Site icon Vistara News

Rainy Season Tourism: ಮಳೆಗಾಲದ ಪ್ರವಾಸ ಮಾಡುವ ಮುನ್ನ ಈ 10 ಎಚ್ಚರಿಕೆಗಳನ್ನು ಪಾಲಿಸಿ

Rainy Season Tourism

ಮಹಾರಾಷ್ಟ್ರದ ಲೋನವಾಲದ ಬುಶಿ ಅಣೆಕಟ್ಟಿನ ಬಳಿ ಮಳೆಗಾಲದ ಪ್ರವಾಹದಲ್ಲಿ (Rainy Season Tourism) ಕೊಚ್ಚಿಹೋದ ಕುಟುಂಬದ ಮನಮಿಡಿಯುವ ದೃಶ್ಯಗಳು ವೈರಲ್‌ ಆಗುವ ಮೂಲಕ, ಇದೀಗ ಮಳೆಗಾಲದಲ್ಲಿ ಪ್ರವಾಸದ ಸಂದರ್ಭ ನಾವು ವಹಿಸಬೇಕಾದ ಎಚ್ಚರಿಕೆಯ ಕರೆಗಂಟೆಯಾಗಿದೆ. ಪ್ರತಿ ಮಳೆಗಾಲದಲ್ಲೂ ಇಂತಹ ಒಂದಿಲ್ಲೊಂದು ಪ್ರಕರಣಗಳು, ಪದೇ ಪದೇ, ಪ್ರಕೃತಿಯ ಶಕ್ತಿಯ ಮುಂದೆ ನಾವು ಎಂದಿಗೂ ಹುಲು ಮಾನವರೇ ಎಂಬ ಸತ್ಯವನ್ನು ನಮಗೆ ನೆನಪಿಸುತ್ತಲೇ ಇರುತ್ತವೆ. ಮಳೆಗಾಲ ಎಂತಹ ಕಲ್ಲು ಹೃದಯಿಯನ್ನೂ ಕರಗಿಸುತ್ತದೆ. ಎಂತಹ ಅರಸಿಕನಲ್ಲೂ ರಸಿಕತೆಯನ್ನು ಚಿಗುರಿಸುತ್ತದೆ. ಮಳೆಯಲ್ಲಿ ಪ್ರಕೃತಿಯ ಸೊಬಗಿಗೆ ಮಾರು ಹೋಗದವರಾರಿಲ್ಲ ಹೇಳಿ! ಇನ್ನು ಪ್ರವಾಸ ಪ್ರಿಯರ ಮಾತೇಕೆ? ಪ್ರವಾಸವನ್ನು ಇಷ್ಟಪಡುವವರು ಮಳೆಗಾಲದಲ್ಲೊಮ್ಮೆ ಪ್ರಕೃತಿಯಲ್ಲಿ ಆಂದವಾಗಿ ಕಾಲ ಕಳೆಯಲು, ಮಳೆನೀರಲ್ಲಿ ಮನಸೋ ಇಚ್ಛೆ ಮೀಯಲು, ಮಳೆಯ ಸೊಬಗನ್ನು ಕಣ್ತುಂಬಿಕೊಳ್ಳಲು ಸದಾ ತುದಿಗಾಲಲ್ಲಿ ನಿಂತಿರುತ್ತಾರೆ. ಆದರೆ, ಈ ಪ್ರಕೃತಿಯ ಹಸಿರ ಸೆರಗಿನಲ್ಲಿ ಕಳೆದುಹೋಗುವ ಮುನ್ನ ಮೈಮರೆಯಬಾರದು ಎಂಬ ಎಚ್ಚರಿಕೆ ಸದಾ ನಮಗೆ ಇರಬೇಕು. ಕಾರಣ, ಮಳೆ ಭೋರ್ಗರೆದು ಸುರಿದರೆ, ಪ್ರವಾಹ, ನೆರೆ, ಭೂಕುಸಿತ ಇತ್ಯಾದಿ ಅವಘಡಗಳು ಸರ್ವೇಸಾಮಾನ್ಯ. ಕೊಂಚ ಎಡವಿದರೂ ಪ್ರಾಣಕ್ಕೇ ಕುತ್ತು. ಬನ್ನಿ, ಮಳೆಗಾಲದಲ್ಲಿ ಪ್ರವಾಸ ಮಾಡುವ ಮುನ್ನ ಈ ಎಚ್ಚರಿಕೆಯನ್ನು ಸದಾ ನೀವು ವಹಿಸಿ. ಮರೆಯದಿರಿ.

ಹವಾಮಾನ ಚೆಕ್‌ ಮಾಡಿಕೊಳ್ಳಿ

ಮಳೆಗಾಲದ ಪ್ರವಾಸ ಖುಷಿ ಕೊಡುತ್ತದೆ ನಿಜ. ಆದರೆ, ನೀವು ಪ್ರವಾಸ ಮಾಡುವ ಮೊದಲು ನೀವು ಹೋಗುವ ಜಾಗದ ಸುತ್ತಮುತ್ತಲ ಹವಾಮಾನ ಹೇಗಿದೆ ಎಂದು ಚೆಕ್‌ ಮಾಡಿಕೊಳ್ಳಿ. ಈಗೆಲ್ಲ ಮುಂಚಿತವಾಗಿ ಹವಾಮಾನ ಚೆಕ್‌ ಮಾಡಿಕೊಳ್ಳುವುದು ಕಷ್ಟವೇನಲ್ಲ. ಬೆರಳ ತುದಿಗೇ ಎಲ್ಲ ಮಾಹಿತಿಗಳನ್ನೂ ನೀವು ನಿಮ್ಮ ಫೋನ್‌ ಮೂಲಕವೇ ಪಡೆಯಬಹುದು. ಹೋಗುವ ಜಾಗದ ಬಗೆಗಿನ ವರ್ತಮಾನದ ಮಾಹಿತಿ ತಿಳಿದಿರುವುದೂ ಕೂಡಾ ಅತ್ಯಂತ ಮುಖ್ಯ. ಅತಿಯಾದ ಮಳೆ ಸಂಭವ ಇದ್ದರೆ ಹೊರಡಲೇಬೇಡಿ. ಮನೆಯಲ್ಲೇ ಸೇಫ್‌ ಆಗಿರಿ.

ಸೂಕ್ತ ಬಟ್ಟೆ ಹಾಗೂ ಶೂ ಜೊತೆಗಿರಲಿ

ಮಳೆಗಾಲದ ಪ್ರವಾಸಕ್ಕೆ ಯಾವಾಗಲೂ ಸೂಕ್ತ ಬಟ್ಟೆ ಹಾಗೂ ಶೂ ನಿಮ್ಮ ಜೊತೆಗಿರಲಿ. ಸರಿಯಾದ ಶೂ ಇಲ್ಲದಿದ್ದರೆ ಜಾರುವ ಸಂಭವ ಹೆಚ್ಚು. ಬೇಗನೆ ಒಣಗಬಹುದಾದ ಬಟ್ಟೆ, ರೇನ್‌ಕೋಟ್‌ ಇತ್ಯಾದಿಗಳಿರಲಿ.

ಸೂಚನಾ ಫಲಕ ಗಮನಿಸಿ

ಪ್ರವಾಸಕ್ಕೆ ಹೋದ ಜಾಗದಲ್ಲಿ ಸೂಚನಾ ಫಲಕ, ಸೆಕ್ಯೂರಿಟಿಯವರು, ಪೊಲೀಸ್‌ ಹಾಗೂ ಸ್ಥಳೀಯರು ನೀಡುವ ಎಚ್ಚರಿಕೆಯನ್ನು ಪಾಲನೆ ಮಾಡಿ. ಅವರ ಎಚ್ಚರಿಕೆಯ ಮಾತುಗಳಿಗೆ ಗೌರವ ಕೊಡಿ.

ಬಂಡೆ ಹತ್ತುವಾಗ ಎಚ್ಚರ

ಹರಿಯುತ್ತಿರುವ ಹೊಳೆ, ತೊರೆ, ನದಿ, ಜಲಪಾತ ಇತ್ಯಾದಿಗಳಲ್ಲಿ ಮಳೆಗಾಲದಲ್ಲಿ ಇಳಿಯುವುದು, ಫೋಟೋಗಾಗಿ ನೀರಲ್ಲೇ ನಿಂತು ಪೋಸ್‌ ಕೊಡುವುದು, ಜಾರುವ ಬಂಡೆಗಳ ಮೇಲೆ ಹತ್ತಿ ಫೋಟೋ ತೆಗೆಯುವುದು ಹಾಗೂ ತೆಗೆಸಿಕೊಳ್ಳುವುದು, ಈಜುವ ವಿಡಿಯೋ, ರೀಲ್‌ ಮಾಡುವುದು, ಡೈವ್‌ ಮಾಡುವುದು ಇತ್ಯಾದಿಗಳನ್ನು ಮಾಡಬೇಡಿ. ಮಳೆಗಾಲದಲ್ಲಿ ಇವೆಲ್ಲ ಖಂಡಿತವಾಗಿಯೂ ಸೇಫ್‌ ಅಲ್ಲ.

ಚಾರಣ ಮಾಡುವಾಗ ಎಚ್ಚರ ವಹಿಸಿ

ಮಳೆಗಾಲದಲ್ಲಿ ಚಾರಣ ಮಾಡುತ್ತಿದ್ದರೂ ಎಚ್ಚರ ವಹಿಸಿ. ಹವಾಮಾನ ಪರೀಕ್ಷೆ ಮಾಡಿಕೊಳ್ಳಿ. ಮಳೆಯಿದ್ದರೆ, ಸೂಕ್ತ ಸಾಧನ ಸಲಕರಣೆಗಳು ನಿಮ್ಮ ಬಳಿ ಇರಲಿ. ಗೈಡ್‌ ಹೇಳಿದ ನಿಯಮಗಳನ್ನು ಪಾಲಿಸಿ. ಭೂಕುಸಿತ, ನೆರೆ ಇತ್ಯಾದಿಗಳ ಮುನ್ಸೂಚನೆಯಿದ್ದರೆ ಅಂತಹ ಸಂದರ್ಭ ಸುರಕ್ಷಿತ ಜಾಗಕ್ಕೆ ತೆರಳಿ. ಪರ್ವತ ಪ್ರದೇಶದಲ್ಲಿ ಕೆಲವೊಮ್ಮೆ ಯಾವ ಸುಳಿವೂ ಇಲ್ಲದೆ ಥಟ್ಟನೆ ಏನು ಬೇಕಾದರೂ ಸಂಭವಿಸಬಹುದು. ಅನವಶ್ಯಕ ಪರಿಸ್ಥಿತಿಗಳನ್ನು ನೀವೇ ಸೃಷ್ಟಿಸಬೇಡಿ.

ಸುರಕ್ಷಿತ ಜಾಗಕ್ಕೆ ತೆರಳಿ

ಜಲಪಾತಗಳು, ನದಿ ತೊರೆಯ ಸಮೀಪ ಹೋಗಿದ್ದರೆ, ಮಳೆ ಬರಲು ಆರಂಭವಾದರೆ, ಬರುವ ಸೂಚನೆಯಿದ್ದರೆ, ಅಲ್ಲೇ ನಿಂತಿರಬೇಡಿ. ಸುರಕ್ಷಿತ ಜಾಗಕ್ಕೆ ತೆರಳಿ. ನೀವು ನಿಂತ ಜಾಗದಲ್ಲಿ ಆಗಷ್ಟೇ ಮಳೆ ಬರಲು ಆರಂಭವಾದರೂ ಕೂಡಾ, ನದಿಯ ಹರಿವಿರುವ ಬೇರೆ ಜಾಗದಲ್ಲಿ ಅಗಾಧ ಮಳೆಯಾಗಿರಬಹುದು. ಒಡನೆಯೇ ನೆರೆ ಉಕ್ಕಿ ಹರಿದು ಬರಬಹುದು. ಮಿಂಚಿನ ವೇಗದಲ್ಲಿ ಇವು ಸಂಭವಿಸಬಹುದು. ಹಾಗಾಗಿ ಜಾಗರೂಕರಾಗಿ ಇರುವುದು ಅತ್ಯಂತ ಮುಖ್ಯ. ಫ್ಲ್ಯಾಶ್‌ ಫ್ಲಡ್‌ ಯಾವಾಗಲೂ ಮಿಂಚಿನ ವೇಗದಲ್ಲಿ ಸಂಭವಿಸುತ್ತದೆ.

ಈಜಲು ಹೋಗಬೇಡಿ

ಮಳೆಗಾಲದಲ್ಲಿ ತೆರೆದ ನದಿ, ತೊರೆ, ಕೆರೆ, ಹೊಳೆಗಳಲ್ಲಿ ಈಜುವ ಸಾಹಸಕ್ಕೆ ಕೈ ಹಾಕಲೇಬೇಡಿ. ನಿಮಗೆಷ್ಟೇ ಈಜು ಗೊತ್ತಿದೆ ಎಂಬ ಧೈರ್ಯವಿದ್ದರೂ, ಮಳೆಗಾಲದಲ್ಲಿ ಇಂತ ನೀರಿನಲ್ಲಿ, ಶಕ್ತಿಯುತವಾದ ಸೆಳೆತ ಇರುವ ಸಂಭವವಿದ್ದು, ನಿಮ್ಮ ಯಾವ ನೈಪುಣ್ಯವೂ ಅದರ ಜೊತೆ ಸೋಲಬಹುದು. ಪ್ರಕೃತಿಗೆ ಸವಾಲೆಸೆಯುವುದು, ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ಸಮುದ್ರ ತೀರದ ವಿಚಾರದಲ್ಲಿಯೂ ಇದೇ ಮಾತನ್ನು ನೆನಪಿಡಿ.

ಅನುಭವಿಗಳ ಸಲಹೆ ಅಗತ್ಯ

ಮಳೆಗಾಲದಲ್ಲಿ, ನಮಗೆ ಈ ಜಾಗ ಗೊತ್ತಿದೆ ಎಂಬ ಭಂಡಧೈರ್ಯದಿಂದ ಯಾರೂ ಅಷ್ಟಾಗಿ ಹೋಗದ, ಕಾಡಿನ ನಡುವಿನ ಜಲಪಾತಕ್ಕೆ ಚಾರಣ ಹೋಗುವುದು, ಬೆಟ್ಟ ಹತ್ತುವುದು ಮಾಡಬೇಡಿ. ಅನುಭವಿಗಳ ಸಲಹೆ ಅತ್ಯಂತ ಅಗತ್ಯ. ದಾರಿ ಗೊತ್ತಿದೆ ಎಂದು ನಿಮ್ಮಷ್ಟಕ್ಕೆ ಈ ಸಾಹಸಕ್ಕೆ ಇಳಿಯಬೇಡಿ. ಮಳೆಗಾಲದಲ್ಲಿ ಏನು ಬೇಕಾದರೂ ಸಂಭವಿಸಬಹುದು.

ಹುಚ್ಚು ಸಾಹಸ ಮಾಡಬೇಡಿ

ಯುವಕರು ದಯವಿಟ್ಟು ಬಿಸಿರಕ್ತದ ಉತ್ಸಾಹದಲ್ಲಿ ಹುಚ್ಚು ಸಾಹಸ ಮಾಡಬೇಡಿ. ಮನೆಯವರ ಮಾತಿಗೆ ಬೆಲೆಕೊಡಿ. ಇಂತಹ ಪ್ರವಾಸಗಳಿಗೆ ಮನೆಯವರಿಗೆ ತಿಳಿಸದೆ ಗೆಳೆಯರ ಜೊತೆಗೆ ಹೋಗುವುದು, ಹುಚ್ಚುಗಟ್ಟುವುದು ಇತ್ಯಾದಿಗಳನ್ನು ಮಾಡಬೇಡಿ. ನಿಮ್ಮನ್ನು ಬೆಟ್ಟದಷ್ಟು ಪ್ರೀತಿಸುವ ಹೆತ್ತವರಿದ್ದಾರೆ, ಅವರಿಗೆ ನಿಮ್ಮ ಭವಿಷ್ಯದ ಬಗ್ಗೆ ಕನಸು ಕಂಗಳಿವೆ, ಅದರ ಹಿಂದೆ ಅವರ ಅಪಾರ ಶ್ರಮವೂ ಇದೆ ಎಂಬುದನನ್ನು ಸದಾ ನೆನೆಪಿಡಿ.

ಇದನ್ನೂ ಓದಿ: Travel Tips: ಪ್ರವಾಸಪ್ರಿಯರೇ, ನಿಮ್ಮ ವಿಮಾನ ಪ್ರಯಾಣ ಆರಾಮದಾಯಕವಾಗಬೇಕಿದ್ದರೆ ಈ ಟಿಪ್ಸ್‌‌ ಪಾಲಿಸಿ!

ತುರ್ತು ಕರೆಯ ಫೋನ್‌ ನಂಬರ್‌ ಗೊತ್ತಿರಲಿ

ಸದಾ ಸ್ಥಳೀಯ ತುರ್ತು ಕರೆಯ ಫೋನ್‌ ನಂಬರ್‌ ನಿಮಗೆ ಗೊತ್ತಿರಲಿ. ಯಾವುದೇ ಸಮಸ್ಯೆ ಬಂದಾಗಲೂ ತುರ್ತುಕರೆಯ ಮೊರೆ ಹೋಗಿ. ನಿಮ್ಮಷ್ಟಕ್ಕೆ ಏನೇನೋ ಊಹನೆಯಲ್ಲಿ ಕಷ್ಟದಲ್ಲಿರುವಾಗ ತಪ್ಪು ಹಾದಿ ಹಿಡಿದು ನಿಮ್ಮ ಪ್ರಾಣವನ್ನು ಅಪಾಯಕ್ಕೆ ಒಡ್ಡಿಕೊಳ್ಳಬೇಡಿ.

Exit mobile version