Site icon Vistara News

Weird travel : ಹೆಂಡತಿ ಮುಖದ ದಿಂಬಿನೊಂದಿಗೆ ಪ್ರವಾಸ ಮಾಡಿದ ಗಂಡ!

tour wife

ಇದೊಂತರಾ ಸಿನಿಮೀಯ ಘಟನೆ. ಸಿನಿಮಾಗಳಲ್ಲಿ ಒಂದು ಹ್ಯಾಪಿ ಎಂಡಿಂಗ್‌ ಕೊಟ್ಟು ʻಶುಭಂʼ ಎಂದು ಹಾಕುವ ಹಾಗೆ ಇಲ್ಲೊಂದು ಗಂಡಹೆಂಡಿರ ಪ್ರೇಮದಲ್ಲೊಂದು ಎದುರಾದ ಟ್ವಿಸ್ಟ್, ಶುಭಂನಲ್ಲಿ ಕೊನೆಗೊಂಡಿದೆ!

ಫಿಲಿಫೈನ್ಸ್‌ನ ನಿವಾಸಿಯೊಬ್ಬ ಈವರೆಗೆ ಯಾರೂ ಮಾಡದಿದ್ದ ಹೊಸ ಐಡಿಯಾವೊಂದನ್ನು ಮಾಡಿದ್ದಾನೆ. ಏನಾದರೂ ಸರಿ, ನಾನು ಹೆಂಡತಿಯೊಂದಿಗೆ ಪ್ರವಾಸ ಹೋಗಿಯೇ ಸಿದ್ಧ ಎಂದು ಈತ ಶತಾಯಗತಾಯ ಪ್ರಯತ್ನಿಸಿ, ಕೊನೆಗೆ ತನ್ನ ಆಣೆಯನ್ನು ಈಡೇರಿಸಲು, ಬಾರದಿದ್ದ ಹೆಂಡತಿ ಬದಲು ಹೆಂಡತಿಯ ಮುಖದ ಚಿತ್ರವಿರುವ ತಲೆದಿಂಬನ್ನೇ ಪ್ರವಾಸಕ್ಕೆ ತೆಗೆದುಕೊಂಡು ಹೋಗಿದ್ದಾನೆ!

ಇದೆಂಥ ತರಲೆ! ಹೀಗೂ ಇದೆಯಾ? ಎನ್ನಬೇಡಿ. ಇದು ವಿಚಿತ್ರವೆನಿಸಿದರೂ ಸತ್ಯ. ಫಿಲಿಫೈನ್ಸ್‌ನ ರೇಮಂಡ್‌ ಫಾರ್ಚುನಾಡೋ ಎಂಬಾತನೇ ಈ ವಿಶಿಷ್ಟ ಐಡಿಯಾವನ್ನು ಮಾಡಿದಾತ. ಈತ ಹಾಗೂ ಈತನ ಹೆಂಡತಿಯ ಜೊತೆಗೆ ಕೆಲದಿನಗಳ ಕಾಲ ತಮ್ಮದೇ ದೇಶದ ಕೆಲವೆಡೆ ಪ್ರವಾಸ ಹೋಗಿ ಬರಲು ಪ್ಯಾಕೇಜ್‌ ಒಂದನ್ನು ಬುಕ್‌ ಮಾಡಿದ್ದ. ತಾವಿಬ್ಬರು ಜೊತೆಯಾಗಿ ಪ್ರವಾಸ ಮಾಡುವ ಬಗ್ಗೆ ಸಾಕಷ್ಟು ಕನಸು ಕಂಡಿದ್ದ ಈ ಗಂಡನಿಗೆ ಕೊನೆಯ ಕ್ಷಣದಲ್ಲಿ ಹೆಂಡತಿ ಕೈಕೊಟ್ಟಿದಾಳೆ. ಆಕೆಯನ್ನು ಬಿಟ್ಟು ಹೋಗಲು ಮನಸ್ಸಾಗದೆ, ಆಕೆ ತನಗಾಗಿ ಗಿಫ್ಟ್‌ ಕೊಟ್ಟಿದ್ದ ಆಕೆಯದೇ ಫೋಟೋ ಇರುವ ಆಕೆಯ ಮುಖದ ಆಕಾರದಲ್ಲಿರುವ ದಿಂಬನ್ನೇ ತನ್ನ ಜೊತೆ ಹೊತ್ತೊಯ್ದಿದ್ದಾನೆ. ಜೊತೆಗೆ, ಹೆಂಡತಿಯ ಜೊತೆಗೇ ಪ್ರವಾಸ ಎಂಜಾಯ್‌ ಮಾಡುತ್ತಿದ್ದೇನೆ ಎಂಬ ತರಲೆ ಪೋಸ್ಟನ್ನೂ ಹಾಕಿದ್ದಾನೆ.

ಇದನ್ನೂ ಓದಿ: Viral News | ಪಾಕಿಸ್ತಾನದ ವಕ್ರ ಕುತ್ತಿಗೆಯ ಬಾಲಕಿಗೆ ದೇವರಾದ ಭಾರತದ ಡಾಕ್ಟರ್!

ಈ ಪ್ರವಾಸಕ್ಕೂ ಮೊದಲು ರೇಮಂಡ್‌ಗೂ ಆತನ ಪತ್ನಿಗೂ ಇದೇ ಪ್ರವಾಸದ ಕುರಿತು ಸಾಕಷ್ಟು ವಾಗ್ವಾದಗಳಾಗಿತ್ತಂತೆ. ಮಾಡೆಲ್‌ ಆಗಿರುವ ಆಕೆ, ಇದ್ದಕ್ಕಿದ್ದಂತೆ ಇನ್ನೇನು ಪ್ರವಾಸದ ದಿನ ಹತ್ತಿರ ಬರುತ್ತಿದ್ದಂತೆ, ತನಗೆ ಈ ಪ್ರವಾಸಕ್ಕೆ ಬರುವುದು ಸಾಧ್ಯವಿಲ್ಲ, ಕೆಲಸವಿದೆ ಎಂದು ತನ್ನ ಕೆಲಸದ ನಿಮಿತ್ತ ಬೇರೆಡೆ ಹೋಗಿದ್ದಳಂತೆ. ಅನಿರೀಕ್ಷಿತವಾಗಿ ಬದಲಾದ ಯೋಜನೆಗೆ ರೇಮಂಡ್‌ಗೆ ನಿರಾಸೆಯಾದರೂ, ಹೆಂಡತಿಯನ್ನು ಬಿಟ್ಟು ಪ್ರವಾಸ ಮಾಡುವುದಾದರೂ ಹೇಗೆ ಎಂದು ದಿಕ್ಕುತೋಚದಂತಾಗಿದ್ದಾನೆ. ಕೊನೆಗೂ ಈ ರೊಮ್ಯಾಂಟಿಕ್‌ ಹೀರೋ, ಬುಕ್‌ ಮಾಡಿದ್ದ ಪ್ರವಾಸ ಬಿಡಲೂ ಮನಸ್ಸಾಗದೆ ದಿಂಬನ್ನೇ ಎತ್ತಿಕೊಂಡು ಪ್ರವಾಸ ಹೋಗಿದ್ದಾನೆ.

ಇಲ್ಲಿ ಆತನ ಹಾಸ್ಯಪ್ರಜ್ಞೆಯನ್ನು ಮೆಚ್ಚಬೇಕು. ತನ್ನ ಹಾಗೂ ಹೆಂಡತಿಯ ಈ ವಿಶಿಷ್ಟ ಪ್ರೇಮ ಕಥಾನಕವನ್ನು ಜಗತ್ತಿನ ಮುಂದಿರಿಸಿದ್ದಾನೆ. ನೋಡಿ, ಹೆಂಡತಿಯ ಜೊತೆ ವೆಕೇಶನ್‌ ಎಂಜಾಯ್‌ ಮಾಡುತ್ತಿದ್ದೇನೆ ಎಂದು ತಾನು ಹೋದ ಜಾಗದಲ್ಲೆಡೆಯಲ್ಲಿ ಈ ದಿಂಬಿನ ಜೊತೆ ಸೆಲ್ಫೀ ತೆಗೆದು ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. ಸ್ನೋರ್ಕ್ಲಿಂಗ್‌ ಮಾಡಿ ಅಲ್ಲೂ ಒಂದು ಸೆಲ್ಫಿ, ಒಳ್ಳೆಯ ಹೊಟೇಲಿನಲ್ಲಿ ಊಟ ಮಾಡಿ ಅಲ್ಲೂ ಒಂದು ಸೆಲ್ಫಿ, ಏರ್‌ಪೋರ್ಟಿನಲ್ಲೊಂದು ಸೆಲ್ಫೀ… ಹೀಗೆ ಹೋದಲ್ಲೆಲ್ಲ ದಿಂಬಿನ ಜೊತೆಗೆ ಫೋಟೋ ತೆಗೆಸಿಕೊಂಡಿದ್ದಾನೆ. ಮಜಾ ಎಂದರೆ, ಕೋವಿಡ್‌ ನಿಯಮದಂತೆ ಏರ್‌ಪೋರ್ಟಿನಲ್ಲಿ ತನ್ನ ದೇಹದ ಉಷ್ಣತೆ ಚೆಕ್‌ ಮಾಡುತ್ತಿರುವ ಸಂದರ್ಭ ಈ ದಿಂಬಿನ ಉಷ್ಣತೆಯನ್ನೂ ತೆಗೆಯಲು ಹೇಳಿದ್ದಾನೆ. ಈ ಚಿತ್ರಗಳು ಜಾಲತಾಣದಲ್ಲಿ ವೈರಲ್‌ ಆಗಿದ್ದು, ಹಲವರು ಈತನನ್ನು, ʻನೀನೊಬ್ಬ ಡಿಫರೆಂಟ್‌ ಮನುಷ್ಯ, ಸೋ ಸ್ವೀಟ್‌ʼ ಎಂದು ಕಮೆಂಟ್‌ ಮಾಡಿದ್ದಾರೆ.

ಈತ ಇಷ್ಟೆಲ್ಲ ಮಾಡಿದ್ದಕ್ಕೆ ಫಲವೂ ದೊರಕಿದೆ. ಹೋದಬಂದಲ್ಲೆಲ್ಲ, ಹೆಂಡತಿಯ ಮುಖದ ದಿಂಬು ಹಿಡಿದು ಸೆಲ್ಫೀ ತೆಗೆದುಕೊಂಡು ಕೊನೆಗೂ ಮರಳುವ ಸಂದರ್ಭ ಕೊನೆಗೂ ಹೆಂಡತಿಗೂ ಗಂಡನ ಈ ಪ್ರೀತಿ ನೋಡಿ ಪ್ರೀತಿಯುಕ್ಕಿ ಹರಿದು, ಏರ್‌ಪೋರ್ಟಿನವರೆಗೂ ಬಂದು ಮನೆಗೆ ಸ್ವಾಗತ ಕೋರಿದ್ದಾಳಂತೆ. ತನ್ನ ಮೇಲೆ ಗಂಡನಿಗಿರುವ ಪ್ರೀತಿ ನೋಡಿ ಮನ ಕರಗಿ, ತನ್ನ ಹಾಗೂ ಗಂಡನ ನಡುವೆ ನಡೆದ ವಾಗ್ವಾದಕ್ಕೆ ಎಳ್ಳುನೀರು ಬಿಟ್ಟು, ಸಡಗರದಿಂದ ಓಡೋಡಿ ಬಂದಿದ್ದಾಳೆ. ಪ್ರವಾಸವನ್ನೂ ಸಿಂಗಲ್‌ ಆಗಿ ಎಂಜಾಯ್‌ ಮಾಡಿ ಬಂದ ಈ ಗಂಡನಿಗೆ ಮನೆಯಲ್ಲೂ ಸಿಕ್ಕ ಭರ್ಜರಿ ಸ್ವಾಗತಕ್ಕೆ ಉಳಿದ ಗಂಡಂದಿರು ತಮಗೀ ಭಾಗ್ಯವಿಲ್ಲವಲ್ಲ ಎಂದು ಇಂಥದ್ದೇ ಬೇರೆ ಐಡಿಯಾಗಳನ್ನು ಹುಡುಕುತ್ತಿದ್ದಾರಂತೆ!

ಸದ್ಯಕ್ಕೆ ಇವರ ಕತೆಗೆ ʻಶುಭಂʼ ಹೇಳೋಣ!

ಇದನ್ನೂ ಓದಿ: Carla belluci: ಇವಳ ಮದುವೆಯಲ್ಲಿ ಟಿಕೆಟ್‌ ಹಣ ಕೊಟ್ಟು ಆಗಮನವೇ ಆಶೀರ್ವಾದ, ದುಡ್ಡು ಕೊಟ್ಟರೇ ಊಟ!

Exit mobile version