ಮುಂಬೈಯಂತಹ ಕಿಷ್ಕಿಂಧೆಯಲ್ಲಿ ಮನೆ ಮಾಡುವುದು ಎಷ್ಟು ಕಷ್ಟ ಎಂಬ ವಿಚಾರ ಎಲ್ಲರಿಗೂ ಗೊತ್ತಿರುವ ಸತ್ಯವೇ. ಪುಟ್ಟದೊಂದು ಪೆಟ್ಟಿಗೆಯಂಥಾ ಮನೆ ಹಿಡಿಯಲು, ಬಾಡಿಗೆ ಪಡೆಯಲು ಪಡುವ ಕಷ್ಟ ಅಲ್ಲಿದ್ದವರಿಗಷ್ಟೇ ಅರ್ಥವಾದೀತು. ಇನ್ನು, ಮುಂಬೈ ಒಮ್ಮೆ ಸುತ್ತಿ ಬರಬೇಕೆಂದು ಆಸೆ ಪಡುವ ಮಂದಿಗೂ ಮುಳ್ಳಾಗುವುದು ಇದೇ ವಿಷಯ. ಅಥವಾ ಆಗಾಗ ಕೆಲಸ ವಿಚಾರಕ್ಕೆ ಮುಂಬೈಗೆ ಹಾರಿ ಬರುವ ಮಂದಿಗೆ ಪ್ರತಿ ಬಾರಿಯೂ ತಲೆಬಿಸಿಯಾಗುವುದು ಇಲ್ಲಿನ ಹೊಟೇಲುಗಳು. ಯಾಕೆಂದರೆ, ಮುಂಬೈಯಲ್ಲಿ ಉಳಿದುಕೊಳ್ಳಲು ಸಾಮಾನ್ಯ ಹೊಟೇಲಿಗೂ ದುಬಾರಿ ಬೆಲೆ ತೆರಬೇಕು. ಪುಟ್ಟ ಪುಟ್ಟ ಗೂಡಿನಂಥ ಹೊಟೇಲು ಕೋಣೆಗಳಿಗೆ ಸಾವಿರಗಟ್ಟಲೆ ದುಡ್ಡು ಸುರಿಯಬೇಕು.
ನಾಲ್ಕೈದು ದಿನ ಕೂತು ಮುಂಬೈಯನ್ನು ನೋಡಿ ಬರುವುದೆಂದರೆ ಸಾಮಾನ್ಯರಿಗೆ ಅದೊಂದು ದೊಡ್ಡ ಪ್ರಾಜೆಕ್ಟು, ಮರೀಚಿಕೆ. ಸ್ವಚ್ಛವಾದ ನೀಟಾದ ಹೊಟೇಲು ಬೇಕೆಂದರೆ ಗಗನದೆತ್ತರ ಬೆಲೆ ತೆರಬೇಕು. ಹಾಗಂತ ಕಡಿಮೆ ಬಾಡಿಗೆಯ ಹೊಟೇಲು ಬೇಕೆಂದು ಹುಡುಕಿದರೆ, ಸಿಗುವುದು ಸ್ವಚ್ಛವಿಲ್ಲದ ಕೆಳಮಟ್ಟದ ಹೊಟೇಲುಗಳು. ಹೀಗಾಗಿ ಕೆಟ್ಟ ಹೊಟೇಲುಗಳಲ್ಲಿ ಇರಲಾಗದೆ, ಹೆಚ್ಚು ಬಾಡಿಗೆ ಇರುವ ಒಳ್ಳೆಯ ಹೊಟೇಲುಗಳಿಗೆ ಹೋಗಲಾಗದೆ, ನಿಗದಿತ ಬಜೆಟ್‌ನಲ್ಲಿ ತಿರುಗಾಡುವ ಅಲೆಮಾರಿಗಳಿಗೆ ಮುಂಬೈನಲ್ಲಿ ಉಳಿದುಕೊಳ್ಳುವುದೇ ದೊಡ್ಡ ಸಮಸ್ಯೆ.
ಈಗ ಅಂಥ ಮಂದಿಗೆ, ಪ್ರವಾಸವನ್ನು ಗಂಭೀರವಾಗಿ ತೆಗೆದುಕೊಂಡ ಅಲೆಮಾರಿಗಳಿಗೆ ಮುಂಬೈಯಲ್ಲೀಗ ಒಂದು ಹೊಸ ಬಗೆಯ ಹೊಟೇಲು ಹುಟ್ಟಿಕೊಂಡಿದೆ. ಜಪಾನ್ ಮಾದರಿಯ ಈ ಹೊಟೇಲುಗಳು ಭಾರತದ ಪಾಲಿಗೆ ಹೊಸತು. ಕಳೆದೊಂದು ದಶಕದ ಹಿಂದೆ ಜಪಾನ್ ಕೂಡಾ ಮುಂಬೈಯಂಥದ್ದೇ ಪರಿಸ್ಥಿತಿಯನ್ನು ಎದುರಿಸಿದ ಸಂದರ್ಭ ಅಲ್ಲಿ ಆರಂಭವಾಗಿದ್ದು ಪಾಡ್ ಹೊಟೇಲ್. ಇಂತಹ ಹೊಟೇಲುಗಳು ಕಡಿಮೆ ಜಾಗವನ್ನು ತೆಗೆದುಕೊಂಡು ಆ ನಿರ್ಧಿಷ್ಟ ಜಾಗದಲ್ಲಿ ಅತ್ಯಂತ ಸ್ವಚ್ಛ ಹಾಗೂ ಶುದ್ಧವಾದ ಉಳಿದುಕೊಳ್ಳುವಿಕೆ ಸಾಧ್ಯವಾಗುವಂತೆ ಮಾಡಿತ್ತು. ಪಾಡ್ ಹೊಟೇಲ್ ಮಾರ್ಕೆಟ್ ಎಂಬ ಜಾಗವನ್ನೇ ಜಪಾನ್ ಮಾಡಿತ್ತು. ಈಗ ಇಂಥದ್ದೇ ಒಂದು ಪಾಡ್ ಹೋಟೇಲ್ ಸಂಸ್ಕೃತಿ ಮೊದಲ ಬಾರಿಗೆ ಭಾರತಕ್ಕೂ ಕಾಲಿಟ್ಟಿದೆ. ಮುಂಬೈಯಲ್ಲಿ ಈಗಾಗಲೇ ಪಾಡ್ ಹೊಟೇಲ್ ಆರಂಭವಾಗಿದೆ.
ಏನಿದು ಪಾಡ್ ಹೊಟೇಲ್: ಬ್ಯುಸಿಯಾದ ಮೆಟ್ರೋಪಾಲಿಟನ್ ನಗರದಲ್ಲಿ ಯಾವುದೇ ತೊಂದರೆಯಿಲ್ಲದೆ, ಕ್ಲೀನಾದ ಜಾಗದಲ್ಲಿ ಕೇವಲ ರಾತ್ರಿ ಕಳೆಯಲು ಬೇಕೆನ್ನುವ ಪ್ರವಾಸಿಗರಿಗೆ ಬಹಳ ಸೂಕ್ತವಾದ ಹೊಟೇಲ್ ಇದು. ಕ್ಯಾಪ್ಸೂಲ್ ಹೊಟೇಲು ಎಂಬ ಅಡ್ಡ ಹೆಸರೂ ಇದಕ್ಕಿದೆ. ಯಾಕೆಂದರೆ, ಪುಟ್ಟ ಪೆಟ್ಟಿಗೆಯಂಥಾ ವ್ಯವಸ್ಥಿತ ಮಲಗುವ ಜಾಗವಿದು. ಹಾಗಂತ ಇದು ಯಾವ ಐಷಾರಾಮಿ ಹೊಟೇಲಿನ ವ್ಯವಸ್ಥೆಗೂ ಕಡಿಮೆಯಿರುವುದಿಲ್ಲ. ಅರ್ಬನ್‌ಪಾಡ್ ಎಂಬ ಈ ಸ್ಮಾರ್ಟ್ ಹೊಟೇಲು ಭಾರತದಲ್ಲಿ ಮುಂಬೈಯಲ್ಲಿ ಆರಂಭವಾಗಿದೆ. ಇದರ ವಿನ್ಯಾಸ ಮಾಡಿದ್ದು ಸಿಂಗಾಪುರದ ಫಾರ್ಮ್‌ವೇಕ್ಸ್ ಎಂಬ ಆರ್ಕಿಟೆಕ್ಚರ್ ಸಂಸ್ಥೆ.
ಸದ್ಯ ಮುಂಬೈಯಲ್ಲಿ ಇಂಥ ೧೪೦ ಪಾಡ್‌ಗಳು ಸೇವೆಗೆ ಲಭ್ಯವಿವೆ. ಜೋಡಿಗಳಿಗೆ ಸೂಟ್ ಪಾಡ್‌ಗಳು, ಏಕಾಂಗಿಗಳಿಗೆ ಪ್ರೈವೇಟ್ ಪಾಡ್, ಮಹಿಳೆಯರಿಗೆ ವಿಶೇಷವಾದ ಪ್ರತ್ಯೇಕ ಪಾಡ್ ಸೇರಿದಂತೆ ಪ್ರತಿಯೊಂದು ಪಾಡ್ ಕೂಡಾ ಸುಸಜ್ಜಿತವಾದ ಕೋಣೆಯೊಂದು ಹೊಂದಿರುವ ಎಲ್ಲ ವ್ಯವಸ್ಥೆ ಹಾಗೂ ಸೌಲಭ್ಯಗಳನ್ನೂ ಪಾಡ್‌ಗಳು ಪಡೆದಿವೆ.
ಹವಾನಿಯಂತ್ರಿತ ಕೊಠಡಿಗಳಾಗಿರುವ ಈ ಪಾಡ್‌ಗಳು ಖಾಸಗಿ ಲಾಕರ್ ಜೊತೆಗೆ ಸುರಕ್ಷಿತ ಕೀಕಾರ್ಡ್‌ಗಳನ್ನೂ ಹೊಂದಿವೆ. ಟಿವಿ, ಸ್ಮೋಕ್ ಡಿಟೆಕ್ಟರ್, ಅಗ್ನಿಶಾಮಕ ವ್ಯವಸ್ಥೆ, ಪವರ್ ಸಾಕೆಟ್, ಎರಡು ಯುಎಸ್‌ಬಿ ಪೋರ್ಟ್‌ಗಳು, ಬಟ್ಟೆಯನ್ನು ನೇತು ಹಾಕಲು ಹ್ಯಾಂಗರ್ ಹಾಗೂ ಕನ್ನಡಿಯನ್ನು ಹೊಂದಿರುವ ಡ್ರೆಸ್ಸರ್‌ಗಳೂ ಇದರಲ್ಲಿವೆ. ಏರ್ ಪ್ಯೂರಿಫೈಯರ್ ವ್ಯವಸ್ಥೆಯೂ ಇದರಲ್ಲಿದ್ದು, ಒಳಗೆ ಶುದ್ಧ ಗಾಳಿಯನ್ನು ಉಸಿರಾಡಬಹುದು. ಉಚಿತ ಇಂಟರ್‌ನೆಟ್ ವ್ಯವಸ್ಥೆಯೂ ಇಲ್ಲಿದೆ. ಸ್ಲೈಡಿಂಗ್ ಬಾಗಿಲು ಹಾಗೂ ಲಾಕ್ ವ್ಯವಸ್ಥೆ ಇವಕ್ಕಿದೆ. ಶೌಚ ಕ್ರಿಯೆಗಳಿಗೆ ಹೊರಗೆ ಸಾಮಾನ್ಯ ಸ್ನಾನದ ಕೋಣೆಗಳಿಗೆ. ಊಟಕ್ಕೆ ಪ್ರತ್ಯೇಕವಾದ ಸಾಮಾನ್ಯ ಕೋಣೆಯಿದ್ದು ಪಾಡ್‌ನಲ್ಲಿರುವ ಮಂದಿ ಇಲ್ಲಿಗೆ ಬಂದು ಊಟ ಮಾಡಬಹುದು. ಪ್ರತಿಯೊಬ್ಬರಿಗೆ ಬೆಳಗಿನ ಉಪಹಾರ ಉಚಿತವಿರಲಿದೆ.
ಶಲಭ್ ಮಿತ್ತಲ್ ಹಾಗೂ ಹಿರೇನ್ ಗಾಂಧಿ ಅವರುಗಳು ಸಿಂಗಾಪುರದಲ್ಲಿ ಪಡೆದ ಪಾಡ್ ಹೋಟೇಲ್ ಅನುಭವವನ್ನು ಭಾರತಕ್ಕೆ ಯಾಕೆ ಅನ್ವಯಿಸಬಾರದು ಎಂದು ಯೋಚಿಸಿದ ಫಲವಾಗಿ ಇದು ಹುಟ್ಟಿಕೊಂಡಿದೆ. ಮುಂಬೈಯಂತಹ ಜನಜಂಗುಳಿಯ ಜಾಗಕ್ಕೆ ಇದು ಅತ್ಯಂತ ಅಗತ್ಯವಾದದ್ದು ಎಂದು ಅಂದುಕೊಂಡು ತಮ್ಮ ಕನಸನ್ನು ಈ ಮೂಲಕ ನನಸಾಗಿಸಿದ್ದಾರೆ. ರಾತ್ರಿಯೊಂದಕ್ಕೆ ೨,೦೩೦ ರೂಪಾಯಿಗಳನ್ನು ಪಾವತಿಸಿ ಈ ಪಾಡ್‌ನಲ್ಲಿ ತಂಗಬಹುದು. ಇದು ಮುಂಬೈಯ ಸಾಮಾನ್ಯ ಬ್ಯುಸಿನೆಸ್ ಹೊಟೇಲುಗಳ ಅರ್ಧದಷ್ಟು ಬಾಡಿಗೆಯಲ್ಲಿ ಸಿಗುತ್ತಿದ್ದು, ಕಡಿಮೆ ವೆಚ್ಚದಲ್ಲಿ ತಿರುಗಾಡಬಯಸುವ ಮಂದಿಗೆ ಇದು ವರದಾನವಾಗಲಿದೆ.
ಈಗಾಗಲೇ ಒಂದೆರಡು ವರ್ಷದ ಹಿಂದಷ್ಟೇ, ಭಾರತೀಯ ರೈಲ್ವೆ ಕೂಡಾ ಮುಂಬೈಯಲ್ಲಿ ಇಂಥ ಪಾಡ್ ಹೊಟೇಲ್ ಸೇವೆಯನ್ನು ಆರಂಭಿಸಿದ್ದು, ಇದೀಗ ಪಾಡ್ ಸಂಸ್ಕೃತಿಗೆ ಇನ್ನೊಂದು ಸೇರ್ಪಡೆ ಇದಾಗಿದೆ.
ಇದನ್ನೂ ಓದಿ: Travel Tips | ನೀವು ಅಲೆಮಾರಿಗಳೇ? ಹೊಸ ಬಗೆಯ ಪ್ರವಾಸಕ್ಕೆ 5 ಅಣಿಮುತ್ತುಗಳು!