ಮಳೆಗಾಲದ ಪ್ರವಾಸ ಎಂದರೆ ಮೈಮನಗಳಿಗೆ ತಾಜಾತನದ ಅನುಭೂತಿ. ಜೂನ್ ಬಂತೆಂದರೆ ಆಕಾಶ ಕಪ್ಪಿಟ್ಟು ಧೋ ಎಂದು ಸುರಿವ ಮಳೆಯನ್ನು ಕಾರಿನಲ್ಲಿ ತಿರುವು ಮುರುವಿನ ರಸ್ತೆಯಲ್ಲಿ ಕಾರು ಚಲಾಯಿಸುತ್ತಲೋ, ಅಥವಾ ಹೋಂ ಸ್ಟೇಯೊಂದರಲ್ಲಿ ಕೂತು, ಮಳೆಯನ್ನು ನೋಡುತ್ತಾ ಕೂರುವುದೋ ಅಥವಾ ಸುರಿದ ಮಳೆ ಬಿಟ್ಟು ಹೋದ ತಂಪಿನಲ್ಲಿ ಕಾಡಿನುದ್ದಕ್ಕೂ ಹೆಜ್ಜೆ ಹಾಕುವುದರಲ್ಲೋ ಆನಂದವಿದೆ. ಮಳೆಯನ್ನು ಪ್ರೀತಿಸುವ ಪ್ರತಿಯೊಂದು ಜೀವವೂ ಮಳೆಗಾಲದ ಪ್ರವಾಸವನ್ನು ಪ್ರೀತಿಸದೆ ಇರಲು ಸಾಧ್ಯವೇ ಇಲ್ಲ.
ಮಲೆನಾಡು ಹೆಸರೇ ಹೇಳುವಂತೆ ಮಲೆಗಳ ನಾಡು. ಇವು ಮಳೆಗಾಲದಲ್ಲಿ ಮಾತ್ರವಲ್ಲ, ಸರ್ವ ಕಾಲದಲ್ಲೂ ಹಸಿರಾಗಿ ಕಂಗೊಳಿಸುವ ಊರುಗಳು. ಇನ್ನು ಮಳೆಗಾಲ ಹೇಗಿರಬಹುದು ಎಂದು ಯಾರೂ ಕೂಡಾ ಊಹಿಸಬಹುದು. ಮಳೆಗಾಲದಲ್ಲಿ ಜಿಟಿಜಿಟಿ ಮಳೆಯ ಸದ್ದನ್ನೇ ದಿನವೂ ಕೇಳಬಹುದಾದ ಚಂದನೆಯ ಹಚ್ಚ ಹಸಿರು ಪಚ್ಚೆಪೈರಿನ ಊರುಗಳನ್ನು ಹೊಂದಿರುವ ಮಲೆನಾಡಿನಲ್ಲಿ ಸಾಕಷ್ಟು ಪ್ರವಾಸೀ ತಾಣಗಳೂ ಇವೆ. ಬಹುತೇಕ ಪ್ರವಾಸಿ ತಾಣಗಳನ್ನು ಮಳೆಗಾಲದಲ್ಲಿ ನೋಡುವ ಸೊಗಸೇ ಬೇರೆ. ನೀವು ಈ ಸ್ಥಳಗಳನ್ನು ನೋಡಿರುವಿರಾದರೂ, ಮಳೆಗಾಲದಲ್ಲೊಮ್ಮೆ ಮತ್ತೊಮ್ಮೆ ಹೋಗಿ ನೋಡಿ, ಇದು ಅದೇ ಜಾಗ ಹೌದೋ ಅಲ್ಲವೋ ಎಂಬಷ್ಟು ವ್ಯತ್ಯಾಸ ನೀವು ಗುರುತಿಸುತ್ತೀರಿ. ಮಳೆಯನ್ನು ಇಷ್ಟಪಡುವ ಎಲ್ಲರೂ ಮಳೆಗಾಲದಲ್ಲಿ ಮಲೆನಾಡನ್ನು ನೋಡಬೇಕು.
1. ಸಕ್ರೆಬೈಲು ಆನೆ ಶಿಬಿರ: ಶಿವಮೊಗ್ಗದಿಂದ 14 ಕಿಮೀ ದೂರದಲ್ಲಿರುವ ಸಕ್ರೆಬೈಲು ಆನೆ ಶಿಬಿರ ಹಲವು ಆನೆಗಳಿಗಿಗೆ ತವರು. ಇಲ್ಲಿ ತರಬೇತಿ ಪಡೆದ ಆನೆಗಳನ್ನೂ, ಆನೆ ಮರಿಗಳನ್ನೂ ನೋಡುವುದಷ್ಟೇ ಅಲ್ಲ, ಇಲ್ಲಿ ತುಂಬಿ ಹರಿವ ತುಂಗೆಯಲ್ಲಿ ಆನೆ ಸ್ನಾನ ಮಾಡುವ ಸೊಬಗನ್ನೂ ನೋಡಬಹುದು. ಮಳೆಗಾಲದಲ್ಲಿ, ಸಕ್ರೆಬೈಲು ಹಾಗೂ ಸುತ್ತಮುತ್ತಲ ಕಾಡಿನ ಪರಿಸರ ಅದ್ಭುತವಾಗಿ ಕಾಣಿಸುವುದಷ್ಟೇ ಅಲ್ಲ, ಇಲ್ಲಿಗೆ ಹೋಗುವ ದಾರಿಯೂ ಒಂದು ಅನುಭವವೇ. ರಸ್ತೆಯ ಇಕ್ಕೆಲಗಳಲ್ಲಿರುವ ಗದ್ದೆ, ಮಳೆಗಾಲ ಶುರುವಾಗುವ ಹೊತ್ತಿನಲ್ಲಿ ರೈತರು ಪೈರು ನೆಡುವ ಸಂಭ್ರಮ, ಮುಂಜಾವಿನಲ್ಲಿ ಮಂಜು ಮುಸುಕಿದ ಪ್ರಕೃತಿ ಇವೆಲ್ಲ ನೋಡುತ್ತಾ ಪ್ರವಾಸ ಮಾಡುವ ಅನುಭವವೇ ಜೀವನದ ಅತ್ಯಂತ ಸಂತಸಾಯಕ ಅನುಭವಗಳಲ್ಲೊಂದಾಗಬಹುದು.
2. ಕುಪ್ಪಳ್ಳಿ: ನಮ್ಮ ನಾಡಗೀತೆಯನ್ನು ರಚಿಸಿದ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪು ಅವರನ್ನು ನಾವು ಪ್ರೀತಿಯಿಂದ ಸ್ಮರಿಸಿದಾಗಲೆಲ್ಲ ನೆನಪಾಗುವುದು ಕುಪ್ಪಳ್ಳಿ. ಕುಪ್ಪಳ್ಳಿ ಕುವೆಂಪು ಅವರ ತವರು. ಕುವೆಂಪು ಕೃತಿಗಳಲ್ಲಿ ಮಲೆನಾಡಿನ ಸೊಬಗಿನ ಕುರಿತಾದ ವರ್ಣನೆಯನ್ನು ಕೇಳಿದವರಿಗೆಲ್ಲ, ಕುಪ್ಪಳ್ಳಿಯನ್ನು ನೋಡಬೇಕೆಂಬ ತವಕ ಇಲ್ಲದೆ ಇರದು. ಮಳೆಗಾಲದಲ್ಲಿ ಮಲೆನಾಡಿನ ಕುಪ್ಪಳ್ಳಿಯನ್ನು ನೋಡಲು ಸಕಾಲ. ಶಿವಮೊಗ್ಗದಿಂದ 66 ಕಿಮೀ ದೂರದಲ್ಲಿರುವ ಕುಪ್ಪಳ್ಳಿಯಲ್ಲಿ ಕುವೆಂಪು ಅವರ ಮನೆಯನ್ನೂ, ಕವಿಶೈಲವನ್ನೂ ನೋಡಿ, ಆಗುಂಬೆಯ ಸೊಬಗನ್ನೂ ಸವಿದು ಜೋಗ ಜಲಪಾತ, ಲಿಂಗನಮಕ್ಕಿ ಹಿನ್ನೀರು, ಕುಂದಾದ್ರಿ ಬೆಟ್ಟ ಇತ್ಯಾದಿಗಳನ್ನೆಲ್ಲ ನೋಡಿ ಬರಬಹುದು.
3. ಹೊನ್ನಾವರ ಕಾಂಡ್ಲಾವನ: ಹೊನ್ನಾವರದ ಶರಾವತಿ ಕಾಂಡ್ಲಾವನ ಇತ್ತೀಚೆಗೆ ಭಾರೀ ಪ್ರಸಿದ್ಧಿ ಪಡೆದಿರುವ ಚಂದನೆಯ ಪ್ರವಾಸೀ ತಾಣಗಳಲ್ಲೊಂದು. ಶರಾವತಿ ಹಿನ್ನೀರಿನಲ್ಲಿ ಕಾಂಡ್ಲಾ ಮಳೆಕಾಡುಗಳನ್ನು ನೋಡಲು ನಿರ್ಮಿತವಾದ ನಡೆದು ಸಾಗಬಹುದಾದ ಮರದ ಸೇತುವೆಯ ಮೂಲಕ ಸಾಗುತ್ತಾ ಕಾಂಡ್ಲಾವನದ ಸೊಬಗನ್ನು ಸವಿಯಬಹುದು. ಶರಾವತಿ ಹಿನ್ನೀರಿನಲ್ಲಿ ಬೋಟಿಂಗ್ ಕೂಡಾ ಮಾಡಬಹುದು.
4. ಮಂಜರಾಬಾದ್ ಕೋಟೆ: ಕನ್ನಡದ ಹಲವು ಸಿನಿಮಾಗಳ ಹಾಡುಗಳಲ್ಲಿ ಬಂದು ಹೋಗಿರುವ ಈ ಕೋಟೆಯನ್ನು ಮಳೆಗಾಲದಲ್ಲಿ ನೋಡುವುದೇ ಸೊಗಸು. ೧೭೯೨ರಲ್ಲಿ ಟಿಪ್ಪು ಸುಲ್ತಾನ್ ಕಟ್ಟಿಸಿದ ಈ ಕೋಟೆ ನಕ್ಷತ್ರಾಕಾರದಲ್ಲಿರುವುದರಿಂದ ಗಮನ ಸೆಳೆಯುತ್ತದೆ. ಸಕಲೇಶಪುರಿಂದ ೬ ಕಿಮೀ ದೂರದಲ್ಲಿರುವ ಈ ಕೋಟೆ ಮಳೆಗಾಲದಲ್ಲಿ ನೋಡಲೇಬೇಕಾದ ಸುಂದರ ತಾಣ.
5. ದಾಂಡೇಲಿ: ಮಳೆಗಾಲದಲ್ಲಿ ನೋಡಲೇಬೇಕಾದ ಇನ್ನೊಂದು ಅದ್ಭುತ ಸ್ಥಳ ಎಂದರೆ ಅದು ಉತ್ತರಕನ್ನಡ ಜಿಲ್ಲೆಯಲ್ಲಿರುವ ದಾಂಡೇಲಿ. ಕಾಳೀ ನದೀ ತೀರದಲ್ಲಿರುವ ದಾಂಡೇಲಿಯನ್ನು ಮಳೆಗಾಲದಲ್ಲಿ ನೋಡುವುದೇ ಚಂದ. ದಟ್ಟ ಕಾಡು, ಸದಾ ಸುರಿವ ಮಳೆ, ಅಪರೂಪದ ಪಕ್ಷಿಸಂಕುಲ ಎಲ್ಲವೂ ದಾಂಡೇಲಿಯನ್ನು ಅಪೂರ್ವವನ್ನಾಗಿ ಮಾಡಿವೆ. ಇಲ್ಲಿ ತಿರುಗಾಡುವ ಮೂಲಕ ನೀವು ಈವರೆಗೆ ಕಂಡಿರದ ಮಳೆಯನ್ನೂ ಅನುಭವಿಸಬಹುದು, ಅಷ್ಟೇ ಅಲ್ಲ, ಅದೃಷ್ಟ ಮಾಡಿದ್ದರೆ, ಹಾರ್ನ್‌ಬಿಲ್ ಪಕ್ಷಿಯನ್ನೂ ಕಾಣಬಹುದು!
ಇದನ್ನೂ ಓದಿ: Monsoon Travel: ಮಳೆ ಇಷ್ಟಪಡುವ ಮಂದಿ ಮಳೆಗಾಲದಲ್ಲಿ ಈ ಬೆಟ್ಟದೂರುಗಳಿಗೆ ಹೋಗಬೇಕು!