ಇನ್ನೇನು ಶಾಲೆಗಳೆಲ್ಲ ಮುಗಿದು ಎಲ್ಲರೂ ಏಪ್ರಿಲ್‌ನಲ್ಲೊಂದು ಪ್ರವಾಸದ ಸಿದ್ಧತೆ ಮಾಡಿಕೊಳ್ಳುವುದು ಸಾಮಾನ್ಯ. ಎಲ್ಲಿಗೆ ಪ್ರವಾಸ ಹೋಗುವುದು ಎಂಬುದು ಅವರವರ ಆಸಕ್ತಿ, ಸಮಯ, ಹಣ ಎಲ್ಲವುಗಳ ಮೇಲೆ ನಿರ್ಧರಿತವಾದದ್ದು. ಆದರೆ, ವರ್ಷದಲ್ಲೊಮ್ಮೆ ಹೋಗುವ ಪ್ರವಾಸವು ಜೀವಮಾನದಲ್ಲೊಮ್ಮೆ ನೆನಪಿನಲ್ಲಿಟ್ಟುಕೊಳ್ಳುವಂಥದ್ದಾದರೆ ಅದಕ್ಕಿಂತ ಸುಂದರ ಅನುಭವ ಇನ್ನೇನಿದೆ ಹೇಳಿ! ಅದರಲ್ಲೂ ನಮ್ಮ ಭಾರತದೊಳಗೇ ಅತ್ಯದ್ಭುತ ತಾಣಗಳಿರುವಾಗ ಇನ್ನು ಬೇರೆಡೆ ಹುಡುಕುವ ಮಾತೆಲ್ಲಿದೆ! ನಮ್ಮ ದೇಶದೊಳಗೇ ಈ ಬೇಸಿಗೆ ರಜೆಯಲ್ಲೊಮ್ಮೆ ಮಕ್ಕಳ ಜೊತೆ ಹೋಗಿ ನೋಡಬಹುದಾದ ಉತ್ತಮ ಆಯ್ಕೆಗಳಿವು!
1. ಡಾರ್ಜಿಲಿಂಗ್, ಪಶ್ಚಿಮ ಬಂಗಾಳ: ಬೇಸಿಗೆಯಲ್ಲಿ ಗಿರಿಧಾಮಗಳಿಗೆ ಪ್ರವಾಸ ಹೋಗುವುದು ಎಂದರೆ ಮನಸ್ಸಿಗೆ, ದೇಹಕ್ಕೆ ಹಿತ. ವಸಂತ ಕಾಲದಲ್ಲಿ ಹೂಬಿಟ್ಟು ಆಗಷ್ಟೇ ನಳನಳಿಸುವ ಪ್ರಕೃತಿಯಿಂದ ಬೆಟ್ಟಗುಡ್ಡಗಳಿಗೆ ಆಗಷ್ಟೇ ರಂಗು ಬಂದಿರುತ್ತದೆ. ಡಾರ್ಜಿಲಿಂಗ್‌ನಲ್ಲಿ ರೋಡೋಡೆಂಡ್ರಾನ್ ಹೂಗಳು ಅರಳಿ ನಿಂತು ಇಡೀ ಬೆಟ್ಟವೇ ಪಿಂಕ್ ಬಣ್ಣಕ್ಕೆ ತಿರುಗುವುದನ್ನು ನೋಡುವುದು ಚಂದ. ಅದಕ್ಕಾದರೂ ಡಾರ್ಜಿಲಿಂಗ್ ಸುತ್ತಾಡಬೇಕು. ಮಕ್ಕಳ ಜೊತೆಗೆ ಅಲ್ಲಿನ ಪುಟಾಣಿ ರೈಲಿನಲ್ಲಿ ಕೂತು ಊರು ಸುತ್ತಬೇಕು. ಆಕಾಶ ಶುಭ್ರವಾಗಿದ್ದರೆ ದೂರದಿಂದ ಕಾಣುವ ಕಾಂಚನಜುಂಗವನ್ನು ಕಣ್ತುಂಬಬೇಕು. ಬೆಟ್ಟ ಗುಡ್ಡದ ಬದುಕು, ಚಹಾತೋಟಗಳು ಹೀಗೆ ಬದುಕಿನ ಅನುಭವಕ್ಕೆ ಇಲ್ಲಿ ಸಾಕಷ್ಟಿದೆ.
2. ತವಾಂಗ್, ಅರುಣಾಚಲ ಪ್ರದೇಶ: ಅರುಣಾಚಲ ಪ್ರದೇಶವನ್ನು ನಮ್ಮ ನಕ್ಷೆಯಲ್ಲಿ ಮೂಲೆಯಲ್ಲಿ ನೋಡಿ ಅಷ್ಟೇ ಯಾಕೆ ಸುಮ್ಮನಾಗಬೇಕು ಹೇಳಿ! ಆ ಮೂಲೆಯನ್ನೊಮ್ಮೆ ಸಾಕ್ಷಾತ್ ಸ್ಪರ್ಶಿಸಿದರೆ ಹೇಗೆ ಎಂದು ಕಲ್ಪಿಸಿಕೊಳ್ಳಿ. ಒಮ್ಮೆ ಹೋಗಿ ಬಂದರೆ ಆಗುವ ಅನುಭವವೇ ಬೇರೆ. ಇಲ್ಲಿನ ಬೌದ್ಧ ಮಂದಿರಗಳ ಅನುಭೂತಿಯೊಂದಿಗೆ ಹಿಮಚ್ಛಾದಿತ ಬೆಟ್ಟಗಳನ್ನು ಕಣ್ತುಂಬಿಕೊಂಡು ಸ್ಪಟಿಕ ಶುದ್ಧ ಆಕಾಶವನ್ನೂ, ಸರೋವರದ ನೀರನ್ನೂ ಕಣ್ತುಂಬಿಕೊಳ್ಳಬಹುದು.
3. ಬೀರ್, ಹಿಮಾಚಲ ಪ್ರದೇಶ: ಉತ್ತರ ಭಾರತದ ವಸಂತಕಾಲದ ಸ್ವರ್ಗ ಹಿಮಾಚಲದ ಬೀರ್. ತೀಕ್ಷ್ಣವಾದ ಚಳಿಗಾಲ ಮೆಲ್ಲನೆ ತನ್ನ ಬಾಹುಗಳನ್ನು ಸಡಿಲಗೊಳಿಸುತ್ತಿರುವ ವಸಂತ ಕಾಲದಲ್ಲಿ ಬೀರ್‌ನಂತಹ ಜಾಗಕ್ಕೆ ಹೋಗಬೇಕು. ಪಾರಾಗ್ಲೈಡಿಂಗ್ ಮತ್ತಿತರ ಸಾಹಸೀ ಕ್ರೀಡೆಗಳಿಗೆ ಬೀರ್‌ನಂತಹ ಪ್ರಶಸ್ತ ಸ್ಥಳ ಇನ್ನೊಂದಿಲ್ಲ. ಇಲ್ಲಿನ ಸ್ಥಳೀಯ ಕಲೆ, ಸಂಸ್ಕೃತಿ ತಿಳಿಯಲು, ಒಂದಿಷ್ಟು ಸಾಹಸೀಕ್ರೀಡೆಗಳನ್ನೂ ಆಡಿ, ಸಾಲುಸಾಲು ಬೆಟ್ಟಗಳನ್ನು ಸುಮ್ಮನೆ ಕುಳಿತು ನೋಡುತ್ತಾ ಕಳೆಯುವುದೇ ಖುಷಿ.
4. ಕನ್ಹಾ ರಾಷ್ಟ್ರೀಯ ಉದ್ಯಾನ, ಮಧ್ಯ ಪ್ರದೇಶ: ನಮ್ಮ ಮಧ್ಯಪ್ರದೇಶದಲ್ಲಿರುವ ಕನ್ಹಾ ರಾಷ್ಟ್ರೀಯ ಉದ್ಯಾನವನವನ್ನೇ ನಾವು ಮರೆತರೆ ಹೇಗೆ? ವನ್ಯಜೀವಿಗಳ ಬಗ್ಗೆ ನಮ್ಮ ತಿಳುವಳಿಕೆ, ಕಳಕಳಿ ಹೆಚ್ಚಿಸಿಕೊಳ್ಳಲು ಹಾಗೂ, ಅವುಗಳ ಬಗ್ಗೆ ಬೇರೆಯವರಿಗೆ ನಮ್ಮ ಅರಿವು ದಾಟಿಸಲು, ನಾವು ಇನ್ನೂ ಹೆಚ್ಚು ಪ್ರಜ್ಞಾವಂತರಾಗಿ ಬದುಕಲು, ಭೂಮಿಯ ಮೇಲಿನ ಸಕಲ ಜೀವಜಂತುಗಳಿಗೆ ಬದುಕಲು ನಮ್ಮಷ್ಟೇ ಹಕ್ಕಿದೆ ಎಂಬುದನ್ನು ಮನದಟ್ಟು ಮಾಡಿಕೊಳ್ಳಲು ನಾವು ಆಗಾಗ ಕಾಡಿಗೆ ಹೋಗಬೇಕು. ಕನ್ಹಾ ಕೂಡಾ ಆಂಥದ್ದೇ ಒಂದು ಒಳ್ಳೆಯ ಆಯ್ಕೆ.
ಇದನ್ನೂ ಓದಿ: Travel Tips: ಗುಂಡಿಗೆ ಗಟ್ಟಿ ಇದ್ದವರು ಪ್ರಯಾಣಿಸಲೇಬೇಕಾದ ಭಾರತದ ದುರ್ಗಮ ರಸ್ತೆಗಳು!
5. ಅಮೃತಸರ, ಪಂಜಾಬ್: ನಮ್ಮ ದೇಶದ ಭವ್ಯ ಸಂಸ್ಕೃತಿ ಪರಂಪರೆ ಅರಿಯಲು ಕೇವಲ ನಮ್ಮ ಸುತ್ತಮುತ್ತಲ ಜಾಗಗಳ ಬಗ್ಗೆಯಷ್ಟೇ ಗೊತ್ತಿದ್ದರೆ ಸಾಲದು. ನಮ್ಮ ಗಡಿ ಪ್ರದೇಶಗಳ, ನಮ್ಮ ಭಾರತದ ಐತಿಹ್ಯ, ವಿವಿಧ ಧರ್ಮ ಸಂಸ್ಕೃತಿಯ ಬಗ್ಗೆಯೂ ತಿಳಿಯುವುದು ಮುಖ್ಯ. ಅಂಥದ್ದೊಂದು ಒಳ್ಳೆಯ ಆಯ್ಕೆ ಅಮೃತಸರ. ಸಿಖ್ಖರ ಪವಿತ್ರ ಕ್ಷೇತ್ರ ಗೋಲ್ಡನ್ ಟೆಂಪಲ್ ನೇಡಿ, ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದ ನೆಲದಲ್ಲಿ ನಡೆದಾಡಿ ಇತಿಹಾಸದ ಪುಟವನ್ನೊಮ್ಮೆ ಬಿಡಿಸಿ ಕಣ್ಣು ತೇವವಾಗಿಸಬಹುದು. ಅಷ್ಟೇ ಅಲ್ಲ, ವಾಘಾ ಗಡಿಯಲ್ಲಿ ನಮ್ಮ ದೇಶ ಕಾಯ್ವ ಸೈನಿಕರ ಕಾರ್ಯ ನೋಡಿ ರೋಮಾಂಚನಗೊಳ್ಳಬಹುದು. ಮಕ್ಕಳಿಗೆ ದೇಶದ ಕಥೆ ಹೇಳಲು, ದೇಶಪ್ರೇಮ ಚಿಗುರಿಸಲು ಪಂಜಾಬ್ ಪ್ರವಾಸಕ್ಕಿಂತ ಒಳ್ಳೆಯ ಆಯ್ಕೆ ಇನ್ನೊಂದಿಲ್ಲ.
ಇದನ್ನೂ ಓದಿ: Travel Tips: ಹಿಮದೂರುಗಳಲ್ಲಿ ಬದುಕಿನಲ್ಲೊಮ್ಮೆ ಮಾಡಲೇಬೇಕಾದ ಸಾಹಸ ಕ್ರೀಡೆಗಳಿವು!