Site icon Vistara News

Monsoon trekking: ರಕ್ತ ಹೀರುವ ಜಿಗಣೆಗಳಿಗೆ ಹೆದರುವ ಮುನ್ನ ಇವಿಷ್ಟು ನಿಮಗೆ ತಿಳಿದಿರಲಿ!

leech on hand

ಮಳೆಗಾಲದ ಪ್ರವಾಸದಲ್ಲಿ (monsoon travel) ಚಾರಣದಲ್ಲಿ (monsoon trekking) ಕೈಕಾಲುಗಳಲ್ಲಿ ನಡುಕ ಹುಟ್ಟಿಸಬಲ್ಲ ತಾಕತ್ತಿರುವ ಏಕೈಕ ಜೀವಿ ಎಂದರೆ ಲೀಚ್‌ (Leech) ಅಥವಾ ಜಿಗಣೆ ಅಥವಾ ಉಂಬಳ. ಈ ಜಿಗಣೆಯ ಭಯದಲ್ಲಿ ಅನೇಕರು ಮಳೆಗಾಲದ ಪ್ರವಾಸವನ್ನೇ ನಿರ್ಲಕ್ಷ್ಯ ಮಾಡುವುದುದಂಟು. ಅನೇಕರಿಗೆ ಮಳೆಗಾಲದಲ್ಲಿ ಪಯಣ ಇಷ್ಟವಿದ್ದರೂ ಜಿಗಣೆಗೆ ಹೆದರಿ ಮನೆಯಲ್ಲೇ ಕೂರುವುದುಂಟು. ಇನ್ನೂ ಕೆಲವರು ಜಿಗಣೆ ಮೈಗೆ ಹತ್ತಿದ ಕೂಡಲೇ ಗಾಬರಿಯಾಗಿ ನಡುಕ ಹುಟ್ಟಿ, ಕೈಕಾಲು ಬಡಿದುಕೊಂಡು ಕಾಡು ಬೆಟ್ಟ ನಡುಗಿಹೋಗುವಂತೆ ಕಿರುಚಾಡುವುದುಂಟು. ಆದರೆ ಈ ಪುಟಾಣಿ ಜೀವಿಗಳ ಬಗೆಗೆ ಕೊಂಚ ತಿಳಿದುಕೊಳ್ಳುವ ಮೂಲಕ ಈ ಭಯವನ್ನು ಮೊದಲೇ ಹೋಗಲಾಡಿಸಿಕೊಂಡರೆ ನಿಮ್ಮ ಮಳೆಗಾಲದ ಪಯಣ ಅಥವಾ ಚಾರಣ ಸುಖಕರವಾಗಬಹುದು. ಹಾಗಾದರೆ ಬನ್ನಿ, ಜಿಗಣೆಯ ಕೆಲವು ವಿಶೇಷತೆಗಳನ್ನು ತಿಳಿಯುವ ಮೂಲಕ ಅವುಗಳ ಕಾಟದಿಂದ ಹೇಗೆ ಮುಕ್ತಿ ಪಡೆಯಬಹುದು ಎಂಬುದನ್ನು ನೋಡೋಣ.

1. ಜಿಗಣೆಗಳಿಗೆ ಕಿವಿ ಕೇಳುವುದಿಲ್ಲ. ಹಾಗಾಗಿ ನೀವು ಎಷ್ಟು ಕಿರುಚಾಡಿ, ಕುಣಿದಾಡಿದರೂ ಅದು ಒಮ್ಮೆ ಕಚ್ಚಿದ ಮೇಲೆ ನಿಮ್ಮನ್ನು ಬಿಡಲಾರದು. ಆದರೂ ಅವು ತಮ್ಮ ದೇಹದ ವೈಬ್ರೇಶನ್‌ ಮೂಲಕ ಹೊರಗಿನ ವಿಚಾರಗಳಿಗೆ ಸ್ಪಂದಿಸುತ್ತವೆ.

2. ಇವಕ್ಕೆ ಕಣ್ಣು ಕಾಣಿಸದು. ಆದರೂ ಇವಕ್ಕೆ ಅತ್ಯಂತ ಶಕ್ತಿಯುತವಾದ ರುಚಿ ಹಾಗೂ ಸ್ಪರ್ಶ ಸಾಮರ್ಥ್ಯ ಇವೆ.

3. ನೆರಳುಗಳಿಗೆ ಜಿಗಣೆಗಳು ಸುಲಭವಾಗಿ ಆಕರ್ಷಿತವಾಗುತ್ತವೆ. ಅಷ್ಟೇ ಅಲ್ಲ, ಅವು ಸುಲಭವಾಗಿ ನಾವು ಬಿಡುಗಡೆ ಮಾಡುವ ಕಾರ್ಬನ್‌ ಡೈ ಆಕ್ಸೈಡ್‌ಗೂ ಪ್ರತಿಕ್ರಿಯಿಸುತ್ತವೆ.

4. ಅವುಗಳ ಬಾಯಿಯ ಜಾಗದಲ್ಲಿ ಅಗಲವಾದ ಎರಡೂ ಬದಿಗಳಿಗೆ ಚಾಚಿಕೊಂಡಿರುವ ರಕ್ತ ಹೀರಲು ಸಹಾಯವಾಗುವ ರಚನೆಗಳಿದ್ದು ಇದು ಬಹಳ ಹೊತ್ತಿನವರೆಗೆ ಗಟ್ಟಿಯಾಗಿ ಒಂದೇ ಜಾಗದಲ್ಲಿ ಹಿಡಿದು ರಕ್ತ ಹೀರಬಲ್ಲ ಶಕ್ತಿಯನ್ನು ಹೊಂದಿದೆ.

5. ಜಿಗಣೆ ಒಮ್ಮೆ ಕಚ್ಚಿ ಹಿಡಿದರೆ ಅದನ್ನು ಗ್ರಹಿಸಬಲ್ಲ ಶಕ್ತಿ ನಿಮಗಿಲ್ಲ. ಜಿಗಣೆ ನಮಗೆ ನೋವಾದಂತೆ ರಕ್ತ ಹೀರಬಲ್ಲ ಅಪರೂಪದ ಶಕ್ತಿ ಹೊಂದಿದ್ದು, ಅದು ನಿಮ್ಮ ದೇಹಕ್ಕೆ ಹತ್ತಿದೆ, ರಕ್ತ ಹೀರಲು ಶುರು ಮಾಡಿದೆ ಎಂಬುದೂ ನಿಮಗೆ ತಿಳಿಯುವುದಿಲ್ಲ. ನಿಮ್ಮ ಕಣ್ಣಿಗೆ ಅದು ಬಿದ್ದಾಗ ಇದ್ದಕ್ಕಿದ್ದಂತೆ ಗಾಬರಿಯಾಗಿ ಎಳೆಯಲು ಪ್ರಯತ್ನಿಸುತ್ತೀರಿ. ಕಿರುಚಾಡಿ, ಭೂಮಿ ಆಕಾಶ ಒಂದು ಮಾಡುತ್ತೀರಿ. ಆದರೆ, ಹೀಗೆ ಮಾಡುವುದರಿಂದ ಪ್ರಯೋಜನವಿಲ್ಲ. ನಿಧಾನವಾಗಿ ತಾಳ್ಮೆಯಿಂದ ಅದನ್ನು ನಿಮ್ಮ ದೇಹದಿಂದ ಬೇರ್ಪಡಿಸಲು ಪ್ರಯತ್ನಿಸಿ. ಎಳೆಯುವುದರಿಂದ ಯಾವುದೇ ಪ್ರಯೋಜನವಿಲ್ಲ. ಬದಲಾಗಿ ಅದರ ಬಾಯಿಯ ಭಾಗ ಚರ್ಮದಲ್ಲೇ ಅಂಟಿಕೊಂಡು, ದೇಹ ಪ್ರತ್ಯೇಕವಾಗಿ ಅದು ಬೀಳಬಹುದು. ಇದರಿಂದ ಚರ್ಮದ ಮೇಲೆ ಕಜ್ಜಿಯಾಗಬಹುದು.

6. ಜಿಗಣೆ ನಿಮ್ಮ ದೇಹದಲ್ಲಿ ರಕ್ತ ಕುಡಿಯುವುದು ಕಂಡರೆ, ಹೆದರದೆ ಸಮಾಧಾನವಾಗಿಯೇ ಇರಲು ಪ್ರಯತ್ನಿಸಿ. ಹೆಚ್ಚೆಂದರೆ ಅದು ನಿಮ್ಮ ದೇಹಕ್ಕಂಟಿ ೨೦ರಿಂದ ೩೦ ನಿಮಿಷಗಳ ಕಾಲ ಕೆಲವು ಹನಿ ರಕ್ತ ಹೀರಬಹುದು. ಖಂಡಿತವಾಗಿಯೂ ಇದು ಒಳ್ಳೆಯ ಅನುಭವವಲ್ಲದಿದ್ದರೂ, ಆದಷ್ಟೂ ಸಮಾಧಾನವಾಗಿರಲು ಪ್ರಯತ್ನಿಸಿ. ಹಾಗೆ ನೋಡಿದರೆ ಜಿಗಣೆ ರಕ್ತ ಹೀರುವುದರಿಂದ ನಿಮ್ಮ ಆರೋಗ್ಯದ ಮೇಲೆ ಯಾವ ಕೆಟ್ಟ ಪರಿಣಾಮವೂ ಆಗದು. ಹಾಗೆ ನೋಡಿದರೆ ವೈದ್ಯಕೀಯವಾಗಿ ಜಿಗಣೆ ರಕ್ತ ಹೀರುವುದು ವರವೇ. ಬಹಳಷ್ಟು ಸಂದರ್ಭಗಳಲ್ಲಿ ಜಿಗಣೆಯನ್ನು ವೈದ್ಯಕೀಯ ನೆರವಿಗಾಗಿಯೂ ಬಳಸಿಕೊಳ್ಳಲಾಗುತ್ತದೆ. ಹಾಗಾಗಿ ಈ ಬಗ್ಗೆ ಭಯ ಬೇಡ.

ಇಷ್ಟಾಗಿಯೂ ಜಿಗಣೆ ಮೈಮೇಲೆ ಹತ್ತಿಸಿಕೊಳ್ಳುವುದು ಯಾರಿಗೂ ಬೇಕಾಗಿಲ್ಲ ಎಂಬುದು ನಿಜವೇ. ಹಾಗಾಗಿ ಜಿಗಣೆಯಿಂದ ಪಾರಾಗಲು ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬಹುದು. ಮೈಗೆ ಸಾನಿಟೈಸರ್‌, ಸೊಳ್ಳೆ ರಿಪಲೆಂಟ್‌, ಡೆಟಾಲ್‌, ಒಡೋಮಸ್‌, ತಂಬಾಕಿನ ರಸ, ಸೀಮೆಎಣ್ಣೆ ಇತ್ಯಾದಿಗಳನ್ನು ಮೊದಲೇ ಹಚ್ಚಿಕೊಳ್ಳುವ ಮೂಲಕ, ದೇಹವನ್ನು ಸಂಪೂರ್ಣ ಮುಚ್ಚುವ ಬಟ್ಟೆಗಳನ್ನು ಹಾಕುವುದರಿಂದ, ಜಿಗಣೆ ನಿರೋಧಕ ಸಾಕ್ಸ್‌ ಬಳಸುವುದರಿಂದ, ಗಮ್‌ ಬೂಟ್‌ ಧರಿಸುವುದರಿಂದ ಪಾರಾಗಬಹುದು.

ಇದನ್ನೂ ಓದಿ: Health tips for Monsoon : ಮಳೆಗಾಲದ ಖುಷಿ ಅನುಭವಿಸಿ, ಆದರೆ ರೋಗಗಳನ್ನು ದೂರ ಇರಿಸಿ

Exit mobile version