ʻಎಲ್ಲ ಕಲಿಕೆಗಳೂ ತರಗತಿಯ ಒಳಗೇ ಕೂತು ನಡೆಯುವಂಥದ್ದಾ? ಹಾಗೆ ನೋಡಿದರೆ, ಜೀವನದ ಕಲಿಕೆ ಆರಂಭವಾಗುವುದೇ ತರಗತಿಯ ಹೊರಗೆ. ಆದರೆ, ಅಂಬೆಗಾಲಿಟ್ಟ ಮಗು ನಡೆಯಲು ಶುರುಮಾಡಿ ವರ್ಷವಾಗುವ ಹೊತ್ತಿಗೆ ತರಗತಿಯ ನಾಲ್ಕು ಗೋಡೆಯೊಳಗೆ ಬಂಧಿಸಿಬಿಡುತ್ತೇವೆ. ಹಾಗಾದರೆ ಮಕ್ಕಳಿಗೆ ಸಹಜ ನೈಸರ್ಗಿಕವಾದ ಕಲಿಕೆ ಶುರುವಾಗುವುದು ಯಾವಾಗ?ʼ
ಹೀಗೆ ಯೋಚನೆ ಮಾಡುವ ಮಂದಿ ಸಿಗುವುದು ವಿರಳ. ಕೆಲವು ಪೋಷಕರು ಮಾತ್ರ ಹೀಗೂ ಆಲೋಚಿಸಿ, ಎಲ್ಲರೂ ಓಡುವ ರೇಸ್‌ನ ಹಾದಿಯಲ್ಲಿ ಓಡುವ ಅಗತ್ಯವಿಲ್ಲ ಎಂದು ಮೊದಲೇ ಯೋಚಿಸಿ ಬೇರೆ ಸಾಧ್ಯತೆಗಳತ್ತ ಮುಖ ಮಾಡುತ್ತಿದ್ದಾರೆ. ಅಂಥ ಪೋಷಕರ ಪೈಕಿ ಈ ಪುಣೆಯ ಅಮ್ಮನೂ ಒಬ್ಬಾಕೆ.
೨೦೨೦ರಲ್ಲಿ ಲಾಕ್‌ಡೌನ್ ಎಂದು ಇಡೀ ವರ್ಷ ತನ್ನ ವಯಸ್ಸಿನ ಮಕ್ಕಳೊಂದಿಗೆ ಬೆರೆಯಲಾಗದೆ ಪುಟ್ಟ ಪುಟ್ಟ ಮಕ್ಕಳು ಆನ್‌ಲೈನ್ ಎಂದು ಕಂಪ್ಯೂಟರ್ ಪರದೆ ಎದುರು ಕೂತು ಇದೇ ಶಾಲೆ ಎಂದು ಸಮಯ ಕಳೆಯುತ್ತಿದ್ದರು. ಪುಣೆಯ ಅನೀಕಾಳ ಮಗ ಪ್ರಾಂಶ್ ಸೋನಾವಾನೆ ಕೂಡಾ ಇದಕ್ಕೆ ಹೊರತಾಗಿರಲಿಲ್ಲ. ೨೦೨೦ರಲ್ಲಿ ನಾಲ್ಕು ವರ್ಷದವನಾಗಿದ್ದ ಈ ಪುಟಾಣಿ ಆನ್‌ಲೈನ್ ಕ್ಲಾಸೆಂದು ಕಂಪ್ಯೂಟರ್ ಎದುರು ಕೂರುವ ದೃಶ್ಯವನ್ನು ಐಟಿ ಉದ್ಯೋಗಿ ಆಗಿದ್ದ ಅನೀಕಾಗೆ ಸಹಿಸಲಾಗಲಿಲ್ಲ. ಹೀಗಾಗಿ, ಆಕೆ, ಒಂದು ದೃಢ ನಿಶ್ಚಯ ಮಾಡಿ ತನ್ನ ಮಗ ಪ್ರಾಂಶ್‌ನನ್ನು ಶಾಲೆಯಿಂದ ಬಿಡಿಸಿ ಪ್ರವಾಸ ಹೊರಟಿದ್ದಾಳೆ!
ಎಲ್ಲ ಮಕ್ಕಳೂ ಆನ್‌ಲೈನ್ ಕ್ಲಾಸಿನಲ್ಲಿ ಕೂತು ಎ ಫಾರ್ ಆಪಲ್ ಎಂದು ಹೇಳುತ್ತಿದ್ದರೆ, ಪ್ರಾಂಶ್ ಮಾತ್ರ ಅಮ್ಮನ ಜೊತೆ ಹಿಮಾಚಲ ಪ್ರದೇಶದ ಆಪಲ್ ತೋಟಗಳಲ್ಲಿ ಆಟವಾಡುತ್ತಾ, ಕೇವಲ ಆಪಲ್ ಮಾತ್ರವಲ್ಲ, ಚೆರ್ರಿ, ಪೀಚ್, ಪೀರ್ ಮತ್ತಿತರ ಹಣ್ಣುಗಳ ಮರಗಳು ಹೇಗಿರುತ್ತವೆ ಎಂದು ಕಣ್ಣಾರೆ ಕಂಡು ಸಂಭ್ರಮಿಸಿದ್ದಾನೆ.
ಆಕೆ ಹೇಳುವ ಪ್ರಕಾರ, ೨೦೨೦ರಲ್ಲಿ ನಾನು ಕೆಲಸ ಬಿಟ್ಟೆ. ಮಗ ಆನ್‌ಲೈನ್ ಕ್ಲಾಸ್‌ನಿಂದ ಸಂತೋಷದಲ್ಲಿಲ್ಲ ಎಂಬುದು ನನಗೆ ಗೊತ್ತಾಗುತ್ತಿತ್ತು. ಅವನು ಶಾಲೆಗೆ ಹೋಗಿ, ಟೀಚರು ಹಾಗೂ ಅವರ ವಯಸ್ಸಿನ ಮಕ್ಕಳ ಜೊತೆ ಬೆರೆಯುವ, ಆಟವಾಡುವ ಅವಕಾಶ ಸಿಗದೆ ಕಷ್ಟಪಡುತ್ತಿದ್ದಾನೆ ಎಂದೆನಿಸುತ್ತಿತ್ತು. ಹಾಗಾಗಿ ಮಗನನ್ನು ಕರೆದುಕೊಂಡು ತಿರುಗಾಡಿಕೊಂಡು ಬರಬಹುದು ಅನಿಸಿತು ಎನ್ನುತ್ತಾರೆ.
ಎಲ್ಲ ಕಲಿಕೆಗಳೂ ಕ್ಲಾಸ್‌ರೂಮಿನೊಳಗೇ ಕೂತೇ ಆಗಬೇಕಿಲ್ಲ. ಹಲವು ಪಾಠಗಳು ನಮಗೆ ದಕ್ಕುವುದು ಹೊರಗೆ ಹೋಗುವುದರಿಂದ, ಇತರರ ಜೊತೆ ಬೆರೆಯುವುದರಿಂದ, ಬೇರೆ ಬೇರೆ ಸ್ಥಳಗಳನ್ನು ಹೋಗಿ ನೋಡುವುದರಿಂದ. ಪಠ್ಯದ ವಿಷಯಗಳನ್ನು ಯಾವಾಗ ಬೇಕಾದರೂ ಕೂತು ಓದಬಹುದು. ಆದರೆ, ಸಮಯ ಸಿಕ್ಕಾಗ, ಅಥವಾ ಸಮಯ ಆಗಾಗ ಮಾಡಿಕೊಂಡು ಇಂಥದ್ದನ್ನು ಮಾಡಬೇಕು. ಉತ್ತಮ ನೆನಪುಗಳನ್ನು ಕೂಡಿ ಹಾಕಬೇಕು. ಶಾಲೆಗೆ ಶುಲ್ಕ ಕಟ್ಟಲು ಹಣ ಕೂಡಿಟ್ಟಂತೆ ಇಂಥ ನೆನಪುಗಳಿಗಾಗಿಯೂ ಹಣ ಕೂಡಿಡಬೇಕು ಎನ್ನುತ್ತಾರೆ.
೨೦೨೦ರಲ್ಲಿ ಆರು ತಿಂಗಳು ಎಲ್ಲೂ ಹೊರಗೆ ಕಾಲಿಡದೆ ಮಗ ಮೂರೂ ಹೊತ್ತು ಆನ್‌ಲೈನ್ ಎಂದು ಮನೆಯೊಳಗೇ ಕೂತಿದ್ದ. ಅವನ ಕಷ್ಟ ನೋಡಿ ಎಪ್ರಿಲ್ ೨೦೨೧ರಲ್ಲಿ ಹೀಗೆ ನಿರ್ಧಾರ ಮಾಡಿದೆ. ಹಿಮಾಚಲ ಪ್ರದೇಶಕ್ಕೆ ಅವನನ್ನು ಕರೆದುಕೊಂಡು ಬಂದೆ. ಹಿಮಾಚಲಕ್ಕೆ ಬಂದ ಕೂಡಲೇ ಅವನಲ್ಲಿ ಬದಲಾವಣೆಯನ್ನೂ ಕಂಡೆ. ಪ್ರಕೃತಿಯೊಂದಿಗೆ ಆತ ಎಷ್ಟು ಚೆನ್ನಾಗಿ ಬೆರೆತ ಎಂದರೆ, ಆತ ಹುಚ್ಚೆದ್ದು ಆಡಿದ. ಮನಸಾರೆ ನೀರಿನಲ್ಲಿ ಕುಣಿದಾಡಿದ. ಹಕ್ಕಿಗಳನ್ನು ನೋಡಿದ. ಶುದ್ಧ ಗಾಳಿ ಉಸಿರಾಡಿದ. ಅಲ್ಲಿನ ಗ್ರಾಮಸ್ಥರ ಜೊತೆ ಬೆರೆತ. ಅಲ್ಲಿನ ಮಕ್ಕಳ ಜೊತೆ ಆಟವಾಡಿದ. ಒಟ್ಟಾರೆ ಬಹಳ ಖುಷಿಯಾಗಿದ್ದ ಎಂದು ವಿವರಿಸುತ್ತಾರೆ.
ಇದನ್ನೂ ಓದಿ | Rain tourism | ಮಹಾರಾಷ್ಟ್ರದ ಈ ಕೋಟೆಗಳನ್ನು ನೀವು ಮಳೆಗಾಲದಲ್ಲೇ ನೋಡಬೇಕು!
ಸ್ಪಿತಿ ಕಣಿವೆ ಹಾಗೂ ಲಡಾಕ್‌ಗೆ ತನ್ನ ಈ ಆರರ ಹರೆಯದ ಮಗನೊಂದಿಗೆ ಆಕೆ ಪ್ರವಾಸ ಮಾಡಿರುವ ಈಕೆ, ಯಾವುದೇ ಯೋಜನೆಗಳನ್ನು ಹಾಕಿಕೊಳ್ಳದೆ, ನಿಧಾನವಾಗಿ ಪ್ರವಾಸ ಮಾಡುವ ಬಗೆಯನ್ನು ತಾನು ಆಯ್ಕೆ ಮಾಡಿದ್ದಾಗಿ ಆಕೆ ಹೇಳುತ್ತಾಳೆ. ಗಂಡನಿಗೆ ಕೆಲಸವಿದ್ದುದರಿಂದ ಆತ ಈ ಪ್ರವಾಸಕ್ಕೆ ಜೊತೆಯಾಗಲಾಗಲಿಲ್ಲವಾದ್ದರಿಂದ, ನಾವು ನಿಧಾನಕ್ಕೆ ಒಂದೊಂದೇ ಜಾಗಗಳನ್ನು ನೋಡುತ್ತಾ, ಹೆಚ್ಚು ದಿನಗಳ ಕಾಲ ಒಂದು ಪ್ರದೇಶದಲ್ಲಿದ್ದು, ಕಾಲ ಕಳೆದೆವು. ಹೈ ಆಲ್ಟಿಟ್ಯೂಡ್ ಪ್ರಧೇಶವಾದ ಲಡಾಕ್‌ನಲ್ಲಿ ಅಕ್ಲಮಟೈಸ್ ಆಗಲು ನಾಲ್ಕು ದಿನ ತೆಗೆದುಕೊಂಡೆವು. ಸಾಧಾರಣವಾಗಿ ಎರಡು ದಿನ ಎಲ್ಲರಿಗೂ ಸಾಕಾಗುತ್ತವೆ. ಆದರೆ, ನಾವು, ಎಲ್ಲ ಪ್ರವಾಸಿಗರಂತೆ ಅಲ್ಲಿನ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿಕೊಂಡು ಬರುವುದಷ್ಟೇ ಉದ್ದೇಶವಾಗಿರಲಿಲ್ಲ. ಹಾಗಾಗಿ ಸುಮಾರು ೧೫ ದಿನಗಳ ಕಾಲ ಲಡಾಕ್‌ನಲ್ಲಿದ್ದುಕೊಂಡು ನಿಧಾನ ಪ್ರವಾಸವನ್ನೇ ಪರಿಗಣಿಸಿ, ಅಲ್ಲಿನ ಪ್ರಮುಖ ಜಾಗಗಳಿಗೆ ಭೇಟಿ ಕೊಟ್ಟೆವು ಎನ್ನುತ್ತಾರೆ.
ನಾವು ಸಣ್ಣವರಿದ್ದಾಗ, ನಕ್ಷತ್ರ ನೋಡಿಕೊಂಡು ರಾತ್ರಿಗಳು ಕಳೆದಂತೆ ನಮ್ಮ ಮಕ್ಕಳಿಗೂ ನಾವು ಅಂತಹ ಬಾಲ್ಯ ನೀಡಬೇಕು. ಅವರಿಗೆ ಬಾಲ್ಯದ ತುಂಬ ಬದುಕಿಗೆ ಅಗತ್ಯವಾಗಿ ಬೇಕಾದ ನೆನಪುಗಳನ್ನು ಕಟ್ಟಿಕೊಡಬೇಕು ಎಂದು ಆಕೆ ಹೇಳುತ್ತಾಳೆ.
ಮನೆಯಲ್ಲಿ ಎಷ್ಟೇ ತುಂಟಾಟಗಳನ್ನು ಮಾಡಿದರೂ ಪ್ರಾಂಶ್ ಪ್ರವಾಸದಲ್ಲಿ ತನ್ನ ಐದರ ವಯಸ್ಸಿಗೂ ಮೀರಿದ ಪ್ರೌಢತೆ ತೋರಿಸಿದ್ದಾನೆ. ಅಟಲ್ ಟನಲ್ ಒಳಗಿನಿಂದ ವಾಹನ ಚಲಾಯಿಸುವಾಗ ನನ್ನ ಹೆಡ್‌ಲೈಟ್ ಉರಿಯದೆ ಇದ್ದಾಗ, ಸ್ವಿಚ್ ಅಮುಕಿ ಹಿಡಿದೇ ಲೈಟ್ ಉರಿಯುವಂತೆ ಮಾಡಲು ಸಹಾಯ ಮಾಡಿದ್ದ. ಲಡಾಕ್‌ನಲ್ಲಿ ಅಕ್ಲಮಟೈಸ್ ಆಗಲು ನನಗೆ ಕಷ್ಟವಾದಾಗ, ಆರೋಗ್ಯ ಹದಗೆಟ್ಟಾಗ ಮಗ ಹೋಟೇಲ್ ಮಂದಿಗೆ ಹೇಳಿ, ಬಿಸಿ ಮಾಡಿಸಿ ನನಗೆ ರೆಡಿ ಮಾಡಿಸಿದ್ದ. ಇವೆಲ್ಲ ಪ್ರವಾಸದಿಂದ ಕಲಿಯುವ ಜೀವನ ಪಾಠಗಳು ಎಂದು ಹೇಳುತ್ತಾಳೆ.
ಇದನ್ನೂ ಓದಿ | Cheap beer | ಜಗತ್ತಿನ ಅತೀ ಸಂತೋಷದ ಜಾಗವಿದು! ಕಾರಣ ಇಲ್ಲಿ ಸಿಗುವ ಬಿಯರ್!