ಮಳೆಗಾಲದ ಪ್ರವಾಸ ಅಥವಾ ಚಾರಣಗಳೆಲ್ಲ (Monsoon trekking) ಭಾವಜೀವಿಗಳ ಬದುಕಿನ ಪ್ರಮುಖ ಅಧ್ಯಾಯಗಳೇನೋ ಸರಿ. ಆದರೆ ಈ ಮಳೆಯ ಮಧುರ ಗಳಿಗೆಯಲ್ಲಿ ರಕ್ತಪಿಪಾಸುಗಳಂತೆ ನಮ್ಮನ್ನು ಕಾಡುವ ಏಕೈಕ ಜೀವಿ ಎಂದರೆ ಅದು ಬಹುಶಃ ಲೀಚ್ (Leeches) ಅಥವಾ ಜಿಗಣೆ ಅಥವಾ ಉಂಬಳ. ಈ ಲೀಚ್ ಅಥವಾ ಉಂಬಳ ಎಂಬ ಪುಟಾಣಿ ಹುಳು ʻಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದುʼ ಎಂಬ ಗಾದೆಗೆ ಸರಿಯಾದ ಹೋಲಿಕೆ. ಯಾಕೆಂದರೆ, ಮಳೆಗಾಲದ ಪ್ರಯಾಣದಲ್ಲಿ ಬಹುತೇಕರು ಹೆದರುವುದು ಈ ಪುಟಾಣಿ ಜೀವಿಗೆ ಮಾತ್ರವೇ ಎಂದರೆ ತಪ್ಪಲ್ಲ.
ಮಳೆಗಾಲದಲ್ಲಿ ಗುಡ್ಡ ಬೆಟ್ಟಗಳಲ್ಲಿ ಕಣಿವೆ ಹಾದಿಗಳಲ್ಲಿ ಸದಾ ಜಿನುಗುವ ನೀರ ಒರತೆಯ ಹಸಿರು ಹಸಿರು ತಾಣಗಳಲ್ಲಿ ನಾವು ಕಳೆದು ಹೋದಾಗ ನಮ್ಮ ಕಾಲುಗಳ ಮೂಲಕ ಮೈಮೇಲೆ ಮೆಲ್ಲನೆ ಹತ್ತಿ ನಿಧಾನವಾಗಿ ರಕ್ತ ಕುಡಿಯುತ್ತಾ ತಾನೂ ದೇಹ ಬೆಳೆಸುತ್ತಾ, ನಮ್ಮ ರಕ್ತವನ್ನು ಹೀರಿ ಕೊಬ್ಬಿ ಬೆಳೆದಾಗಲೇ ನಮ್ಮ ಗಮನಕ್ಕೆ ಬಂದು ಭಯ ಹುಟ್ಟಿಸಬಹುದಾದ ಶಾಂತ ಜೀವಿ. ಆದರೆ ಹೀಗೆ ರಕ್ತ ಕುಡಿವ ಜೀವಿಗಳಿಂದ ನಮ್ಮ ಉಳಿಗಾಲ ಹೇಗೆ (leech protection) ಚಿಂತಿಸಿದರೆ, ಇಲ್ಲಿ ಕೆಲವು ಟಿಪ್ಸ್‌ಗಳಿವೆ. ಆ ಮೂಲಕ ಈ ಜಿಗಣೆಗಳಿಂದ ಮುಕ್ತಿ ಸಾಧ್ಯವಿದೆ.
1. ಚಾರಣ ಅಥವಾ ಜಿಗಣೆಗಳಿರುವಂಥ ಪ್ರದೇಶದಲ್ಲಿ ನಡಿಗೆ ಮಾಡುವ ಸಂದರ್ಭ ಬಂದಾಗ ವಹಿಸಬಹುದಾದ ಮುಂಜಾಗ್ರತೆ ಎಂದರೆ ಜಿಗಣೆ ಸಾಕ್ಸ್‌ಗಳನ್ನು ಬಳಸುವುದು. ಮಾರುಕಟ್ಟೆಯಲ್ಲಿ ಇದೀಗ ಜಿಗಣೆ ಕಡಿಯಲು ಸಾಧ್ಯವಾಗದಂತಹ ಸಾಕ್ಸ್‌ಗಳು ಬಂದಿದ್ದು ಅವುಗಳನ್ನು ಧರಿಸಬಹುದು. ಇದು ಅತ್ಯಂತ ಸುಲಭ ಹಾಗೂ ಸರಳ ವಿಧಾನ. ಈ ಕಾಲುಚೀಲಗಳು ನಿಮ್ಮ ಮೊಣಕಾಲವರೆಗೆ ರಕ್ಷಣೆ ನೀಡಬಲ್ಲುದಾಗಿದ್ದು, ಜಿಗಣೆ ನಿಮ್ಮ ಕಾಲಿನ ಬೆರಳಿನ ಮೂಲಕ ನಿಮ್ಮ ಕಾಲೇರುವುದನ್ನು ತಪ್ಪಿಸುತ್ತದೆ. ಇದರ ಹೊರತಾಗಿ ಗಮ್ ಬೂಟುಗಳೂ ಕೂಡಾ ಸಹಾಯಕ್ಕೆ ಬರುತ್ತದೆ.
2. ಇನ್‌ಶರ್ಟ್ ಮಾಡಿ. ಬಟ್ಟೆಯನ್ನು ಧರಿಸುವಾಗ ಸುಲಭವಾಗಿ ಜಿಗಣೆ ಒಳಗೆ ಬರುವಂಥ ಓಪನ್ ಬಟ್ಟೆಗಳನ್ನು ಧರಿಸಬೇಡಿ. ಆದಷ್ಟು ದೇಹವನ್ನು ಮುಚ್ಚುವಂಥದ ಬಟ್ಟೆಗಳಿರಲಿ. ಶರ್ಟ್ ಧರಿಸಿದ್ದರೆ, ಅದನ್ನು ಪ್ಯಾಂಟ್ ಒಳಗೆ ಟಕ್ ಇನ್ ಮಾಡಿ. ಇದರಿಂದ, ಜಿಗಣೆ ಎಲ್ಲೆಂದರಲ್ಲಿ ನಿಮ್ಮ ದೇಹ ಪ್ರವೇಶಿಸುವುದು ತಪ್ಪುತ್ತದೆ.
3. ಒಣ ಹಾಗೂ ಬಿಸಿಯಾದ ಸೆಖೆ ಪ್ರದೇಶಗಳಲ್ಲಿ ಜಿಗಣೆ ವಾಸಿಸುವುದಿಲ್ಲ. ಜಿಗಣೆಗೆ ಸಾಕಷ್ಟು ನೀರಿರುವ, ಮಳೆಕಾಡುಗಳಂತಹ ವಾತಾವರಣವಿರುವ, ನೀರು ಜಿನುಗುವ ಪ್ರದೇಶಗಳಲ್ಲಷ್ಟೇ ವಾಸಿಸುತ್ತವೆ. ಹಾಗಾಗಿ ನೀರಿರುವ, ಒದ್ದೆ ಪ್ರದೇಶಗಳಲ್ಲಿ ಹೆಚ್ಚು ಎಚ್ಚರವಹಿಸಿ. ಹಾದಿ ಮಧ್ಯದಲ್ಲಿ ವಿಶ್ರಾಂತಿ ತೆಗೆದುಕೊಳ್ಳಬೇಕೆನಿಸಿದಲ್ಲಿ, ಒದ್ದೆ ಜಾಗದಲ್ಲಿ ವಿಶ್ರಮಿಸಬೇಡಿ. ಸೂರ್ಯನ ಶಾಖ, ಬೆಳಕು ನೇರವಾಗಿ ಬೀಳುವ ಪ್ರದೇಶದಲ್ಲಿ ಹಾಗೂ ಒಣ ಪ್ರದೇಶವನ್ನು ಹುಡುಕಿ.
4. ಯಾವಾಗಲೂ ಆಯಾ ಪ್ರದೇಶದ ಸ್ಥಳೀಯರ ಸಲಹೆ ಪಡೆಯಿರಿ. ಜಿಗಣೆಯಿಂದ ಪಾರಾಗಲು ಅವರ ಬಳಿ ಸರಳ ಉತ್ತರಗಳಿರುತ್ತವೆ. ಅವರ ಅನುಭವ ಹಾಗೂ ಸಲಹೆಯನ್ನು ಪಡೆಯುವುದು ಒಳ್ಳೆಯದು.
5. ತಂಬಾಕು ಬಹಳ ಸುಲಭವಾಗಿ ಜಿಗಣೆಯನ್ನು ಕೊಲ್ಲುತ್ತದೆ, ಅಥವಾ ದೂರ ಓಡಿಸುತ್ತದೆ. ಹಾಗಾಗಿ ತಂಬಾಕನ್ನು ಹತ್ತಿರದ ಮಾರುಕಟ್ಟೆಯಲ್ಲಿ ಖರೀದಿಸಿ ನೀವು ಪ್ರಯಾಣ ಮಾಡುವ ಮೊದಲ ದಿನವೇ ನೀರಿನಲ್ಲಿ ನೆನೆ ಹಾಕಿ. ಈ ನೀರನ್ನು ಬೆಳಗ್ಗೆ ಕೈ ಕಾಲುಗಳಿಗೆ ಹಚ್ಚಿಕೊಳ್ಳಿ. ಆಮೇಲೆ ಸಾಕ್ಸ್ ಹಾಕಿಕೊಳ್ಳಲೂ ಬಹುದು. ಗಮ್ ಬೂಟುಗಳನ್ನೂ ಧರಿಸಬಹುದು. ತಂಬಾಕು ಮೆತ್ತಿಕೊಂಡ ಚರ್ಮವನ್ನು ಕಚ್ಚಲು ಬರುವ ಜಿಗಣೆ ನಿಮ್ಮ ರಕ್ತ ಹೀರಲು ಸಾಧ್ಯವಾಗುವುದಿಲ್ಲ. ಸೀಮೆಎಣ್ಣೆಯನ್ನು ಕಾಲುಗಳಿಗೆ ಹಚ್ಚಿಕೊಳ್ಳುವ ಮೂಲಕವೂ ಜಿಗಣೆಯಿಂದ ರಕ್ಷಣೆ ಪಡೆಯಬಹುದು.
6. ಜಿಗಣೆ ನಿಮ್ಮ ಕಾಲಿಗೋ ಕೈಗೋ ಕಚ್ಚಿ ರಕ್ತ ಹೀರಲು ಆರಂಭಿಸಿತು ಎಂದಾದಲ್ಲಿ ಅದನ್ನು ಎಳೆದು ತೆಗೆದು ಬಿಸಾಕಲು ಪ್ರಯತ್ನಿಸಬೇಡಿ. ಆ ಸಂದರ್ಭ ಅದರ ಬಾಯಿಯ ಭಾಗ ಚರ್ಮದೊಳಗೇ ಅಂಟಿಕೊಂಡು ಉಳಿದುಬಿಡುವ ಸಂಭವ ಹೆಚ್ಚು. ಇದರಿಂದ ಅದು ಕಜ್ಜಿಯಾಗಿ ಇನ್ನೂ ಹೆಚ್ಚಿನ ಸಮಸ್ಯೆಗಳಾಗಬಹುದು. ಜಿಗಣೆ ಎಷ್ಟು ಗಟ್ಟಿಯಾಗಿ ಕಚ್ಚಿರುತ್ತದೆ ಎಂದರೆ ಅದರ ದೇಹದ ಜೊತೆಗೆ ಅದು ಬರಲಾರದು. ಹಾಗಾಗಿ, ಒಮ್ಮೆ ಕಚ್ಚಿತೆಂದರೆ ಬಹಳ ಜಾಗರೂಕತೆಯಿಂದ ತೆಗೆಯಲು ಪ್ರಯತ್ನಿಸಿ. ನಿಮ್ಮ ಬೆರಳಿನಿಂದ ಅದು ಕಚ್ಚಿರುವ ಭಾಗದ ಪಕ್ಕ ಒತ್ತಿ ಬಿಡಿಸಲು ಪ್ರಯತ್ನಿಸಿ.
ಜಿಗಣೆಗಳಿಗೆ ಹೆದರಿ ಪ್ರವಾಸ ಅಥವಾ ಚಾರಣ ಮಾಡದೆ ಇರಬೇಡಿ. ಕೊಂಚ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೆ ಜಿಗಣೆಯ ಸಮಸ್ಯೆಯಾಗದಂತೆಯೂ ಚಾರಣ ಮುಗಿಸಬಹುದು!
ಇದನ್ನೂ ಓದಿ: Monsoon trekking: ರಕ್ತ ಹೀರುವ ಜಿಗಣೆಗಳಿಗೆ ಹೆದರುವ ಮುನ್ನ ಇವಿಷ್ಟು ನಿಮಗೆ ತಿಳಿದಿರಲಿ!