Site icon Vistara News

Monsoon Travel: ಮಳೆ ಇಷ್ಟಪಡುವ ಮಂದಿ ಮಳೆಗಾಲದಲ್ಲಿ ಈ ಬೆಟ್ಟದೂರುಗಳಿಗೆ ಹೋಗಬೇಕು!

hill stations of south india in rain

ಮಳೆ ಯಾರಿಗಿಷ್ಟವಿಲ್ಲ ಹೇಳಿ! ಚಂದದ ಮಳೆಯಲ್ಲಿ ಮೆದುವಾಗಿ ಡ್ರೈವ್‌ ಮಾಡುತ್ತಾ ಹೇರ್‌ಪಿನ್‌ ಬೆಂಡ್‌ಗಳನ್ನು ಒಂದೊಂದಾಗಿ ಹತ್ತುತ್ತಾ ಬೆಟ್ಟದೂರಿಗೆ ಪಯಣಿಸುವ ಸುಖವನ್ನು ಯಾರು ಬೇಡ ಅಂತಾರೆ ಹೇಳಿ. ಬೇಸಿಗೆಯಲ್ಲಿ ಪ್ರವಾಸಿಗರಿಂದ ತುಂಬಿಹೋಗುವ ಬೆಟ್ಟದೂರುಗಳೆಲ್ಲ ಮಳೆಗಾಲದಲ್ಲಿ ತಮ್ಮ ಪಾಡಿಗೆ ತಾವು ಮಳೆಯೆಂಬ ಧ್ಯಾನಸ್ಥ ಸ್ಥಿತಿಗೆ ಹೋಗುತ್ತವೆ. ಧೋ ಎಂದು ಸುರಿವ ಮಳೆಯಲ್ಲಿ ಹಸುರಾಗಿ ಕಂಗೊಳಿಸುವ ಬೆಟ್ಟಗಳನ್ನು (hill stations) ಬೇರೆಲ್ಲ ಕಾಲದಲ್ಲಿ ನೋಡುವುದಕ್ಕಿಂತ ಮಳೆಗಾಲದಲ್ಲಿ ನೋಡುವುದೇ ಚಂದ. ಮಳೆಗಾಲದಲ್ಲಿ, ಸುತ್ತಿ ನೋಡುವುದು ಕಷ್ಟ, ತಿರುಗಾಡಲು ಅನುಕೂಲವಾಗುವುದಿಲ್ಲ ಎಂಬ ಕಾರಣಕ್ಕೆ ಬಹುತೇಕರು ಪ್ರವಾಸವನ್ನು ಬಯಸುವುದಿಲ್ಲವಾದರೂ, ಮಳೆಯಲ್ಲಿ ಪಯಣಿಸುವ (monsoon travel) ಅನುಭವವೇ ಮುದವನ್ನು ಕೊಡುವಂಥದ್ದು.

ಬೇಸಿಗೆ ರಜೆ ಮುಗಿದು ಶಾಲೆ ಆರಂಭವಾಗಿರುವ ಕಾರಣ ಬಹುತೇಕರಿಗೆ ಜೂನ್‌ನಲ್ಲಿ ಪ್ರವಾಸ ಮಾಡಲು ಸಾಧ್ಯವಾಗುವುದಿಲ್ಲ. ಆದರೂ, ಜೂನ್‌ ಎಂಬ ಮಾಸ ಹೊತ್ತು ತರುವ ಮಳೆಯ ಸಿಂಚನ ನಿಜಕ್ಕೂ ಪ್ರವಾಸದಲ್ಲಿ ರೋಮಾಂಚನ ನೀಡಬಲ್ಲುದು. ಹಾಗಾಗಿ ದಕ್ಷಿಣ ಭಾರತದಲ್ಲೇ ಮೂರ್ನಾಲ್ಕು ದಿನಗಳ ಅವಧಿಯಲ್ಲಿ ಜೂನ್‌ ಮಳೆಯಲ್ಲಿ ಡ್ರೈವ್‌ ಹೋಗಿ ಬರುವುದಾದರೆ ಯಾವೆಲ್ಲ ತಾಣಗಳನ್ನು ನೋಡಬಹುದು ಎಂಬುದನ್ನು ನೋಡೋಣ.

1. ಕೊಡೈಕನಾಲ್:‌ ದಕ್ಷಿಣ ಭಾರತದಲ್ಲಿ ಹೆಚ್ಚು ಚಳಿಯಿರುವ ಪ್ರದೇಶಗಳ ಪೈಕಿ ಕೊಡೈಕನಾಲ್‌ ಕೂಡಾ ಒಂದು. ತಮಿಳುನಾಡಿನ ಅತ್ಯಂತ ಪ್ರಸಿದ್ಧ ಪ್ರವಾಸೀ ಸ್ಥಳವಾದ ಕೊಡೈಕನಾಲ್‌ ಅನ್ನು ಬೇರೆಲ್ಲಾ ಕಾಲಗಳಲ್ಲಿ ನೋಡುವುದಕ್ಕಿಂತ ಭಿನ್ನ ಕೋನದಲ್ಲಿ ಮಳೆಗಾಲದಲ್ಲಿ ನೋಡಬಹುದು. ಈ ಬೆಟ್ಟದೂರಿನ ತುಂಬ ಕಪ್ಪು ಮೋಡಗಳು ಮೇಳೈಸಿ, ಮಳೆ ಸುರಿವ ಸೊಬಗು ನೋಡುವುದು ಕಣ್ಣಿಗೆ ಮನಸ್ಸಿಗೆ ತಂಪು. ಬೇಸಿಗೆಯ ದುಃಖವನ್ನು ಮರೆತು ತಂಪಿನ ಖುಷಿಗೆ ಮೈಚೆಲ್ಲಿ ಸುಮ್ಮನೆ ಒಂದೆರಡು ದಿನವಾದರೂ ಸುಮ್ಮನೆ ಕೂರಬೇಕು ಎನಿಸಿದರೆ ಕೊಡೈಕನಾಲ್‌ಗೆ ಭೇಟಿ ಕೊಡಬೇಕು. ಇಲ್ಲಿನ ಹಚ್ಚ ಹಸಿರು ಕಣಿವೆಗಳು, ಸುಂದರ ಸರೋವರ, ಸರೋವರದಲ್ಲೊಂದು ಬೋಟಿಂಗ್‌. ಹಕ್ಕಿಗಳ ಕಲರವ ಎಲ್ಲವನ್ನೂ ನೋಡುವುದೇ ಕಣ್ಣಿಗೆ ಹಬ್ಬ.

wayanad hill station in rainy season

2. ಯೇಲಗಿರಿ: ತಮಿಳುನಾಡಿನಲ್ಲಿರುವ ಏಲಗಿರಿಯೂ ಕೂಡಾ ಒಂದು ದಿನದಲ್ಲಿ ಬೆಂಗಳೂರಿನಿಂದ ತಲುಪಬಹುದಾದ ಸುಂದರ ಜಾಗಗಳಲ್ಲೊಂದು. ಅಣ್ಣಾಮಲೈ ಹುಲಿ ರಕ್ಷಿತಾರಣ್ಯದ ಸರಹದ್ದಿನಲ್ಲಿ ಬರುವ ಯೇಲಗಿರಿ ಜೂನ್‌ನಲ್ಲಿ ತಂಪಾಗಿರುತ್ತದೆ. ಇಲ್ಲಿನ ಟೀ ಎಸ್ಟೇಟ್‌ಗಳು, ಸುಂದರ ಕಣಿವೆಗಳು ಹಾಗೂ ಪುಟಾಣಿ ಬೆಟ್ಟದೂರು ಒಂದೆರಡು ದಿನಗಳ ಕಾಲ ಹಾಯಾಗಿರಲು ಹೇಳಿ ಮಾಡಿಸಿದಂತಿವೆ.

wayanad hill station in rainy season

3. ಅತಿರಾಪಳ್ಳಿ ಜಲಪಾತ: ಜುಳುಜುಳು ಹರಿವ ನೀರು, ದಟ್ಟ ಕಾಡು, ಮಳೆಯ ಮೋಡಿಗೆ ಹಸಿರು ಹಸಿರಾದ ಪ್ರಕೃತಿ ಇದಕ್ಕಿಂತ ಹೆಚ್ಚು ಇನ್ನೇನು ಬೇಕು ಹೇಳಿ. ಧೋ ಎಂದು ಎತ್ತರದಿಂದ ಸುರಿವ ಜಲಪಾತ, ಸುರಿದ ಮಳೆಯ ನೀರನ್ನೂ ಸೇರಿಸಿಕೊಂಡು ದಷ್ಟಪುಷ್ಟವಾದ ಜಲಧಾರೆಯ ಸೊಬಗು ಮಳೆಗಾಲದಲ್ಲಿ ಬೇರೆಯೇ. ಬಾಹುಬಲಿ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಚಿತ್ರಿತವಾಗಿರುವ ಕೇರಳದ ಪ್ರಸಿದ್ಧ ಜಲಪಾತಗಳಲ್ಲೊಂದು.

wayanad hill station in rainy season

4. ಪೊನ್ಮುಡಿ: ಕೇರಳದ ತ್ರಿವೇಂದ್ರಂ ಬಳಿಯ ಪೊನ್ಮುಡಿ ಎಂಬ ಬೆಟ್ಟದೂರು ಅತ್ಯದ್ಭುತ ದೃಶ್ಯ ಸೌಂದರ್ಯಕ್ಕೆ ಹೆಸರು ಮಾಡಿದೆ. ಜೂನ್‌ ತಿಂಗಳಲ್ಲಿ ಆಗಷ್ಟೇ ಸುರಿವ ಮಳೆಗೆ ಹಸಿರಾಗಿಸಿಕೊಂಡು ಮಂಜು ಕವಿದುಕೊಂಡು ಕೂರುವ ಮರಿಯೇ ಅದ್ಭುತ. ಮಳೆಯ ಸೊಬಗಿಗೆ ಮಗುವಾಗುವ ಮನಸ್ಸು ಇರುವ ಮಂದಿ ಇಲ್ಲಿಗೆ ಮಳೆಗಾಲದಲ್ಲಿ ಪ್ರವಾಸ ಹೋಗಲೇಬೇಕು.

wayanad hill station in rainy season

5. ವಯನಾಡ್‌: ಹೆಚ್ಚು ಸಮಯವಿಲ್ಲ, ಇರುವ ವೀಕೆಂಡಿನಲ್ಲಿ ಮಳೆಯಲ್ಲೊಂದು ಡ್ರೈವ್‌ ಹೋಗಿ ಬರಬೇಕೆನ್ನುವ ಆಸೆಯಿರುವ ಮಂದಿಗೆ ವಯನಾಡ್‌ ಬಹಳ ಒಳ್ಳೆಯ ಆಯ್ಕೆ. ಪಶ್ಚಿಮ ಘಟ್ಟಗಳ ಮಳೆಗಾಲದ ಸೌಂದರ್ಯವನ್ನು ಮನಸಾರೆ ಮೊಗೆಮೊಗೆದು ಕುಡಿಯಲು ವಯನಾಡಿಗಿಂತ ಹತ್ತಿರದ ಸುಂದರವಾದ ಸ್ಥಳ ಇನ್ನೊಂದಿಲ್ಲ. ಒಂದೆರಡು ದಿನದ ಸಮಯದಲ್ಲಿ ಮನಸ್ಸು ಹಗುರಾಗಿಸಿಕೊಂಡು ಬರಲು ಸೂಕ್ತ ಜಾಗವಿದು.

wayanad hill station in rainy season
Exit mobile version