿ ಮೌಂಟ್‌ ಕಿಲಿಮಂಜಾರೋ ಪರ್ವತವನ್ನೇರಿದ (hiking story) ಅತ್ಯಂತ ಕಿರಿಯರಲ್ಲಿ ಒಬ್ಬಾಕೆಯಾಗಿದ್ದಾಳೆ.

ಆದ್ಯಳ ಅಪ್ಪ ಹರ್ಷ ಕರ್ನಾಟಕದ ಕೆಲವು ಚಾರಣಗಳಿಗೆ ಮಗಳು ಆದ್ಯಳನ್ನು ಕರೆದುಕೊಂಡು ಹೋಗುತ್ತಿದ್ದರಂತೆ. ಆ ಸಂದರ್ಭದಲ್ಲಿ ಮಗಳ ಫಿಟ್ನೆಸ್ ಉತ್ತಮವಾಗಿರುವುದನ್ನು ಗಮನಿಸಿದ್ದರು. ಕೊರೋನಾ ಸಂದರ್ಭದಲ್ಲಿ, ಮಗಳ ಈ ದೈಹಿಕ ಕ್ಷಮತೆಯನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನಿಸಿದ ಹರ್ಷ ಅವರು, ಆಕೆಯನ್ನು ಟೆನಿಸ್‌ ತರಗತಿಗೂ ಸೇರಿಸಿದರು. ಈ ತರಗತಿ ಆಕೆಯ ಫಿಟ್ನೆಸ್‌ ಮಟ್ಟವನ್ನು ಮತ್ತಷ್ಟು ಪಕ್ವಗೊಳಿಸುವಲ್ಲಿ ಸಾಕಷ್ಟು ನೆರವಾಯಿತು ಎನ್ನುತ್ತಾರೆ ಅವರು.

2017ರಲ್ಲಿ ಹರ್ಷ ಅವರು ಎವರೆಸ್ಟ್‌ ಬೇಸ್‌ಕ್ಯಾಂಪ್‌ ಚಾರಣ ಮಾಡಿ ಮುಗಿಸಿದ್ದರು. ಇದರ ಬಗ್ಗೆ ಅಪ್ಪನ ಬಾಯಿಯಲ್ಲೇ ಕೇಳಿ ಗೊತ್ತಿದ್ದ ಆದ್ಯಳಿಗೆ ತಾನೂ ಮೌಂಟ್‌ ಎವರೆಸ್ಟ್‌ ಬೇಸ್‌ ಕ್ಯಾಂಪ್‌ ಚಾರಣ ಮಾಡಬೇಕು ಎಂಬ ಬಯಕೆಯಾಯಿತಂತೆ. ಆದರೆ, ಈ ಚಾರಣ ಸುಲಭವೋ ಕಷ್ಟವೋ ಎಂಬ ಅರಿವಿರದಿದ್ದ ಆಕೆ, ಅಪ್ಪ ಜೊತೆಗಿರುತ್ತಾರೆ ಎಂಬ ಧೈರ್ಯದಿಂದ ಚಾರಣಕ್ಕೆ ರೆಡಿಯಾಗಿದ್ದಳಂತೆ.

ಮೌಂಟ್‌ ಎವರೆಸ್ಟ್‌ ಬೇಸ್‌ ಕ್ಯಾಂಪ್‌ ಚಾರಣಕ್ಕೆ ತಯಾರಾಗಲು ಆಗ ಏಳು ವರ್ಷವಷ್ಟೇ ಆಗಿದ್ದ ಆದ್ಯ, ಸಾಕಷ್ಟು ತಯಾರಿ ನಡೆಸಿದ್ದಳಂತೆ. ಚಾರಣಕ್ಕೂ ಮೊದಲು ಸುಮಾರು ಒಂದು ತಿಂಗಳ ಕಾಲ ನಿತ್ಯವೂ ಗಂಟೆಗಟ್ಟಲೆ ನಡಿಗೆ, ಮೆಟ್ಟಿಲುಗಳನ್ನು ಹತ್ತಿಳಿಯುವುದು, ಈಜುವುದು ಇತ್ಯಾದಿ ವ್ಯಾಯಾಮಗಳನ್ನು ಪ್ರತಿನಿತ್ಯವೂ ಮಾಡುತ್ತಿದ್ದಳಂತೆ. ಈ ಅಭ್ಯಾಸ ಚಾರಣಕ್ಕೆ ಬಹಳವೇ ನೆರವಾಯಿತು ಎಂದು ಆಕೆಯೇ ಸ್ವತಃ ಹೇಳುತ್ತಾಳೆ.

ʻನೇಪಾಳದ ಲುಕ್ಲಾದಿಂದ ಎವರೆಸ್ಟ್‌ ಬೇಸ್‌ಕ್ಯಾಂಪ್‌ವರೆಗಿನ ಚಾರಣವನ್ನು ನೆನೆಯುವ ಆಕೆಯ ಅಪ್ಪ ಹರ್ಷ ಅವರು, ಮೊದಲ ದಿನದ ಚಾರಣ ಆದ್ಯಳಿಗೆ ಬಹಳವೇ ಕಷ್ಟವೆನಿಸಿತು. ಆ ದಿನ ಬಹಳ ಅತ್ತಳು ಕೂಡಾ. ಎರಡನೇ ದಿನದಿಂದ ಆಕೆ ಸುಧಾರಿಸಿಕೊಂಡಳು. ಆಗ ಮೇಲೇರುತ್ತಾ ಏರುತ್ತಾ ಹೋದಂತೆ, ಸುತ್ತಲ ಪ್ರಕೃತಿಯೂ ಕೂಡಾ ಮತ್ತಷ್ಟು ಹೆಚ್ಚು ಆಕರ್ಷಕವಾಗಿ ಕಾಣಲಾರಂಭಿಸುವಾಗ ಚಾರಣ ಮುದವೆನಿಸತೊಡಗಿತು. ತುಂಬ ಏರುಗತಿಯಲ್ಲಿ ಹತ್ತುವ ಜಾಗಗಳಲ್ಲಿ ಆಕೆ ವೇಗವಾಗಿಯೇ ನಡೆಯುತ್ತಿದ್ದಳು. ಉಳಿದ ಜಾಗಗಳಲ್ಲಿ ಆಕೆ ನಿಧಾನಗತಿಯಲ್ಲಿ ಸಾಗುತ್ತಿದ್ದಳು. ಆಕೆಯ ಎತ್ತರ ನನಗಿಂತ ಕಡಿಮೆ ಇದ್ದುದರಿಂದ ಹೀಗಾಗುತ್ತಿತ್ತುʼ ಎನ್ನುತ್ತಾರೆ ಹರ್ಷ.

ಬೇಸ್‌ಕ್ಯಾಂಪ್‌ ಚಾರಣವನ್ನು ಮುಗಿಸಿ ಬಂದ ಆದ್ಯ ಮತ್ತೆ ತನ್ನಪ್ಪನ ಹಾದಿಯೇ ಹಿಡಿದಿದ್ದಾಳೆ. ಅಪ್ಪ ೨೦೧೯ರಲ್ಲಿ ಆಫ್ರಿಕಾದ ಅತ್ಯಂತ ಎತ್ತರದ ಶಿಖರ ಕಿಲಿಮಂಜಾರೋವನ್ನು ಹತ್ತಿದ್ದರಿಂದ ತನಗೂ ಅದೇ ಶಿಖರವೇರಬೇಕು ಎಂಬ ಆಸೆಯನ್ನು ಅಪ್ಪನಿಗೆ ತಿಳಿಸಿದ ಆದ್ಯ, ಈ ವರ್ಷ ಇದೀಗ ಕಿಲಿಮಂಜಾರೋ ಕನಸನ್ನೂ ನನಸಾಗಿಸಿದ್ದಾಳೆ. ಈ ಪರ್ವತವೇರಲು ಆದ್ಯ ಮೂರು ತಿಂಗಳಿಂದ ಸತತ ದೈಹಿಕ ವ್ಯಾಯಾಮ ತರಬೇತಿಗಳನ್ನೂ ಪಡೆದಿದ್ದು, ಗಂಟೆಗಟ್ಟಲೆ ನಡೆಯುವುದು, ಓಡುವುದು, ಹಾಗೂ ಮೆಟ್ಟಿಲುಗಳನ್ನು ಹತ್ತಿಳಿವ ಅಭ್ಯಾಸಗಳನ್ನು ಮಾಡಿದ್ದಳಂತೆ.

ಕಿಲಿಮಂಜಾರೋ ಚಾರಣವೂ ಕೂಡಾ ಒಂದು ಗುಂಪಿನ ಜೊತೆ ಮಾಡಬೇಕಿದ್ದರೂ, ಅಂತಿಮ ಕ್ಷಣದಲ್ಲಿ ಆ ಮಂದಿ ಬರಲಿಲ್ಲವಾದ್ದರಿಂದ ಅಪ್ಪ ಮಗಳು ಮಾತ್ರವೇ ಗೈಡ್‌ ಜೊತೆಗೆ ಚಾರಣ ಮಾಡಬೇಕಾಯ್ತಂತೆ. ಎವರೆಸ್ಟ್‌ ಬೇಸ್‌ ಕ್ಯಾಂಪ್‌ನಲ್ಲೂ ಹೀಗಾದುದಕ್ಕೆ ಆದ್ಯ ಬೇಸರ ವ್ಯಕ್ತಪಡಿಸುತ್ತಾಳೆ.

ಕಿಲಿಮಂಜಾರೋಗೆ ಹತ್ತುವ ಸುಲಭದ ದಾರಿಯ ಚಾರಣ 5-6 ದಿನಗಳು ತೆಗೆದುಕೊಳ್ಳುತ್ತದೆ. ಆದರೆ, ವಾತಾವರಣಕ್ಕೆ ಹೊಂದಿಕೊಳ್ಳುವ ಅಂದರೆ ಅಕ್ಲಮಟೈಸ್‌ ಆಗುವ ದೃಷ್ಟಿಯಲ್ಲಿ ಈ ದಾರಿ ಸೇಫ್‌ ಅನಿಸಿಲ್ಲವಾದ್ದರಿಂದ ಇವರು ಕಷ್ಟದ ಹಾದಿ ಅಂದರೆ ಏಳೆಂಟು ದಿನಗಳು ತೆಗೆದುಕೊಳ್ಳುವ ಹಾದಿಯಲ್ಲಿ ಚಾರಣ ಮಾಡಿದೆವು ಎನ್ನುತ್ತಾರೆ ಅವರು.

ಇದನ್ನೂ ಓದಿ: Monsoon Trekking: ಜೀವಿತಾವಧಿಯಲ್ಲಿ ಒಮ್ಮೆಯಾದರೂ ಮಾಡಲೇಬೇಕಾದ ಮಳೆಗಾಲದ ಚಾರಣಗಳಿವು!

ಒಂದು ಹಂತದಲ್ಲಿ ಆದ್ಯ, ಇನ್ನು ಸಾಧ್ಯವೇ ಇಲ್ಲ ಎಂಬ ಸ್ಥಿತಿಗೆ ಬಂದರೂ, ಅದನ್ನು ನೋಡಲು ಅಪ್ಪನಾಗಿ ತನಗೆ ಕಷ್ಟವಾದ್ದರಿಂದ ತಾನೂ, ಅರ್ಧಕ್ಕೇ ನಿಲ್ಲಿಸುವ ಯೋಚನೆ ಮಾಡಿದರೂ, ಕೊನೇ ಕ್ಷಣದಲ್ಲಿ ಇಬ್ಬರೂ ಚಾರಣ ಮಾಡಿ ಮುಗಿಸಿದೆವು ಎನ್ನುತ್ತಾರೆ ಹರ್ಷ.

ದಿನಕ್ಕೆ ಹತ್ತು ಗಂಟೆಗಳ ಕಾಲ ನಡೆಯುತ್ತಿದ್ದ ಅವರು, ಸಮ್ಮಿಟ್‌ನ ದಿನ ಮಧ್ಯರಾತ್ರಿಗೇ ಎದ್ದು ಬೆಳಿಗ್ಗೆ 11 ಗಂಟೆಗೆಲ್ಲ ತುತ್ತ ತುದಿ ತಲುಪಿ ವಾಪಾಸ್‌ ಇಳಿಯುವ ಹಾದಿಯಲ್ಲಿ ಬರಬೇಕು. ಆ ದಿನ 17 ಗಂಟೆಗಳ ಕಾಲ ಸತತವಾಗಿ ನಡೆದಿದ್ದೆವು. ಅದೂ ಮೈನಸ್‌ 20 ಡಿಗ್ರಿಯಲ್ಲಿ. ಇದು ಎಂಟು ವರ್ಷದ ಪುಟಾಣಿಗೆ ನಿಜಕ್ಕೂ ಅತ್ಯಂತ ಕಠಿಣವಾದುದು ಎನ್ನುತ್ತಾರೆ ಅವರು.

ಚಾರಣದ ಸಂದರ್ಭ ಕಂಡ ಪ್ಲಾಸ್ಟಿಕ್‌, ಮತ್ತಿತರ ಕಸವನ್ನೂ ಆಕೆ ಸ್ವಚ್ಛಗೊಳಿಸುತ್ತಾ ಬಂದಿದ್ದು, ಈ ಬಗ್ಗೆ ಆಕೆಗೆ ವಿಷಾದವಿದೆ. ಜನರು, ಚಾರಣವನ್ನು ಮಾಡುವಾಗ ಪ್ರಕೃತಿಯ ಉಳಿವಿನ ಬಗ್ಗೆಯೂ ಯೋಚಿಸಬೇಕು ಎಂದು ಕಳಕಳಿ ವ್ಯಕ್ತಪಡಿಸುತ್ತಾಳೆ.

ಇದನ್ನೂ ಓದಿ: Trekking Guide: ಪ್ರವಾಸ, ಚಾರಣದಲ್ಲಿ ನೀವು ಹಾದಿ ತಪ್ಪಿದರೆ ಮಾಡಬೇಕಾದ್ದೇನು? ಇಲ್ಲಿವೆ ಟಿಪ್ಸ್‌!

Exit mobile version