Site icon Vistara News

Monsoon Trekking: ಜೀವಿತಾವಧಿಯಲ್ಲಿ ಒಮ್ಮೆಯಾದರೂ ಮಾಡಲೇಬೇಕಾದ ಮಳೆಗಾಲದ ಚಾರಣಗಳಿವು!

flower valley trekking in monsoon

ಪ್ರತಿಯೊಬ್ಬ ಚಾರಣಿಗನೂ ಅತ್ಯಂತ ಇಷ್ಟಪಡುವ ಚಾರಣಗಳಲ್ಲಿ ಮಳೆಗಾಲದ ಚಾರಣವೂ (Monsoon Trekking) ಒಂದು, ಮಳೆಗಾಲದ ಚಾರಣದಲ್ಲಿ ಸವಾಲುಗಳು ಅನೇಕ ಇದ್ದರೂ, ಮಧುರಾನುಭೂತಿಯ ಜೊತೆಗೆ ಜೀವನಾನುಭವವನ್ನು ಮೊಗೆಮೊಗೆದು ನೀಡುವ ಅವಕಾಶ ಇರುವುದು ಮಳೆಗಾಲದ ಚಾರಣದಲ್ಲಿ ಹೆಚ್ಚು. ಇಲ್ಲಿ ಸಿಗುವ ಬದುಕಿನ ಪಾಠಗಳು ಜೀವನದುದ್ದಕ್ಕೂ ನೆರವಿಗೆ ಬರುತ್ತದೆ. ಪ್ರಕೃತಿಯ ರಮ್ಯತೆಯನ್ನು ಇಷ್ಟಪಡುವ ಪ್ರತಿ ಜೀವಿಯೂ ಮಳೆಗಾಲವನ್ನು ಇಷ್ಟಪಡುತ್ತದೆ. ಸಕಲ ಜೀವಸಂಕುಲವೂ ಜೀವ ತುಂಬಿ ನಳನಳಿಸುವ ಮಳೆಗಾಲದಲ್ಲಿ ಪ್ರಕೃತಿ ಅದ್ಭುತವಾಗಿ ಕಾಣುತ್ತದೆ. ನಮ್ಮ ದೇಶದಲ್ಲಿ ಇಂತಹ ಮಳೆಗಾಲದಲ್ಲೇ ನೋಡಬಹುದಾದ ಹಾಗೂ ನೋಡಲೇಬೇಕಾದ ಚಾರಣದ ಸ್ಥಳಗಳಿವೆ. ಅವುಗಳನ್ನು ಮಳೆಗಾಲದಲ್ಲಷ್ಟೇ ನೋಡಬೇಕು. ಬನ್ನಿ, ಪ್ರತಿಯೊಬ್ಬ ಚಾರಣಿಗನೂ ನೋಡಲೇಬೇಕಾದ ಮಳೆಗಾಲದ ಸ್ಥಳಗಳನ್ನು ನೋಡೋಣ ಬನ್ನಿ.

೧. ಹೂ ಕಣಿವೆ, ಉತ್ತರಾಖಂಡ: ನಮ್ಮ ದೇಶದಲ್ಲಿರುವ ಮಳೆಗಾಲದ ಚಾರಣ ಎಂದರೆ ನೆನಪಿಗೆ ಬರುವ ಮೊದಲ ಸ್ಥಳ ಎಂದರೆ ಅದು ಹೂ ಕಣಿವೆ (flower valley) . ಇದು ಕೊಂಚ ಕಷ್ಟದಾಯಕ ಚಾರಣವಾದರೂ ಬಹುತೇಕ ಚಾರಣಿಗರು ಜೀವಿತಾವಧಿಯಲ್ಲೊಮ್ಮೆ ಹೋಗಬೇಕು ಎಂದು ಆಸೆಪಡುವ ಚಾರಣವಿದು. ಇಲ್ಲಿಗೆ ಹೋಗಿ ಬರಲು ದಕ್ಷಿಣ ಭಾರತೀಯರು ಕನಿಷ್ಟ ಒಂದು ವಾರವನ್ನಾದರೂ ಮೀಸಲಿಡಬೇಕು. ಕನಿಷ್ಟ ನಾಲ್ಕರಿಂದ ಐದು ದಿನಗಳ ಚಾರಣ ಇದಾಗಿದ್ದು, ಮಳೆಗಾಲದಲ್ಲಿ ಮಾತ್ರ ಚಾರಣಿಗರಿಗೆ ಪ್ರವೇಶ (monsoon travel) ಒದಗಿಸುತ್ತದೆ. ಆಗಸ್ಟ್‌ ತಿಂಗಳಲ್ಲಿ ಬಗೆಬಗೆಯ ಹೂಗಳು ಅರಳಿ ನಳನಳಿಸುವ ಇಲ್ಲಿ ಮಳೆಗಾಲದಲ್ಲಿ ಸ್ವರ್ಗವೇ ಭೂಮಿಗಿಳಿದಂತೆ ಕಾಣುತ್ತದೆ ಎಂದರೂ ಅತಿಶಯೋಕ್ತಿಯಲ್ಲ. ಅಪರೂಪದ ಹಿಮಾಲಯನ್‌ ಶ್ರೇಣಿಯ ಪಕ್ಷಿ ಪ್ರಾಣಿ ಸಂಕುಲಗಳೂ, ಹೂಗಳೂ, ಸಸ್ಯ ಪ್ರಬೇಧಗಳೂ ಕಾಣಸಿಗುವ ಈ ಚಾರಣದಲ್ಲಿ ಸುಮಾರು ೪೦ ಕಿಮೀ ಆಸುಪಾಸು ನಡೆಯಬೇಕು. ತೀರಾ ಕಠಿಣವಲ್ಲದಿದ್ದರೂ, ಚಾರಣದ ಅನುಭವ ಇರುವುದು ಬಹಳ ಮುಖ್ಯ.

೨. ಸಿಂಹಗಢ ಚಾರಣ, ಪುಣೆ: ಬಹಳ ದಿನಗಳ ಸಮಯವಿಲ್ಲ, ಆದರೆ ಮಳೆಗಾಲದಲ್ಲೊಂದು ಚಾರಣ ಮಾಡಬೇಕು ಎಂದು ಬಯಸುವ ಜೀವಗಳಿಗೆ ಇದು ಬೆಸ್ಟ್‌ ಚಾರಣ. ಸಹ್ಯಾದ್ರಿ ಶ್ರೇಣಿಯಲ್ಲಿ ಬರುವ ಸಿಂಹಘಡ, ಮಳೆಗಾಲದ ಅದ್ಭುತ ಚಾರಣಗಳಲ್ಲೊಂದು. ಎರಡು ದಿನಗಳು ನಿಮ್ಮ ಕೈಲಿದ್ದರೆ  ಚಾರಣ ಮಾಡಬಹುದು. ಮಳೆಗಾಲದಲ್ಲಿ ಹತ್ತುವುದು (trekking in rain) ಕೊಂಚ ಕಠಿಣ ಚಾರಣವಾಗಿ ಇದು ಮಾರ್ಪಾಡಾದರೂ, ಸಿಂಹಘಡದ ಮೇಲೆ ನಿಂತು ಸೂರ್ಯೋದಯವನ್ನೂ, ಸೂರ್ಯಾಸ್ತವನ್ನೂ ನೋಡುವುದೇ ಒಂದು ಅದ್ಭುತ ಅನುಭವ.

೩. ಹರಿಶ್ಚಂದ್ರಘಡ, ಮಹಾರಾಷ್ಟ್ರ: ಮಹಾರಾಷ್ಟ್ರದ ಬಹುತೇಕ ಜಾಗಗಳು ಮಳೆಗಾಲದಲ್ಲಿ ಜೀವತಲೆದು ರಮ್ಯವಾಗಿ ಕಾಣುತ್ತದೆ. ಮಳೆಗಾಲದಲ್ಲಿ ಸಿಂಹಘಡದಂತೆಯೇ ಅದ್ಭುತವಾಗಿ ಕಾಣುವ ಹಸಿರು ಹಸಿರಾಗಿ ಕಂಗೊಳಿಸುವ, ಜುಳುಜುಳು ನಾದದ ಈ ತಾಣ ಚಾರಣಿಗರ ಮೈಮನಸ್ಸನ್ನು ಪ್ರಫುಲ್ಲಗೊಳಿಸುತ್ತದೆ. ಎರಡು ದಿನಗಳು ನಿಮ್ಮ ಕೈಲಿದ್ದರೆ ಈ ಚಾರಣ ಮಾಡಿ ಬರಬಹುದು.

೪. ಕಾಶ್ಮೀರದ ಗ್ರೇಟ್‌ ಲೇಕ್ಸ್‌ ಚಾರಣ: ಭಾರತದ ಅದ್ಭುತ ಚಾರಣಗಳ ಪೈಕಿ ಕಾಶ್ಮೀರದ ಗ್ರೇಟ್‌ ಲೇಕ್ಸ್‌ ಚಾರಣವೂ ಒಂದು. ಏಳು ಚಾರಣಗಳಿರುವ ಈ ಚಾರಣಕ್ಕೆ ಕನಿಷ್ಟ ಒಂದು ವಾರವಾದರೂ ಬೇಕು. ಚಾರಣದ ಅನುಭವವೂ ಬೇಕು. ಯಾಕೆಂದರೆ, ನಿತ್ಯವೂ ಆರೇಳು ಕಿಮೀಗಳಷ್ಟು ದುರ್ಗಮ ದಾರಿಯಲ್ಲಿ ನಡೆದರೆ ಮಾತ್ರ ಈ ಸ್ವರ್ಗವನ್ನು ನೋಡಬಹುದು. ಕಾಶ್ಮೀರ ಅಕ್ಷರಶಃ ಸ್ವರ್ಗವಾಗಿಯೇ ಕಾಣುವುದು ಇಲ್ಲಿ. ಬದುಕಿನಲ್ಲಿ ಒಮ್ಮೆಯಾದರೂ ಕಾಶ್ಮೀರವನ್ನು ಈ ಚಾರಣದಲ್ಲಿ ನೋಡಬೇಕು.

೫. ಹಮ್ಟಾ ಪಾಸ್‌, ಹಿಮಾಚಲ ಪ್ರದೇಶ: ಹಿಮಾಚಲ ಪ್ರದೇಶದ ಅದ್ಭುತ ಚಾರಣಗಳ ಪೈಕಿ ಹಮ್ಟಾ ಪಾಸ್‌ ಕೂಡಾ ಒಂದು. ಚಾರಣದ ಅನುಭವವಿದ್ದರೆ ಈ ಚಾರಣವನ್ನು ಮಾಡಬಹುದು. ಮಳೆಗಾಲದಲ್ಲಿ ಈ ಚಾರಣ ಹಲವು ಅನುಭವಗಳನ್ನು ಕಟ್ಟಿಕೊಡುತ್ತದೆ. ಹಿಮಾಲಯ ಶ್ರೇಣಿಯನ್ನು ದಾರಿಯುದ್ದಕ್ಕೂ ಕಾಣಬಹುದಾದ ಈ ಚಾರಣದ ಅಂತ್ಯದಲ್ಲಿ ಚಂದ್ರನ ತುಣುಕಿನಂತೆ ಕಾಣುವ ಚಂದ್ರತಾಲ್‌ ಸರೋವರವನ್ನೂ ಕಣ್ತುಂಬಿಕೊಳ್ಳಬಹುದು. ಸುಮಾರು ೫ ದಿನಗಳ ಈ ಚಾರಣದಲ್ಲಿಯೂ ಅಪರೂಪ ಸಸ್ಯ ಸಂಕುಲವನ್ನೂ, ಹೂಗಳನ್ನೂ ಕಣ್ಣಾರೆ ಕಾಣಬಹುದು.

ಇದನ್ನೂ ಓದಿ: Monsoon Travel: ಉತ್ತರ ಕರ್ನಾಟಕದ ವಾಸ್ತುಶಿಲ್ಪದ ಬೆಡಗು, ಮಳೆಗಾಲದಲ್ಲಿ ಮತ್ತಷ್ಟೂ ಸೊಬಗು!

Exit mobile version