Site icon Vistara News

Spiritual tourism | ದೇಹ, ಮನಸ್ಸುಗಳ ಜತೆಗೆ ಆತ್ಮಕ್ಕೂ ಪ್ರವಾಸ ಬೇಕೆ? ಇಲ್ಲಿವೆ ನೋಡಿ ಐದು ತಾಣಗಳು

shivananda

ಪ್ರವಾಸದ ಕಲ್ಪನೆ ಒಬ್ಬೊಬ್ಬರ ಮನದಲ್ಲಿ ಒಂದೊಂದು ಥರ. ಕೆಲವರಿಗೆ ಪ್ರವಾಸವೆಂದರೆ ಮನರಂಜನೆ, ಕೆಲವರಿಗೆ ಸಾಹಸ, ಇನ್ನೂ ಕೆಲವರಿಗೆ ಶಾಂತಿ, ನೆಮ್ಮದಿ, ಮತ್ತೆ ಕೆಲವರಿಗೆ ಜ್ಞಾನಾರ್ಜನೆ. ಹಲವರಿಗೆ ಪುಷ್ಕಳ ಭೋಜನ, ಸಂಸ್ಕೃತಿ, ಕಲೆ, ಕೆಲವರಿಗೆ ಧಾರ್ಮಿಕ ಕ್ಷೇತ್ರಗಳ ಭೇಟಿ! ಅವರವರ ಅಗತ್ಯಗಳಿಗೆ ತಕ್ಕಂತೆ ಬಹುತೇಕ ಎಲ್ಲರೂ ಒಂದಲ್ಲ ಒಂದು ಬಗೆಯಲ್ಲಿ ಜೀವನದಲ್ಲಿ ಪ್ರವಾಸ ಮಾಡಿಯೇ ಮಾಡುತ್ತಾರೆ. ಒಂದು ಕಡೆ ಕೂರಲಾಗದ, ಆಗಾಗ ಶಾಂತಿ ನೆಮ್ಮದಿ, ಖುಷಿಯನ್ನು ಅರಸಿಕೊಂಡು ಹೋಗುವ ಮೂಲಗುಣ ಮನುಷ್ಯನದ್ದು. ಭಾರತ ಇಂತಹ ಎಲ್ಲ ಮನೋಧರ್ಮಕ್ಕೂ ಅಗತ್ಯವಿರುವ ಎಲ್ಲ ಬಗೆಯ ಪ್ರವಾಸದ ಅನುಭವವನ್ನೂ ಮೊಗೆಮೊಗೆದು ಕೊಡುತ್ತದೆ.

ಹೇಳಿ ಕೇಳಿ ಭಾರತ, ದೇಶ ವಿದೇಶಗಳಿಂದ ಅಧಯಾತ್ಮದ ಮೂಲಕ ಶಾಂತಿ ನೆಮ್ಮದಿಯನ್ನು ಅರಸಿಕೊಂಡು ಬರುವಂಥವರನ್ನು ತನ್ನ ತೆಕ್ಕೆಗೆಳೆದುಕೊಳ್ಳುವ ಸಂಸ್ಕೃತಿಯ ದೇಶ. ಇಲ್ಲಿ ನದೀತೀರದಿಂದ ಹಿಡಿದು, ಹಿಮಾಲಯದ ತುತ್ತ ತುದಿಯವರೆಗೆ ಅಧ್ಯಾತ್ಮದ ಅನೂಹ್ಯ ಜಗತ್ತನ್ನು ಪರಿಚಯಿಸುತ್ತವೆ. ಜನರು ಯೋಗ, ಧ್ಯಾನ ಮತ್ತಿತರ ಮಾಧ್ಯಮಗಳ ಮೂಲಕ ತಮ್ಮ ತಮ್ಮ ಮಾದರಿಗಳಲ್ಲಿ ಅಧ್ಯಾತ್ಮವನ್ನು ಹುಡುಕಿಕೊಂಡು ಹೋಗುತ್ತಾರೆ. ಬದುಕಿನಲ್ಲಿ ಶಾಂತಿ, ನೆಮ್ಮದಿ ಕಂಡುಕೊಳ್ಳುತ್ತಾರೆ. ಇಂತಹ ಅಧ್ಯಾತ್ಮಿಕ ಅನುಭವ ನೀಡುವ ಐದು ತಾಣಗಳನ್ನು ನೋಡೋಣ.

೧. ಶಿವಾನಂದ ಆಶ್ರಮ: ನಮ್ಮ ದೇಶದಲ್ಲಿ ನಾಲ್ಕು ಶಿವಾನಂದ ಆಶ್ರಮದ ಶಾಖೆಗಳಿವೆ. ಇಲ್ಲಿ ಆಸಕ್ತರು ಯೋಗ, ಧ್ಯಾನಗಳನ್ನು ಅಭ್ಯಾಸ ಮಾಡುತ್ತಾ, ಹೊರಗಿನ ಶುದ್ಧ ಗಾಳಿ, ಅದ್ಭುತ ಪ್ರಾಕೃತಿಕ ಸೌಂದರ್ಯದ ಸುಖವನ್ನು ಅನುಭವಿಸುತ್ತಾ ತಮ್ಮೊಳಗಿನ ಹುಡುಕಾಟದ ಏಕಾಂತವನ್ನು ಅನುಭವಿಸಬಹುದು. ಕೇರಳದಲ್ಲಿ ಧನ್ವಂತರಿ ಆಶ್ರಮ, ತಮಿಳುನಾಡಿನಲ್ಲಿ ಮೀನಾಕ್ಷಿ ಆಶ್ರಮ, ಆಂದ್ರಪ್ರದೇಶದ ತಪಸ್ವಿನಿ ಆಶ್ರಮ ಹಾಗೂ ಉತ್ತರಾಖಂಡದ ಶಿವಾನಂದ ಕುಟೀರ ಎಂಬ ನಾಲ್ಕು ಆಶ್ರಮಗಳಲ್ಲಿ ಯೋಗ ಹಾಲಿಡೇ ಕೂಡಾ ಮಾಡಬಹುದು. ಒಂದಿಷ್ಟು ದಿನಗಳ ಶಿಸ್ತುಬದ್ಧ ಜೀವನಕ್ರಮ, ಸತ್ವಯುತ ಆಹಾರ, ನಿದ್ದೆ, ಧ್ಯಾನ ಮನಃಶಾಂತಿ ಸಿಗುವ ಇಂತಹ ಪ್ರವಾಸಗಳು ಜಂಜಡಗಳಿಂದ ಬೇಸತ್ತ ಮನಸ್ಸಿಗೆ ಶಾಂತಿ ನೆಮ್ಮದಿಗಳನ್ನು ನೀಡಿ ಬದುಕಿನ ನೋಟವನ್ನೇ ಬದಲಾಯಿಸಬಹುದು.

ಇದನ್ನೂ ಓದಿ: ಪ್ರವಾಸಿ ತಾಣ: ಕೊರೊನಾ ನಂತರ ಈ ದೇಶ ಪ್ರವಾಸಿಗರ ಅಚ್ಚುಮೆಚ್ಚು ಆಗಿದೆಯಂತೆ!

೨. ಹೆಮಿಸ್‌ ಬೌದ್ಧ ವಿಹಾರ, ಲಡಾಕ್:‌ ಇದು ಭಾರತದಲ್ಲಿರುವ ಬಹುದೊಡ್ಡ ಬೌದ್ಧ ವಿಹಾರಗಳಲ್ಲಿ ಒಂದು. ಲೇಹ್‌ನಿಂದ ಸುಮಾರು ೪೫ ಕಿಮೀ ದೂರದಲ್ಲಿರುವ ಈ ವಿಹಾರದಲ್ಲಿ ಪುರಾತನ ವಿಗ್ರಹಗಳ ಸಂಗ್ರವವೇ ಇದೆ. ಈ ಬೌದ್ಧ ವಿಹಾರದ ಪಕ್ಕದಲ್ಲೇ ಸಿಗುವ ಕೆಲವು ಹೋಂಸ್ಟೇಗಳಲ್ಲಿ ವಸತಿ ನೋಡಿಕೊಂಡು ವಿಹಾರದಲ್ಲಿ ನಡೆಯುವ ಧಾರ್ಮಿಕ ಪ್ರವಚನ, ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಬೇರೆಯೇ ಬಗೆಯ ಅನುಭೂತಿ ಹೊಂದಬಹುದು. ಜೂನ್‌ ಜುಲೈ ತಿಂಗಳಲ್ಲಿ ನಡೆವ ಹೆಮಿಸ್‌ ಉತ್ಸವದ ಮಾಸ್ಕ್‌ ಡ್ಯಾನ್ಸ್ ಬಲು ಪ್ರಸಿದ್ಧ.  ಇದರ ಪಕ್ಕದಲ್ಲೇ ಹೆಮಿಸ್‌ ರಾಷ್ಟ್ರೀಯ ಉದ್ಯಾನವೂ ಇದೆ.

೩. ಇಶಾ ಫೌಂಡೇಶನ್‌ ಆಶ್ರಮ: ಕೊಯಂಬತ್ತೂರಿನಲ್ಲಿರುವ ಇಶಾ ಆಶ್ರಮ ಕೂಡಾ ಆಧ್ಯಾತ್ಮದ ಮೂಲಕ ನೆಮ್ಮದಿ, ಶಾಂತಿ ಕಾಣ ಬಯಸುವವರಿಗೊಂದು ಅತ್ಯುತ್ತಮ ಜಾಗ. ಇಲ್ಲಿ ನಡೆಯುವ ಅವರದೇ ಶೈಲಿಯ ಯೋಗ ಪ್ಯಾಕೇಜುಗಳ ಮೂಲಕ ದಿನನಿತ್ಯ ಯೋಗವನ್ನೂ ಮಾಡಿಕೊಂಡು, ಇಲ್ಲಿಯೇ ಲಭ್ಯವಿರುವ ವಸತಿಯಲ್ಲಿ ಉಳಿದುಕೊಂಡು, ಆಸಕ್ತಿ ಇದ್ದರೆ, ಇಲ್ಲೇ ಹತ್ತಿರದ ಬೆಟ್ಟಗುಡ್ಡಗಳಿಗೆ ಚಾರಣ, ನಡಿಗೆ ಮತ್ತಿತರ ಚಟುವಟಿಕೆಗಳನ್ನೂ ಮಾಡುತ್ತಾ, ಆಯುರ್ವೇದ ಸ್ಪಾ ಹಾಗೂ ರಿಟ್ರೀಟ್‌ಗಳ ಮೂಲಕ ಮನಸ್ಸಿನಂತೆ ದೇಹವನ್ನೂ ರಿಲ್ಯಾಕ್ಸ್‌ ಮಾಡಿಸಿಕೊಂಡು, ಹೊಸ ಹುರುಪಿನಿಂದ ತಮ್ಮ ತಮ್ಮ ಊರಿಗೆ ಮರಳಬಹುದು.

ಇದನ್ನೂ ಓದಿ: ಮತ್ತೆ ಮತ್ತೆ ಕರೆಯುವ ಮಳೆಗಾಲದ ಹಿಮಾಲಯ: ಟಾಪ್‌ 5 ಚಾರಣಗಳು!

೪. ಆರೋವಿಲ್ಲೆ ಆಶ್ರಮ, ಪಾಂಡಿಚೇರಿ: ಆರೋವಿಲ್ಲೆ ಆಧ್ಯಾತ್ಮವನ್ನು ಹುಡುಕಿಕೊಂಡು ಆ ಮೂಲಕ ಹೊಸತೊಂದು ಜಗತ್ತಿನ ಅನ್ವೇಷಣೆ ಮಾಡುವ ಆಸಕ್ತರಿಗೆಂದೇ ಇರುವ ಜಾಗ. ಇಲ್ಲಿಯೇ ಇದ್ದುಕೊಂಡು ಧ್ಯಾನದಂತಹ ಚಟುವಟಿಕೆಗಳನ್ನು ತೊಡಗಿಕೊಂಡಿರಲು ಅವಕಾಶವಿದೆ. ಇವರದ್ದೇ ಹಲವು ಧ್ಯಾನ ಶಿಬಿರಗಳೂ ನಡೆಯುತ್ತವೆ. ಇದಲ್ಲದೆ ಪಾಂಡಿಚೇರಿಯಲ್ಲಿ, ಅರವಿಂದಾಶ್ರಮದ ಭೇಟಿಯೂ ಕೂಡಾ ನಿಮ್ಮಲ್ಲೊಂದು ಹೊಸ ಚೈತನ್ಯವನ್ನು ತರಬಹುದು. ಈ ಇಡೀ ಭೇಟಿಯೇ ಬದುಕಿನ ಬಗೆಗಿನ ನಿಮ್ಮ ಅನುಭವವನ್ನು ಬೇರೆಯದೇ ಮೂಸೆಯಲ್ಲಿ ಹಾಕಿ ನಿಮ್ಮನ್ನು ಪಕ್ವವನ್ನಾಗಿಸಬಹುದು.

೫. ತವಾಂಗ್‌ ಬೌದ್ಧ ವಿಹಾರ, ಅರುಣಾಚಲ ಪ್ರದೇಶ: ಭೂತಾನ್‌ನ ಗಡಿಯ ಹತ್ತಿರದಲ್ಲೇ ಇರುವ ಸಮುದ್ರ ಮಟ್ಟದಿಂದ ಸುಮಾರು ೧೦ ಸಾವಿರ ಅಡಿ ಎತ್ತರದಲ್ಲಿರುವ ಬೌದ್ಧವಿಹಾರವಿದು. ಇಲ್ಲಿನ ಪ್ರಾರ್ಥನಾ ಹಾಲ್‌ ಅತ್ಯದ್ಭುತವಾಗಿ ಅಲಂಕರಿಸಲ್ಪಟ್ಟಿದ್ದು, ಇಲ್ಲಿ ಕೂತು ಪ್ರಾರ್ಥನೆಯ ಒಂದು ಭಾಗವಾಗುವುದೇ ವಿಶೇಷ ಅನುಭವ. ಇಲ್ಲಿ ನಡೆಯುವ ತೋರ್ಗ್ಯಾ ಉತ್ಸವದಲ್ಲಿ ಪಾಲ್ಗೊಂಡು ಇಲ್ಲಿನ ಮಾಸ್ಕ್‌ ಡ್ಯಾನ್ಸ್‌ ನೋಡುವುದಕ್ಕಾಗಿಯೇ ಜನರು ಜನವರಿಯಲ್ಲಿ ಇಲ್ಲಿಗೆ ಬರುತ್ತಾರೆ. ನೂರಾರು ಸನ್ಯಾಸಿಗಳಿರುವ, ಸುಂದರ ಸರೋವರಗಳಿಂದ ಸುತ್ತುವರಿಯಲ್ಪಟ್ಟಿರುವ ಈ ಬೌದ್ಧವಿಹಾರದೊಳಗೆ ನಡೆದಾಡುವುದೇ ಒಂದು ದಿವ್ಯ ಅನುಭವ.

Exit mobile version