Site icon Vistara News

ನೀಲಕುರಿಂಜಿ | ಬೆಟ್ಟ ಹೊದ್ದ ನೀಲಿ ಹೊದಿಕೆ: ಹೊಸಕಬೇಡಿ, ಆನಂದಿಸಿ

neelakurinji

ರಾಧಿಕಾ ವಿಟ್ಲ

ಅತ್ತ ಮೈಸೂರಿನ ದಸರಾ ದರ್ಬಾರು ಸದ್ದು ಮಾಡುತ್ತಿದ್ದರೆ, ಇತ್ತ ಚಿಕ್ಕಮಗಳೂರಿನಲ್ಲಿ ಎಲ್ಲೆಲ್ಲೂ ನೀಲ ಕುರಿಂಜಿ ಹೂವಿನದ್ದೇ ದರ್ಬಾರು. ಕಳೆದೆರಡು ಮೂರು ವಾರಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಮಿಂಚುತ್ತಿರುವ ಮುದ್ದು ಮುದ್ದು ನೀಲಿ ಹೂಗಳ ರಾಶಿ ಜನಮನ ಸೆಳೆಯುತ್ತದೆ. ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತದ ಆಸುಪಾಸಿನ ಎಕರೆಗಟ್ಟಲೆ ಪ್ರದೇಶದಲ್ಲಿ ಅರಳಿ ನಿಂತಿರುವ ಈ ಹೂಗಳ ರಾಶಿ, ದುಂಬಿಗಳನ್ನು ಆಕರ್ಷಿಸಿದಷ್ಟೇ ಸಹಜವಾಗಿಯೇ ಜನರನ್ನು ತನ್ನತ್ತ ಸೆಳೆಯುತ್ತಿರುವುದು ಸಹಜವೇ ಆದರೂ ಈ ದುಂಬಿಗಳಿಗಿರುವಷ್ಟು ಸೌಜನ್ಯವೂ ತಿಳಿವಳಿಕೆಯೂ ಪ್ರೀತಿಯೂ ಇರದಿರುವುದು ಮಾತ್ರ ಪ್ರಕೃತಿಯ ದುರಂತ.

ಪ್ರತಿದಿನವೂ ನೂರಾರು, ಸಾವಿರಾರು ಸಂಖ್ಯೆಯಲ್ಲಿ ಜನರನ್ನು ಸೆಳೆಯುತ್ತಿರುವ ಈ ಪರ್ವತ ಪ್ರದೇಶವೀಗ ಕಳೆದ ಕೆಲವು ದಿನಗಳಿಂದ ಇದು ಜನಜಾತ್ರೆಯಾಗಿ ಬದಲಾಗಿದೆ. ಜೊತೆಗೆ, ಈ ಅಪರೂಪದ ಹೂವು ಸೃಷ್ಠಿಸಿರುವ ಸ್ವರ್ಗವನ್ನು ಕಣ್ತುಂಬಿಕೊಂಡು ಖುಷಿಪಡುವುದಷ್ಟೇ ಸಾಕಾಗದೆ, ಫೋಟೋ, ಸೆಲ್ಫಿಗಳ ಭರಾಟೆಯಲ್ಲಿ ಹೂಗಳನ್ನು, ಅವುಗಳ ಗಿಡಗಳನ್ನು ಕಿತ್ತು ತರುವುದು, ಮಲಗಿ ಫೋಟೋ ತೆಗೆಸಿಕೊಳ್ಳುವ ಭರದಲ್ಲಿ ಗಿಡಗಳನ್ನು ಹೊಸಕಿ ಹಾಕುತ್ತಿರುವುದು, ಗಿಡಗಳನ್ನು ತುಳಿಯುತ್ತಾ ಸಾಗಿ ರೀಲ್ಸ್‌ ಮಾಡಿ ಜಾಲತಾಣಗಳಲ್ಲಿ ಹಾಕುತ್ತಿರುವುದು ಇತ್ಯಾದಿಗಳು, ಒಂದು ಕ್ಷಣದ ಖುಷಿಗಾಗಿ ಈ ಅಪರೂಪದ ಪ್ರಭೇದದ ಹೂವಿನ ಜೀವದ ಯೋಚನೆಯನ್ನೂ ಮಾಡದಿರುವುದು ನಿಜಕ್ಕೂ ಖೇದಕರ. ಕುರಿಂಜಿ ಹೂವರಳಿದ ಕೂಡಲೇ ಸರ್ಕಾರವೂ ಈ ಬಗ್ಗೆ ಮೊದಲೇ ಎಚ್ಚೆತ್ತುಕೊಳ್ಳದೆ ಇದ್ದದ್ದೂ ಕೂಡಾ ವಿಪರ್ಯಾಸವೇ.

ಮಳೆಗಾಲ ಮುಗಿಯುತ್ತಾ ಬಂದಂತೆ ಹಸಿರು ಹೊದ್ದ ಪ್ರಕೃತಿ ಇದ್ದಕ್ಕಿದ್ದಂತೆ ಒಂದೇ ಬಗೆಯ ಹೂಗಳಿಂದ ನೀಲಿಯಾಗಿ ಬದಲಾಗಿ, ಆಗೀಗ ಅವುಗಳನ್ನು ಪರದೆಯಿಂದೆಂಬಂತೆ ಮುಚ್ಚಿ ತೆರೆದು ತೋರಿಸುವ ಮಂಜು ಇದರ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. ಹಸಿರ ಹಾಸಿನಂತೆ ಕಂಗೊಳಿಸುವ ಚಿಕ್ಕಮಗಳೂರಿನ ಬೆಟ್ಟಗಳೆಲ್ಲ ನೀಲಿಯಾಗಿ ಬದಲಾದಾಗ ಆಕರ್ಷಣೆ ಸಹಜವೇ. ಹಿಮಾಲಯದ ಶ್ರೇಣಿಗಳಲ್ಲಿರುವ ಹೂಕಣಿವೆಯ ಹಾಗೆ, ಆಗಸ್ಟ್‌ ತಿಂಗಳಿಂದ ನವೆಂಬರ್‌ ತಿಂಗಳ ಸಮಯದಲ್ಲಿ ಇದ್ದಕ್ಕಿದ್ದಂತೆ ಹೂಗಳ ಬೆಟ್ಟವೇ ನಮ್ಮದೇ ನೆಲದ ಮೇಲೆ ಉದ್ಭವಿಸಿದಾಗ ಖುಷಿ ಸಹಜವೇ. ಆದರೆ ಖುಷಿ ಕೊಡುವ ಹೂಗಳನ್ನು ನಾವೂ ಖುಷಿಯಿಂದ ನೋಡಿಕೊಳ್ಳಬೇಕಲ್ಲವೇ. ಹೂಗಳ ಖುಷಿಯನ್ನು ಕಸಿಯುವ ಹಕ್ಕು ನಮಗಿದೆಯೇ? ಎಂಬ ಯೋಚನೆಯೊಂದು, ಜವಾಬ್ದಾರಿಯೊಂದು ಎಲ್ಲರ ತಲೆಯಲ್ಲೂ ಬಂದಿದ್ದರೆ ಸಾಕಿತ್ತು, ಸರ್ಕಾರವನ್ನು ದೂಷಿಸುವುದು ತಪ್ಪುತ್ತಿತ್ತು.

ಅಷ್ಟಕ್ಕೂ ಈ ಹೂವು ಯಾಕಿಷ್ಟು ಮಹತ್ವ ಪಡೆದುಕೊಳ್ಳುತ್ತಿದೆ ಎಂದರೆ, ಇದು ಹನ್ನೆರಡು ವರ್ಷಕ್ಕೊಮ್ಮೆ ಮಾತ್ರ ಅರಳುತ್ತದೆ ಎಂಬುದು. ಈಗ ಅರಳಿದರೆ ಮತ್ತೆ ಹೀಗೆ ಸದ್ಯದಲ್ಲಿ ಅರಳುವುದಿಲ್ಲ ಎಂಬ ಈ ಮಾಹಿತಿಯೇ ಈಗ ಈ ಹೂವಿಗೆ ಮುಳುವಾದಂತಿದೆ.

ಹಾಗೆ ನೋಡಿದರೆ, ಕುರಿಂಜಿ ಹೂವಿನಲ್ಲಿ ಸಾಕಷ್ಟು ವಿಧಗಳಿವೆ. ಎಲ್ಲ ಹೂವುಗಳೂ ೧೨ ವರ್ಷಕ್ಕೊಮ್ಮೆ ಅರಳುವುದಿಲ್ಲ. ಇದರಲ್ಲಿ ವರ್ಷಕ್ಕೊಮ್ಮೆ ಅರಳುವ ಕುರಿಂಜಿಯಿಂದ ಹಿಡಿದು ೧೬ ವರ್ಷಕ್ಕೊಮ್ಮೆ ಅರಳುವ ಪ್ರಬೇಧಗಳವರೆಗೆ ಸುಮಾರು ೪೬ ಪ್ರಭೇದಗಳಿವೆಯಂತೆ.

ನೀಲಿ ನೇರಳೆ ಬಣ್ಣದ ಈ ಕುರಿಂಜಿ ಹೂವು ಪ್ರಮುಖವಾಗಿ ದಕ್ಷಿಣ ಭಾರತದಲ್ಲಷ್ಟೇ ಬೆಳೆಯುವ ಅಪರೂಪದ ಹೂವು. ಸುಮಾರು ೨೫೦ ಜಾತಿಯ ಕುರಿಂಜಿ ಹೂಗಳಿವೆ ಎನ್ನಲಾಗಿದ್ದು, ಈ ಪೈಕಿ ಭಾರತದಲ್ಲಿ ಸುಮಾರು ೪೬ ಬಗೆಯ ಕುರಿಂಜಿ ಹೂಗಳಿವೆಯಂತೆ. ಅದರಲ್ಲಿ ಬಣ್ಣದಲ್ಲೂ ಸಾಕಷ್ಟು ವ್ಯತ್ಯಾಸಗಳು ಕಂಡು ಬರುತ್ತವೆ. ಪಿಂಕ್‌ ಬಣ್ಣದ, ತೆಳು ನೀಲಿ ಬಣ್ಣದ, ಗಾಢ ನೀಲಿಯ, ನೇರಳೆಯ ಹೀಗೆ ಸಾಕಷ್ಟು ವಿಧ ಹಾಗೂ ಬಣ್ಣಗಳಲ್ಲೂ ಇವು ಕಾಣಸಿಗುತ್ತವೆ. ಈಗ ಅರಳಿರುವುದು ತಿಳಿನೇರಳೆ ಬಣ್ಣದ್ದಾಗಿದ್ದು ಇದೇ ಹೂವುಗಳ ಆಸುಪಾಸಿನಲ್ಲಿ ಅಲ್ಲಲ್ಲಿ ಪಿಂಕ್‌ ಬಣ್ಣದ ಹೂವುಗಳೂ ಜಾಗ ಪಡೆದಿವೆ.

ಜರ್ಮನ್‌ ಸಸ್ಯಶಾಸ್ತ್ರಜ್ಞ ಗಾಟ್‌ಫ್ರೈಡ್‌ ಡೇನಿಯಲ್‌ ನೀಸ್‌ ಮಾನ್‌ ಎಸೆನ್ಬೆಕ್‌ ಎಂಬಾತ ಮೊದಲ ಬಾರಿಗೆ ಈ ಹೂವನ್ನು ಗುರುತಿಸಿದನಂತೆ. ಸಮುದ್ರ ಮಟ್ಟದಿಂದ ೧೩೦೦- ೨೪೦೦ ಮೀಟರ್‌ ಎತ್ತರವಿರುವ ಬೆಟ್ಟಗಳಲ್ಲಿ ಈ ಹೂವು ಸಾಮಾನ್ಯವಾಗಿ ಬೆಳೆಯುತ್ತದೆ. ದಕ್ಷಿಣ ಭಾರತದಲ್ಲಿ ಕೇರಳ, ಕರ್ನಾಟಕ ಹಾಗೂ ತಮಿಳುನಾಡಿನ ಕೆಲ ಪ್ರದೇಶಗಳಲ್ಲಿ ಮುಖ್ಯವಾಗಿ ಶೋಲಾ ಕಾಡುಗಳಿರುವ ಪಶ್ಚಿಮ ಘಟ್ಟಗಳು ಹಾಗೂ ನೀಲಗಿರಿ ಬೆಟ್ಟದ ಸಾಲುಗಳಲ್ಲಿ ಕಂಡುಬರುವ ಈ ಅಪರೂಪದ ಕುರಿಂಜಿ ಹೂಗಳು ಹೆಚ್ಚಾಗಿ ಬೆಳೆಯುತ್ತವೆ. ಅಣ್ಣಾಮಲೈ ಬೆಟ್ಟಗಳು, ನೀಲಗಿರಿ ಬೆಟ್ಟಗಳು, ಪಳನಿ ಬೆಟ್ಟಗಳು, ಬಾಬಾಬುಡನ್‌ಗಿರಿ, ಕುದುರೇಮುಖ, ಬಿಳಿಗಿರಿರಂಗನ ಬೆಟ್ಟಗಳು, ಕುದುರೇಮುಖ ಸೇರಿದಂತೆ ದಕ್ಷಿಣ ಭಾರತದ ಹಲವು ಪರ್ವತ ಪ್ರದೇಶಗಳಲ್ಲಿ ಇದು ಕೆಲವು ವರ್ಷಗಳಿಗೊಮ್ಮೆ ದರ್ಶನ ನೀಡುತ್ತಿದೆ. ಹಿಂದೆ ಪೂರ್ವ ಘಟ್ಟಗಳಿಗೆ ಸೇರಿದ ಬಳ್ಳಾರಿಯ ಸಂಡೂರಿನ ಸುತ್ತಮುತ್ತಲೂ ಕುರಿಂಜಿ ಅರಳಿದ್ದ ಬಗೆಗೆ ಮಾಹಿತಿಯಿದೆ. ಇದೀಗ ಔಷಧೀಯ ಗುಣಗಳಿಂದಲೂ, ರುಚಿಯಲ್ಲಿಯೂ ಸಮೃದ್ಧವಾಗಿರುವ ಈ ಹೂವಿನಿಂದ ಸಂಗ್ರಹಿತವಾದ ಜೇನುತುಪ್ಪಕ್ಕೂ ಬಹಳ ಬೇಡಿಕೆ ಬರಲಿದೆ.

ಇದನ್ನೂ ಓದಿ | ವರ್ಕ್‌ ಫ್ರಂ ಮೌಂಟೇನ್:‌ ಇಲ್ಲೆಲ್ಲಾ ಪ್ರವಾಸ ಮಾಡುತ್ತಾ ಕೆಲಸ ಮಾಡಿ!

ಕಳೆದ ವರ್ಷ ಕೊಡಗು ಜಿಲ್ಲೆಯ ಬೆಟ್ಟಗಳಲ್ಲಿ ವ್ಯಾಪಕವಾಗಿ ಕುರಿಂಜಿ ಅರಳಿತ್ತು. ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಈ ಕುರಿಂಜಿಗಳ ಸಂರಕ್ಷಣೆಗೆಂದೇ ಇದು ವ್ಯಾಪಕವಾಗಿ ಕಂಡುಬರುವ ಸುಮಾರು ೩೨ ಚದರ ಕಿಮೀ ವ್ಯಾಪ್ತಿಯನ್ನು ಕುರಿಂಜಿಮಾಲಾ ರಕ್ಷಿತಾರಣ್ಯವಾಗಿ ಅಲ್ಲಿನ ಸರ್ಕಾರ ಘೋಷಿಸಿದೆ. ತಮಿಳುನಾಡಿನ ಕೊಡೈಕೆನಾಲ್‌ನಲ್ಲಿ ಕುರಿಂಜಿ ಆಂಡವರ್‌ ಹೆಸರಿನ ಸುಬ್ರಹ್ಮಣ್ಯನ ದೇವಸ್ಥಾನವೂ ಇದೆ. ಸುಬ್ರಹ್ಮಣ್ಯನಿಗೆ ಈ ಹೂವು ಪ್ರಿಯ ಎಂಬ ನಂಬಿಕೆಯೂ ಕೇರಳ ತಮಿಳುನಾಡಿನಲ್ಲಿ ವ್ಯಾಪಕವಾಗಿದ್ದು, ಹೂವರಳಿದ ಕೂಡಲೇ ಮೊದಲ ಹೂವನ್ನು ಸುಬ್ರಹ್ಮಣ್ಯನಿಗೆ ಅರ್ಪಿಸುವ ಪದ್ಧತಿಯೂ ಇದೆ.

ನೀಲಕುರಿಂಜಿ ಅರಳಿರುವುದು ಇದ್ದಕ್ಕಿದ್ದಂತೆ ಪ್ರವಾಸೋದ್ಯಮವನ್ನು ಚೇತರಿಸುವಂತೆ ಮಾಡಿದಂತೆ ಕಂಡರೂ, ನಿಯಂತ್ರಣವಿಲ್ಲದ ಪ್ರವಾಸಿಗರಿಂದ ಕುರಿಂಜಿ ಪ್ರಭೇದಕ್ಕೆ ಧಕ್ಕೆ ಉಂಟಾಗುವ ಆತಂಕವಂತೂ ಇದ್ದೇ ಇದೆ. ಸಾಗರೋಪಾದಿಯಲ್ಲಿ ನೆರೆಯುತ್ತಿರುವ ಮಂದಿ ಈಗಾಗಲೇ ಆ ಸೂಚನೆಯನ್ನೂ ಕೊಟ್ಟಿದ್ದಾರೆ ಕೂಡಾ. ಜಿಲ್ಲಾಡಳಿತ, ಅರಣ್ಯ ಇಲಾಖೆ ಈ ಬಗ್ಗೆ ಮೊದಲೇ ಮುಂಜಾಗರೂಕತೆ ವಹಿಸಿದ್ದರೆ ಒಳ್ಳೆಯದಿತ್ತು ಎಂಬ ಮಾತುಗಳೂ ಪರಿಸರ ಪ್ರಿಯರ ನಡುವೆ ಕೇಳಿ ಬರುತ್ತಿದೆ. ಇದೀಗ ದಸರಾ ರಜೆಗಳೂ ಆರಂಭವಾಗಿದ್ದು, ಇನ್ನೂ ಕೆಲ ದಿನಗಳ ಕಾಲ ಅರಳಿಯೇ ಇರಲಿರುವ ಈ ಹೂಗಳ ಸೊಬಗನ್ನು ಸವಿಯಲು ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಳ ಉಂಟಾಗಲಿದೆ. ಪ್ರತಿಯೊಬ್ಬರೂ ಈ ಹೂವು ನೋಡುವ ಸಂದರ್ಭ ಜವಾಬ್ದಾರಿಯಿಂದ ವರ್ತಿಸಿದರೆ, ಈ ಅಪರೂಪದ ಜೀವವೈವಿಧ್ಯದ ಬಗೆಗೆ ಕಾಳಜಿ ವಹಿಸುವುದ ನಮ್ಮದೇ ಕರ್ತವ್ಯವೆಂದು ಮನಗಂಡರೆ ಮಾತ್ರ ಮುಂದೆಯೂ ಈ ಸೊಬಗು ಉಳಿದೀತು.

ಇದನ್ನೂ ಓದಿ | ವಿಶ್ವ ಪ್ರವಾಸೋದ್ಯಮ ದಿನ: ಭಾರತದ ಟಾಪ್‌ 10 ಪ್ರವಾಸೀ ತಾಣಗಳು!

Exit mobile version